Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 2 ಎಂಜಿನ್‌, ಎಳೆಯುವ-ತಳ್ಳುವ ಚುಕುಬುಕು ರೈಲು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 2 ಎಂಜಿನ್‌, ಎಳೆಯುವ-ತಳ್ಳುವ ಚುಕುಬುಕು ರೈಲು

Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 2 ಎಂಜಿನ್‌, ಎಳೆಯುವ-ತಳ್ಳುವ ಚುಕುಬುಕು ರೈಲು

push pull technology in train: ಭಾರತೀಯ ರೈಲ್ವೆಯು ಕೆಲವು ದಿನಗಳ ಹಿಂದೆ ಪುಶ್‌ ಪುಲ್‌ ತಂತ್ರಜ್ಞಾನದ ಭಾರತದ ಮೊದಲ ರೈಲನ್ನು ಪರಿಚಯಿಸಿದ ವಿಷಯ ನಿಮಗೆ ಗೊತ್ತಿರಬಹುದು. ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿತ್ತು. ಏನಿದು ಪುಶ್‌ ಪುಲ್‌ ತಂತ್ರಜ್ಞಾನ? ತಿಳಿಯೋಣ ಬನ್ನಿ.

Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ ರೈಲು
Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ ರೈಲು (wikipedia)

Push pull technology in train: ರೈಲು ಎಂದರೆ ಸಾಮಾನ್ಯವಾಗಿ ನಮಗೆ ಒಂದು ಎಂಜಿನ್‌ ನೆನಪಾಗುತ್ತದೆ. ರೈಲಿನ ಎಂಜಿನ್ ಯಾವ ಕಡೆಗೆ ಬೋಗಿಗಳಿಗೆ ಜೋಡಿಸಲಾಗುತ್ತದೆಯೋ ಆ ಕಡೆಗೆ ಎಂಜಿನ್‌ ರೈಲನ್ನು ಎಳೆದುಕೊಂಡು ಹೋಗುತ್ತದೆ. ಆದರೆ, ಈಗ ರೈಲು ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಭಾರತೀಯ ರೈಲ್ವೆಯು ಅಂತಹ ಒಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ರಾಜಧಾನಿ ಎಕ್ಸ್‌ಪ್ರೆಸ್‌ಗೆ ಪುಶ್‌ ಪುಲ್‌ ತಂತ್ರಜ್ಞಾನದ ಎಂಜಿನ್‌ಗಳನ್ನು ಜೋಡಿಸಿದೆ. ಎರಡು ಎಂಜಿನ್‌ಗಳು ಜತೆಯಾಗಿ ಆಕ್ಸಿಲರೇಷನ್‌ ಹೆಚ್ಚಿಸುತ್ತವೆ. ಶೀಘ್ರದಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ಗಮ್ಯ ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣಿಸಲು ಇದರಿಂದ ಸಾಧ್ಯವಾಗುತ್ತದೆ. 2023ರಲ್ಲಿ ಭಾರತೀಯ ರೈಲ್ವೆಯು ಪುಶ್‌ ಪುಲ್‌ ತಂತ್ರಜ್ಞಾನ ಆಧರಿತ ಅಮೃತ ಭಾರತ್‌ ಎಕ್ಸ್‌ಪ್ರೆಸ್‌ ಲಾಂಚ್‌ ಮಾಡಿತ್ತು. ರಾಜಧಾನಿ ಎಕ್ಸ್‌ಪ್ರೆಸ್‌ ಇದೀಗ ಪುಶ್‌ ಪುಲ್‌ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಣೆ ಆರಂಭಿಸಿದೆ. ಏನಿದು ಪುಶ್‌ ಪುಲ್‌ ತಂತ್ರಜ್ಞಾನ ಎಂದು ತಿಳಿದುಕೊಳ್ಳಲು ಇದು ಸೂಕ್ತ ಸಮಯ.

ರೈಲಿನಲ್ಲಿ ಏನಿದು ಪುಶ್‌ ಪುಲ್‌ ತಂತ್ರಜ್ಞಾನ?

