Wayanad Land Slide:ಭಾರೀ ಮಳೆಯಿಂದ ಅನಾಹುತ, ವಯನಾಡು ದುರಂತಕ್ಕೆ ಮುಖ್ಯ ಕಾರಣ ಬಿಚ್ಚಿಟ್ಟ ಅಧ್ಯಯನ ವರದಿ, ತಜ್ಞರು ನೀಡಿದ ವರದಿಯಲ್ಲಿ ಏನಿದೆ-wayanad land slide heavy rain in wayanad area created floods and landslides says international expert committee kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Wayanad Land Slide:ಭಾರೀ ಮಳೆಯಿಂದ ಅನಾಹುತ, ವಯನಾಡು ದುರಂತಕ್ಕೆ ಮುಖ್ಯ ಕಾರಣ ಬಿಚ್ಚಿಟ್ಟ ಅಧ್ಯಯನ ವರದಿ, ತಜ್ಞರು ನೀಡಿದ ವರದಿಯಲ್ಲಿ ಏನಿದೆ

Wayanad Land Slide:ಭಾರೀ ಮಳೆಯಿಂದ ಅನಾಹುತ, ವಯನಾಡು ದುರಂತಕ್ಕೆ ಮುಖ್ಯ ಕಾರಣ ಬಿಚ್ಚಿಟ್ಟ ಅಧ್ಯಯನ ವರದಿ, ತಜ್ಞರು ನೀಡಿದ ವರದಿಯಲ್ಲಿ ಏನಿದೆ

Kerala News ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಭಾರೀ ಮಳೆಯೇ ಕಾರಣ ಎಂದು ಅಂತರಾಷ್ಟ್ರೀಯ ತಜ್ಞರ ತಂಡ ವರದಿಯಲ್ಲಿ ಉಲ್ಲೇಖಿಸಿದೆ.

ವಯನಾಡು ದುರಂತಕ್ಕೆ ಭಾರೀ ಮಳೆಯೇ ಕಾರಣ ಎನ್ನುವುದು ವರದಿಯಿಂದ ಬಹಿರಂಗವಾಗಿದೆ.
ವಯನಾಡು ದುರಂತಕ್ಕೆ ಭಾರೀ ಮಳೆಯೇ ಕಾರಣ ಎನ್ನುವುದು ವರದಿಯಿಂದ ಬಹಿರಂಗವಾಗಿದೆ.

ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಹದಿನೈದು ದಿನದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ದುರಂತ ಸಂಭವಿಸಿದೆ. ಮಳೆಯ ಪ್ರಮಾಣ ಅಧಿಕವಾಗಿದ್ದರಿಂದ ಭೂಕುಸಿತಗಳೂ ಸಂಭವಿಸಿ ಜನ ಮೃತಪಟ್ಟ ಜತೆಗೆ ಆಸ್ತಿಪಾಸ್ತಿಗಳೂ ಭಾರೀ ಪ್ರಮಾಣದಲ್ಲಿ ನಾಶವಾಗಿವೆ. ವಾಡಿಕೆಗಿಂತ ಶೇ. 10 ರಷ್ಟು ಮಳೆ ಪ್ರಮಾಣ ಅಧಿಕವಾಗಿ ಪ್ರವಾಹೋಪಾದಿಯಲ್ಲಿ ಮಳೆ ನೀರು ಹರಿದು ಬಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಹಿಂದೆ ಹವಾಮಾನ ವೈಪರಿತ್ಯದ ಅಂಶಗಳೂ ಅಡಗಿವೆ. ಉಷ್ಣಾಂಶದಲ್ಲೂ ಭಾರೀ ಏರಿಳಿಕೆ ಕಂಡು ಬಂದಿರುವುದು ಇದನ್ನು ಸೂಚಿಸುತ್ತದೆ. ಈ ಕುರಿತು ಇನ್ನಷ್ಟು ವಿಸ್ತೃತ ಅಧ್ಯಯನಗಳು ಆಗಬೇಕಿದೆ ಎಂದು ತಜ್ಞರು ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜಾಗತಿಕ ವಿಜ್ಞಾನಿಗಳ ತಂಡ ನಡೆಸಿದ ಕ್ಷಿಪ್ರ ಗುಣಲಕ್ಷಣ ಅಧ್ಯಯನ ವರದಿಯಲ್ಲಿ ಹಲವಾರು ಅಂಶಗಳು ಉಲ್ಲೇಖವಾಗಿವೆ.

