ಏನಿದು ಪ್ರೋಟಾನ್ ಮೇಲ್; ಇದರಿಂದ ಹಾನಿ ಏನು, ನೀವು ತಿಳಿಯಬೇಕಾದ 5 ಮುಖ್ಯ ಸಂಗತಿಗಳಿವು
ಸ್ವಿಜರ್ಲೆಂಡ್ ಮೂಲದ ಪ್ರೋಟಾನ್ ಮೇಲ್ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಏನಿದು ಪ್ರೋಟಾನ್ ಮೇಲ್; ಇದರಿಂದ ಹಾನಿ ಏನು, ನೀವು ತಿಳಿಯಬೇಕಾದ 5 ಮುಖ್ಯ ಸಂಗತಿಗಳ ವಿವರ ಇಲ್ಲಿದೆ. (ಬರಹ- ಪರಿಣಿತಾ, ಬೆಂಗಳೂರು)

ಭಾರತದಲ್ಲಿ ಪ್ರೋಟಾನ್ ಮೇಲ್ ಸಂಪೂರ್ಣ ಸ್ಥಗಿತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ವಿಜರ್ಲೆಂಡ್ ಮೂಲದ ಪ್ರೋಟಾನ್ ಮೇಲ್ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ಮೂಲದ ಎಂ ಮೋಸರ್ ಡಿಸೈನ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ (ಏಪ್ರಿಲ್ 30) ಈ ನಿರ್ದೇಶನ ನೀಡಿತ್ತು.
ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವ ಪ್ರಕ್ರಿಯೆ ಆರಂಭಿಸುವ ತನಕ ಆಕ್ಷೇಪಾರ್ಹ ಯುಆರ್‌ಎಲ್‌ಗಳನ್ನು ತತ್‌ಕ್ಷಣವೇ ನಿರ್ಬಂಧಿಸಬೇಕು. ಆ ಮೂಲಕ ಆಶ್ಲೀಲ ಸಂದೇಶಗಳ ರವಾನೆ ತಡೆಯಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅದೇ ವೇಳೆ, ಪ್ರೋಟಾನ್ ಮೇಲ್ ನಿರ್ಬಂಧಿಸಲು 2008ರ ಐಟಿ ಕಾಯ್ದೆಯ ಸೆಕ್ಷನ್ 69A ಜೊತೆಗೆ ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪ್ರವೇಶವನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತೆಗಳು) ನಿಯಮಗಳು, 2009 ರ ನಿಯಮ 10 ರ ಅಡಿಯಲ್ಲಿ ಪ್ರಕ್ರಿಯೆ ನಡೆಸುವಂತೆ ಏಕ ಸದಸ್ಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ, ಕ್ಲೈಂಟ್‌ಗಳಿಗೆ ಮಾರ್ಫ್ ಮಾಡಿದ ಚಿತ್ರಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಬಳಸಿ ಮಾಡಿದ ಡೀಪ್‌ಫೇಕ್ ಚಿತ್ರಗಳು, ಲೈಂಗಿಕ ವಿಷಯವನ್ನು ಹೊಂದಿರುವ ಹಲವಾರು ಇಮೇಲ್‌ಗಳು ಪ್ರೊಟನ್ ಮೇಲ್ ಐಡಿಗಳಿಂದ ಬಂದಿದೆ. ಈ ಹಿನ್ನಲೆಯಲ್ಲಿ ಪ್ರೊಟನ್ ಮೇಲ್‌ನ್ನು ನಿಷೇಧಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಎಂ ಮೋಸರ್ ಡಿಸೈನ್ ನ್ಯಾಯಾಲಯದ ಮೊರೆ ಹೋಗಿತ್ತು.
ಏನಿದು ಪ್ರೋಟಾನ್ ಮೇಲ್?
