ಕನ್ನಡ ಸುದ್ದಿ  /  Nation And-world  /  We Need To Prioritize Us Above My And Mine Urges Mohan Bhagwat

Mohan Bhagwat: ನಾನು, ನನ್ನದು ಬದಲು, ನಾವು ನಮ್ಮದು ಭಾವನೆ ಬೆಳೆಸಲು ಸಂಘ ಕಾರ್ಯೋನ್ಮುಖ: ಭಾಗವತ್!‌

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದು, ಅದನ್ನು ಒಗ್ಗೂಡಿಸಲು ಮತ್ತು ಒಂದು ಘಟಕವಾಗಿ ಹೆಚ್ಚು ಸಂಘಟಿತಗೊಳಿಸಲು ಶ್ರಮಿಸುತ್ತಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಕಲ್ಯಾಣ ಕಾರ್ಯಗಳನ್ನು ಮಾಡುವಾಗ ನಾನು, ನನ್ನದು ಎನ್ನುವುದಕ್ಕಿಂತ ನಾವು, ನಮ್ಮದು ಎಂಬುದಕ್ಕೆ ಆದ್ಯತೆ ನೀಡಬೇಕು ಎಂದೂ ಭಾಗವತ್‌ ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಮೋಹನ್‌ ಭಾಗವತ್
ದೆಹಲಿಯಲ್ಲಿ ಮಾತನಾಡಿದ ಮೋಹನ್‌ ಭಾಗವತ್ (ANI)

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದು, ಅದನ್ನು ಒಗ್ಗೂಡಿಸಲು ಮತ್ತು ಒಂದು ಘಟಕವಾಗಿ ಹೆಚ್ಚು ಸಂಘಟಿತಗೊಳಿಸಲು ಶ್ರಮಿಸುತ್ತಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್‌, ಭಾರತವು ಇಡೀ ವಿಶ್ವಕ್ಕೆ ಮಾದರಿ ಸಮಾಜವಾಗಿ ಹೊರಹೊಮ್ಮಬೇಕು ಎಂಬುದು ಸಂಘದ ಕನಸು. ಇದಕ್ಕಾಗಿ ನಾವು ಸಮಾಜವನ್ನು ಅಮೂಲಾಗ್ರವಾಗಿ ಒಗ್ಗೂಡಿಸಲು ಶ್ರಮಿಸುತ್ತಿದ್ದೇವೆ. ನಾವು ನಮ್ಮ ಗುರಿಯನ್ನು ತಲುಪುವ ಹಂತಕ್ಕೆ ಬಂದಿದ್ದೇವೆ ಎಂಬುದು ಸಂತಸದ ಸಂಗತಿ ಎಂದು ಮೋಹನ್‌ ಭಾಗವತ್‌ ಹೇಳಿದರು.

ಸಮಾಜದ ವಿವಿಧ ವರ್ಗಗಳ ಅನೇಕ ವ್ಯಕ್ತಿಗಳು ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ ನಾವು ಒಂದು ಸಮಾಜವಾಗಿ ಪ್ರವರ್ಧಮಾನಕ್ಕೆ ಬರಲು ನಮಗೆ ತುಂಬ ಸಮಯ ಹಿಡಿಯಿತು. ಕಲ್ಯಾಣ ಕಾರ್ಯಗಳನ್ನು ಮಾಡುವಾಗ ನಾನು, ನನ್ನದು ಎನ್ನುವುದಕ್ಕಿಂತ ನಾವು, ನಮ್ಮದು ಎಂಬುದಕ್ಕೆ ಆದ್ಯತೆ ನೀಡಬೇಕು. ಇದು ಒಂದು ಸಮಾಜವಾಗಿ ವಿಕಸನಗೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ಮೋಹನ್‌ ಭಾಗವತ್‌ ಹೇಳಿದರು.

ಜಾಗತಿಕ ಭೂಪಟದಲ್ಲಿ ಭಾರತದ ಸ್ಥಾನಮಾನ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿದೆ. ಒಂದು ರಾಷ್ಟ್ರವಾಗಿ ನಾವು ಉತ್ತಮ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಜಗತ್ತಿಗೆ ಹಿಂದೆಂದಿಗಿಂತಲೂ ಹೆಚ್ಚು ಈಗ ಭಾರತದ ಅವಶ್ಯಕತೆ ಇದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಗಟ್ಟಿ ಧ್ವನಿಯನ್ನು ಅತ್ಯಂತ ಜಾಗರೂಕತೆಯಿಂದ ಆಲಿಸಲಾಗುತ್ತಿದೆ. ಆದಾಗ್ಯೂ ನಾವು ಸಾಗಬೇಕಾದ ದಾರಿ ಬಹಳ ದೂರ ಇದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಅಭಿಪ್ರಾಯಪಟ್ಟರು.,

