ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ
ಭಾರತದಾದ್ಯಂತ ಶಾಖದ ಅಲೆ ಸಂಕಷ್ಟ ಎದುರಾಗಿದ್ದು, ಪುದುಚೇರಿಯಲ್ಲಿ ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ ಅಳವಡಿಸಲಾಗಿದೆ. ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ವಿಡಿಯೋ ಮತ್ತು ವರದಿ.
ಬೆಂಗಳೂರು: ಭಾರತದ ಉದ್ದಗಲಕ್ಕೂ ರಣಬಿಸಿಲು, ಶಾಖದ ಅಲೆಗಳ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಇನ್ನು ಸಂಚಾರ ದಟ್ಟಣೆ ವಿಚಾರಕ್ಕೆ ಬಂದರೆ ಕೂಡಲೇ ನೆನಪಾಗುವುದು ಬೆಂಗಳೂರು ಟ್ರಾಫಿಕ್. ರಣಬಿಸಲಲ್ಲಿ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತುಕೊಳ್ಳುವ ದ್ವಿಚಕ್ರ ವಾಹನ ಸವಾರರು ಅನುಭವಿಸುವ ಕಷ್ಟಕ್ಕೆ ಪರಿಹಾರ ಇಲ್ಲವೇ ಎಂದು ಆಲೋಚಿಸುತ್ತಿದ್ದವರ ಕಣ್ಣಿಗೆ ಪುದುಚೇರಿಯಲ್ಲಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ (ಪಿಡಬ್ಲ್ಯುಡಿ) ಕೈಗೊಂಡ ಗ್ರೀನ್ ಶೇಡ್ ನೆಟ್ (Green Shade Net) ಉಪಕ್ರಮ ಗಮನಸೆಳೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ (Viral Video) ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ಉಪಕ್ರಮದ ಕಾರಣ ದ್ವಿಚಕ್ರ ವಾಹನ ಸವಾರರು ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೆ ನೆರಳಿನಲ್ಲಿ ಕಾಯುವ ದೃಶ್ಯ ವಿಡಿಯೋದಲ್ಲಿದೆ.
ಪುದುಚೇರಿ ಲೋಕೋಪಯೋಗಿ ಇಲಾಖೆಯ ಗ್ರೀನ್ ಶೇಡ್ ನೆಟ್ ಉಪಕ್ರಮ
ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಅದರಲ್ಲಿ ಪುದುಚೇರಿಯೂ ಹೊರತಲ್ಲ. ಹೆಚ್ಚಿನ ತಾಪಮಾನದ ಪರಿಣಾಮ ಜನ, ಜಾನುವಾರುಗಳ ಮೇಲಾಗುವುದನ್ನು ತಡೆಯಲು ಸರ್ಕಾರ ವಿವಿಧ ಉಪಕ್ರಮಗಳನ್ನು ಜಾರಿಗೊಳಿಸಿದೆ. ಈ ಪೈಕಿ ಪುದುಚೇರಿ ಲೋಕೋಪಯೋಗಿ ಇಲಾಖೆ (PWD) ತೀವ್ರವಾದ ಶಾಖದ ಅಲೆಯನ್ನು ಎದುರಿಸಲು ವಿನೂತನ ಪರಿಹಾರವನ್ನು ಅನುಷ್ಠಾನಗೊಳಿಸಿದೆ. ಬಿಸಿಲಿನ ತಾಪದಲ್ಲಿ ಕಾಯಬೇಕಾದ ಪ್ರಯಾಣಿಕರಿಗೆ ಕೊಂಚ ನೆರಳು ಒದಗಿಸಲು ಇಲಾಖೆಯು ಟ್ರಾಫಿಕ್ ಸಿಗ್ನಲ್‌ಗಳ ಬಳಿ ಹಸಿರು ನೆರಳು ಬಲೆ (ಗ್ರೀನ್ ಶೇಡ್ ನೆಟ್)ಗಳನ್ನು ಅಳವಡಿಸಿದೆ.
