Explainer: ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳೇನು? ತಮಿಳುನಾಡು ವಿಧಾನಸಭೆಯಿಂದ ಭಾಷಣ ಮಾಡದೆ ರಾಜ್ಯಪಾಲರ ನಿರ್ಗಮನ ವಿವಾದದ ಸಮಗ್ರ ಮಾಹಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳೇನು? ತಮಿಳುನಾಡು ವಿಧಾನಸಭೆಯಿಂದ ಭಾಷಣ ಮಾಡದೆ ರಾಜ್ಯಪಾಲರ ನಿರ್ಗಮನ ವಿವಾದದ ಸಮಗ್ರ ಮಾಹಿತಿ

Explainer: ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳೇನು? ತಮಿಳುನಾಡು ವಿಧಾನಸಭೆಯಿಂದ ಭಾಷಣ ಮಾಡದೆ ರಾಜ್ಯಪಾಲರ ನಿರ್ಗಮನ ವಿವಾದದ ಸಮಗ್ರ ಮಾಹಿತಿ

ರಾಷ್ಟ್ರಗೀತೆ ನಿಯಮಗಳು: ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ತಮಿಳುನಾಡು ವಿಧಾನಸಭೆಯಲ್ಲಿ ಭಾಷಣ ಮಾಡದೆ ರಾಜ್ಯಪಾಲ ಆರ್‌.ಎನ್‌. ರವಿ ಸದನದಿಂದ ಹೊರನಡೆದ ಘಟನೆ ಇತ್ತೀಚೆಗೆ ನಡೆದಿದೆ. ಭಾರತದ ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳ ಕುರಿತು ಸವಿವರವಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.

ವಿಧಾನಸಭೆಯಲ್ಲಿ ಭಾಷಣ ಮಾಡದೆ ಹೊರನಡೆದ ರಾಜ್ಯಪಾಲರ ವಿರುದ್ಧ ಡಿಎಂಕೆ ಬೆಂಬಲಿಗರ ಪ್ರತಿಭಟನೆ, ಒಳಚಿತ್ರದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ
ವಿಧಾನಸಭೆಯಲ್ಲಿ ಭಾಷಣ ಮಾಡದೆ ಹೊರನಡೆದ ರಾಜ್ಯಪಾಲರ ವಿರುದ್ಧ ಡಿಎಂಕೆ ಬೆಂಬಲಿಗರ ಪ್ರತಿಭಟನೆ, ಒಳಚಿತ್ರದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ

ತಮಿಳುನಾಡು ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲ ಆರ್‌.ಎನ್‌. ರವಿ ಸಂಪ್ರದಾಯದಂತೆ ಭಾಷಣ ಮಾಡದೆ ಸದನದಿಂದ ಹೊರನಡೆದಿದ್ದಾರೆ. ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನವಾಗಿದೆ ಎನ್ನುವುದು ಅವರ ಆರೋಪ. ರಾಜಭವನದ ಎಕ್ಸ್‌ (ಹಳೆಯ ಟ್ವಿಟ್ಟರ್‌)ನಲ್ಲೂ ಈ ಕುರಿತು ಪೋಸ್ಟ್‌ ಮಾಡಲಾಗಿದೆ. "ಭಾರತದ ಸಂವಿಧಾನ, ರಾಷ್ಟ್ರಗೀತೆಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಮತ್ತೆ ಅವಮಾನವಾಗಿದೆ. ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ರಾಷ್ಟ್ರಗೀತೆಗೆ ಗೌರವ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ. ಭಾರತದ ಎಲ್ಲಾ ರಾಜ್ಯಗಳ ಶಾಸನಸಭೆಗಳಲ್ಲಿ ರಾಜ್ಯಪಾಲರ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡುವ ಕ್ರಮವಿದೆ. ತಮಿಳುನಾಡಿನಲ್ಲಿ ರಾಜ್ಯಪಾಲರು ಬಂದಾಗ ನಾಡಗೀತೆ ‘ತಮಿಳು ತಾಯಿ ವಾಜ್ತು’ ಮಾತ್ರ ಹಾಡಲಾಗಿದೆ. ತಮಿಳುನಾಡಿನ ಸಭಾ ನಾಯಕರು, ಸ್ಪೀಕರ್‌ ಅವರಿಗೆ ರಾಷ್ಟ್ರಗೀತೆ ಹಾಡುವ ಸಂವಿಧಾನದ ಕರ್ತವ್ಯದ ಕುರಿತು ಗೌರವಯುತವಾಗಿ ಮನವಿ ಮಾಡಿದ್ದಾರೆ. ಆದರೆ, ಸ್ಪೀಕರ್‌ ಇದಕ್ಕೆ ನಿರಾಕರಿಸಿದರು. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನವಾಗಿರುವುದನ್ನು ಮನಗಂಡು ರಾಜ್ಯಪಾಲರು ಸದನದಿಂದ ನಿರ್ಗಮಿಸಿದ್ದಾರೆ" ಎಂದು ಪೋಸ್ಟ್‌ ಮಾಡಲಾಗಿದೆ.