ವಯನಾಡಿನಲ್ಲಿ ಒಂದೇ ರಾತ್ರಿಯಲ್ಲಿ ಸುರಿದಿದ್ದ ಭಾರೀ ಮಳೆಗಳು ನಾಲ್ಕೈದು ಗ್ರಾಮಗಳೇ ಕೊಚ್ಚಿ ಹೋಗುವಂತೆ ಪ್ರವಾಹ ಸೃಷ್ಟಿಸಿದ್ದವು. ಮಧ್ಯರಾತ್ರಿಯಲ್ಲಿ ಬಂದ ಪ್ರವಾಹವು ಜನ ಏನು ಮಾಡದ ಸ್ಥಿತಿಗೆ ತಳ್ಳಿ ನಾಲ್ಕು ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಗುಡ್ಡಗಳು ಕುಸಿತವಾದವು. ಒಂದೇ ದಿನದಲ್ಲಿ ಅಲ್ಲಿನ ಭೂ ಸನ್ನಿವೇಶವೇ ಬದಲಾಗುವ ಮಟ್ಟಿಗೆ ಮಳೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದು ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿತ್ತು.

ವಾರದ ಹಿಂದೆಯೇ ಭಾರತ, ಸ್ವೀಡನ್ ಅಮೆರಿಕ ಮತ್ತು ಬ್ರಿಟನ್ ವಿಜ್ಞಾನಿಗಳ ತಂಡ ಕೇರಳಕ್ಕೆ ಆಗಮಿಸಿ ಅಧ್ಯಯನದಲ್ಲಿ ನಿರತವಾಗಿತ್ತು.ವರ್ಲ್ಡ್‌ ವೆದರ್ ಆಟ್ರಿಬ್ಯೂಷನ್(ಡಬ್ಲ್ಯುಡಬ್ಲ್ಯುಎ) ತಂಡದಲ್ಲಿ ಪರಿಸರ, ಹವಾಮಾನಕ್ಕೆ ಸಂಬಂಧಿಸಿದ ತಜ್ಞರು ಇದ್ದರು. ವಯನಾಡು ಭಾಗದ ಪರಿಸರ, ಹಿಂದಿನ ಮಳೆಗಳು, ಬದಲಾದ ಹವಾಗುಣ, ಉಷ್ಣಾಂಶದ ವ್ಯತ್ಯಾಸ ಸಹಿತ ಹಲವಾರು ಅಂಶಗಳನ್ನು ಅಧ್ಯಯನಕ್ಕೆ ಬಳಕೆ ಮಾಡಿಕೊಂಡಿತ್ತು.ಅತ್ಯಾಧುನಿಕ ವಿಧಾನವನ್ನು ಅನುಸರಿಸಿ ನಿಖರವಾಗಿ ಅಧ್ಯಯನ ಕೈಗೊಂಡಿತ್ತು. ಅಧ್ಯಯನದ ಪ್ರಮುಖ ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ವಯನಾಡು ದುರಂತದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

ಜುಲೈ 30 ರಂದು ಕೇರಳದಲ್ಲಿ ಸುರಿದ ಮಾನ್ಸೂನ್ ಮಳೆಯ ನಂತರ ಭೂಕುಸಿತ ಸಂಭವಿಸಿದೆ. ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 140 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಇದು ಲಂಡನ್‌ ನ ವಾರ್ಷಿಕ ಮಳೆಯ ಕಾಲು ಭಾಗಕ್ಕೆ ಸಮನಾಗಿದೆ. ಜೂನ್ 22 ರಿಂದ ಈ ಪ್ರದೇಶವು ಸಣ್ಣ ಬಿಡುವಿನೊಂದಿಗೆ ಬಹುತೇಕ ನಿರಂತರ ಮಳೆಗೆ ಒಳಗಾಗಿದೆ. ಮುಂಡಕ್ಕೈನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಕಲ್ಲಾಡಿಯಲ್ಲಿ ಕಳೆದ 30 ದಿನಗಳಲ್ಲಿ ಸುಮಾರು 1,830 ಮಿ.ಮೀ ಮಳೆಯಾಗಿದೆ. ಇದು ವಯನಾಡಿನ ಅತ್ಯಂತ ತೇವವಾದ ಪ್ರದೇಶಗಳಲ್ಲಿ ಒಂದು. ಈ ಘಟನೆಯು ದಾಖಲೆಯ ಮೂರನೇ ಅತಿ ಹೆಚ್ಚು ಒಂದು ದಿನದ ಮಳೆ ಎನ್ನುವುದು ಪ್ರಮುಖವಾದದ್ದು. 2019 ಮತ್ತು 1924 ರಲ್ಲಿ ಭಾರಿ ಮಳೆಯಾಗಿದೆ. ಇದಲಲದೇ ಕೇರಳದ ದೊಡ್ಡ ಪ್ರದೇಶಗಳ ಮೇಲೆ ಪರಿಣಾಮ ಬೀರಿದ 2018 ರಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಅಧ್ಯಯನ ತಂಡವು ಗಮನಿಸಿದೆ.

