Californium: ಈ ರಾಜಕಾರಿಣಿಯ ಮನೆಯಲ್ಲಿತ್ತು ಅಪರೂಪದ ರಾಸಾಯನಿಕ ದಾಸ್ತಾನು, 1 ಗ್ರಾಂ ಬೆಲೆ 17 ಕೋಟಿ ರೂ, ದೇಶದ ಭದ್ರತೆಗೂ ಅಪಾಯ
Californium: ಪಶ್ಚಿಮ ಬಂಗಾಳದ ಈ ರಾಜಕಾರಿಣಿಯ ಮನೆಯಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕ ಕ್ಯಾಲಿಫೋರ್ನಿಯಂ ಪತ್ತೆಯಾಗಿದೆ. ಇದರ ಬೆಲೆ 1 ಗ್ರಾಂಗೆ 17 ಕೋಟಿ ರೂಪಾಯಿ. ರಾಜಕಾರಿಣಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಆತನಿಂದ ದೇಶದ ಭದ್ರತೆಗೆ ಆತಂಕ ಒಡ್ಡುವ ಗೌಪ್ಯ ದಾಖಲೆಗಳನ್ನೂ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Californium: ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬಾರಿ ಪ್ರದೇಶದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಫ್ರಾನ್ಸಿಸ್ ಎಕ್ಕಾ ಅವರ ಮನೆಯಿಂದ ಅಪಾಯಕಾರಿ ಮತ್ತು ಮೌಲ್ಯಯುತ ಪರಮಾಣು ರಾಸಾಯನಿಕ 'ಕ್ಯಾಲಿಫೋರ್ನಿಯಂ' ಅನ್ನು ವಶಪಡಿಸಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ರಾಸಾಯನಿಕದ ಬೆಲೆ ಪ್ರತಿ ಗ್ರಾಂಗೆ 17 ಕೋಟಿ ರೂಪಾಯಿ ಇದೆ. ಇದನ್ನು ಮುಖ್ಯವಾಗಿ ಪರಮಾಣು ಸ್ಥಾವರಗಳಲ್ಲಿ ಬಳಸಲಾಗುತ್ತದೆ. ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಜಂಟಿ ಕಾರ್ಯಾಚರಣೆಯಲ್ಲಿ ನಾಯಕನ ಮನೆಯಿಂದ ರಾಸಾಯನಿಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟಿವಿ 9 ಬಾಂಗ್ಲಾ ವರದಿ ಮಾಡಿದೆ. ಇದರೊಂದಿಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯ ಕೆಲವು ಗೌಪ್ಯ ದಾಖಲೆಗಳು ಸಹ ಕಂಡುಬಂದಿರುವುದು ಕಳವಳಕ್ಕೆ ಕಾರಣವಾಗಿದೆ. ದೇಶದ ಭದ್ರತೆಗೂ ಆತಂಕ ಒಡ್ಡಿರುವ ಪ್ರಕರಣದ ತನಿಖೆ ನಡೆದಿದೆ ಎಂದು ವರದಿ ಹೇಳಿದೆ.
ಐಷಾರಾಮಿ ಜೀವನಕ್ಕೆ ಬದಲಾದ ಫ್ರಾನ್ಸಿಸ್ ಎಕ್ಕಾ, ದೇಶದ ಭದ್ರತೆಯನ್ನೇ ಅಪಾಯಕ್ಕೊಡಿದ ಶ್ರೀಮಂತಿಕೆಯ ಗುಟ್ಟು ಬಹಿರಂಗ
ಮೂಲಗಳ ಪ್ರಕಾರ, ಫ್ರಾನ್ಸಿಸ್ ಎಕ್ಕಾ ನೇಪಾಳಕ್ಕೆ ಹತ್ತಿರವಾಗಿ ಜೀವನ ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಅವರ ಜೀವನ ಶೈಲಿ ಬದಲಾಗಿತ್ತು. ಐಷಾರಾಮಿ ಜೀವನಕ್ಕೆ ಬದಲಾದ ಫ್ರಾನ್ಸಿಕ್ ಎಕ್ಕಾ ಅವರ ದಿಢೀರ್ ಶ್ರೀಮಂತಿಕೆ ಬಗ್ಗೆ ಅನೇಕರಿಗೆ ಅನುಮಾನ ಮೂಡಿತ್ತು. ಆದರೆ ಆತ ರಾಜಕೀಯವಾಗಿ ಪ್ರಭಾವಿಯಾದ ಕಾರಣ ಯಾರೂ ಏನೂ ಪ್ರಶ್ನಿಸುವ ಧೈರ್ಯ ಮಾಡಿರಲಿಲ್ಲ ಎಂದು ನೆರೆಹೊರೆಯವರು ಹೇಳಿರುವುದಾಗಿ ವರದಿ ಹೇಳಿದೆ.
