Video: ಹೀಗೂ ಇರ್ತಾರೆ, ಕೋಪದಲ್ಲಿ ಹೊಟೆಲ್ ತಾರಸಿಯಿಂದ ವ್ಯಕ್ತಿಯನ್ನು ತಳ್ಳಿದ ಉದ್ಯಮಿ, ವಿಡಿಯೊ ಕಂಡು ಗಾಬರಿಯಾದ ಜನ
ಉತ್ತರ ಪ್ರದೇಶದ ಬರೇಲಿಯ ಪಂಚತಾರಾ ಹೋಟೆಲ್‌ನಲ್ಲಿದ್ದ ಉದ್ಯಮಿ ಕೋಪದಲ್ಲಿ ಹೊಟೆಲ್ ತಾರಸಿಯಿಂದ ವ್ಯಕ್ತಿಯನ್ನು ತಳ್ಳಿದ ವಿಡಿಯೋ ವೈರಲ್ ಆಗಿದೆ. ಬಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಏನಿದು ಘಟನೆ - ಇಲ್ಲಿದೆ ವಿವರ.
![ಬರೇಲಿಯ ಪಂಚತಾರಾ ಹೋಟೆಲ್‌ನಲ್ಲಿ ಟೆರೇಸ್‌ನಿಂದ ಬಿದ್ದು ಗಾಯಗೊಂಡಿರುವ ಸಾರ್ಥಕ್ ಅಗರವಾಲ್ ಬರೇಲಿಯ ಪಂಚತಾರಾ ಹೋಟೆಲ್‌ನಲ್ಲಿ ಟೆರೇಸ್‌ನಿಂದ ಬಿದ್ದು ಗಾಯಗೊಂಡಿರುವ ಸಾರ್ಥಕ್ ಅಗರವಾಲ್](https://images.hindustantimes.com/kannada/img/2024/04/23/550x309/UP_News_1713888287148_1713888292568.jpg)
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಉದ್ಯಮಿಯೊಬ್ಬರು ವ್ಯಕ್ತಿಯನ್ನು ಟೆರೇಸ್ ಮೇಲಿಂದ ಕೆಳಕ್ಕೆ ತಳ್ಳಿದ್ದು, ಆತ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗಿದೆ.
ಈ ಘಟನೆ ಭಾನುವಾರ (ಏಪ್ರಿಲ್ 21) ರಂದು ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಟೆರೇಸ್‌ನಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಸಾರ್ಥಕ್ ಅಗರವಾಲ್ (27) ಎಂದು ಗುರುತಿಸಲಾಗಿದೆ. ಸಾರ್ಥಕ್ ಮತ್ತು ಉದ್ಯಮಿ ಸತೀಶ್ ಅರೋರಾ ಅವರ ಪುತ್ರ ರಿಧಿಮ್ ಜೊತೆ ವಾಕ್ಸಮರ ನಡೆದ ಸಂದರ್ಭದಲ್ಲಿ ಈ ಘಟನೆ ನಡೆಯಿತು.
ಸಾರ್ಥಕ್ ಅವರ ತಂದೆ ಸಂಜಯ್ ಅಗರವಾಲ್ ನೀಡಿದ ದೂರನ್ನು ಆಧರಿಸಿ ಪೊಲೀಸರು ಸತೀಶ್ ಅರೋರಾ ಮತ್ತು ರಿಧಿಮ್ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ ಪಾರ್ಟಿಯಲ್ಲಿ ನಡೆಯಿತು ಜಗಳ
ಬರೇಲಿಯ ಇಜ್ಜತ್‌ನಗರದ ಪಂಚತಾರಾ ಹೋಟೆಲ್‌ನಲ್ಲಿ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾದವರು ಇವರು. ಕೆಮಿಕಲ್ ಸಪ್ಲೈ ವ್ಯಾಪಾರೋದ್ಯಮಿ ಸಂಜಯ್ ಅಗರವಾಲ್ ನೀಡಿರುವ ದೂರಿನ ಪ್ರಕಾರ, ಜನಕಪುರಿಯ ಸತೀಶ್ ಅರೋರಾ ಮತ್ತು ಅವರ ಪುತ್ರ ರಿಧಿಮ್ ಅರೋರಾ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇವರಿಬ್ಬರು ಯಾರು ಎಂಬುದು ಗೊತ್ತಿಲ್ಲ.
