West Bengal Polls: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಮಮತಾಗೆ ಬಲ: ಟಿಎಂಸಿ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ವಿಫಲ
West Bengal polls ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು,ಮುಂಬರುವ ಲೋಕಸಭೆ ಚುನಾವಣೆ ಮುನ್ನ ಬಲ ಹೆಚ್ಚಿಸಿಕೊಂಡಿದೆ. ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬಂದಿವೆ ಎನ್ನುವ ವಿವರ ಇಲ್ಲಿದೆ.
ಕೋಲ್ಕತ್ತಾ: ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ, ಹಿಂಸಾಚಾರದ ಮಧ್ಯೆಯೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್( Trinamool Congress) ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಭಾರೀ ಜಯಭೇರಿ ಬಾರಿಸಿದೆ. ಶೇ.80 ಕ್ಕೂ ಹೆಚ್ಚು ಗ್ರಾಮಪಂಚಾಯತ್‌ಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಮಮತಾ ಬಾನರ್ಜಿ ನೇತೃತ್ವದ ಪಕ್ಷ ಯಶಸ್ವಿಯಾಗಿದೆ.
ಒಟ್ಟು 3,317 ಗ್ರಾಮಪಂಚಾಯತ್‌ಗಳಲ್ಲಿ 2,552 ರಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 232 ಪಂಚಾಯಿತಿ ಸಮಿತಿ, 12 ಜಿಲ್ಲಾ ಪಂಚಾಯಿತ್‌ಗಳಲ್ಲೂ ಗೆಲುವು ಸಾಧಿಸಿದೆ. ಬಿಜೆಪಿ ಬರೀ 212 ಪಂಚಾಯತ್‌ಗಳಲ್ಲಿ ಮಾತ್ರ ಅಧಿಕಾರ ಲಭಿಸಿದೆ. ಏಳು ಪಂಚಾಯಿತಿ ಸಮಿತಿಗಳಲ್ಲಿ ಬಿಜೆಪಿ ಗೆದ್ದರೆ, ಜಿಲ್ಲಾಪಂಚಾಯತ್‌ಗಳಲ್ಲಿ ಒಂದೂ ಕಡೆ ಗೆಲ್ಲಲು ಆಗಿಲ್ಲ.
ಈ ನಡುವೆ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ಸದ್ಯವೇ ಬಿಜೆಪಿ ಮುಖಂಡರ ನಿಯೋಗ ಪಶ್ಚಿಮ ಬಂಗಾಳಕ್ಕೆ ತೆರಳಿ ಹಿಂಸಾಚಾರದಿಂದ ನಲುಗಿದ ಪ್ರದೇಶಗಳ ಜನರ ಅಹವಾಲುಗಳನ್ನು ಆಲಿಸಲಿದೆ.
ಟಿಎಂಸಿಗೆ ಹೆಚ್ಚಿನ ಬಲ
ಹಿಂಸಾಚಾರ, ಗದ್ದಲ, ಆತಂಕದ ನಡುವೆಯೇ ನಡೆದ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಪಕ್ಷೇತರರರು ಹಾಗೂ ಟಿಎಂಸಿ ಬಂಡಾಯಗಾರರ ನಡುವೆಯೂ ಮಮತಾ ಬ್ಯಾನರ್ಜಿ( Mamata Banerjee)ತಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲುವಂತೆ ನೋಡಿಕೊಂಡಿದ್ದಾರೆ.
ಮಂಗಳವಾರ ಮಧ್ಯರಾತ್ರಿವರೆಗೂ ಮತ ಎಣಿಕೆ ಹಲವು ಜಿಲ್ಲೆಗಳಲ್ಲಿ ಮುಂದುವರೆದಿದ್ದರೂ ಈವರೆಗಿನ ಫಲಿತಾಂಶ ಪ್ರಕಾರ ಟಿಎಂಸಿ ಹೆಚ್ಚಿನ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ರಾತ್ರಿಯಿಂದಲೇ ಟಿಎಂಸಿ ಕಚೇರಿಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಕಚೇರಿಗಳಲ್ಲಿ ಮಮತಾ ಭಾವಚಿತ್ರಗಳಲ್ಲಿ ಗುಲಾಲು ಎರಚಿ ಕಾರ್ಯಕರ್ತರು ಖುಷಿಪಟ್ಟರು.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ
ಒಟ್ಟು ಮೂರು ಹಂತದ ಪಂಚಾಯಿತಿಗಳ ಒಟ್ಟು 74,000 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ 63,229 ಗ್ರಾಮಪಂಚಾಯತ್ ಸದಸ್ಯ ಸ್ಥಾನ, 9,730 ತಾಲ್ಲೂಕು ಪಂಚಾಯಿತ್, 928 ಜಿಲ್ಲಾ ಪಂಚಾಯತ್ ಸ್ಥಾನಗಳಿದ್ದವು. ಚುನಾವಣೆ ಆಯೋಗದಲ್ಲಿ ಲಭ್ಯ ಇರುವ ಪ್ರಾಥಮಿಕ ಮಾಹಿತಿ ಪ್ರಕಾರ ತೃಣಮೂಲ ಕಾಂಗ್ರೆಸ್ 28985 ಗ್ರಾಮಪಂಚಾಯತ್ ಸ್ಥಾನ ಗೆದ್ದಿದೆ. ಬಿಜೆಪಿ 7767, ಸಿಪಿಐಎಂ 2,409, ಕಾಂಗ್ರೆಸ್ 2,022 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ತೃಣಮೂಲ ಕಾಂಗ್ರೆಸ್‌ನ ಬಂಡಾಯ ಸ್ಪರ್ಧಿಗಳು ಸೇರಿ ಪಕ್ಷೇತರರು 718 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ತೃಣಮೂಲ ಬಲದ ನಡುವೆ ಇತರೆ ಪಕ್ಷಗಳು ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲವಾಗಿದ್ದು ಬುಧವಾರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಬಹುದು ಎನ್ನಲಾಗಿದೆ.
