UPS vs NPS vs OPS: ಏನಿದು ಏಕೀಕೃತ ಪಿಂಚಣಿ ಯೋಜನೆ; ಇದು ಎನ್ಪಿಎಸ್ ಅಥವಾ ಒಪಿಎಸ್ಗಿಂತ ಏನು ವಿಶೇಷ?
Unified Pension Scheme, UPS vs NPS vs OPS: ಕೇಂದ್ರ ಸರ್ಕಾರ ಆಗಸ್ಟ್ 24 ರಂದು ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದ್ದು, ಇದು ಖಚಿತವಾದ ಪಿಂಚಣಿ ಮತ್ತು ಖಚಿತವಾದ ಕುಟುಂಬ ಪಿಂಚಣಿ ಒದಗಿಸುತ್ತದೆ.
UPS vs NPS vs OPS: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ (UPS) ಕೇಂದ್ರದ ಎನ್ಡಿಎ ಸರ್ಕಾರ ಆಗಸ್ಟ್ 24ರ ಶನಿವಾರ ಅನುಮೋದನೆ ನೀಡಿದೆ. ಇದು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ನೆರವಾಗುವ ನಿರೀಕ್ಷೆಯಿದೆ. ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರದ ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಆ ಮೂಲಕ ಹೊಸ ಪಿಂಚಣಿ ಯೋಜನೆಗೆ (NPS) ತಿದ್ದುಪಡಿ ಅಥವಾ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಈಡೇರಿದೆ.
ಏಕೀಕೃತ ಪಿಂಚಣಿ ಯೋಜನೆಯ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ, ಕನಿಷ್ಠ ಪಿಂಚಣಿ ಒದಗಿಸಲಾಗುತ್ತದೆ. ಯುಪಿಎಸ್ ಮೂಲಕ ಶೇ.50ರಷ್ಟು ಖಚಿತ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಖಾತರಿಪಡಿಸಲಾಗಿದೆ. ಆದರೆ ನೌಕರರು ಯುಪಿಎಸ್ ಅಥವಾ ಎನ್ಪಿಎಸ್ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ರಾಜ್ಯ ಸರ್ಕಾರಗಳೂ ಈ ಯೋಜನೆ ಜಾರಿಗೊಳಿಸುವ ತೀರ್ಮಾನ ನಡೆಸಬಹುದು. ಆದರೆ, ಏಕೀಕೃತ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತವಾಗಿದೆ.
ಯುಪಿಎಸ್ ಯೋಜನೆಯಿಂದ ಯಾವುದೇ ಲಾಭ ಇಲ್ಲ. ಪೂರ್ಣ ಪ್ರಮಾಣದ ಪಿಂಚಣಿ ಸಿಗುವುದಿಲ್ಲ. ಡಿಎ ಇರುವುದಿಲ್ಲ. ಹಾಗಾಗಿ, ಏಕೀಕೃತ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿ ತರಬೇಕು ಎಂಬುದು ಹಲವರ ವಾದ. ಅಲ್ಲದೆ, ಯುಪಿಎಸ್ ಕೈಬಿಡದಿದ್ದರೆ ದೊಡ್ಡ ಹೋರಾಟ ನಡೆಸುವುದಾಗಿ ಕಾರ್ಮಿಕ ಸಂಘಗಳು ಎಚ್ಚರಿಕೆ ನೀಡಿವೆ. ಹಾಗಿದ್ದರೆ ಯುಪಿಎಸ್ vs ಎನ್ಪಿಎಸ್ vs ಒಪಿಎಸ್ ನಡುವಿನ ವ್ಯತ್ಯಾಸಗಳೇನು? ಇಲ್ಲಿದೆ ವಿವರ.
ಏಕೀಕೃತ ಪಿಂಚಣಿ ಯೋಜನೆ (UPS)
- ಯುಪಿಎಸ್‌ನಲ್ಲಿ ಪಿಂಚಣಿಗೆ ನಿಧಿಯ ಜವಾಬ್ದಾರಿಯು ನೌಕರನ ಮೇಲೆ ಬೀಳುವುದಿಲ್ಲ. ಮತ್ತು ಖಚಿತವಾದ ಪಿಂಚಣಿಗೆ ಅವಕಾಶ ಇದೆ.