ಪ್ರೋಟಾನ್ ಮೇಲ್ ಎಂಬುದು 2014 ರಲ್ಲಿ CERN (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್) ನ ವಿಜ್ಞಾನಿಗಳ ಗುಂಪು ಪ್ರಾರಂಭಿಸಿದ ಸುರಕ್ಷಿತ ಇಮೇಲ್ ಸೇವೆ. ಈ ಗುಂಪಿನಲ್ಲಿದ್ದ ಆಂಡಿ ಯೆನ್ (Andy Yen) ಈಗ ಕಂಪನಿಯ ಸಿಇಒ ಆಗಿದ್ದಾರೆ. ಈ ಇಮೇಲ್ ಸೇವೆಯನ್ನು ಸ್ವಿಸ್ ಕಾರ್ಪೊರೇಷನ್ ಪ್ರೋಟಾನ್ ಎಜಿ ನಿರ್ವಹಿಸುತ್ತಿದ್ದು ಕಂಪನಿಯು ತನ್ನ ಬಳಕೆದಾರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸುವ ಮೂಲಕ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ ಎಂದು ಪ್ರೋಟಾನ್ ಮೇಲ್ ಹೇಳಿದೆ. ಅಂದರೆ ಇಲ್ಲಿ ಇಮೇಲ್ ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಅದರಲ್ಲಿರುವ ವಿಷಯಗಳನ್ನು ಓದಬಹುದು, ಪ್ರೋಟಾನ್ ಮೇಲ್ ಸಹ ಬಳಕೆದಾರ ಸಂದೇಶಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ.
ಇವು ಎಷ್ಟು ಗೌಪ್ಯತೆಗಳನ್ನು ಹೊಂದಿವೆ ಎಂದರೆ ಸಂದೇಶ ಓದಿದ ಕೂಡಲೇ ಅದಾಗಿಯೇ ಡಿಲೀಟ್ ಆಗಬಲ್ಲವು. ಇಮೇಲ್ ಜತೆ ಅಟ್ಯಾಚ್‌ಮೆಂಟ್ ಇದ್ದರೆ ಅದಕ್ಕೆ zero access ಎನ್‌ಕ್ರಿಪ್ಶನ್ ಮತ್ತು ಎರಡು ಹಂತದ ದೃಢೀಕರಣ ಕೂಡಾ ಇರುತ್ತದೆ. ಸ್ವಿಜರ್ಲೆಂಡ್ ಮೂಲದ ಪ್ರೋಟಾನ್ ಮೇಲ್ ದೇಶದ ಕಟ್ಟುನಿಟ್ಟಾದ ಗೌಪ್ಯತೆ ಕಾನೂನುಗಳ ಪ್ರಯೋಜನ ಪಡೆದಿದ್ದು , ಇದು ವಿದೇಶಿ ಇಮೇಲ್ ವಂಚನೆಗಳಿಂದ ಬಳಕೆದಾರರ ಡೇಟಾವನ್ನು ರಕ್ಷಿಸುವುದಾಗಿ ಹೇಳಿದೆ.
ಯೆನ್ ಅವರ ನೇತೃತ್ವದಲ್ಲಿ ಪ್ರೋಟಾನ್ AG ತನ್ನ ಗೌಪ್ಯತೆ-ಕೇಂದ್ರಿತ ಸೇವೆಗಳನ್ನು ಪ್ರೋಟಾನ್ VPN, ಪ್ರೋಟಾನ್ ಡ್ರೈವ್, ಪ್ರೋಟಾನ್ ಕ್ಯಾಲೆಂಡರ್, ಪ್ರೋಟಾನ್ ಪಾಸ್ ಮತ್ತು ಪ್ರೋಟಾನ್ ವಾಲೆಟ್‌ಗಳಿಗೂ ವಿಸ್ತರಿಸಿದೆ. ಪ್ರೋಟಾನ್ ಮೇಲ್ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳಲ್ಲಿಯೂ ಲಭ್ಯ. ಉಚಿತ ಯೋಜನೆಯು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಪ್ರೋಟಾನ್ ಮೇಲ್ ವಿಳಾಸ ಮತ್ತು ಸೀಮಿತ ಸಂಗ್ರಹಣೆಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರೀಮಿಯಂ ಆವೃತ್ತಿ ಹೆಚ್ಚು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರು ಹೆಚ್ಚುವರಿ ಸಂಗ್ರಹಣೆ, ಒಂದಕ್ಕಿಂತ ಹೆಚ್ಚು ಇಮೇಲ್ ವಿಳಾಸಗಳಿಗೆ ಬೆಂಬಲ, ಕಸ್ಟಮ್ ಡೊಮೇನ್‌ಗಳು ಮತ್ತು VPN, ಡ್ರೈವ್ , ಕ್ಯಾಲೆಂಡರ್‌ನಂತಹ ಇತರ ಪ್ರೊಟನ್ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತವೆ.
ಪ್ರೋಟಾನ್ ವಿರುದ್ಧದ ಅರ್ಜಿಯಲ್ಲೇನಿದೆ?
