Explainer: ಏನಿದು ಎಲ್ಐಸಿ ಬಿಮಾ ಸಖಿ ಯೋಜನೆ; ಅರ್ಜಿ ಸಲ್ಲಿಸೋದು ಹೇಗೆ? ಮಹಿಳೆಯರು ಎಷ್ಟು ಹಣ ಸಂಪಾದಿಸಬಹುದು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ಏನಿದು ಎಲ್ಐಸಿ ಬಿಮಾ ಸಖಿ ಯೋಜನೆ; ಅರ್ಜಿ ಸಲ್ಲಿಸೋದು ಹೇಗೆ? ಮಹಿಳೆಯರು ಎಷ್ಟು ಹಣ ಸಂಪಾದಿಸಬಹುದು?

Explainer: ಏನಿದು ಎಲ್ಐಸಿ ಬಿಮಾ ಸಖಿ ಯೋಜನೆ; ಅರ್ಜಿ ಸಲ್ಲಿಸೋದು ಹೇಗೆ? ಮಹಿಳೆಯರು ಎಷ್ಟು ಹಣ ಸಂಪಾದಿಸಬಹುದು?

ಎಲ್‌ಐಸಿ ಬಿಮಾ ಸಖಿ ಯೋಜನೆಯನ್ನು ಮಹಿಳೆಯರಿಗಾಗಿ ಆರಂಭಿಸಲಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸುವ 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ 3 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸ್ಟೈಫಂಡ್‌ ನೀಡಲಾಗುತ್ತದೆ.

ಏನಿದು ಎಲ್ಐಸಿ ಬಿಮಾ ಸಖಿ ಯೋಜನೆ; ಅರ್ಜಿ ಸಲ್ಲಿಸೋದು ಹೇಗೆ? ಎಷ್ಟು ಹಣ ಸಂಪಾದಿಸಬಹುದು?
ಏನಿದು ಎಲ್ಐಸಿ ಬಿಮಾ ಸಖಿ ಯೋಜನೆ; ಅರ್ಜಿ ಸಲ್ಲಿಸೋದು ಹೇಗೆ? ಎಷ್ಟು ಹಣ ಸಂಪಾದಿಸಬಹುದು?

ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ತಂದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಗುರಿಯೊಂದಿಗೆ ಎಲ್ಐಸಿ ಬಿಮಾ ಸಖಿ ಯೋಜನೆಯನ್ನು (lic bima sakhi yojana) ಆರಂಭಿಸಿದ್ದಾರೆ. ಈ ಯೋಜನೆಗೆ ಸೇರುವ ಎಲ್ಲಾ ಮಹಿಳೆಯರನ್ನು ಈಗ ಬಿಮಾ ಸಖಿ ಎಂದೇ ಕರೆಯಲಾಗುತ್ತದೆ. ಬಿಮಾ ಸಖಿ ಯೋಜನೆಯಡಿಯಲ್ಲಿ, 18ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಮೂರು ವರ್ಷಗಳ ಕಾಲ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ನೀಡಲಾಗುತ್ತದೆ. ಈ ಯೋಜನೆ ಕುರಿತ ವಿವರ ಇಲ್ಲಿದೆ.

ಈ ಯೋಜನೆಯಿಂದ ಎರಡು ರೀತಿಯ ಪ್ರಯೋಜನವಿದೆ. ಒಂದು ಕಡೆ, ಯೋಜನೆಗೆ ನೋಂದಾಯಿಸುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿದ್ದಾರೆ. ಅವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಇದೇ ವೇಳೆ ಮಹಿಳೆಯರಲ್ಲಿ ವಿಮಾ ಜಾಗೃತಿಯನ್ನು ಹೆಚ್ಚಿಸಿ ಜನರು ಹೆಚ್ಚು ವಿಮೆ ಪಾಲಿಸಿಗಳನ್ನು ಮಾಡಿಸುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ.

ಬಿಮಾ ಸಖಿ ಯೋಜನೆ ಎಂದರೇನು?

