New Startup Policy | ನೂತನ ಸ್ಟಾರ್ಟ್‌ಅಪ್ ನೀತಿ ರೂಪಿಸಿದ ದೆಹಲಿ ಸರ್ಕಾರ; ದೂರದೃಷ್ಟಿ ಏನು ಗೊತ್ತಾ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  New Startup Policy | ನೂತನ ಸ್ಟಾರ್ಟ್‌ಅಪ್ ನೀತಿ ರೂಪಿಸಿದ ದೆಹಲಿ ಸರ್ಕಾರ; ದೂರದೃಷ್ಟಿ ಏನು ಗೊತ್ತಾ?

New Startup Policy | ನೂತನ ಸ್ಟಾರ್ಟ್‌ಅಪ್ ನೀತಿ ರೂಪಿಸಿದ ದೆಹಲಿ ಸರ್ಕಾರ; ದೂರದೃಷ್ಟಿ ಏನು ಗೊತ್ತಾ?

ರಾಷ್ಟ್ರ ರಾಜಧಾನಿಯನ್ನು 'ಗ್ಲೋಬಲ್ ಇನ್ನೋವೇಶನ್ ಹಬ್' ಆಗಿ ಪರಿವರ್ತಿಸಿ, 2030ರ ವೇಳೆಗೆ ನವೋದ್ಯಮಗಳಿಗೆ ಹೆಚ್ಚು ಆದ್ಯತೆಯ ತಾಣವಾಗಿ ರೂಪಿಸುವ ಉದ್ದೇಶವನ್ನು ದೆಹಲಿ ಸರ್ಕಾರ ಹೊಂದಿದೆ. ಈ ಮೂಲಕ ಹೊಸ ಉದ್ಯಮಗಳ ಸ್ಥಾಪನೆಗೆ ಸರ್ಕಾರ ಯುವಕರಿಗೆ ಮಾನಸಿಕ ಮತ್ತು ಆರ್ಥಿಕವಾಗಿ ಧೈರ್ಯ ತುಂಬಲಿದೆ.

<p>ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್</p>
ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ (ANI)

ನವದೆಹಲಿ: ಕೇಜ್ರಿವಾಲ್‌ ಸರ್ಕಾರವು ರಾಷ್ಟ್ರ ರಾಜಧಾನಿಯನ್ನು 'ಗ್ಲೋಬಲ್ ಇನ್ನೋವೇಶನ್ ಹಬ್' ಆಗಿ ಪರಿವರ್ತಿಸುವ ಮಹತ್ತರ ಯೋಜನೆಯೊಂದನ್ನು ರೂಪಿಸುತ್ತಿದೆ. 2030ರ ವೇಳೆಗೆ ದೆಹಲಿಯನ್ನು ನವೋದ್ಯಮಗಳಿಗೆ ಹೆಚ್ಚು ಆದ್ಯತೆಯ ತಾಣವಾಗಿ ರೂಪಿಸುವುದೇ ದೆಹಲಿ ಸರ್ಕಾರದ ಪ್ಲಾನ್.

ಕಳೆದ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೊಂದು ಮಹತ್ವಾಕಾಂಕ್ಷೆಯ ಯೋಜನೆ ಎಂದು ಘೋಷಿಸಿದ್ದಾರೆ. ಈಗಾಗಲೇ ದೆಹಲಿ ಕ್ಯಾಬಿನೆಟ್ ಈ ಸ್ಟಾರ್ಟ್ಅಪ್ ನೀತಿಯನ್ನು ಅಂಗೀಕರಿಸಿದೆ. ರಾಷ್ಟ್ರ ರಾಜಧಾನಿಯನ್ನು 2030ರ ವೇಳೆಗೆ ಅಂತಾರಾಷ್ಟ್ರೀಯ ಸ್ಟಾರ್ಟ್ಅಪ್ ಹಬ್ ಮಾಡುವ ಗುರಿಯನ್ನು ಈ ನೀತಿ ಹೊಂದಿದೆ. ಈ ಯೋಜನೆಯಡಿಯಲ್ಲಿ ದೆಹಲಿ ಸರ್ಕಾರವು ಯುವ ಉದ್ಯಮಿಗಳಿಗೆ ಅವರ ಯೋಜನೆಗಳಿಗೆ ಹಣಕಾಸಿನ ನೆರವು ನೀಡಲಿದೆ. ಈ ಮೂಲಕ ಆರ್ಥಿಕ ಸಮಸ್ಯೆಯಿಂದಾಗಿ ಚಿಗುರುವ ಹಂತದಲ್ಲೇ ಕಮರಿ ಹೋಗುವ ಹೊಸ ಹೊಸ ಯೋಜನೆಗಳಿಗೆ ಸರ್ಕಾರ ನೆರವು ನೀಡುವ ಮೂಲಕ ಉತ್ತೇಜಿಸಲಿದೆ.