ಕಳೆದ ವರ್ಷವೂ ರಾಜ್ಯಪಾಲರು ಈ ಕುರಿತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ಕುರಿತು ಕಳೆದ ವರ್ಷ ರಾಜ್ಯಪಾಲರು ಸ್ಪೀಕರ್‌ಗೆ ಪತ್ರ ಬರೆದಿದ್ದರು. "ನಾವು ಕಳೆದ ವರ್ಷವೇ ರಾಜ್ಯಪಾಲರಿಗೆ ಈ ಕುರಿತು ಸ್ಪಷ್ಟಪಡಿಸಿದ್ದೇವು. ತಮಿಳುನಾಡಿನಲ್ಲಿ ರಾಜ್ಯಪಾಲರ ಭಾಷಣಕ್ಕೆ ಮುನ್ನ ರಾಜ್ಯಗೀತೆ ಮತ್ತು ಭಾಷಣದ ಬಳಿಕ ರಾಷ್ಟ್ರಗೀತೆ ಹಾಡುವ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿತ್ತು" ಎಂದು ಸದನದ ನಾಯಕ ದುರೈಮುರುಗನ್‌ ಹೇಳಿದ್ದಾರೆ. ಇವಿಷ್ಟು"ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಅವಮಾನ" ಸುದ್ದಿಯ ಸಾರ. ನಾವಿಲ್ಲಿ ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳೇನು? ತಮಿಳುನಾಡಿನಲ್ಲಿ ಯಾಕೆ ಈ ರೀತಿ ಮಾಡಲಾಗುತ್ತದೆ? ಇದಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ವಿಧಾನಸಭೆಯ ಪ್ರತಿಕ್ರಿಯೆ ಏನು? ಬೇರೆ ರಾಜ್ಯಗಳ ವಿಧಾನಸಭೆ ಅಧಿವೇಶನಗಳಲ್ಲಿ ಯಾವ ಪದ್ಧತಿ ಅನುಸರಿಸಲಾಗುತ್ತದೆ? ರಾಷ್ಟ್ರಪತಿ ಭಾಷಣ ಮಾಡುವ ಸಂದರ್ಭದಲ್ಲಿ ಸಂಸತ್‌ನಲ್ಲಿ ಯಾವ ಕ್ರಮ ಅನುಸರಿಸಲಾಗುತ್ತದೆ? ರಾಷ್ಟ್ರಗೀತೆ ನಿಯಮಗಳ ಕುರಿತು ಭಾರತ ಸಂವಿಧಾನ ಏನು ಹೇಳುತ್ತದೆ? ಇತ್ಯಾದಿ ಹಲವು ಅಂಶಗಳನ್ನು ಸವಿಸ್ತಾರವಾಗಿ ತಿಳಿಯೋಣ ಬನ್ನಿ.

ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಅವಮಾನ

ಸೋಮವಾರ (ಜನವರಿ 6, 2025) ತಮಿಳುನಾಡು ವಿಧಾನಸಭೆಯಲ್ಲಿ ಅಧಿವೇಶನದ ಮೊದಲ ದಿನ ನಡೆದ ಘಟನೆ. ರಾಜ್ಯಪಾಲ ಆರ್‌ಎನ್‌ ರವಿ ಅವರು ಸಾಂಪ್ರದಾಯಿಕ ಭಾಷಣ ಮಾಡದೆ ಹೊರನಡೆದಿದ್ದಾರೆ. ಅದಕ್ಕೂ ಮುನ್ನ ಭಾಷಣಕ್ಕೆ ಮೊದಲು ರಾಷ್ಟ್ರಗೀತೆ ಹಾಡುವ ಸಾಂವಿಧಾನಿಕ ಕರ್ತವ್ಯದ ಕುರಿತು ನೆನಪಿಸಿದ್ದರು. ಕಳೆದ ವರ್ಷವೂ ಇದೇ ಕಾರಣಕ್ಕೆ ಭಾಷಣ ಮಾಡದೆ ರಾಜ್ಯಪಾಲರು ನಿರ್ಗಮಿಸಿದ್ದರು.

ತಮಿಳುನಾಡು ರಾಜಭವನದ ಪ್ರತಿಕ್ರಿಯೆ

"ತಮಿಳುನಾಡು ವಿಧಾನಸಭೆಯಲ್ಲಿ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೊದಲ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ರಾಜ್ಯಪಾಲರ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಹಾಡಲಾಗುತ್ತದೆ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರಬಾರದು ಎಂದು ರಾಜ್ಯಪಾಲರು ತೀವ್ರ ದುಃಖದಿಂದ ಸದನದಿಂದ ನಿರ್ಗಮಿಸಿದ್ದಾರೆ" ಎಂದು ರಾಜಭವನ ಪ್ರತಿಕ್ರಿಯೆ ನೀಡಿದೆ.

ತಮಿಳುನಾಡು ಸರಕಾರದ ಪ್ರತಿಕ್ರಿಯೆ

ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಮೊದಲು ‘ತಮಿಳು ತಾಯಿ ವಾಜ್ತು’ ಎಂಬ ನಾಡಗೀತೆ ಹಾಡಲಾಗುತ್ತದೆ. ಭಾಷಣದ ಬಳಿಕ ರಾಷ್ಟ್ರಗೀತೆ ಹಾಡಲಾಗುತ್ತದೆ. ತಮಿಳುನಾಡು ವಿಧಾನಸಭೆಯಲ್ಲಿ ಈ ಪದ್ಧತಿಯನ್ನು 1991ರ ಜುಲೈನಲ್ಲಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರಕಾರ ಆರಂಭಿಸಿತ್ತು. ಆ ಸಮಯದಲ್ಲಿ ಭೀಷ್ಮ ನಾರೈನ್‌ ಸಿಂಗ್‌ ರಾಜ್ಯಪಾಲರಾಗಿದ್ದರು.

ಬೇರೆ ರಾಜ್ಯಗಳ ವಿಧಾನಸಭೆಗಳಲ್ಲಿ ಹೇಗೆ ರಾಷ್ಟ್ರಗೀತೆ ಹಾಡಲಾಗುತ್ತದೆ?

