Waqf Amendment Bill: ಏನಿದು ವಕ್ಫ್ ತಿದ್ದುಪಡಿ ಮಸೂದೆ; ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ಸುಧಾರಿತ ದಕ್ಷತೆ ಮತ್ತು ನಿರ್ವಹಣೆ ಬಯಸುವ ವಕ್ಫ್ ಕಾಯ್ದೆಗೆ ಗಮನಾರ್ಹ ಬದಲಾವಣೆಗಳನ್ನು ಪ್ರಸ್ತಾಪಿಸುತ್ತೆ. ಈ ಕುರಿತು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

Waqf Amendment Bill: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಯ ನಡುವೆ ವಕ್ಫ್ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಇಂದು (ಏಪ್ರಿಲ್ 2, ಬುಧವಾರ) ಮಂಡಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ಮಸೂದೆ ಕುರಿತ ಚರ್ಚೆಗೆ 8 ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಿದ್ದು, ಅಗತ್ಯಬಿದ್ದರೆ ಈ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಮುಸ್ಲಿಂ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಈ ಮಸೂದೆ ಮಂಡನೆಗೆ ಭಾರಿ ವಿರೋಧ ವ್ಯಕ್ತಪಡಿಸಿವೆ. ಮಸೂದೆಗೆ ಅನುಮೋದನೆ ಪಡೆಯುವ ಮುನ್ನ ಕಲಾಪದಲ್ಲಿ ಚರ್ಚೆಗಳನ್ನು ಮಾಡಲಾಗುತ್ತದೆ.
ವಿವಾದಾತ್ಮಕ ಮಸೂದೆಯು ವಕ್ಫ್ ಕಾಯ್ದೆ, 1995 ರಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಒಳಗೊಂಡಿದೆ. ಏನಿದು ವಕ್ಫ್ ತಿದ್ದುಪಡಿ ಮಸೂದೆ 2024 ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಏನಿದು ವಕ್ಫ್ (ತಿದ್ದುಪಡಿ) ಮಸೂದೆ 2024?
ವಕ್ಫ್ (ತಿದ್ದುಪಡಿ) ಮಸೂದೆ 2024 ರ ಉದ್ದೇಶವು ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಸಚಿವರು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಕಾರ, ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶ ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸುವುದು.
ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ನಿವಾರಿಸುವುದು ಮತ್ತು ಕಾಯ್ದೆಯ ಮರುನಾಮಕರಣವನ್ನು ಇದು ಒಳಗೊಂಡಿದೆ. ವಕ್ಫ್ ವ್ಯಾಖ್ಯಾನಗಳನ್ನು ನವೀಕರಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಹಾಗೂ ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು ಮುಂತಾದ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ವಕ್ಫ್ ಮಂಡಳಿಗಳ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ವಕ್ಫ್ ಎಂದರೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಮೀಸಲಾಗಿರುವ ಆಸ್ತಿಗಳನ್ನು ಸೂಚಿಸುತ್ತದೆ. ಆಸ್ತಿಯ ಯಾವುದೇ ಇತರ ಬಳಕೆ ಅಥವಾ ಮಾರಾಟವನ್ನು ನಿಷೇಧಿಸಲಾಗಿದೆ. ವಿಶ್ವದ ಅತಿದೊಡ್ಡ ವಕ್ಫ್ ಹಿಡುವಳಿಯನ್ನು ಹೊಂದಿರುವ ಭಾರತದಲ್ಲಿ, ವಕ್ಫ್ ಮಂಡಳಿಗಳು ಪ್ರಸ್ತುತ ದೇಶಾದ್ಯಂತ 9.4 ಲಕ್ಷ ಎಕರೆ ಪ್ರದೇಶದಲ್ಲಿ ಹರಡಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತಿವೆ. ಇದು ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ ಭಾರತದ ಮೂರನೇ ಅತಿದೊಡ್ಡ ಭೂ ಮಾಲೀಕನಾಗಿದೆ.
ಭಾರತದಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳೆಂದರೆ ಮಂಡಳಿಯ ರಚನೆಯಲ್ಲಿ ವೈವಿಧ್ಯತೆಯ ಕೊರತೆ, ವಕ್ಫ್ ಆಸ್ತಿಗಳ ಅಸಮರ್ಥತೆ, ನ್ಯಾಯಾಂಗ ಮೇಲ್ವಿಚಾರಣೆಯ ಕೊರತೆ ಹಾಗೂ ನಿಬಂಧನೆಗಳ ದುರುಪಯೋಗ ಎಂದು ಹೇಳಲಾಗುತ್ತಿದೆ.
ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಪ್ರಮುಖ ಲಕ್ಷಣಗಳು
ತಿದ್ದುಪಡಿ ಮಸೂದೆಯು 1995 ರ ವಕ್ಫ್ ಕಾಯ್ದೆಯ ಹೆಸರನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ, 1995 ಎಂದು ಬದಲಾಯಿಸಲು ಪ್ರಯತ್ನಿಸುತ್ತದೆ. ಇದು ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರ ಜನರ ಪ್ರಾತಿನಿಧ್ಯವನ್ನು ಪರಿಚಯಿಸಲು ಪ್ರಯತ್ನಿಸುತ್ತದೆ. ವಕ್ಫ್ ಎಂದು ಗುರುತಿಸಲ್ಪಟ್ಟ ಯಾವುದೇ ಸರ್ಕಾರಿ ಆಸ್ತಿಯು ಹಾಗೆ ಇರುವುದಿಲ್ಲ ಎಂದು ಮಸೂದೆ ಹೇಳುತ್ತದೆ. ಆಸ್ತಿಯು ವಕ್ಫ್ ಆಗಿದೆಯೇ ಎಂದು ವಿಚಾರಿಸಲು ಮತ್ತು ನಿರ್ಧರಿಸಲು ವಕ್ಫ್ ಮಂಡಳಿಗೆ ಅಧಿಕಾರ ನೀಡುವ ನಿಬಂಧನೆಯನ್ನು ಈ ಮಸೂದೆ ತೆಗೆದುಹಾಕುತ್ತದೆ.