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಜತಿನ್ ಸೆಹಗಲ್ , ಭಾರತದಲ್ಲಿ ಪ್ರೋಟಾನ್ ಮೇಲ್ ನಿರಂತರ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಂ ಮೋಸರ್ ಡಿಸೈನ್ ಸಂಸ್ಥೆಯ ಉದ್ಯೋಗಿಗಳಿಗೆ ಲೈಂಗಿಕ ವಿಷಯಗಳಿರುವ ಇಮೇಲ್ ಬಂದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರೂ, ಕಳುಹಿಸಿದವರ ವಿವರಗಳನ್ನು ಬಹಿರಂಗಪಡಿಸಲು ಪ್ರೋಟಾನ್ ಮೇಲ್ ನಿರಾಕರಿಸಿದ್ದರಿಂದ ಪರಿಣಾಮಕಾರಿ ತನಿಖೆ ಸಾಧ್ಯವಾಗಲಿಲ್ಲ. ಕಂಪನಿ ಭಾರತದಿಂದ ತನ್ನ ಸರ್ವರ್‌ಗಳನ್ನು ಹಿಂತೆಗೆದುಕೊಂಡಿದೆ. ಈ ಹಿಂದೆ ಶಾಲೆಗಳಿಗೆ ಬಾಂಬ್ ಬೆದರಿಕೆಗಳನ್ನು ಕಳುಹಿಸಲು ಇದೇ ಪ್ರೋಟಾನ್ ಮೇಲ್ ಬಳಸಲಾಗಿತ್ತು. ಪ್ರೋಟಾನ್ ಮೇಲ್ ವೆಬ್‌ಸೈಟ್, ಬಳಕೆದಾರರಿಗೆ ಭಾರತೀಯ ಅಧಿಕಾರಿಗಳ ಕಣ್ಗಾವಲು ತಪ್ಪಿಸಿಕೊಳ್ಳುವ ಬಗ್ಗೆ ಹೇಳಿಕೊಡುತ್ತದೆ. ಈ ಸೇವೆಯು ಯಾವುದೇ ಗುರುತಿನ ಪರಿಶೀಲನೆಯಿಲ್ಲದೆ 30 ಸೆಕೆಂಡುಗಳಲ್ಲಿ ಖಾತೆ ರಚಿಸಲು ಅನುಮತಿಸುತ್ತದೆ ಎಂದು ವಕೀಲರು ಹೇಳಿದ್ದಾರೆ.
ನ್ಯಾಯಾಲಯ ಹೇಳಿದ್ದೇನು?
ಇಮೇಲ್‌ಗಳ ಮೂಲಕ ಹಂಚಿಕೊಳ್ಳಲಾದ ಯಾವುದೇ ಆಕ್ಷೇಪಾರ್ಹ URL ಗಳನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಹಿಂದಿನ ವಿಚಾರಣೆಯ ಸಮಯದಲ್ಲಿ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅರವಿಂದ್ ಕಾಮತ್, ಅರ್ಜಿದಾರರ ಉದ್ಯೋಗಿಯನ್ನು ಗುರಿಯಾಗಿಸಿಕೊಂಡು ಕಳುಹಿಸಲಾದ ಇಮೇಲ್‌ಗಳನ್ನು ತನಿಖೆ ಮಾಡುವಲ್ಲಿ ಕೇಂದ್ರದ ಪಾತ್ರ ಸೀಮಿತವಾಗಿರಬಹುದು. ಇದಕ್ಕೆ ಸ್ವಿಸ್ ಅಧಿಕಾರಿಗಳೊಂದಿಗೆ ಸಮನ್ವಯದ ಅಗತ್ಯವಿರುತ್ತದೆ ಎಂದು ಹೇಳಿದ್ದರು. ಭಾರತ ಮತ್ತು ಸ್ವಿಜರ್ಲೆಂಡ್ ಪರಸ್ಪರ ಕಾನೂನು ಸಹಾಯ ಒಪ್ಪಂದ (MLAT) ಹೊಂದಿರುವುದರಿಂದ, ಸ್ವಿಸ್ ಅಧಿಕಾರಿಗಳಿಂದ ಔಪಚಾರಿಕವಾಗಿ ಸಹಾಯವನ್ನು ಕೋರುವುದು ತನಿಖಾಧಿಕಾರಿ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟದ್ದು. ಗೃಹ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಸೇರಿದಂತೆ ಕೇಂದ್ರ ಸಚಿವಾಲಯಗಳು ಇಂತಹ ಗಡಿಯಾಚೆಗಿನ ವಿಷಯಗಳಲ್ಲಿ ಸ್ವಂತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
(ಬರಹ- ಪರಿಣಿತಾ, ಬೆಂಗಳೂರು)
ವಿಭಾಗ