ಅಮೂಲ್ ಪ್ರೊಟೀನ್ ಬಟರ್‌ಮಿಲ್ಕ್‌ನಲ್ಲಿ ಹುಳುಗಳು, ಸರಣಿ ಟ್ವೀಟ್ ಮಾಡಿ ಆಡಳಿತದ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕ, Viral Video
ಅಮೂಲ್ ಪ್ರೊಟೀನ್ ಬಟರ್‌ಮಿಲ್ಕ್‌ನಲ್ಲಿ ಹುಳುಗಳು ಕಂಡ ಬಳಿಕ ಸರಣಿ ಟ್ವೀಟ್ ಮಾಡಿ ಆಡಳಿತದ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕನ ಪೋಸ್ಟ್ ವೈರಲ್ ಆಗಿದೆ. ಅಮುಲ್ ತನ್ನ ಆಪ್ ಮೂಲಕ ಪಡೆದ ಆರ್ಡರ್‌ಗೆ ಕೆಟ್ಟು ಹೋದ ಆಹಾರ ಉತ್ಪನ್ನ ಪೂರೈಕೆ ಮಾಡಿ ಮುಜುಗರಕ್ಕೆ ಸಿಲುಕಿ ಕೊಂಡಿದೆ. ಬಳಿಕ ಕಂಪನಿ ಕ್ಷಮೆ ಕೋರಿದೆ ಎಂದು ಗ್ರಾಹಕ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು/ನವದೆಹಲಿ: ಬದಲಾಗುತ್ತಿರುವ ಕಾಲಮಾನದ ಜೀವನ ಶೈಲಿಗೆ ಅನುಗುಣವಾಗಿ ಆಪ್‌ಗಳ ಮೂಲಕ ಆಹಾರ ಉತ್ಪನ್ನವನ್ನು ಮನೆಗೆ ತರಿಸಿಕೊಳ್ಳುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ. ಹತ್ತು ಹಲವು ಆಪ್‌ಗಳಿವೆ. ಕೆಲವು ದೊಡ್ಡದೊಡ್ಡ ಕಂಪನಿಗಳು ತಮ್ಮದೇ ಆಪ್‌ಗಳ ಮೂಲಕ ಈ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಗ್ರಾಹಕರ ಮಟ್ಟಿಗೆ ಇದು ಅನುಕೂಲಕರ ಆಯ್ಕೆ. ಆದಾಗ್ಯೂ, ಪೂರೈಕೆಯಾಗುವ ಉತ್ಪನ್ನಗಳ ಗುಣಮಟ್ಟ, ತಡವಾದ ವಿತರಣೆ, ತಪ್ಪಾದ ಉತ್ಪನ್ನಗಳ ಪೂರೈಕೆ, ಕಳಪೆ ಉತ್ಪನ್ನ ಪೂರೈಕೆಗಳ ವಿಚಾರ ಪದೇಪದೆ ಗಮನಸೆಳೆಯುತ್ತಿರುವುದು ಕೂಡ ಕಂಡುಬಂದಿದೆ.
ಈಗ ದೇಶದ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದಕ ಕಂಪನಿ ಅಮುಲ್ ತನ್ನ ಆಪ್ ಮೂಲಕ ಪಡೆದ ಆರ್ಡರ್‌ಗೆ ಕೆಟ್ಟು ಹೋದ ಆಹಾರ ಉತ್ಪನ್ನ ಪೂರೈಕೆ ಮಾಡಿ ಮುಜುಗರಕ್ಕೆ ಸಿಲುಕಿ ಕೊಂಡಿದೆ. ಅಲ್ಲದೆ, ಕಂಪನಿ ಕ್ಷಮೆ ಕೋರಿದ್ದಾಗಿ ಗ್ರಾಹಕ ಟ್ವೀಟ್ ಮಾಡಿದ್ದಾರೆ.
ಗಜೇಂದ್ರ ಯಾದವ್ ಎಂಬುವವರು ಎಕ್ಸ್ ಖಾತೆಯಲ್ಲಿ ಅಮುಲ್ ಬ್ರಾಂಡ್‌ನ ಹೈ ಪ್ರೊಟೀನ್ ಬಟರ್‌ಮಿಲ್ಕ್ (ಮಜ್ಜಿಗೆ)ನಲ್ಲಿ ಹುಳಗಳಿರುವ ಚಿತ್ರ, ವಿಡಿಯೋವನ್ನು ಪೋಸ್ಟ್ ಮಾಡಿ, ಅಮುಲ್ ಉತ್ಪನ್ನವನ್ನು ಆನ್‌ಲೈನ್ ಮೂಲಕ ಖರೀದಿಸದಂತೆ ಸಲಹೆ ನೀಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದೆ.