ರಚನೆಯಾಗಲಿದೆ ಕಾರ್ಯಪಡೆ...

ದೆಹಲಿ ಸರ್ಕಾರದ 2022-23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಈ ನೀತಿಯನ್ನು ಅಳವಡಿಸಲಾಗಿದೆ. 2027ರ ವೇಳೆಗೆ ಇದು ವಿವಿಧ ಮಧ್ಯಸ್ಥಿಕೆ ಮತ್ತು ವ್ಯವಹಾರ ಪ್ರಚಾರದ ಮೂಲಕ ಸುಮಾರು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದೇ ಯೋಜನೆಯ ಯಶಸ್ಸಿಗಾಗಿ ಸರ್ಕಾರವು ಚಾರ್ಟರ್ಡ್ ಅಕೌಂಟೆಂಟ್‌ಗಳು, ವಕೀಲರು, ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ವ್ಯಾಪಾರ ಪ್ರತಿನಿಧಿಗಳನ್ನು ಒಳಗೊಂಡಿರುವ 20 ಸದಸ್ಯರ ಕಾರ್ಯಪಡೆಯನ್ನು ಸಹ ರಚಿಸಲಿದೆ. ಈ ಕಾರ್ಯಪಡೆಯು ಯುವ ಉದ್ಯಮಿಗಳು ತಮ್ಮ ನವೋದ್ಯಮಗಳನ್ನು ಸ್ಥಾಪಿಸಲು ಸಲಹೆ ಮತ್ತು ಸಹಕಾರ ನೀಡುತ್ತಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ 'ಬಿಸಿನೆಸ್ ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ಸರ್ಕಾರಿ ಕಾಲೇಜುಗಳಿಗೆ ವಿಸ್ತರಿಸಲಾಗುವುದು. ಇದರಿಂದ ಅವರು ರಾಜ್ಯ ಸರ್ಕಾರ ನೀಡುವ ಹಣದ ನೆರವಿನಿಂದ ತಮ್ಮ ವ್ಯವಹಾರದ ಪರಿಕಲ್ಪನೆಗಳನ್ನು ಮುಂದುವರೆಸಬಹುದು. ಇಂತಹ ವಿದ್ಯಾರ್ಥಿಗಳು ತಮ್ಮ ವ್ಯವಹಾರದ ಮೇಲೆ ಕೇಂದ್ರೀಕರಿಸಲು ಒಂದರಿಂದ ಎರಡು ವರ್ಷಗಳವರೆಗೆ ರಜೆ ತೆಗೆದುಕೊಳ್ಳಲು ಸಹ ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ನವೋದ್ಯಮ ನೀತಿ ಹಿಂದಿನ ಪರಿಕಲ್ಪನೆ...

ದೆಹಲಿ ಸರ್ಕಾರದ ಮುಖ್ಯ ಉದ್ದೇಶವು, ರಾಷ್ಟ್ರ ರಾಜಧಾನಿಯನ್ನು 'ಗ್ಲೋಬಲ್ ಇನ್ನೋವೇಶನ್ ಹಬ್' ಆಗಿ ಪರಿವರ್ತಿಸಿ, 2030ರ ವೇಳೆಗೆ ನವೋದ್ಯಮಗಳಿಗೆ ಹೆಚ್ಚು ಆದ್ಯತೆಯ ತಾಣವಾಗಿ ರೂಪಿಸುವುದಾಗಿದೆ. ಸರ್ಕಾರವು ನವೀನ ಆರ್ಥಿಕತೆಗಾಗಿ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಜೊತೆಗೆ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುತ್ತದೆ.

ದೆಹಲಿ ಸ್ಟಾರ್ಟ್‌ಅಪ್ ನೀತಿಯ ಅಡಿಯಲ್ಲಿ 2030ರ ವೇಳೆಗೆ 15,000 ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಲ್ಪನೆಯಂತೆ ದೆಹಲಿಯ ಯುವಕರನ್ನು ಉದ್ಯಮಿಗಳಾಗಿ ರೂಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಈ ನೀತಿಯು 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಕುರಿತು ಕಲಿಸುವ ಮೂಲಕ ಈ ಯೋಜನೆಯ ಯಶಸ್ಸಿಗೆ‌ ಶ್ರಮಿಸಲಿದೆ. ಬಿಸಿನೆಸ್ ಬ್ಲಾಸ್ಟರ್ಸ್ ಕಾರ್ಯಕ್ರಮದ ಅಡಿಯಲ್ಲಿ ಅವರಿಗೆ ಆರಂಭಿಕ ಬಂಡವಾಳ ನೀಡುವ ಮೂಲಕ ಯುವಕರ ಆಲೋಚನೆಯನ್ನು ಪೋಷಿಸಲಿದೆ.