ಬಿಮಾ ಸಖಿ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಅನುಕೂಲವಾಗುತ್ತದೆ. 10ನೇ ತರಗತಿಯಲ್ಲಿ ಉತ್ತೀರ್ಣರಾದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗೆ ಸೇರುವ ಮಹಿಳೆಯರಿಗೆ 3 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ, ವಿಮೆಯ ಅಗತ್ಯತೆ ಸೇರಿದಂತೆ ಪ್ರತಿಯೊಂದು ಅಂಶಗಳ ಬಗ್ಗೆ ವಿವರವಾಗಿ ತಿಳಿಸಲಾಗುತ್ತದೆ.

ಎಲ್ಐಸಿ ಏಜೆಂಟ್ ಆಗಲು ಅವಕಾಶ

ಮೂರು ವರ್ಷಗಳ ತರಬೇತಿಯ ಸಮಯದಲ್ಲಿ ಮಹಿಳೆಯರಿಗೆ ಸ್ಟೈಫಂಡ್ ಕೂಡಾ ಸಿಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಎಲ್ಐಸಿ ಏಜೆಂಟ್‌ಗಳಾಗಿ ಕೆಲಸ ಮಾಡಬಹುದು. ಇದೇ ವೇಳೆ ಬಿಎ ಪಾಸ್ ಆಗಿರುವ ಮಹಿಳೆಯರಿಗೆ ಅಭಿವೃದ್ಧಿ ಅಧಿಕಾರಿಗಳಾಗಲು ಅವಕಾಶ ಸಿಗುತ್ತದೆ.

ಎಷ್ಟು ಹಣ ಸಂಪಾದನೆ ಮಾಡಬಹುದು?

ಬಿಮಾ ಸಖಿ ಯೋಜನೆಯ ಮೂಲಕ 25,000 ಮಹಿಳೆಯರನ್ನು ಬಿಮಾ ಸಖಿಯಾಗಿ ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಗೆ ಸೇರುವ ಮಹಿಳೆಯರಿಗೆ ತರಬೇತಿಯ ಮೊದಲ ವರ್ಷದಲ್ಲಿ ಮಾಸಿಕ 7000 ರೂ., ಎರಡನೇ ವರ್ಷದಲ್ಲಿ 6000 ರೂ. ಮತ್ತು ಮೂರನೇ ವರ್ಷಕ್ಕೆ 5000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಅಂದರೆ, ತರಬೇತಿ ಅವಧಿಯಲ್ಲಿಯೇ ಮಹಿಳೆಯರು ಒಟ್ಟು 2 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಸಂಪಾದಿಸಬಹುದು. ಇದರೊಂದಿಗೆ ಮಹಿಳೆಯರಿಗೆ ಬೋನಸ್ ಮತ್ತು ಕಮಿಷನ್‌ ಕೂಡಾ ಸಿಗಲಿದೆ.

ಗ್ರಾಮೀಣ ಮಹಿಳೆಯರಿಗೆ ಅನುಕೂಲ

ಎಲ್‌ಐಸಿ ಬಿಮಾ ಸಖಿ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರಿಗೆ ಒಂದು ಒಳ್ಳೆಯ ಅವಕಾಶವಾಗಿದೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಎಲ್‌ಐಸಿ ವಿಮೆ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಲು ನೆರವಾಗಲಿದೆ. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಗಳಾಗುವ ಜೊತೆಗೆ ಹಣಕಾಸಿನ ಮಾಹಿತಿ, ಉಳಿತಾಯದ ಕಡೆಗೆ ಗಮನ ಹರಿಸಲಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ಸ್ಥಿರ ಆದಾಯ ದೊರಕಲಿದೆ.

ಬಿಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಎಲ್ಐಸಿ ಅಧಿಕೃತ ವೆಬ್‌ಸೈಟ್ https://licindia.in/test2 ಓಪನ್‌ ಮಾಡಿ.
  • ಇದಾದ ನಂತರ 'Click here for Bima Sakhi' ಮೇಲೆ ಕ್ಲಿಕ್ ಮಾಡಿ.
  • ಈಗ ಹೊಸ ಪುಟ ತೆರೆಯುತ್ತದೆ.
  • ಇಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ವಿಳಾಸ ಸೇರಿದಂತೆ, ಕೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಯಾವುದೇ ಎಲ್‌ಐಸಿ ಏಜೆಂಟ್/ಅಭಿವೃದ್ಧಿ ಅಧಿಕಾರಿ/ನೌಕರ/ವೈದ್ಯಕೀಯ ಪರೀಕ್ಷಕರೊಂದಿಗೆ ಸಂಬಂಧ ಹೊಂದಿದ್ದರೆ ಅವರ ವಿವರಗಳನ್ನು ಸಹ ನಮೂದಿಸಿ.
  • ಇದರ ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು Submit ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ಮಹಿಳೆಯರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

  • ಎಲ್‌ಐಸಿ ಬಿಮಾ ಸಖಿ ಯೋಜನೆಯು, ಸ್ಟೈಫಂಡರಿ ಸ್ಕೀಮ್‌ ಆಗಿದೆ. ಮೂರು ವರ್ಷಗಳ ಕಾಲ ಸ್ಟೈಫಂಡ್‌ ದೊರಕಲಿದೆ. ಈ ಯೋಜನೆಗೆ ಆಯ್ಕೆಯಾದವರನ್ನು ಕಾಯಂ ಉದ್ಯೋಗಿಗಳ ರೀತಿ ನೋಡಲಾಗುವುದಿಲ್ಲ.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷ ವಯಸ್ಸಿನ ಮಿತಿ ಇದೆ.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ.
  • ಪ್ರತಿವರ್ಷದ ಸ್ಟೈಫಂಡರಿ ಅವಧಿಯಲ್ಲೂ ಅಭ್ಯರ್ಥಿಗಳ ಪರ್ಫಾಮೆನ್ಸ್‌ಗೆ ಮಾನದಂಡಗಳು ಇರುತ್ತವೆ. ನಿರ್ದಿಷ್ಟ ಟಾರ್ಗೆಟ್‌ ಪೂರೈಸಬೇಕು. ಮೊದಲ ವರ್ಷ 24 ಗುರಿ‌ ಪೂರೈಸಬೇಕು. ಇದು ಸಾಧ್ಯವಾದರೆ ಮೊದಲ ವರ್ಷದ ಕಮಿಷನ್‌ (ಬೋನಸ್‌ ಕಮಿಷನ್‌ ಹೊರತುಪಡಿಸಿ) 48 ಸಾವಿರ ರೂಪಾಯಿ ದೊರಕುತ್ತದೆ.
  • ಈಗಾಗಲೇ ಎಲ್‌ಐಸಿಯಲ್ಲಿ ಕೆಲಸ ಮಾಡುವವರು, ಏಜೆಂಟ್‌ ಆಗಿರುವವರು ಅರ್ಜಿ ಸಲ್ಲಿಸುವಂತೆ ಇಲ್ಲ. ಅವರ ಕುಟುಂಬದವರೂ ಅರ್ಜಿ ಸಲ್ಲಿಸುವಂತೆ ಇಲ್ಲ. ಈಗಾಗಲೇ ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವವರು, ಈ ಹಿಂದೆ ಏಜೆಂಟ್‌ ಆಗಿ ಕೆಲಸ ಮಾಡಿದ್ದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
  • ಅರ್ಜಿ ನಮೂನೆ ಜೊತೆ ಇತ್ತೀಚಿನ ಪಾಸ್‌ಪೋರ್ಟ್‌ ಗಾತ್ರದ ಫೋಟೋ ಲಗ್ಗತ್ತಿಸಬೇಕು.
  • ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, ಶೈಕ್ಷಣಿಕ ದಾಖಲೆಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
  • ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: https://licindia.in/lic-s-bima-sakhi

ಇದನ್ನೂ ಓದಿ | CISF Constable Jobs: ಸಿಐಎಸ್‌ಎಫ್‌ನ 1124 ಕಾನ್‌ಸ್ಟೆಬಲ್‌ ಹುದ್ದೆಗೆ ನೇಮಕಾತಿ, ನೋಂದಣಿ ಶುರು, ಅರ್ಜಿ ಸಲ್ಲಿಸಲು ನೇರ ಲಿಂಕ್‌

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.