ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟ, ಸಂಜಯ್ ರಾಯ್ ಅಪರಾಧಿ ಎಂದ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟ, ಸಂಜಯ್ ರಾಯ್ ಅಪರಾಧಿ ಎಂದ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟ, ಸಂಜಯ್ ರಾಯ್ ಅಪರಾಧಿ ಎಂದ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ

RG Kar rape-murder verdict: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯೊಬ್ಬರ ಮೇಲೆ ನಡೆದ ಘೋರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ ತೀರ್ಪು ನೀಡಿದೆ.

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟವಾಗಿದ್ದು, ಸಂಜಯ್ ರಾಯ್ ಅಪರಾಧಿ ಎಂದು ಕೋಲ್ಕತ ಸೆಲ್ಡಾ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ.
ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟವಾಗಿದ್ದು, ಸಂಜಯ್ ರಾಯ್ ಅಪರಾಧಿ ಎಂದು ಕೋಲ್ಕತ ಸೆಲ್ಡಾ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ.

RG Kar rape-murder case verdict: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸ್ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಅಪರಾಧಿ ಎಂದು ವಿಚಾರಣಾ ನ್ಯಾಯಾಲಯ ಶನಿವಾರ ಘೋಷಿಸಿದೆ. ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ ಈ ತೀರ್ಪು ನೀಡಿದ್ದು, ಸೋಮವಾರ (ಜನವರಿ 20) ತೀರ್ಪಿನ ಪ್ರಮಾಣವನ್ನು ಪ್ರಕಟಿಸಲಿದೆ.

ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಪ್ರಕಟ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ 12 ರಂದು ಇನ್-ಕ್ಯಾಮೆರಾ ವಿಚಾರಣೆ ಪ್ರಾರಂಭವಾಗಿತ್ತು. 57 ದಿನಗಳ ವಿಚಾರಣೆ ನಡೆಸಿದ ನಂತರ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಈ ತೀರ್ಪು ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾಲೇಜಿನ ತರಗತಿಯೊಂದರಲ್ಲಿ ಆಗಸ್ಟ್ 9 ರಂದು ಟ್ರೈನಿ ವೈದ್ಯರ ಶವ ಪತ್ತೆಯಾಗಿತ್ತು. ಇದರ ಬೆನ್ನಿಗೆ, ಭಾರಿ ಪ್ರಮಾಣದ ಪ್ರತಿಭಟನೆ ವ್ಯಕ್ತವಾಯಿತು. ಹಿಂಸಾಚಾರ ನಡೆಯಿತು. ಮೃತ ವೈದ್ಯೆಗೆ ನ್ಯಾಯ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉತ್ತಮ ಭದ್ರತೆಗಾಗಿ ಬೇಡಿಕೆ ಮುಂದಿಟ್ಟು ವೈದ್ಯರು ವಾರಗಟ್ಟಲೆ ಮುಷ್ಕರ ನಡೆಸಿದರು.

ಈ ಪ್ರಕರಣದಲ್ಲಿ ಪೊಲೀಸರು ಘಟನೆ ನಡೆದ ಮಾರನೇ ದಿನ, ಪೊಲೀಸ್ ಇಲಾಖೆ ಪರವಾಗಿ ಕೆಲಸ ಮಾಡ್ತಾ ಇದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್‌ನನ್ನು ಬಂಧಿಸಿದ್ದರು. ಆದರೆ ಆತ, ತಾನು ನಿರಪರಾಧಿ ಎಂದು ಹೇಳುತ್ತಲೇ ಇದ್ದಾನೆ. ಕೊರಳಲ್ಲಿ ರುದ್ರಾಕ್ಷಿ ಇರುವಾಗ ನಾನು ಆ ರೀತಿ ಕೃತ್ಯ ನಡೆಸುವುದು ಸಾಧ್ಯವೇ ಇಲ್ಲ ಎಂದು ಹೇಳತೊಡಗಿದ್ದಾರೆ. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಆತನೇ ಅಪರಾಧಿ ಎಂದು ಸಾಬೀತಾಗಿದೆ. ಹೀಗಾಗಿ ಕೋರ್ಟ್ ಆತನನ್ನು ಅಪರಾಧಿ ಎಂದು ಘೋಷಿಸಿದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಜಯ್‌ ರಾಯ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಈ ಪ್ರಕರಣದಲ್ಲಿ ದೊಡ್ಡ ಸಂಚು ಇರುವುದಾಗಿ ಸಂತ್ರಸ್ತೆಯ ಮನೆಯವರು, ಕಿರಿಯ ವೈದ್ಯರು ಆರೋಪಿಸಿದ್ದರು. ಈ ಕೇಸ್ ದೇಶವ್ಯಾಪಿ ಸಂಚಲನ ಸೃಷ್ಟಿಸಿತ್ತು.

ಹೀಗಿತ್ತು ಸೀಲ್ಡಾ ಕೋರ್ಟ್‌ ಆವರಣದ ವಾತಾವರಣ

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಇದ್ದ ಕಾರಣ ಇಂದು (ಜನವರಿ 18) ಬೆಳಗ್ಗೆ ಕೋಲ್ಕತದ ಸೀಲ್ದಾ ನ್ಯಾಯಾಲಯದ ಆವರಣದಲ್ಲಿ ಅದೊಂದು ರೀತಿ ಪ್ರಶಾಂತ ವಾತಾವರಣ ಇತ್ತಾದರೂ, ಉದ್ವಿಗ್ನತೆ ಕಂಡುಬಂತು. ವಕೀಲರ ಗುಂಪುಗಳಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿತ್ತು. ಹೊರಗೆ ನೆರೆದಿದ್ದ ಜನರಲ್ಲೂ ಇದೇ ಮಾತುಕತೆ, ಸೀಲ್ಡಾದ ಬೀದಿಗಳಲ್ಲೂ ಕುತೂಹಲ, ಕಾತರ ಕಂಡುಬಂದಿತ್ತು.

ಸೀಲ್ಡಾ ಕೋರ್ಟ್ ಆವರಣದಲ್ಲಿ ಪೊಲೀಸರು ಬಂದೋಬಸ್ತ್ ಹೆಚ್ಚಿಸಿದ್ದರು. ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಆರೋಪಿಯ ಮೇಲೆ ಯಾರೂ ದಾಳಿ ನಡೆಸದಂತೆ ಜಾಗರೂಕತೆ ವಹಿಸಿದ್ದರು. ಕೋರ್ಟ್ ಆವರಣಕ್ಕೆ ಸಂಜಯ್ ರಾಯ್ ಇದ್ದ ಪೊಲೀಸ್ ವಾಹನ ಬಂದ ಕೂಡಲೇ ಅಲ್ಲಿದ್ದವರೆಲ್ಲ, ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಕೂಗಿದ್ದರು. ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕೃತ್ಯವನ್ನು ಆತ ಒಬ್ಬನೇ ಮಾಡಿರಲು ಸಾಧ್ಯವಿಲ್ಲ. ಅದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಕಿರಿಯ ವೈದ್ಯರು ಕೂಡ ಕೋರ್ಟ್‌ ಎದುರು ಬೀದಿಯಲ್ಲಿ ಜಮಾಯಿಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.