ಅಪ್ತಾಪ್ತೆಯನ್ನು ಅತ್ಯಾಚಾರ ಮಾಡಿದ 19 ವರ್ಷದ ಅಪರಾಧಿಗೆ 61 ದಿನದಲ್ಲೇ ಮರಣದಂಡನೆ ನೀಡಿದ ಪೋಕ್ಸೊ ನ್ಯಾಯಾಲಯ
Jaynagar rape accused death penalty: 9 ವರ್ಷ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ 19 ವರ್ಷ ವಯಸ್ಸಿನ ಅತ್ಯಾಚಾರಿಗೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು: ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 9 ವರ್ಷ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ 19 ವರ್ಷ ವಯಸ್ಸಿನ ಅತ್ಯಾಚಾರಿಗೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲಾ ನ್ಯಾಯಾಲಯವು ಘಟನೆ ನಡೆದ 61 ದಿನದಲ್ಲೇ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಈ ಘಟನೆಯು ಅಕ್ಟೋಬರ್ 4ರಂದು ಸೌತ್ 24 ಪರಗಣ ಜಯನಗರದಲ್ಲಿ ನಡೆದಿತ್ತು. 9 ವರ್ಷದ ಬಾಲಕಿ ಟ್ಯೂಷನ್ ಮುಗಿಸಿ ಮನೆಗೆ ಹಿಂತುರುಗುವ ಸಮಯದಲ್ಲಿ ಮುಸ್ತಾಕ್ ಸರ್ದಾರ್ ಎಂಬಾತ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಅದೇ ದಿನ ರಾತ್ರಿ ಎಷ್ಟು ಸಮಯ ಕಳೆದರೂ ಮಗಳು ಮನೆಗೆ ಬಾರದೆ ಇದ್ದಾಗ, ಎಲ್ಲೆಲ್ಲಿ ಹುಡುಕಾಟ ನಡೆಸಿದಾಗಲೂ ದೊರಕದೆ ಇದ್ದಾಗ ಮನೆಯವರು ಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ ವಿವರಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು 2.5 ಗಂಟೆಗಳಲ್ಲಿ ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದರು.
ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ದಾರ್ ಅಪರಾಧವನ್ನು ಒಪ್ಪಿಕೊಂಡಿದ್ದನು. ಅದೇ ರೀತಿ ಮೃತದೇಹವಿದ್ದ ಸ್ಥಳದ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ಸಮಗ್ರ ಮತ್ತು ತ್ವರಿತ ತನಿಖೆಗಾಗಿ ಐದು ಸದಸ್ಯರು ವಿಶೇಷ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು. ಅಕ್ಟೋಬರ್ 30 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು. ಸೂಕ್ತ ದಾಖಲೆಯೊಂದಿಗೆ 25 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲಾಯಿತು. ನವೆಂಬರ್ 4 ರಂದು ವಿಚಾರಣೆ ಪ್ರಾರಂಭವಾಗಿತ್ತು. ನವೆಂಬರ್‌ನಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸುವ ಮೊದಲು ನ್ಯಾಯಾಲಯವು 36 ಸಾಕ್ಷಿಗಳನ್ನೂ ವಿಚಾರಣೆ ನಡೆಸಿತ್ತು.
ಐತಿಹಾಸಿಕ ತೀರ್ಪು ಎಂದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಐತಿಹಾಸಿಕ ತೀರ್ಪನ್ನು ಶ್ಲಾಘಿಸಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಇಂತಹ ಪ್ರಕರಣದಲ್ಲಿ ಅಪರಾಧಿ ಮತ್ತು ಮರಣದಂಡನೆ ರಾಜ್ಯದ ಇತಿಹಾಸದಲ್ಲಿ ನಡೆದಿರುವುದು ಅಭೂತಪೂರ್ವ ವಿದ್ಯಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.
"4.10.24 ರಂದು ಜಯ್‌ನಗರದಲ್ಲಿ ಅಪ್ರಾಪ್ತ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಬರೂಯಿಪುರದ ಪೋಕ್ಸೊ ನ್ಯಾಯಾಲಯವು ಇಂದು ಘೋರ ಘಟನೆ ನಡೆದ 62 ದಿನಗಳೊಳಗೆ ಮರಣದಂಡನೆ ವಿಧಿಸಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಇತಿಹಾಸದಲ್ಲಿ ಇಂತಹ ನ್ಯಾಯ ನೀಡಿರುವ ಅಭೂತಪೂರ್ವ ಪ್ರಕರಣ ಇದಾಗಿದೆ. ನಮ್ಮ ಸರಕಾರವು ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ. ನಮ್ಮಲ್ಲಿ ನ್ಯಾಯ ವಿಳಂಬವಾಗುವುದಿಲ್ಲ, ನ್ಯಾಯ ನಿರಾಕರಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸುವುದನ್ನು ಮುಂದುವರೆಸುತ್ತದೆ" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.