ಏನಿದು ಸ್ಟುಡಿಯೋ ಘಿಬ್ಲಿ, ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ, ಘಿಬ್ಲಿ ಆರ್ಟ್‌ ಬಗ್ಗೆ ಯಾಕೆ ಇಷ್ಟೊಂದು ಸಂಚಲನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಏನಿದು ಸ್ಟುಡಿಯೋ ಘಿಬ್ಲಿ, ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ, ಘಿಬ್ಲಿ ಆರ್ಟ್‌ ಬಗ್ಗೆ ಯಾಕೆ ಇಷ್ಟೊಂದು ಸಂಚಲನ

ಏನಿದು ಸ್ಟುಡಿಯೋ ಘಿಬ್ಲಿ, ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ, ಘಿಬ್ಲಿ ಆರ್ಟ್‌ ಬಗ್ಗೆ ಯಾಕೆ ಇಷ್ಟೊಂದು ಸಂಚಲನ

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಆರ್ಟ್‌ಗಳದ್ದೇ ಹವಾ. ಘಿಬ್ಲಿ ಸ್ಟೈಲ್ ಇಮೇಜ್‌ಗಳನ್ನೇ ಹೆಚ್ಚು ಜನ ಪರಿಶೀಲಿಸತೊಡಗಿದ್ದಾರೆ. ಘಿಬ್ಲಿ ಆರ್ಟ್‌ ಬಗ್ಗೆ ಯಾಕೆ ಇಷ್ಟೊಂದು ಸಂಚಲನವಾಗುತ್ತಿದೆ?, ಏನಿದು ಸ್ಟುಡಿಯೋ ಘಿಬ್ಲಿ - ಇಲ್ಲಿದೆ ಆ ವಿವರ.

ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ ನಡೆಯುತ್ತಿದೆ. ಇಲ್ಲಿ ವಿವೇಕ್ ಚೌಧರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಚಿತ್ರಗಳನ್ನು ಬಳಸಲಾಗಿದೆ. ಮೊದಲನೇಯದು ಬಾಹುಬಲಿ ಸಿನಿಮಾದ ದೃಶ್ಯ, ಎರಡನೇಯದು ಡಿಡಿಎಲ್‌ಜಿ ಸಿನಿಮಾದ ದೃಶ್ಯ.
ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ ನಡೆಯುತ್ತಿದೆ. ಇಲ್ಲಿ ವಿವೇಕ್ ಚೌಧರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಚಿತ್ರಗಳನ್ನು ಬಳಸಲಾಗಿದೆ. ಮೊದಲನೇಯದು ಬಾಹುಬಲಿ ಸಿನಿಮಾದ ದೃಶ್ಯ, ಎರಡನೇಯದು ಡಿಡಿಎಲ್‌ಜಿ ಸಿನಿಮಾದ ದೃಶ್ಯ.

ಆರ್ಟಿಫಿ‍ಶಿಯಲ್ ಇಂಟೆಲಿಜೆನ್ಸ್‌ (ಎಐ) ಕ್ಷೇತ್ರದ ಸಂಸ್ಥೆ ಓಪನ್‌ಎಐನ ಚಾಟ್‌ಜಿಪಿಟಿ ಇತ್ತೀಚಿಗೆ ಪರಿಚಯಿಸಿರುವ ಹೊಸ ಚಿತ್ರ ತಯಾರಕ (ಇಮೇಜ್ ಜನರೇಟರ್‌) ಅಂಶವು ಆನ್‌ಲೈನ್‌ನಲ್ಲಿ ಮೀಮ್ಸ್‌ಗಳ ಹೊಳೆಯನ್ನೇ ಹರಿಸಿದೆ. ಅದು ಸ್ಟುಡಿಯೋ ಘಿಬ್ಲಿಯಿಂದ ಪ್ರೇರಣೆ ಪಡೆದ ಅಂಶವಾಗಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಗಳನ್ನು ನೋಡಿದಾಗ ಹಳೆಯ ಚಿತ್ರಕಥಾ ಪುಸ್ತಕಗಳನ್ನು ಗಮನಿಸಿದ್ದರೆ ಅದರಲ್ಲಿದ್ದ ಕಥಾ ಪಾತ್ರಗಳಂತೆ ಭಾಸವಾಗುತ್ತದೆ. ನೀವು ಯಾರಾದರೂ ಮಕ್ಕಳ ಜತೆಗೆ ಕುಳಿತುಕೊಂಡು ಮೈ ನೇಬರ್‌ ಟೊಟೊರೊ ಅಥವಾ ಪ್ರಿನ್ಸೆಸ್‌ ಮೊನೊನೊಕೆ ಕಾರ್ಟೂನ್ ವಿಡಿಯೋಗಳನ್ನು ನೋಡಿದ್ದರೆ ಖಚಿತವಾಗಿ ಇದೇನು ಎಂಬುದು ಸ್ವಲ್ಪ ಮಟ್ಟಿಗಾದರೂ ಮನವರಿಕೆಯಾದೀತು.