ಫ್ರಾನ್ಸಿಸ್ ಎಕ್ಕಾ ಅವರನ್ನು ಮಿರಿಕ್ ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದರು. ದೇಶದ ಭದ್ರತೆಗೆ ಸಂಬಂಧಿಸಿದ ಕೇಸ್ ಆದ ಕಾರಣ ಕೇಂದ್ರೀಯ ತನಿಖಾ ತಂಡಗಳು ಅವರನ್ನು ವಿಚಾರಣೆಗೆ ಒಳಪಡಿಸಿವೆ. ಅವರು ಯಾವುದಾದರೂ ಅಂತಾರಾಷ್ಟ್ರೀಯ ಗ್ಯಾಂಗ್‌ನ ಭಾಗವಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ವರದಿ ಹೇಳಿದೆ.
ಟಿಎಂಸಿ ನಾಯಕನ ಮನೆಗೆ ಕ್ಯಾಲಿಫೋರ್ನಿಯಂ ಹೇಗೆ ಬಂತು
“ಕ್ಯಾಲಿಫೋರ್ನಿಯಾ ಬಹಳ ಸೂಕ್ಷ್ಮ ಮತ್ತು ಅಪಾಯಕಾರಿ ರಾಸಾಯನಿಕವಾಗಿದೆ. ಇದು ಸಾಮಾನ್ಯ ಮನುಷ್ಯನ ಮನೆಗೆ ಹೇಗೆ ತಲುಪಿತು ಎಂಬುದು ದೊಡ್ಡ ಪ್ರಶ್ನೆ. ಈ ಪ್ರಕರಣವು ಭದ್ರತೆಯಲ್ಲಿ ಗಂಭೀರ ಲೋಪವನ್ನು ಸೂಚಿಸುತ್ತದೆ” ಎಂದು ಮಾಜಿ ಐಎಎಸ್ ಅಧಿಕಾರಿ ಆರ್ ಕೆ ದಾಸ್ ಹೇಳಿದ್ಧಾಗಿ ವರದಿ ವಿವರಿಸಿದೆ.
ರಾಜಕೀಯ ನಾಯಕನ ವಿಶೇಷವಾಗಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನ ಮನೆಯಲ್ಲಿ ಅಪಾಯಕಾರಿ ಕ್ಯಾಲಿಫೋರ್ನಿಯಂ ಪತ್ತೆಯಾಗಿರುವುದು ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಬಿಜೆಪಿ ನಾಯಕ ಅರ್ಜುನ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು,"ತೃಣಮೂಲ ಕಾಂಗ್ರೆಸ್ ಪಕ್ಷವು ಸಮಾಜ ವಿರೋಧಿ ಸಂಸ್ಥೆ, ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ ಎಂಬುದು ಮತ್ತೊಮ್ಮೆ ಕಣ್ಣಿಗೆ ಕಟ್ಟಿದೆ. ಈ ಹಿಂದೆಯೂ ಇದಕ್ಕೆ ಪುರಾವೆಗಳು ಸಿಕ್ಕಿದ್ದವು. ಪಕ್ಷದೊಳಗೆ ನಡೆಯಬಾರದ ಏನೋ ದೊಡ್ಡ ತಪ್ಪು ನಡೆಯುತ್ತಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರಸ್ತುತ, ಈ ಪ್ರಕರಣವು ಇಡೀ ಪ್ರದೇಶದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ದೇಶದ ಭದ್ರತೆಗೆ ಸವಾಲೊಡ್ಡುವ ಮತ್ತು ಅಪಾಯವನ್ನು ಉಂಟುಮಾಡುವ ಅಂತಹ ಸೂಕ್ಷ್ಮ ವಸ್ತುಗಳು ನಾಯಕನ ಮನೆಗೆ ಹೇಗೆ ತಲುಪಿದವು ಮತ್ತು ಅದರ ಹಿಂದಿನ ಉದ್ದೇಶವೇನು? ಅವರ ಮನೆಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಕೂಡ ಪತ್ತೆಯಾಗಿದ್ದು, ಅವರ ಉದ್ದೇಶ ಏನು, ಯಾರಿಗೋಸ್ಕರ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಭದ್ರತಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ" ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.