- ನಿವೃತ್ತಿಯ ಕೊನೆಯ 12 ತಿಂಗಳಲ್ಲಿ ಪಡೆದ ಮೂಲ ವೇತನದ (ಬೇಸಿಕ್ ಪೇ) ಶೇ.50 ರಷ್ಟು ಹಣವನ್ನು ಪಿಂಚಣಿಯಾಗಿ ಜಮೆಯಾಗುತ್ತದೆ.
- 2025ರ ಏಪ್ರಿಲ್ 1ರಿಂದ ಈ ಯೋಜನೆಯು ಜಾರಿಯಾಗಲಿದೆ.
- 25 ವರ್ಷಗಳ ಕನಿಷ್ಠ ಸೇವೆ ಹೊಂದಿರುವವರು ಈ ಯೋಜನೆಗೆ ಅರ್ಹರು.
- ನೌಕರನು ನಿವೃತ್ತಿಗೂ ಮುನ್ನ ಮರಣಹೊಂದಿದರೆ, ಪಾವತಿಸಬೇಕಾದ ಪಿಂಚಣಿಯ ಶೇ 60ರಷ್ಟನ್ನು ಕುಟುಂಬಕ್ಕೆ (ಸಂಗಾತಿ) ನೀಡಲಾಗುತ್ತದೆ.
- ಕಡಿಮೆ ಸೇವಾ ಅವಧಿ ಅಂದರೆ ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರೆ ತಿಂಗಳಿಗೆ 10,000 ಪಿಂಚಣಿ ಖಾತರಿಪಡಿಸುತ್ತದೆ.
- ಗ್ರಾಚ್ಯುಟಿ ಜೊತೆಗೆ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತದ ಪಾವತಿಯನ್ನು ಸ್ವೀಕರಿಸುತ್ತಾರೆ. ಈ ಪಾವತಿಯು ನಿವೃತ್ತಿಯ ದಿನಾಂಕದಂದು ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ಉದ್ಯೋಗಿಯ ಮಾಸಿಕ ವೇತನದ 1/10 ಭಾಗವಾಗಿರುತ್ತದೆ (ವೇತನ ಮತ್ತು ತುಟ್ಟಿ ಭತ್ಯೆ ಸೇರಿದಂತೆ). ಈ ಒಟ್ಟು ಮೊತ್ತದ ಪಾವತಿ ಖಚಿತವಾದ ಪಿಂಚಣಿಯ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.
- ಎನ್ಪಿಎಸ್ ಪ್ರಾರಂಭವಾದ ಅವಧಿಯಿಂದ ನಿವೃತ್ತರಾದ ಎಲ್ಲರೂ ಮತ್ತು 2025ರ ಮಾರ್ಚ್ 31ರವರೆಗೆ ನಿವೃತ್ತರಾದವರು ಸೇರಿದಂತೆ ಯುಪಿಎಸ್ನ ಈ ಎಲ್ಲಾ 5 ಪ್ರಯೋಜನಗಳಿಗೆ ಅರ್ಹರು.
ಹೊಸ ಪಿಂಚಣಿ ಯೋಜನೆ (NPS)
- ಎನ್ಪಿಎಸ್ ಅಡಿಯಲ್ಲಿ ಉದ್ಯೋಗಿಯ ಮೂಲ ವೇತನದ ಶೇ. 10ರಷ್ಟು ತುಟ್ಟಿಭತ್ಯೆ (DA) ಪಿಂಚಣಿ ನಿಧಿಗೆ ಕಡಿತಗೊಳಿಸಲಾಗುತ್ತದೆ.