ಸಿಸಿಟಿವಿ ದೃಶ್ಯಗಳ ಪ್ರಕಾರ, ಸಾರ್ಥಕ್ ಅಗರವಾಲ್ ಅವರು ಸತೀಶ್ ಅರೋರಾ ಕಾಲು ಹಿಡಿಯುತ್ತಿರುವ ದೃಶ್ಯವಿದೆ. ಅದಾಗಿ, ಸಾರ್ಥಕ್ ಕಾಲರ್ ಪಟ್ಟಿ ಹಿಡಿದೆತ್ತಿದ ಸತೀಶ್ ಅರೋರಾ, ಆತನ ಕೆನ್ನೆಗೆ ಬಿಗಿದರು. ತಳ್ಳಿಕೊಂಡು ಹೋಗಿ ಟೆರೇಸ್‌ನಿಂದ ತಳ್ಳಿದರು. ಆತ ಬಿದ್ದ ಕೂಡಲೇ, ಟೆರೇಸ್‌ನಲ್ಲಿದ್ದ ಸಾರ್ಥಕ್ ಸ್ನೇಹಿತ ನಂದಿಕರ್ ಸಕ್ಸೇನಾ ಮೇಲೂ ಹಲ್ಲೆ ನಡೆಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ದಾಖಲು
ಸಾರ್ಥಕ್ ಅಗರವಾಲ್ ಸ್ಥಿತಿಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕೇಸ್ ದಾಖಲಿಸಲಾಗಿದೆ. ಇಡೀ ಪ್ರಕರಣ ಹೋಟೆಲ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಾರ್ಥಕ್ ಅಗರವಾಲ್ ವಿವಾದ ಬಗೆಹರಿಸುವ ಪ್ರಯತ್ನದಲ್ಲಿದ್ದುದು ಕಂಡುಬಂದಿದೆ. ಅದನ್ನು ಪರಿಗಣಿಸದೇ ತಂದೆ ಮತ್ತು ಮಗ ಆತನ ಮೇಲೆ ಹಲ್ಲೆ ನಡೆಸಿದ್ದೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿರುವ ಕಾರಣ, ಘಟನೆ ವ್ಯಾಪಕವಾಗಿ ಚರ್ಚೆಗೆ, ಟೀಕೆಗೆ ಒಳಗಾಗಿದೆ. ಅನೇಕರು ಈ ಉದ್ಯಮಿಯ ವರ್ತನೆ ಕಂಡು ದಂಗಾಗಿ ಹೋಗಿದ್ದಾರೆ. ಹೋಟೆಲ್ ಸಿಬ್ಬಂದಿ ಅವರನ್ನು ತಡೆಯಲು ಬಂದಿದ್ದರೂ, ಅವರ ಮೇಲೂ ಈ ಅಪ್ಪ- ಮಗ ಆಕ್ರೋಶ ತೋರಿದ್ದು ಕಂಡುಬಂದಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ವಾಟ್ಸ್‌ಆಪ್ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು! - ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ
2) ನೆನಪಿರಲಿ, ಸಿಎಸ್‌ಕೆ ಪ್ರತಿ ಬಾರಿಯೂ ಪ್ಲೇಆಫ್ ಪ್ರವೇಶಿಸಿಲ್ಲ; ರುತುರಾಜ್ ಗಾಯಕ್ವಾಡ್ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ- ವರದಿ ಓದಿ
3) ‘ಗ್ರೇ ಗೇಮ್ಸ್’ ಮೂಲಕ ಆನ್‌ಲೈನ್ ಗೇಮಿಂಗ್ ಹಿಂದಿನ ಕರಾಳ ಮುಖ ಅನಾವರಣ ಮಾಡಲು ಹೊರಟ ವಿಜಯ್ ರಾಘವೇಂದ್ರ- ಇಲ್ಲಿದೆ ವಿವರ
4) ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದು ಯಾರು, ಕೆಇಎ ಅಥವಾ ಪಿಯು ಇಲಾಖೆ, ತಜ್ಞರ ಸಮಿತಿ ವರದಿ ಆಶಾಕಿರಣ- ವಿವರ ಓದಿ
![Whats_app_banner Whats_app_banner](https://kannada.hindustantimes.com/static-content/1y/wBanner.png)