ಕನ್ನಡ ಸುದ್ದಿ  /  Nation And-world  /  "Was Hit By Four Bullets", Says Imran Khan, Day After Assassination Attempt

Imran Khan on firing: ನನಗೆ 4 ಬುಲೆಟ್​ಗಳು ತಗುಲಿವೆ.. ನನ್ನ ಮೇಲೆ ದಾಳಿ ನಡೆಯತ್ತೆ ಅಂತ ಮೊದಲೇ ಗೊತ್ತಿತ್ತು - ಇಮ್ರಾನ್ ಖಾನ್

ತಮ್ಮ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದಾಳಿ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಮೇಲೆ ದಾಳಿ ನಡೆಯುತ್ತದೆ ಎಂದು ಒಂದು ದಿನದ ಮೊದಲೇ ತಿಳಿದಿತ್ತು ಎಂದಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಲಾಹೋರ್​​ (ಪಾಕಿಸ್ತಾನ): ತಮ್ಮ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ದಾಳಿ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಮೇಲೆ ದಾಳಿ ನಡೆಯುತ್ತದೆ ಎಂದು ಒಂದು ದಿನದ ಮೊದಲೇ ತಿಳಿದಿತ್ತು ಎಂದಿದ್ದಾರೆ.

ಲಾಹೋರ್‌ನ ಆಸ್ಪತ್ರೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ದೂರದರ್ಶನ ಭಾಷಣದಲ್ಲಿ, “ನನ್ನ ಕಾಲಿಗೆ ಒಂದಲ್ಲ, ನಾಲ್ಕು ಬುಲೆಟ್​ಗಳು ತಗುಲಿವೆ. ನಿನ್ನೆ ನಾನು ಕಂಟೇನರ್‌ನಲ್ಲಿದ್ದಾಗ, ನನ್ನ ಕಾಲಿಗೆ ಗುಂಡುಗಳು ತಗುಲಿವೆ, ನಾನು ಕೆಳಗೆ ಬೀಳಲು ಪ್ರಾರಂಭಿಸಿದೆ” ಎಂದು ಘಟನೆಯನ್ನು ನೆನೆದರು.

“ನಾಲ್ಕು ಜನರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ನನ್ನ ಬಳಿ ವಿಡಿಯೋ ಇದೆ. ಒಂದು ವೇಳೆ ನನಗೇನಾದರೂ ಆದರೆ ಆ ವಿಡಿಯೋವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಇಮ್ರಾನ್​ ಖಾನ್​ ಎಚ್ಚರಿಕೆ ನೀಡಿದ್ದಾರೆ. ರ್ಯಾಲಿಗೆ ಹೋಗುವ ಒಂದು ದಿನ ಮೊದಲು, ವಜೀರಾಬಾದ್ ಅಥವಾ ಗುಜರಾತ್‌ನಲ್ಲಿ ನನ್ನ ಹತ್ಯೆಗೆ ಯೋಜನೆ ರೂಪಿಸಲಾಗಿದೆ ಎಂಬುದು ನನಗೆ ಮೊದಲೇ ತಿಳಿದಿತ್ತು” ಎಂದು ಹೇಳಿದರು.

“ನಾನು ಸಾಮಾನ್ಯ ಜನರ ಮಧ್ಯದಿಂದ ಬಂದವನು. ನನ್ನ ಪಕ್ಷವನ್ನು ಮಿಲಿಟರಿ ಸ್ಥಾಪನೆಯ ಅಡಿಯಲ್ಲಿ ಮಾಡಲಾಗಿಲ್ಲ. ನಾನು ಇದಕ್ಕಾಗಿ 22 ವರ್ಷಗಳಿಂದ ಹೋರಾಟ ಮಾಡಿದ್ದೇನೆ” ಎಂದು ಮಾಜಿ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್​ ಖಾನ್​ ವಿವರಿಸಿದರು.

ನಿನ್ನೆ (ನವಂಬರ್​ 3) ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ಇಮ್ರಾನ್ ಖಾನ್ ರ್ಯಾಲಿ ನಡೆಸುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಮ್ರಾನ್ ಖಾನ್ ಹಾಗೂ ಕೆಲವು ನಾಯಕರು ಗಾಯಗೊಂಡಿದ್ದರು. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ತಕ್ಷಣವೇ ಬಂಧಿಸಲಾಗಿತ್ತು.

ಇಮ್ರಾನ್ ಖಾನ್ ಹಾಗೂ ಇತರ ನಾಯಕರು ತೆರೆದ ಕಂಟೇನರ್​​ನಲ್ಲಿ ನಿಂತು ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದ್ದು, ಖಾನ್ ಅವರ ಕಾಲಿಗೆ ಗುಂಡೆಟು ತಗುಲಿತ್ತು. ಕೂಡಲೇ ಅವರನ್ನು ಎತ್ತಿ ಕಾರಿನಲ್ಲಿ ಕೂರಿಸಿ ಲಾಹೋರ್​ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಇಮ್ರಾನ್ ಖಾನ್ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡ ಫೈಸಲ್ ಜಾವೇದ್ ಖಾನ್ ಸೇರಿದಂತೆ ಒಟ್ಟು 7 ಮಂದಿ ಗಾಯಗೊಂಡಿದ್ದು, ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದ ಕಾರಣ ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಯಸಿದ್ದೆ. ನಾನು ಒಬ್ಬನೇ ಪಿತೂರಿ ಮಾಡಿದ್ದೇನೆ ಮತ್ತು ಇದರಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ" ಎಂದು ಆರೋಪಿ ಶೂಟರ್​ ಹೇಳಿದ್ದಾನೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುಂಡಿನ ದಾಳಿಯನ್ನು ಖಂಡಿಸಿದ್ದು, ತಕ್ಷಣವೇ ತನಿಖೆ ನಡೆಸುವಂತೆ ಆದೇಶಿಸಿದ್ದರು. ಈ ವರ್ಷದ ಆರಂಭದಲ್ಲಿ ಅಧಿಕಾರದಿಂದ ಹೊರಹಾಕಲ್ಪಟ್ಟ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಸವರು ಶಹಬಾಜ್ ಷರೀಫ್ ನೇತೃತ್ವದ ಸರ್ಕಾರದಿಂದ ಕ್ಷಿಪ್ರ ಚುನಾವಣೆಗೆ ಒತ್ತಾಯಿಸಿ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ತಮ್ಮ ಪಕ್ಷದ ವತಿಯಿಂದ ರ್ಯಾಲಿಯನ್ನು ಮುನ್ನಡೆಸುತ್ತಿದ್ದರು.

IPL_Entry_Point

ವಿಭಾಗ