ಈ ಮಸೂದೆಯು ವಕ್ಫ್ ಮಂಡಳಿಗಳ ನೋಂದಣಿ, ಖಾತೆಗಳ ಪ್ರಕಟಣೆ ಮತ್ತು ವಕ್ಫ್ ಮಂಡಳಿಗಳ ಕಾರ್ಯಕಲಾಪಗಳ ಪ್ರಕಟಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ವಕ್ಫ್ ಖಾತೆಗಳ ಲೆಕ್ಕಪರಿಶೋಧನೆಗೆ ಸಿಎಜಿ ಅಥವಾ ನಿಯೋಜಿತ ಅಧಿಕಾರಿಯನ್ನು ಕೇಂದ್ರವು ಆದೇಶಿಸಬಹುದು. ಸಿಎಂಜಿ ಅಥವಾ ನಿಯೋಜಿತ ಅಧಿಕಾರಿಗಳು ವಕ್ಫ್ ಖಾತೆಗಳ ಲೆಕ್ಕಪರಿಶೋಧನೆ ಮಾಡಬಹುದು.
ಮಸೂದೆಗೆ ವಿರೋಧ ಏಕೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ, ಎಎಪಿಯ ಸಂಜಯ್ ಸಿಂಗ್ ಸೇರಿದಂತೆ ಪ್ರತಿಪಕ್ಷಗಳ ಹಿರಿಯ ನಾಯಕರು ಮಂಗಳವಾರ (ಏಪ್ರಿಲ್ 1) ಸಭೆ ಸೇರಿ ಮಸೂದೆಯನ್ನು ವಿರೋಧಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.
ಈ ಮಸೂದೆಯು "ಅಸಂವಿಧಾನಿಕ" ಮತ್ತು "ವಿಭಜಕ" ಎಂಬುದು ಪ್ರತಿಪಕ್ಷಗಳ ವಾದವಾಗಿದೆ. ಪ್ರತಿಪಕ್ಷಗಳ ಶಿಫಾರಸುಗಳನ್ನು ಜಂಟಿ ಸಂಸದೀಯ ಸಮಿತಿ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಮುಖಂಡ ಖಲೀಕುರ್ ರೆಹಮಾನ್ ಹೇಳಿದ್ದಾರೆ. "ಇಡೀ ಪ್ರಕ್ರಿಯೆಯನ್ನು ಅತ್ಯಂತ ಅಸಂವಿಧಾನಿಕ ರೀತಿಯಲ್ಲಿ ಮಾಡಲಾಗುತ್ತಿದೆ. ವಿರೋಧ ಪಕ್ಷಗಳ ಹೆಚ್ಚಿನ ಜೆಪಿಸಿ ಸದಸ್ಯರು ಸಲ್ಲಿಸಿದ ಎಲ್ಲಾ ಶಿಫಾರಸುಗಳನ್ನು ಪರಿಗಣಿಸಲಾಗಿಲ್ಲ ಮತ್ತು ಗಣನೆಗೆ ತೆಗೆದುಕೊಳ್ಳಲಾಗಿಲ್ಲ, ಬದಲಿಗೆ, ಬಿಜೆಪಿ ವಿಷಯಗಳನ್ನು ಬುಲ್ಡೋಜ್ ಮಾಡಲು ಪ್ರಯತ್ನಿಸುತ್ತಿದೆ. ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ" ಎಂದು ರೆಹಮಾನ್ ಹೇಳಿರುವುದಾದಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ತಿದ್ದುಪಡಿ ಮಸೂದೆಯ ಬಗ್ಗೆ ಒಂದು ಪ್ರಮುಖ ಕಳವಳವೆಂದರೆ ಇದು ವಿವಾದಿತ ಆಸ್ತಿಯು ವಕ್ಫ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ವಕ್ಫ್ ಮಂಡಳಿಗಳ ಅಧಿಕಾರವನ್ನು ದುರ್ಬಲಗೊಳಿಸುತ್ತದೆ. ಕಾಂಗ್ರೆಸ್ ಸಂಸದ ಕಿರಣ್ ಕುಮಾರ್ ಚಾಮಲಾ ಅವರ ಪ್ರಕಾರ, ಒಂದು ನಿರ್ದಿಷ್ಟ ಸಮುದಾಯವನ್ನು "ಸ್ಥಾಪಿಸಲು" ಪ್ರಯತ್ನಿಸಿದರೆ ಪ್ರತಿಪಕ್ಷಗಳು ಮಸೂದೆಯನ್ನು ವಿರೋಧಿಸುತ್ತವೆ ಎಂದು ಎಎನ್ಐ ವರದಿ ಮಾಡಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ).