ಪುಶ್‌ ಪುಲ್‌ ತಂತ್ರಜ್ಞಾನವೆಂದರೆ ರೈಲೊಂದು ಎರಡು ಲೋಕೊಮೋಟಿವ್‌/ಎಂಜಿನ್‌ ವ್ಯವಸ್ಥೆ ಹೊಂದಿರುತ್ತದೆ. ಒಂದು ಎಂಜಿನ್‌ ಮುಂಭಾಗದಲ್ಲಿ, ಇನ್ನೊಂದು ಎಂಜಿನ್‌ ಹಿಂಭಾಗದಲ್ಲಿ ಇರುತ್ತದೆ. ಮುಂಭಾಗದ ಎಂಜಿನ್‌ ರೈಲನ್ನು ಎಳೆದುಕೊಂಡು ಹೋಗುವಂತೆ ಕಾರ್ಯನಿರ್ವಹಿಸುತ್ತದೆ. ಮತ್ತೊಂದು ಎಂಜಿನ್‌ ಹಿಂದಿನಿಂದ ರೈಲನ್ನು ನೂಕುತ್ತದೆ. ಇದರಿಂದ ರೈಲಿನ ಆಕ್ಸಿಲರೇಷನ್‌ ವೇಗ ಹೆಚ್ಚುತ್ತದೆ. ಒಂದು ಎಂಜಿನ್‌ನ ರೈಲಿಗಿಂತ ವೇಗವಾಗಿ ಎರಡು ಲೋಕೋಮೋಟಿವ್‌ನ ರೈಲು ಕಾರ್ಯನಿರ್ವಹಿಸುತ್ತದೆ. ಒಂದು ಎಂಜಿನ್‌ ರೈಲುಗಳನ್ನು ಈಗಾಗಲೇ ನೀವು ನೋಡಿರಬಹುದು. ಅಂತಿಮ ನಿಲ್ದಾಣ ತಲುಪಿದ ಬಳಿಕ ಆ ರೈಲಿನ ಬೋಗಿಗಳು ಅದೇ ರೀತಿ ಇರುತ್ತವೆ. ಒಂದು ದಿಕ್ಕಿನಲ್ಲಿದ್ದ ಎಂಜಿನ್‌ ಅನ್ನು ಮತ್ತೊಂದು ದಿಕ್ಕಿಗೆ ತಂದು ಜೋಡಿಸಲಾಗುತ್ತದೆ. ರೈಲಿನಲ್ಲಿ ಯುಟರ್ನ್‌ ವ್ಯವಸ್ಥೆ ಇಲ್ಲ. ಪುಶ್‌ ಪುಲ್‌ ತಂತ್ರಜ್ಞಾನದಲ್ಲಿ ಈ ರೀತಿ ಎಂಜಿನ್‌ಗಳನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ. ಆ ಕಡೆಗೆ ಹೋಗುವಾಗ ಬೋಗಿಯ ಆ ಕಡೆ ಇರುವ ಎಂಜಿನ್‌ "ಎಳೆಯುವ" ಪುಲ್‌ ಕಾರ್ಯ ಮಾಡುತ್ತದೆ. ಹಿಂಭಾಗದಲ್ಲಿರುವ ಎಂಜಿನ್‌ ತಲ್ಲುವ - ಪುಶ್‌ ಕಾರ್ಯ ಮಾಡುತ್ತದೆ. ಈ ಕಡೆ ಹೋಗುವಾಗ ಎಂಜಿನ್‌ ಪುಶ್‌ ಬದಲು ಪುಲ್‌ ಮಾಡುತ್ತದೆ, ಪುಲ್‌ ಮಾಡುತ್ತಿದ್ದ ಎಂಜಿನ್‌ ಪುಶ್‌ ಮಾಡುತ್ತದೆ. ಇವೆರಡು ಎಂಜಿನ್‌ಗಳ ಶಕ್ತಿ ದೊರಕುವುದರಿಂದ ರೈಲಿನ ವೇಗವೂ ಹೆಚ್ಚುತ್ತದೆ.