ಮಮತಾ ಧನ್ಯವಾದ
ಗ್ರಾಮೀಣ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ತನ್ನ ಶಕ್ತಿ ತೋರಿದೆ. ಜನರ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ಅವರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸುವೆ. ಪಶ್ಚಿಮ ಬಂಗಾಳ ಜನರ ಹೃದಯದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮಾತ್ರ ಸ್ಥಾನವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ ಎಂದು ಮಮತಾ ಬ್ಯಾನರ್ಜಿ ಫಲಿತಾಂಶ ಕುರಿತು ಫೇಸ್‌ಬುಕ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಎಣಿಕೆ ಕೇಂದ್ರದಲ್ಲೂ ಹಿಂಸಾಚಾರ
ಮತ ಎಣಿಕೆ ಆರಂಭವಾದ ಸಂದರ್ಭದಲ್ಲೂಕೆಲವು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಬಾಂಬ್ ಎಸೆಯುವ ಪ್ರಯತ್ನಗಳೂ ನಡೆದವು. ಪೊಲೀಸರು ಲಾಠಿ ಚಾರ್ಜ್‌ನೊಂದಿಗೆ ಅಲ್ಲಿ ಸೇರಿದ್ದವರನ್ನು ಚದುರಿಸಿದರು. ಎಲ್ಲಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಯಿದ್ದರೂ ಪಕ್ಷಗಳ ಬೆಂಬಲಿಗರು ಭಾರೀ ಪ್ರಮಾಣದಲ್ಲಿ ಸೇರಿದ್ದರು. ಮತ ಎಣಿಕೆಗೆ ಎಲ್ಲಿಯೂ ಅಡ್ಡಿಯಾಗಿಲ್ಲ.
ಬಿಜೆಪಿ ಧರಣಿ
ಮತದಾನ ಕೇಂದ್ರಕ್ಕೆ ಪ್ರವೇಶ ನೀಡದ್ದನ್ನು ವಿರೋಧಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ್ ಮಜುಂದಾರ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ದಕ್ಷಿಣ ದಿನಜ್‌ಪುರ್ ಜಿಲ್ಲೆಯ ಬಾಲೂರ್‌ಘಾಟ್ ಕಾಲೇಜಿನ ಮುಂಭಾಗ ಧರಣಿ ನಡೆಸಿದರು. ತೃಣಮೂಲ ಪಕ್ಷ ಹಾಗೂ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮತಗಳನ್ನು ಲೂಟ್ ಮಾಡುವ ಪ್ರಯತ್ನವನ್ನು ತೃಣಮೂಲ ಕಾಂಗ್ರೆಸ್ ಮಾಡಿದೆ. ಪ್ರತಿಪಕ್ಷಗಳು ಮತ ಎಣಿಕೆ ಕೇಂದ್ರದೊಳಗೆ ಬಾರದಂತೆ ತಡೆಯಲಾಗಿದೆ. ಟಿಎಂಸಿ ಪಕ್ಷದ ಗೂಂಡಾಗಳು ಬಾಂಬ್ ಎಸೆದು ಆತಂಕ ಸೃಷ್ಟಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಟಿಎಂಸಿ ತಿರುಗೇಟು
ಇದಕ್ಕೆ ಪ್ರತ್ಯುತ್ತರ ನೀಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಸೋಲುವ ವಾಸನೆ ಅರಿತ ಬಿಜೆಪಿ ಅಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಜನರಿಂದ ತಿರಸ್ಕೃತಗೊಂಡ ಬಿಜೆಪಿ ತನ್ನ ಸಂಘಟನಾತ್ಮಕ ವೈಫಲ್ಯಗಳಿಂದಲೇ ಸೋತಿದ್ದು, ನಮ್ಮ ಮೇಲೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ಧಾರೆ.