ಸರ್ಕಾರವು ಸಹಾಯ ಯಾವ ರೀತಿ ಇರಲಿದೆ?

ದೆಹಲಿ ಸರ್ಕಾರವು ಸ್ಟಾರ್ಟ್‌ಅಪ್‌ಗಳಿಗೆ ಮೇಲಾಧಾರ ಮುಕ್ತ ಸಾಲ ನೀಡಲು ಸಹಾಯ ಮಾಡುತ್ತದೆ. ಈ ಸಾಲ ಒಂದು ವರ್ಷದವರೆಗೆ ಬಡ್ಡಿರಹಿತವಾಗಿರುತ್ತದೆ.

ನವೋದ್ಯಮಗಳ ಕಚೇರಿ ಗುತ್ತಿಗೆ ಬಾಡಿಗೆಯ 50% ವರೆಗಿನ ಮೊತ್ತವನ್ನು ರಾಜ್ಯ ಸರ್ಕಾರವೇ ಪಾವತಿಸುತ್ತದೆ. ಅಥವಾ ಈ ಸ್ಟಾರ್ಟ್‌ಅಪ್‌ಗಳು ತಮ್ಮ ಉದ್ಯೋಗಿಗಳಿಗೆ ಪಾವತಿಸುವ ಸಂಬಳದ ಒಂದು ಭಾಗವನ್ನು ಪಾವತಿಸುತ್ತದೆ.

ಪೇಟೆಂಟ್‌, ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್‌ಗಳಿಗೆ ಅರ್ಜಿ ಸಲ್ಲಿಸಲು ತಗಲುವ ವೆಚ್ಚವನ್ನು ದೆಹಲಿ ಸರ್ಕಾರವು ನವೋದ್ಯಮಕ್ಕೆ ಮರುಪಾವತಿ ಮಾಡುತ್ತದೆ.

ಸ್ಟಾರ್ಟಪ್ ನೀತಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರ ಮೇಲ್ವಿಚಾರಣಾ ಸಮಿತಿಯನ್ನು ರಚಿಸುತ್ತದೆ. ಈ ಸಮಿತಿಗೆ ದೆಹಲಿಯ ಹಣಕಾಸು ಸಚಿವರು ನೇತೃತ್ವ ವಹಿಸಲಿದ್ದಾರೆ. ಈ ಸಮಿತಿಯಲ್ಲಿ ಖಾಸಗಿ ವಲಯದಿಂದ 85%, ಶಿಕ್ಷಣ ಸಂಸ್ಥೆಗಳಿಂದ 10% ಮತ್ತು ಸರ್ಕಾರದಿಂದ 5% ಪ್ರತಿನಿಧಿಗಳನ್ನು ಪ್ರತಿನಿಧಿಸಲಿದ್ದಾರೆ.

ಪ್ರಮುಖ ಕೇಂದ್ರೀಕೃತ ಪ್ರದೇಶಗಳು...

ಸರ್ಕಾರದ ಪ್ರಕಾರ ಶಿಕ್ಷಣ ಮತ್ತು ಶಿಕ್ಷಣ ತಂತ್ರಜ್ಞಾನ, ಆರೋಗ್ಯ ಮತ್ತು ಆರೋಗ್ಯ ತಂತ್ರಜ್ಞಾನ, ಪ್ರವಾಸೋದ್ಯಮ, ಸಾರಿಗೆ, ವ್ಯಾಪಾರ ಮತ್ತು ನಾಗರಿಕ ಸಂಪರ್ಕಕ್ಕಾಗಿ ಇ-ಆಡಳಿತ, ಕೃತಕ ಬುದ್ಧಿಮತ್ತೆ, ಇ-ತ್ಯಾಜ್ಯ ನಿರ್ವಹಣೆ, ರೊಬೊಟಿಕ್ಸ್ ಮತ್ತು ಆಟೊಮೇಷನ್, ಹಸಿರು ತಂತ್ರಜ್ಞಾನ, ಜೈವಿಕ ಔಷಧ ಮತ್ತು ವೈದ್ಯಕೀಯ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳತ್ತ ಗಮನ ಹರಿಸಲಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.