ಪುಶ್‌ ಪುಲ್‌ ತಂತ್ರಜ್ಞಾನದ ಪ್ರಯೋಜನಗಳೇನು?

ಅತ್ಯುತ್ತಮ ಆಕ್ಸಿಲರೇಷನ್‌ ಮತ್ತು ಬ್ರೇಕಿಂಗ್‌: ರೈಲಿನ ವೇಗವರ್ಧನೆ ಮತ್ತು ನಿಧಾನಗೊಳಿಸುವ ಪ್ರಕ್ರಿಯೆ (ಆಕ್ಸಿಲರೇಷನ್‌ ಮತ್ತು ಡಿಆಕ್ಸಿಲರೇಷನ್)‌ಕಾರ್ಯ ಸುಲಭವಾಗುತ್ತದೆ. ಇದರಿಂದ ರೈಲಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಅಂದರೆ, ರೈಲು ಬೇಗ ವೇಗ ಪಡೆದುಕೊಳ್ಳುತ್ತದೆ, ಬೇಗ ನಿಲ್ಲುತ್ತದೆ.

ಸೆಮಿ ಪರ್ಮನೆಂಟ್‌ ಕಪ್ಲರ್ಸ್‌: ಇಂತಹ ರೈಲುಗಳಿಗೆ ಸೆಮಿ ಪರ್ಮನೆಂಟ್‌ ಕಪ್ಲರ್ಸ್‌ ಅಳವಡಿಸಿರುವುದರಿಂದ ಶಾಕ್ಸ್‌ಗಳಿಗೆ ಆಗುವ ಹಾನಿ ಕಡಿಮೆ ಇರುತ್ತದೆ.

ಎರಡು ಕಡೆ ಎಂಜಿನ್‌: ಈಗಾಗಲೇ ಹೇಳಿದಂತೆ ಸಾಂಪ್ರದಾಯಿಕ ರೈಲುಗಳಂತೆ ಒಂದೇ ಕಡೆಗೆ ಎಂಜಿನ್‌ ಹೊಂದಿರುವುದಿಲ್ಲ.

ನಿಯಂತ್ರಣ: ಮುಂಭಾಗದಲ್ಲಿ ಲೊಕೊ ಪೈಲೆಟ್‌ನಲ್ಲಿ ರೈಲನ್ನು ನಿಯಂತ್ರಿಸಲು ಇರುವ ಪರಿಕರಗಳು ರೈಲಿನ ಹಿಂಭಾಗದಲ್ಲಿಯೂ ಇರಲಿದೆ.

ದಕ್ಷತೆ ಮತ್ತು ಸಮಯ ಉಳಿತಾಯ: ರೈಲಿನಲ್ಲಿ ಒಂದು ಎಂಜಿನ್‌ ಅನ್ನು ಬದಲಾಯಿಸಿ ಮತ್ತೊಂದು ಕಡೆಗೆ ಹಾಕುವಂತಹ ಸಮಯ, ಮಾನವ ಸಂಪನ್ಮೂಲದ ಉಳಿತಾಯವಾಗುತ್ತದೆ.

ಸುರಕ್ಷತೆ ಹೆಚ್ಚುತ್ತದೆ: ಈ ತಂತ್ರಜ್ಞಾನ ಇರುವುದರಿಂದ ರೈಲು ಪ್ರಯಣ ಹೆಚ್ಚು ಸುರಕ್ಷಿತವಾಗಿರುತ್ತದೆ. ಎರಡು ಕಡೆಗಳಲ್ಲಿ ಇರುವ ಲೊಕೊಪೈಲೆಟ್‌ಗಳಿಗೆ ಉತ್ತಮ ವೀಕ್ಷಣೆ ದೊರಕುತ್ತದೆ. ಅಪಘಾತಗಳನ್ನು ಕಡಿಮೆ ಮಾಡಲಿದೆ. 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.