ಜಾಗತಿಕವಾಗಿ ಭಾರತ ಸದೃಢವಾಗುತ್ತಿರುವುದು ನಿಜವಾದರೂ, ಆಂತರಿಕವಾಗಿ ನಮ್ಮಲ್ಲಿ ಇನ್ನೂ ಹಲವಾರು ಸಮಸ್ಯೆಗಳಿವೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಾವು ಒಂದಾಗಿ ಈ ರಾಷ್ಟ್ರವನ್ನು ಕಟ್ಟಬೇಕಿದೆ. ಭಿನ್ನ ಧ್ವನಿಗಳಿಗೆ ಭಾರತದಲ್ಲಿ ಖಂಡಿತ ಸ್ಥಾನವಿದೆ. ಆದರೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಮ್ಮ ಧ್ವನಿ ಒಂದೇ ಆಗಿರಬೇಕು ಎಂಬುದನ್ನು ನಾವು ಮರೆಯಬಾರದು ಎಂದು ಮೋಹನ್‌ ಭಾಗವತ್‌ ಹೇಳಿದರು.

ಎಲ್ಲ ಸಮಾಜಗಳಲ್ಲೂ ನ್ಯೂನ್ಯತೆಗಳಿರುತ್ತವೆ. ಆದರೆ ಆ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವ ಸಮಾಜ ಮಾತ್ರ ದೀರ್ಘ ಕಾಲದವರೆಗೂ ಅಸ್ತಿತ್ವದಲ್ಲಿರುತ್ತದೆ. ಪ್ರತಿಯೊಂದು ಕಾಲಘಟ್ಟದಲ್ಲೂ ಈ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮುನ್ನಡೆದಿದ್ದೇ, ಭಾರತದ ನಾಗರೀಕತೆ ಸಾವಿರಾರು ವರ್ಷಗಳಿಂದ ಜೀವಂತವಾಗಿರಲು ಕಾರಣ. ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಳ್ಳುವ ನಮ್ಮ ಸಂಸ್ಕೃತಿಗೆ ಅಂತ್ಯ ಎಂಬುದಿಲ್ಲ ಎಂದು ಮೋಹನ್‌ ಭಾಗವತ್‌ ಹೆಮ್ಮೆಯಿಂದ ಹೇಳಿದರು.

ಸದೃಢ ಸಮಾಜ ಮತ್ತು ಆ ಮೂಲಕ ಸದೃಢ ರಾಷ್ಟ್ರದ ನಿರ್ಮಾಣ ಸಂಘದ ಗುರಿ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದು, ಸಂಘ ತನ್ನ ಗುರಿಯನ್ನು ಸಾಧಿಸಲು ಸರ್ವ ತ್ಯಾಗಕ್ಕೂ ಸಿದ್ಧವಿದೆ. ಸಂಘವು ತನ್ನ ಅನುಯಾಯಿಗಳನ್ನೂ, ವಿರೋಧಿಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದೆ. ಭಾರತವನ್ನು ಒಂದು ಆತ್ಮನಿರ್ಭರ ಮತ್ತು ಸದೃಢ ರಾಷ್ಟ್ರವನ್ನಾಗಿ ನಾವು ಕಟ್ಟಲಿದ್ದೇವೆ ಎಂಬ ಭರವಸೆ ನನಗಿದೆ ಎಂದು ಮೋಹನ್‌ ಭಾಗವತ್‌ ಇದೇ ವೇಳೆ ನುಡಿದರು.

ಭಾರತದ ಭವಿಷ್ಯ ಉಜ್ವಲವಾಗಿದೆ. ಭಾರತ ಗೆದ್ದರೆ, ವಿಶ್ವ ಗೆದ್ದಂತೆ. ಭಾರತ ಸೋತರೆ, ವಿಶ್ವವೂ ಸೋತಂತೆ. ಜಗತ್ತಿನ ಒಳಿತಿಗಾಗಿ ಭಾರತ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ವಿಶ್ವದ ಶಾಂತಿ ಮತ್ತು ನೆಮ್ಮದಿಗಾಗಿ ಭಾರತ ಮುಂದೆಯೂ ತನ್ನ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಿದೆ ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

IPL_Entry_Point

ವಿಭಾಗ