ಕರ್ನಾಟಕ ಸೇರಿ, ಭಾರತದ ಬಹುತೇಕ ರಾಜ್ಯಗಳಲ್ಲಿ ರಾಜ್ಯಪಾಲರ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ, ಕೆಲವು ರಾಜ್ಯಗಳು ತಮ್ಮದೇ ಆದ ಸಂಪ್ರದಾಯ ಅನುಸರಿಸುತ್ತವೆ. ಉದಾಹರಣೆಗೆ, ನಾಗಾಲ್ಯಾಂಡ್‌ನಲ್ಲಿ ಹಲವು ದಶಕಗಳವರೆಗೆ ರಾಷ್ಟ್ರಗೀತೆ ಹಾಡುತ್ತಿರಲಿಲ್ಲ. ಆರ್‌.ಎನ್‌. ರವಿ ಅವರು ರಾಜ್ಯಪಾಲರಾಗಿದ್ದಾಗ 2021ರಲ್ಲಿ ನಾಗಾಲ್ಯಾಂಡ್‌ ವಿಧಾನಸಭೆಯಲ್ಲಿ ಮೊದಲ ಬಾರಿಗೆ ರಾಷ್ಟ್ರಗೀತೆ ಹಾಡುವ ಪದ್ಧತಿಯನ್ನು ಆರಂಭಿಸಿದರು. 2018ರಲ್ಲಿ ತ್ರಿಪುರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ರಾಷ್ಟ್ರಗೀತೆ ಹಾಡುವ ಪದ್ಧತಿ ಆರಂಭಿಸಲಾಗಿತ್ತು.

ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ಸಮಯದಲ್ಲಿ ಯಾವ ಕ್ರಮ ಅನುಸರಿಸಲಾಗುತ್ತದೆ?

ಸಂಸತ್ತಿನಲ್ಲಿ ರಾಷ್ಟ್ರಪತಿ ತಮ್ಮ ಆಸನ ತಲುಪಿದಾಗ ರಾಷ್ಟ್ರಪತಿ ಬಲಭಾಗದಲ್ಲಿರುವ ಸೆಂಟ್ರಲ್‌ಹಾಲ್‌ ಲಾಬಿಯಲ್ಲಿರುವ ಬ್ಯಾಂಡ್‌ ರಾಷ್ಟ್ರಗೀತೆ ಹಾಡುತ್ತದೆ. ಸಭಾಧ್ಯಕ್ಷರು ಕುಳಿತ ಬಳಿಕ ಗ್ಯಾಲರಿಗಳಲ್ಲಿ ಇತರರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ರಾಷ್ಟ್ರಪತಿಯವರು ತಮ್ಮ ಭಾಷಣವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಓದುತ್ತಾರೆ. ಭಾಷಣ ಮುಗಿದ ಬಳಿಕ ರಾಷ್ಟ್ರಗೀತೆ ಹಾಡಲಾಗುತ್ತದೆ.

ರಾಷ್ಟ್ರಗೀತೆ ಹಾಡುವ ಕುರಿತು ಭಾರತದ ಸಂವಿಧಾನದಲ್ಲಿ ಏನು ಹೇಳಲಾಗಿದೆ?

"ಸಂವಿಧಾನವನ್ನು ಮತ್ತು ಅದರ ಆದರ್ಶಗಳನ್ನು ಪಾಲಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ" ಎಂದು ಭಾರತದ ಸಂವಿಧಾನದ 51(ಎ)(ಎ)ನಲ್ಲಿ ಹೇಳಲಾಗಿದೆ. ಇದೀಗ ತಮಿಳುನಾಡಿನಲ್ಲಿ ಆರಂಭವಾಗಿರುವ ವಿವಾದವು ವಿಧಾನಮಂಡಲಗಳಲ್ಲಿ ನಡೆಯುವ ರಾಜ್ಯಪಾಲರ ಭಾಷಣದ ಶಿಷ್ಟಾಚಾರದ ಬಗ್ಗೆ ಪ್ರಶ್ನೆ ಎತ್ತಿದೆ.

ಕನ್ನಡದಲ್ಲಿ ಭಾರತದ ರಾಷ್ಟ್ರಗೀತೆ

ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿ ತರಂಗ
ತವ ಶುಭ ನಾಮೇ ಜಾಗೇ
ತವ ಶುಭ ಆಶಿಶ ಮಾಗೇ
ಗಾಹೇ ತವ ಜಯ ಗಾಥಾ
ಜನ ಗಣ ಮಂಗಲ ದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.