- ಎನ್ಪಿಎಸ್ ಸ್ಟಾಕ್ ಮಾರುಕಟ್ಟೆಗೆ ಲಿಂಕ್ ಮಾಡಲಾಗಿದೆ. ಅಂದರೆ ಆದಾಯವು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ. ಇದು ಸಂಪೂರ್ಣವಾಗಿ ಅಪಾಯ-ಮುಕ್ತವಾಗಿರುವುದಿಲ್ಲ. ಇದು ತೆರಿಗೆ ನಿಬಂಧನೆಗಳನ್ನು ಸಹ ಒಳಗೊಂಡಿದೆ.
- ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಎನ್ಪಿಎಸ್ ನಿಧಿಯ ಶೇ. 40ರಷ್ಟು ಹೂಡಿಕೆ ಮಾಡಬೇಕು.
- ನಿವೃತ್ತಿಯ ನಂತರ ಎನ್ಪಿಎಸ್ ಖಾತರಿಪಡಿಸಿದ ಸ್ಥಿರ ಪಿಂಚಣಿ ಮೊತ್ತ ನೀಡುವುದಿಲ್ಲ; ಪಿಂಚಣಿ ನಿಧಿಯ ಕಾರ್ಯಕ್ಷಮತೆ ಅವಲಂಬಿಸಿರುತ್ತದೆ.
- ಒಪಿಎಸ್ಗಿಂತ ಭಿನ್ನವಾಗಿ ಎನ್ಪಿಎಸ್ ನಿವೃತ್ತಿಯ ನಂತರ ಡಿಎ ಹೊಂದಾಣಿಕೆಗಳನ್ನು ಒದಗಿಸುವುದಿಲ್ಲ.
ಹಳೆಯ ಪಿಂಚಣಿ ಯೋಜನೆ (OPS)
- ಒಪಿಎಸ್ ಅಡಿಯಲ್ಲಿ ನಿವೃತ್ತಿಯ ವೇಳೆ ನೌಕರರ ಸಂಬಳದ ಶೇ 50ರಷ್ಟನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
- ಒಪಿಎಸ್ ಜನರಲ್ ಪ್ರಾವಿಡೆಂಟ್ ಫಂಡ್ (GPF) ನಿಬಂಧನೆ ಒಳಗೊಂಡಿದ್ದು, ಅಲ್ಲಿ ಉದ್ಯೋಗಿಗಳು ತಮ್ಮ ಸಂಬಳದ ಒಂದು ಭಾಗವನ್ನು ಕೊಡುಗೆ ನೀಡಬಹುದು. ನಂತರ ಅದನ್ನು ನಿವೃತ್ತಿಯ ಸಮಯದಲ್ಲಿ ಬಡ್ಡಿಯೊಂದಿಗೆ ಹಿಂಪಡೆಯಲಿದ್ದಾರೆ.
- ಒಪಿಎಸ್ನಲ್ಲಿ ಉದ್ಯೋಗಿಗಳು 20 ಲಕ್ಷದವರೆಗಿನ ಗ್ರಾಚ್ಯುಟಿ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಒಪಿಎಸ್ ಅಡಿಯಲ್ಲಿ ಪಿಂಚಣಿಗಳನ್ನು ಸರ್ಕಾರದಿಂದ ನೇರವಾಗಿ ಹಣ ನೀಡಲಾಗುತ್ತದೆ.
- ನಿವೃತ್ತ ನೌಕರನ ಮರಣದ ನಂತರವೂ ಅವರ ಕುಟುಂಬವು ಪಿಂಚಣಿ ಮೊತ್ತವನ್ನು ಪಡೆಯುವುದನ್ನು ಮುಂದುವರಿಸುತ್ತದೆ.
- ಒಪಿಎಸ್ ಅಡಿಯಲ್ಲಿ ಪಿಂಚಣಿಗೆ ನೌಕರರ ಸಂಬಳದಿಂದ ಯಾವುದೇ ಕಡಿತ ಮಾಡುವುದಿಲ್ಲ.
- ಒಪಿಎಸ್ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಪಡೆಯುವ ನಿಬಂಧನೆ ಒಳಗೊಂಡಿದೆ. ಇದು ಹಣದುಬ್ಬರಕ್ಕೆ ಅನುಗುಣವಾಗಿ ಪಿಂಚಣಿಯನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ.