ಕನ್ನಡ ಸುದ್ದಿ  /  Nation And-world  /  What Is Moonlighting?: Is It Ethical If You Do More Than One Job In India?

What is moonlighting?: ಮೂನ್‌ಲೈಟಿಂಗ್‌ ಎಂದರೇನು? ಫುಲ್‌ಟೈಮ್‌ ಉದ್ಯೋಗದಲ್ಲಿದ್ರೂ ಪಾರ್ಟ್‌ಟೈಮ್‌ ಉದ್ಯೋಗ ಮಾಡುವುದು ತಪ್ಪೇ?

What is moonlighting?: ವಿಪ್ರೋ ಕಂಪನಿ ತನ್ನ 300 ಉದ್ಯೋಗಿಗಳನ್ನು ಮೂನ್‌ಲೈಟಿಂಗ್‌ ಕಾರಣ ಮುಂದಿಟ್ಟು ಕೆಲಸದಿಂದ ತೆಗೆದುಹಾಕಿದೆ. ಕಾರ್ಪೊರೇಟ್‌ ಉದ್ಯೋಗವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಚಾರ ಮೂನ್‌ಲೈಟಿಂಗ್.‌ ಏನಿದು ಮೂನ್‌ಲೈಟಿಂಗ್‌? ನಮ್ಮ ದೇಶದಲ್ಲಿ ಸೈಡ್‌ ಜಾಬ್‌ ಮಾಡುವುದು ಅನೈತಿಕವೇ? ಇಲ್ಲಿದೆ ವಿವರ.

ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ ಸದ್ದು ಮಾಡುತ್ತಿರುವ ವಿಚಾರ ಮೂನ್‌ಲೈಟಿಂಗ್.‌
ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ ಸದ್ದು ಮಾಡುತ್ತಿರುವ ವಿಚಾರ ಮೂನ್‌ಲೈಟಿಂಗ್.‌

ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ ಸದ್ದು ಮಾಡುತ್ತಿರುವ ವಿಚಾರ ಮೂನ್‌ಲೈಟಿಂಗ್.‌ ವಿಪ್ರೋ ಕಂಪನಿ ತನ್ನ 300 ಉದ್ಯೋಗಿಗಳನ್ನು ಮೂನ್‌ಲೈಟಿಂಗ್‌ ಕಾರಣಕ್ಕೇ ಕೆಲಸದಿಂದ ತೆಗೆದುಹಾಕಿತು. ಈ ಮೂಲಕ ಮೂನ್‌ಲೈಟಿಂಗ್‌ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ. ಅದು ಅನೈತಿಕವೇ ಎಂಬ ಪ್ರಶ್ನೆಯೂ ಮೂಡಿದೆ.

ಜೂನ್ ತ್ರೈಮಾಸಿಕದಲ್ಲಿ, ಪ್ರಮುಖ ಮೂರು ಐಟಿ ಸಂಸ್ಥೆಗಳಾದ ವಿಪ್ರೋ, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಿವ್ವಳ ನೇಮಕಾತಿ ಪ್ರಮಾಣ 50,000 ಮೀರಿದೆ. ಸನ್ನಿಹಿತವಾಗಿರುವ ಜಾಗತಿಕ ಆರ್ಥಿಕ ಹಿಂಜರಿತದ ಕಳವಳಗಳ ಹೊರತಾಗಿಯೂ ಉದ್ಯಮದ ಪ್ರಕಾರ, ಇಡೀ ಆರ್ಥಿಕ ವರ್ಷದಲ್ಲಿ ನೇಮಕಾತಿ ಗುರಿಗಳಿಗೆ ಭಾರಿ ಕಡಿವಾಣ ಹಾಕುವ ಪ್ರವೃತ್ತಿ ಗೋಚರಿಸಿಲ್ಲ.

ನೇಮಕಾತಿಯ ಹೆಚ್ಚಳವು ಟೆಕ್ ಕೆಲಸಗಾರರನ್ನು ಪ್ರೋತ್ಸಾಹಿಸಿದರೂ, ಹಿಂದೆಂದೂ ಕೇಳಿರದ ವಹಿವಾಟು ದರಗಳು, ಬೆಳೆಯುತ್ತಿರುವ ಕಾರ್ಮಿಕ ವೆಚ್ಚಗಳು ಮತ್ತು ಮೂನ್‌ಲೈಟಿಂಗ್‌ನಂತಹ ಸಮಸ್ಯೆಗಳ ಬಗ್ಗೆ ಐಟಿ ಉದ್ಯೋಗದಾತರಲ್ಲಿ ಆತಂಕದ ಸರಣಿ ರೂಪುಗೊಳ್ಳಲು ಕಾರಣವಾಗಿದೆ.

“ಎರಡು ರಿಮೋಟ್‌ ಕೆಲಸಗಳನ್ನು ಏಕಕಾಲದಲ್ಲಿ ಮಾಡುವುದು ಹೊಸದೇನಲ್ಲ. ಹಿಂದಿನಿಂದಲೂ ನಡೆದುಕೊಂಡುಬಂದಿದ್ದ ಪ್ರವೃತ್ತಿ. ಇದು ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಓಪನ್‌ ಸೀಕ್ರೆಟ್‌" ಎಂದು ಅಮೆರಿಕದ ಟೆಕ್ಕಿಯೊಬ್ಬರು ಹೇಳಿರುವುದಾಗಿ ದ ಗಾರ್ಡಿಯನ್‌ ವರದಿ ಮಾಡಿದೆ.

ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋಗಳು ಕಡಿಮೆ ಲಾಭಾಂಶದ ಕಾರಣ 2023ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗಿಗಳಿಗೆ ವೇರಿಯಬಲ್ ಪಾವತಿಯನ್ನು ವಿಳಂಬ ಮಾಡಿ, ಮುಂದೂಡುವುದಾಗಿ ಅಥವಾ ಕಡಿಮೆಗೊಳಿಸುವುದಾಗಿ ಹೇಳಿತ್ತು. ಇದರ ನಂತರ, ಮೂನ್‌ಲೈಟಿಂಗ್ ಗಮನ ಸೆಳೆಯಿತು.

ಮೂನ್‌ಲೈಟಿಂಗ್‌ ಎಂದರೇನು?

ಒಂದು ಕಂಪನಿಯಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗಲೇ, ಹೆಚ್ಚುವರಿ ಹೊಣೆಗಾರಿಕೆ ಮತ್ತು ಹೊರಗಿನ ಜಾಬ್‌ಗಳನ್ನು ಮಾಡುವುದು. ಉದ್ಯೋಗಿಗಳು ಈ ರೀತಿ ಮಾಡುವಾಗ ಉದ್ಯೋಗದಾತ ಕಂಪನಿಯ ಗಮನಕ್ಕೆ ತಂದಿರುವುದಿಲ್ಲ. ಈ ಪ್ರವೃತ್ತಿಯನ್ನೇ ಮೂನ್‌ಲೈಟಿಂಗ್‌ ಎನ್ನುತ್ತಾರೆ. ಇದನ್ನೇ ಸಾಮಾನ್ಯರ ಭಾಷೆಯಲ್ಲಿ ಉಪಕಸುಬು, ಸೈಡ್‌ ಜಾಬ್‌, ಸೈಡ್‌ ಇನ್‌ಕಂ ಕೊಡುವ ಅರೆಕಾಲಿಕ ಉದ್ಯೋಗ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ರಾತ್ರಿವೇಳೆಯೋ ಅಥವಾ ವಾರದ ಕೊನೆಯ ದಿನಗಳಲ್ಲೋ ಮಾಡುತ್ತಾರೆ. ಮೂನ್‌ಲೈಟಿಂಗ್‌ ಪದ ಬಳಕೆ ಅಮೆರಿಕನ್ನರ ನಡುವೆ ಚಾಲ್ತಿಯಲ್ಲಿರುವಂಥದ್ದು. ಅಲ್ಲಿ ಅವರು ಬೆಳಗ್ಗೆ 9ರಿಂದ ಸಂಜೆ 5ರ ತನಕ ಕೆಲಸ ಮಾಡಿದ ಬಳಿಕ ಪೂರಕ ಆದಾಯಕ್ಕಾಗಿ ಹೊರಗಿನ ಕೆಲಸ ಮಾಡುತ್ತಾರೆ. ಹೀಗಾಗಿ ಮೂನ್‌ಲೈಟಿಂಗ್‌ ಪದ ಬಳಕೆಗೆ ಬಂತು.

ಮೂನ್‌ಲೈಟಿಂಗ್‌ ಎಷ್ಟು ಸರಿ?

ಮೂನ್‌ಲೈಟಿಂಗ್‌ ವಿಚಾರಕ್ಕೆ ಬಂದರೆ ಐಟಿ ಕ್ಷೇತ್ರದ ಪರಿಣತರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತದೆ. ಕೆಲವರು ಇದನ್ನು ಅನೈತಿಕ, ಮೋಸ ಎಂದು ಹೇಳಿದರೆ, ಇನ್ನು ಅನೇಕರಿಗೆ ಅದು ಸದ್ಯದ ಹಣಕಾಸಿನ ಅಗತ್ಯಕ್ಕೆ ಸಂಬಂಧಿಸಿದ್ದು.

ತಮ್ಮ ಕಂಪನಿಯಿಂದ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ವಿಪ್ರೋ ಚೇರ್ಮನ್‌ ರಿಶಾದ್‌ ಪ್ರೇಮ್‌ಜಿ ಈ ವಿಚಾರದಲ್ಲಿ ಬಹಳ ಸ್ಪಷ್ಟ ನಿಲುವು ಹೊಂದಿದ್ದಾರೆ. ಅದನ್ನು ಅವರು ಟ್ವೀಟ್‌ ಮೂಲಕ ವ್ಯಕ್ತಪಡಿಸಿದ್ದಾರೆ ಕೂಡ. "ಟೆಕ್‌ ಇಂಡಸ್ಟ್ರಿಯಲ್ಲಿ ಜನ ಮೂನ್‌ಲೈಟಿಂಗ್‌ ಮಾಡುತ್ತಿರುವ ವಿಚಾರ ಈಗ ಬಹುಚರ್ಚಿತ ವಿಚಾರ. ಇದು ಬಹಳ ಸಿಂಪಲ್‌ ಆಗಿ ಹೇಳುವುದಾದರೆ ಮೋಸ ಮತ್ತು ವಂಚನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೊಬ್ಬ ಟೆಕ್‌ ಮುತ್ಸದ್ದಿ ಮೋಹನ್‌ದಾಸ್‌ ಪೈ ಅವರದ್ದು ಪ್ರೇಮ್‌ಜಿಗಿಂತ ಭಿನ್ನ ನಿಲುವು. ಇನ್ಫೋಸಿಸ್‌ನ ಮಾಜಿ ನಿರ್ದೇಶಕರಾದ ಅವರು, ಮೂನ್‌ಲೈಟಿಂಗ್‌ ಅನ್ನು ಇನ್ಫೋಸಿಸ್‌ “ಚೀಟಿಂಗ್‌” ಎಂದು ಪರಿಗಣಿಸುವುದಿಲ್ಲ. ಉದ್ಯೋಗ ಎನ್ನುವಂಥದ್ದು ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಒಪ್ಪಂದವಾಗಿದ್ದು, ಇಷ್ಟು ಗಂಟೆ ಕಾಲ ಕೆಲಸ ಮಾಡಬೇಕೆಂಬ ಅಂಶವಿರುತ್ತದೆ. ನನ್ನ ಕೆಲಸದ ಅವಧಿ ಮುಗಿದ ನಂತರ ನನಗೇನು ಮಾಡಬೇಕು ಅನಿಸುವುದೋ ಅದನ್ನು ಮಾಡುವುದರಲ್ಲಿ ತಪ್ಪೇನಿದೆ? ಅದು ನನ್ನ ಇಷ್ಟ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾಗಿ ಬಿಜಿನೆಸ್‌ ಟುಡೇ ವರದಿ ಮಾಡಿದೆ.

ಭಾರತದಲ್ಲಿ ಮೂನ್‌ಲೈಟಿಂಗ್‌ ಲೀಗಲಾ?

ಸಿಂಪಲ್‌ ಆಗಿ ಇದನ್ನು ಓವರ್‌ ಎಂಪ್ಲಾಯಿಮೆಂಟ್‌ ಎನ್ನುತ್ತಾರೆ. ಭಾರತದಲ್ಲಿ ಇದಕ್ಕೆ ಎರಡು ಉದ್ಯೋಗ ಮಾಡವುದು ಅಥವಾ ಡುಯೆಲ್‌ ಎಂಪ್ಲಾಯ್‌ಮೆಂಟ್‌ ಎನ್ನುತ್ತಾರೆ. ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಇದು ತೆರಿಗೆಯ ದೃಷ್ಟಿಕೋನದಿಂದ ನ್ಯಾಯಸಮ್ಮತ.

ಭಾರತದಲ್ಲಿ ಉದ್ಯೋಗಿಗಳ ತಮಗಿರುವ ಕೌಶಲದ ಪ್ರಕಾರ ಒಂದು ಕಂಪನಿಯ ಜತೆಗೆ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗ, ಅದೇ ಕೌಶಲದ ಮತ್ತೊಂದು ಅರೆಕಾಲಿಕ ಉದ್ಯೋಗ ಮಾಡುವ ಬಗ್ಗೆ ಆಕ್ಷೇಪಗಳಿವೆ. ಅಲ್ಲಿ ಪೂರ್ಣಕಾಲಿಕ ಉದ್ಯೋಗ ನೀಡುವ ಕಂಪನಿಯ ಹಿತಾಸಕ್ತಿಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಉದ್ಯೋಗ ಒಪ್ಪಂದದಲ್ಲಿ ಷರತ್ತು ವಿಧಿಸಿರುತ್ತಾರೆ.