ಎಕ್ಸ್ ಬಳಕೆದಾರರೊಬ್ಬರು ಇದರ ವಿಡಿಯೋವನ್ನು ಶೇರ್ ಮಾಡಿದ್ದು, ಸ್ಥಳ ವಿವರಣೆ ನೀಡುತ್ತ ಉಪಕ್ರಮದ ಬಗ್ಗೆ ವಿವರಿಸಿದ್ದಾರೆ. ವೀಡಿಯೊದಲ್ಲಿ, ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವ ಜನರು ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೆ ನೆರಳಿನಲ್ಲಿ ಕಾಯುತ್ತಿದ್ದಾರೆ. ಇದೇ ರೀತಿಯ ನೆರಳಿನ ಬಲೆಯನ್ನು ಇತರ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ದೃಶ್ಯವಿದೆ.
ಝೀಬ್ರಾ ಪಟ್ಟಿಯಿಂದ ಹಿಂದಕ್ಕೆ 10 ಅಡಿ ಉದ್ದಕ್ಕೆ ಹಸಿರು ನೆರಳ ಬಲೆ
ಪುದುಚೇರಿ ಲೋಕೋಪಯೋಗಿ ಇಲಾಖೆಯು ಟ್ರಾಫಿಕ್ ಸಿಗ್ನಲ್‌ನಲ್ಲಿ ಝೀಬ್ರಾ ಪಟ್ಟಿಯಿಂದ ಹಿಂದಕ್ಕೆ 10 ಅಡಿ ಉದ್ದಕ್ಕೆ ಹಸಿರು ನೆರಳ ಬಲೆ (ಗ್ರೀನ್ ಶೇಡ್ ನೆಟ್) ಅನ್ನು ಕಟ್ಟಿದೆ. ಟ್ರಾಫಿಕ್ ಸಿಗ್ನಲ್‌ನ ನಾಲ್ಕೂ ಬದಿಗೆ ಈ ರೀತಿ ವ್ಯವಸ್ಥೆ ಮಾಡಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಇದರ ವಿಡಿಯೋ ಗಮನಿಸಿದವರು, “ಉತ್ತಮ ಉಪಕ್ರಮ”, ಅತ್ಯುತ್ತಮ ಪರಿಹಾರ ಎಂಬಿತ್ಯಾದಿ ಕಾಮೆಂಟ್ ಮಾಡಿದ್ದಾರೆ. ಆ ವಿಡಿಯೋ ಮಾಡಿದವರು, ನಿಮ್ಮೂರಲ್ಲೂ ಸರ್ಕಾರಕ್ಕೆ, ಸ್ಥಳೀಯಾಡಳಿತಕ್ಕೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ರೀತಿ ಹಸಿರು ನೆರಳ ಬಲೆ ಅಳವಡಿಸಲು ಮನವಿ ಮಾಡಿ ಎಂದು ಕೇಳಿಕೊಂಡಿದ್ದಾರೆ.
''ಅಲ್ಲಿ ಒಂದು ಟ್ರಿಕ್ ಇದೆ ನೋಡಿ. ಪಾದಚಾರಿ ದಾಟುವ ಮೊದಲು 10 ಅಡಿಗಳಷ್ಟು ನೆರಳು ನಿಲ್ಲುತ್ತದೆ. ಕನಿಷ್ಠ ಸುಡುವ ಬಿಸಿಲನ್ನು ತಪ್ಪಿಸಲು ವಾಹನ ಸವಾರರು ಪಾದಚಾರಿಗಳನ್ನು ತಡೆಯುವುದಿಲ್ಲ,’’ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಬುಧವಾರ ಬಿಸಿಗಾಳಿ ಪರಿಸ್ಥಿತಿಗಳು ಚಾಲ್ತಿಯಲ್ಲಿದ್ದು, ಹಲವು ಸ್ಥಳಗಳಲ್ಲಿ 38 ಮತ್ತು 42.5 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿರುತ್ತದೆ. ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳವಿದ್ದು, ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಜನರು ಬಯಲಿಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭಗಳಲ್ಲಿ ಜನರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.