ಅರಣ್ಯನಾಶವು ಜಿಲ್ಲೆಯಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದ್ದು ಭೂ-ಬಳಕೆಯದಲ್ಲಿ ಗಣನೀಯ ಬದಲಾವಣೆಯಾಗಿದೆ. 1950 ಮತ್ತು 2018 ರ ನಡುವೆ, ವಯನಾಡ್ ತನ್ನ ಹಸಿರು ಹೊದಿಕೆಯ ಶೇ62 ನಷ್ಟು ಕಳೆದುಕೊಂಡಿದೆ. ಚಹಾ ತೋಟದ ಪ್ರದೇಶಗಳು ಸುಮಾರು ಶೇ. 1800 ರಷ್ಟು ಹೆಚ್ಚಾದವು, ಇದರ ಪರಿಣಾಮವಾಗಿ ಬೆಟ್ಟಗಳನ್ನು ಸ್ಥಿರಗೊಳಿಸಲು ಅರಣ್ಯ ಪ್ರದೇಶವು ಕಡಿಮೆಯಾಗಿದೆ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ ನಲ್ಲಿ ಪ್ರಕಟವಾದ ಪ್ರಬಂಧವನ್ನು ಉಲ್ಲೇಖಿಸಿ ವಿಶ್ಲೇಷಣೆ ತಿಳಿಸಿದೆ.

ವರದಿಯಲ್ಲಿ ಏನಿದೆ

  • ಘಟನೆಯ ಹಿಂದಿನ ದಿನ ಸುರಿದ ಭಾರಿ ಮಳೆಯೇ ಭೂಕುಸಿತಕ್ಕೆ ಕಾರಣ
  • ವಯನಾಡಿನಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆಯಿಂದ ಶೇ 10ರಷ್ಟು ಮಳೆ ಹೆಚ್ಚಾಗಿ ಅನಾಹುತಕ್ಕೆ ದಾರಿಯಾಗಿದೆ
  • ಈ ಭಾಗದಲ್ಲಿ ಮುಂದೆ ಸರಾಸರಿ ಜಾಗತಿಕ ತಾಪಮಾನವು 2ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾದರೆ ಇನ್ನೂ ಶೇಕಡ 4ರಷ್ಟು ಮಳೆ ಪ್ರಮಾಣ ಹೆಚ್ಚಾಗಿ ಅನಾಹುತವೂ ಅಧಿಕವಾಗಬಹುದು
  • ಕೇರಳದ ಭೂಪ್ರದೇಶ ಮತ್ತು ಪರ್ವತ ಶ್ರೇಣಿಗಳಲ್ಲಿ ಮಳೆಬೀಳುವ ಸಂಕೀರ್ಣ ಪರಿಸ್ಥಿತಿಯಿದೆ. ಮಳೆಯಲ್ಲಿ ಆಗಿರುವ ವ್ಯತ್ಯಾಸಗಳು ದುರಂತಕ್ಕೆ ದಾರಿ ಮಾಡಿಕೊಟ್ಟಿವೆ.
  • ಹವಾಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಾದಂತೆ ಶೇ 7ರಷ್ಟು ತೇವಾಂಶವನ್ನು ಹಿಡಿದಿಡುವಿಕೆ ಹೆಚ್ಚಾಗುತ್ತಿದೆ. ಇದು ವಯನಾಡು ದುರಂತ ವಿಷಯಕ್ಕೂ ಅನ್ವಯವಾಗಿದೆ.
  • ವಯನಾಡಲ್ಲಿ ಅರಣ್ಯ ಪ್ರದೇಶದಲ್ಲಿ ಶೇ.62 ನಷ್ಟು ಕಡಿತವು ಭಾರಿ ಮಳೆ ಘಟನೆಗಳಲ್ಲಿ ಇಳಿಜಾರುಗಳ ಹೆಚ್ಚಿನ ಸಂಭಾವ್ಯತೆಗೆ ಕಾರಣವಾಗಿರಬಹುದು.
  • ಹವಾಮಾನ ಬದಲಾವಣೆ-ಮಳೆಯ ಹೆಚ್ಚಳವು ಭವಿಷ್ಯದಲ್ಲಿ ಪ್ರಚೋದಿಸಬಹುದಾದ ಭೂಕುಸಿತಗಳ ಸಂಭಾವ್ಯ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.