ಅಮುಲ್ ಹೈ ಪ್ರೊಟೀನ್ ಬಟರ್‌ಮಿಲ್ಕ್‌ನಲ್ಲಿ ಹುಳುಗಳು
"ಅಮುಲ್ ವೆಬ್‌ಸೈಟ್ ಮೂಲಕ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ. ಹೇ ಅಮುಲ್ ನೀವು ನಮಗೆ ನಿಮ್ಮ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಜೊತೆಗೆ ಹುಳುಗಳನ್ನು ಕಳುಹಿಸಿದ್ದೀರಿ. ನಾನು ಇತ್ತೀಚೆಗೆ ಖರೀದಿಸಿದ ಮಜ್ಜಿಗೆ ಪ್ಯಾಕ್‌ನಲ್ಲಿ ಹುಳುಗಳನ್ನು ಪತ್ತೆಯಾಗಿವೆ. ಇದನ್ನು ನೋಡಿ ತೀವ್ರ ಅಸಮಾಧಾನವನ್ನು ಇಲ್ಲಿ ಹೀಗೆ ವ್ಯಕ್ತಪಡಿತ್ತಿದ್ದೇನೆ" ಎಂದು ಯಾದವ್ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ರಟ್ಟಿನ ಮೇಲೆ ಬಿಳಿ ಹುಳುಗಳು ಹರಿದಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಮತ್ತೊಂದೆ ಫೋಟೋದಲ್ಲಿ ಹಾಳಾದ ಮಜ್ಜಿಗೆ ದೃಶ್ಯವಿದೆ. "ಬಹುತೇಕ ಅರ್ಧದಷ್ಟು ಪ್ಯಾಕೆಟ್‌ಗಳು ತೆರೆದಿವೆ/ಹರಿದಿವೆ. ಮಜ್ಜಿಗೆ ಈಗಾಗಲೇ ಕೊಳೆತು ನಾರುತ್ತಿದೆ" ಎಂದು ಯಾದವ್ ಬರೆದು, ಇದರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಅಮುಲ್ ಅನ್ನು ಒತ್ತಾಯಿಸಿದರು.
ಸರಣಿ ಟ್ವೀಟ್ ಮೂಲಕ ಅಮುಲ್ ಕಂಪನಿಗೆ ಕ್ಲಾಸ್
ಗಜೇಂದ್ರ ಯಾದವ್ ಅವರು ಅಮುಲ್‌ಗೆ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಹ ಪೋಸ್ಟ್ ಮಾಡಿದ್ದು, ಸರಣಿ ಟ್ವೀಟ್ ಮೂಲಕ ಕಂಪನಿ ಆಡಳಿತದ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡರು.
ಹುಳುಗಳಿರುವ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ಈ ಪುರಾವೆಗಳನ್ನು ಕೂಡಲೇ ತಗೊಂಡು ಹೋಗಿ ಎಂದು ಅವರು ಇಮೇಲ್ ಮೂಲಕ ಒತ್ತಾಯಿಸಿದ್ದರು. ಅವುಗಳು ಜೀವಂತ ಹುಳುಗಳಾಗಿದ್ದು, ಹೆಚ್ಚು ದಿನ ಮನೆಯಲ್ಲಿ ಇಟ್ಟುಕೊಳ್ಳಲಾಗದು. ನಂತರ ಅಮುಲ್ ಕಂಪನಿ, ಅದು ಸುಳ್ಳು ಎಂದು ಹೇಳುವುದನ್ನು ನಾನು ತಡೆದುಕೊಳ್ಳಲಾಗದು ಎಂದು ಉಲ್ಲೇಖಿಸಿರುವುದು ಕೂಡ ಕಂಡುಬಂದಿದೆ.
ಇದಾದ ಬಳಿಕ ಮತ್ತೊಂದು ಅಪ್ಡೇಟ್‌ನಲ್ಲಿ ಗಜೇಂದ್ರ ಯಾದವ್ ಅವರು, ಅಮುಲ್ ಕಂಪನಿ ಕ್ಷಮೆಯಾಚಿಸಿದೆ. ರೀಫಂಡ್ ಮತ್ತು ಹೊಸ ಉತ್ಪನ್ನ ಕಳುಹಿಸುವುದಾಗಿ ಹೇಳಿದೆ ಎಂದು ಅಪ್ಡೇಟ್ ನೀಡಿದ್ದಾರೆ. ಆರ್ಡರ್ ನೀಡಿದ 10 ದಿನಗಳ ಬಳಿಕ ಉತ್ಪನ್ನ ಕಳುಹಿಸಿದ್ದ ಅಮುಲ್, ಅದು ಲಾಜಿಸ್ಟಿಕ್ ಪಾರ್ಟ್ನರ್ ತಡವಾಗಿ ತಲುಪಿಸಿದ್ದರಿಂದ ಹಾಗಾಗಿದೆ ಎಂದು ಸಮಜಾಯಿಷಿ ನೀಡಿದ್ದಾಗಿ ಯಾದವ್ ತಿಳಿಸಿದ್ದಾರೆ. ಈ ಸರಣಿ ಟ್ವೀಟ್‌ಗಳು 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇಷ್ಟಾಗ್ಯೂ, ಅಮುಲ್ ಈ ಪ್ರಕರಣದ ಕುರಿತು ಅಧಿಕೃತವಾಗಿ ಟ್ವೀಟ್ ಮಾಡಿಲ್ಲ.
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.