ಏನಿದು ಸ್ಟುಡಿಯೋ ಘಿಬ್ಲಿ

ಸ್ಟುಡಿಯೋ ಘಿಬ್ಲಿ ಎಂಬುದು ಜಪಾನೀಸ್ ಅನಿಮೇ‍ಷನ್ ಸ್ಟುಡಿಯೋ ಆಗಿದ್ದು, ಮೈ ನೇಬರ್‌ ಟೊಟೊರೊ, ಪ್ರಿನ್ಸೆಸ್‌ ಮೊನೊನೊಕೆ ಮುಂತಾದ ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿ ಮಕ್ಕಳ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಶೈಲಿಯ ಚಿತ್ರಗಳು ಹೊಳೆಯಂತೆ ಹರಿದುಬರುತ್ತಿವೆ. ಎಲ್ಲರೂ ತಮ್ಮ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರ ಜತೆಗಿನ ಫೋಟೋಗಳನ್ನು ಕೊಟ್ಟು ಎಐ ರಚಿತ ಘಿಬ್ಲಿ ಸ್ಟೈಲ್ ಇಮೇಜ್‌ಗಳನ್ನು ಪರಿಶೀಲಿಸುತ್ತಿರುವುದು ಇದಕ್ಕೆ ಕಾರಣ. ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಈ ಟ್ರೆಂಡ್ ಅನ್ನು ಅನುಸರಿಸುತ್ತಿದ್ದು, ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಬುಧವಾರ (ಮಾರ್ಚ್ 26) ಈ ಫೀಚರ್ ಅನ್ನು ಚಾಟ್‌ಜಿಪಿಟಿ ಪರಿಚಯಿಸಿದೆ.

ಘಿಬ್ಲಿ ಆರ್ಟ್‌ ಟ್ರೆಂಡ್ ಹೇಗೆ ಶುರುವಾಯಿತು: ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌ ಅವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತಮ್ಮ ಪ್ರೊಫೈಲ್ ಪಿಕ್ಚರ್‌ಗೆ ಘಿಬ್ಲಿ ಸ್ಟೈಲ್‌ನ ತನ್ನ ಚಿತ್ರವನ್ನು ಅಪ್ಲೋಡ್ ಮಾಡಿದ್ದು, ಅದರ ಬಗ್ಗೆ ಬರೆದಾಗ ಇನ್ನಷ್ಟು ಸಂಚಲನ ಉಂಟಾಯಿತು. ಅವರ ಟ್ವೀಟ್ ಹೀಗಿತ್ತು ನೋಡಿ

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಎಐ ರಚಿತ ಘಿಬ್ಲಿ ಶೈಲಿಯ ಚಿತ್ರಗಳನ್ನು ಗಮನಿಸಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್‌ ಮಸ್ಕ್‌ ಅವರ ವಿವಿಧ ಚಿತ್ರಗಳು ಕಂಡುಬಂದಿವೆ. ಇದಲ್ಲದೆ, ಲಾರ್ಡ್‌ ಆಫ್ ದಿ ರಿಂಗ್ಸ್‌, ಸೆಪ್ಟೆಂಬರ್ 11ರ ದಾಳಿಯ ಚಿತ್ರಗಳೂ ಇವೆ. ಭಾರತದ ಬಾಹುಬಲಿ ಸಿನಿಮಾ, ಫಿರ್ ಹೇರಾ ಪೇರಿ ಚಿತ್ರದ ದೃಶ್ಯಗಳೂ ಕಂಡುಬಂದಿವೆ. ವಿವೇಕ್ ಚೌಧರಿ ಎಂಬುವರು ಶೇರ್ ಮಾಡಿಕೊಂಡ ಚಿತ್ರಗಳು ಕೆಳಗಿವೆ ಗಮನಿಸಿ.

ಏನಿದು ಘಿಬ್ಲಿ ಆರ್ಟ್‌?

ಘಿಬ್ಲಿ ಆರ್ಟ್‌ ಎಂಬುದು ಘಿಬ್ಲಿ ಸ್ಟುಡಿಯೋದ ವಿಶಿಷ್ಟ ದೃಶ್ಯ ಶೈಲಿಯನ್ನು ಉಲ್ಲೇಖಿಸುವಂಥದ್ದು. ಇದು ನೀಲಿ ಬಣ್ಣ ಮತ್ತು ನಸು ಬಣ್ಣಗಳನ್ನು ಬಳಸಿದ ನಿಖರ ವಿವರದ ಚಿತ್ರವಾಗಿದೆ. ಈ ಕಲಾತ್ಮಕ ವಿಧಾನವು ಈ ಶೈಲಿಯ ಸೃಜನಶೀಲ ಶ್ರೀಮಂತಿಕೆಯ ಅಭಿವ್ಯಕ್ತಿ ಮತ್ತು ನಿರೂಪಣೆಯ ವೈಖರಿಯ ಕಾರಣಕ್ಕೆ ಅನಿಮೆ ಅಭಿಮಾನಿಗಳ ನಡುವೆ ಜನಪ್ರಿಯವಾಗಿರುವಂಥ ಕಲೆಯಾಗಿದೆ.

ಸ್ಟುಡಿಯೋ ಘಿಬ್ಲಿಯನ್ನು ಹಯಾವೋ ಮಿಯಾಝಕಿ, ಇಸಾವೋ ಟಕಹಟ ಮತ್ತು ತೋಷಿಯೋ ಸುಜುಕಿ ಅವರು 1985ರಲ್ಲಿ ಹುಟ್ಟುಹಾಕಿದರು. ಜಪಾನ್‌ ದೇಶದ ಅತ್ಯಂತ ಜನಪ್ರಿಯ ಅನಿಮೇಷನ್ ಸ್ಟುಡಿಯೋ ಇದು. ಕೈಯಲ್ಲೇ ಬರೆದ ಅನಿಮೇಷನ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಈ ಸ್ಟುಡಿಯೋ, ಅದರಲ್ಲಿ ಸೂಕ್ತ ಹಿನ್ನೆಲೆ ಹಾಗೂ ಭಾವನೆಗಳನ್ನು ತುಂಬಿ ಕಥೆಗಳ ನಿರೂಪಣೆಗೆ ಜೀವ ತುಂಬಿಕೊಡುವ ಕೆಲಸ ಮಾಡುತ್ತಿದೆ. ಘಿಬ್ಲಿ ಎಂಬ ಹೆಸರು ಲಿಬಿಯನ್‌ ಅರೇಬಿಕ್ ಶಬ್ದದಿಂದ ಬಂದಿದ್ದು, ಮರುಭೂಮಿಯ ಬಿಸಿಗಾಳಿ ಎಂಬ ಅರ್ಥ ಕೊಡುತ್ತದೆ.

ಓಪನ್ ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಈ ಹೊಸ ಇಮೇಜ್‌ ಜನರೇಟರ್‌ ಫೀಚರ್ ಅನ್ನು ಉಚಿತವಾಗಿ ನೀಡಲು ಯೋಜಿಸಿದ್ದರು. ಇದಕ್ಕೆ ಸಿಕ್ಕ ಅನಿರೀಕ್ಷಿತ ಯಶಸ್ಸಿನ ಕಾರಣ ಬಳಿಕ ಚಂದಾದಾರಿಗೆ ಮಾತ್ರ ನೀಡಲು ತೀರ್ಮಾನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಇದು ಸದ್ಯ ಜಿಪಿಟಿ ಪೇಯ್ಡ್ ವರ್ಷನ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ವರದಿ ಹೇಳಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.