ಆಪರೇಷನ್ ಸಿಂದೂರ; ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂದೂರ; ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು

ಆಪರೇಷನ್ ಸಿಂದೂರ; ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು

ಆಪರೇಷನ್ ಸಿಂದೂರ್: ಭಯೋತ್ಪಾದನೆ ವಿರುದ್ಧ ಭಾರತದ ಸಮರವೇ ಹೊರತು, ಪಾಕಿಸ್ತಾನದ ವಿರುದ್ಧ ಅಲ್ಲ ಎಂಬುದನ್ನು ಸರ್ಕಾರ ಆರಂಭದಿಂದಲೇ ಪ್ರತಿಪಾದಿಸುತ್ತ ಬಂದಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಇದನ್ನೇ ಸ್ಪಷ್ಟಪಡಿಸಿದ್ದಾಗಿ ವರದಿ ಹೇಳಿದೆ.

ಕದನ ವಿರಾಮದ ಕಥೆಯೇನು?: ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡಿದ್ದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕದನ ವಿರಾಮದ ಕಥೆಯೇನು?: ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡಿದ್ದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಶುರುವಾದ ನಂತರದಲ್ಲಿ ಮೇ 9 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಅವರ ಮಾತುಕತೆ ವಿವರ ಏನು ಎಂಬ ಕುತೂಹಲ ಸಹಜ. ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮೇ 9 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದಾಗ, ಪಾಕಿಸ್ತಾನದಿಂದ ದಾಳಿ ಪ್ರಮಾಣ ಹೆಚ್ಚಳದ ಬಗ್ಗೆ ಮತ್ತು ಪರಿಸ್ಥಿತಿ ಅವಲೋಕನ ನಡೆಸುವ ವಿಚಾರ ಮಾತನಾಡಿದ್ದರು. ಇಸ್ಲಾಮಾಬಾದ್ ನಡೆಸಿದ ಅಪಾಯಕಾರಿ ಡ್ರೋನ್ ದಾಳಿ ವಿಚಾರವನ್ನೂ ಪ್ರಸ್ತಾಪಿಸಿದ್ದರು ಎಂದು ಈ ವಿದ್ಯಮಾನದ ಬಗ್ಗೆ ತಿಳಿದ ಜನರು ಹೇಳಿದ್ದಾಗಿ ಮೂಲಗಳು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರತಿ ದಾಳಿಯನ್ನೂ ಭಾರತ ಪ್ರಬಲವಾಗಿ ಎದುರಿಸುತ್ತಿದ್ದು, ತಕ್ಕ ಉತ್ತರ ನೀಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೇ 7 ರಂದು ಅಮೆರಿಕದ ವಿದೇಶಾಂಗ ಸಚಿವರ ಜತೆಗೆ ಮಾತನಾಡುತ್ತ ತಿಳಿಸಿದ್ದು ವರದಿಯಾಗಿತ್ತು. ಈ ಮಾತುಕತೆಯಲ್ಲಿ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕ್ ರುವಿಯೋ ಕೂಡ ಭಾಗವಹಿಸಿದ್ದರು.

ಭಯೋತ್ಪಾದನೆ ವಿರುದ್ಧ ಹೋರಾಟ, ಪಾಕಿಸ್ತಾನದ ವಿರುದ್ಧ ಅಲ್ಲ; ಭಾರತದ ಸ್ಪಷ್ಟ ನುಡಿ

ಪಾಕಿಸ್ತಾನ ಮತ್ತು ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಒಂಬತ್ತು ತಾಣಗಳಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದ ಆಪರೇಷನ್ ಸಿಂದೂರ್‌ ಪ್ರಾರಂಭಕ್ಕೆ ಮುಂಚೆಯೇ, ಭಾರತದ ನಾಯಕತ್ವವು ಪಾಕಿಸ್ತಾನದ ನೆಲದಲ್ಲಿರುವ ಉಗ್ರ ಶಿಬಿರ ಮತ್ತು ಮೂಲಸೌಕರ್ಯಗಳನ್ನಷ್ಟೇ ಭಾರತ ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದಾಗಿ ಜಗತ್ತಿನಾದ್ಯಂತ ಇರುವ ತೃತೀಯ ರಾಷ್ಟ್ರಗಳ ನಾಯಕರಿಗೆ ಸ್ಪಷ್ಟಪಡಿಸಿತ್ತು.

ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಬಳಿಕ ನಾವು ಉಗ್ರರ ವಿರುದ್ಧ, ಭಯೋತ್ಪಾದನೆ ವಿರುದ್ಧ ಸಮರ ಸಾರುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಅವರು ದಾಳಿ ನಡೆಸಿದರೆ ನಾವೂ ಪ್ರತಿದಾಳಿ ನಡೆಸುತ್ತೇವೆ. ಅವರು ದಾಳಿ ನಿಲ್ಲಿಸಿದರೆ ನಾವೂ ನಿಲ್ಲಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮೇ 9 ರಂದು ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು ಎಂಬುದರ ವಿವರವನ್ನು ಸಿಎನ್‌ಎನ್‌ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹಿಂಸಾಚಾರ ನಾಟಕೀಯವಾಗಿ ಉಲ್ಬಣಗೊಳ್ಳುವ ಸಾಧ್ಯತೆ ಹಾಗೂ ಪಾಕಿಸ್ತಾನದ ಬದಿಗೆ ಸ್ವೀಕಾರಾರ್ಹವಾದ ಸಂಭಾವ್ಯ ಆಫ್-ರಾಂಪ್ ಬಗ್ಗೆ ಸಲಹೆಯನ್ನು ಒಳಗೊಂಡಂತೆ ಅಮೆರಿಕ ಪರಿಸ್ಥಿತಿಯ ಬಗ್ಗೆ ಮಾಡಿರುವ ಮೌಲ್ಯಮಾಪನದ ವಿಚಾರಗಳನ್ನು ಪ್ರಧಾನಿ ಮೋದಿ ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಂದ ತಿಳಿದುಕೊಂಡರು. ಇತ್ತೀಚೆಗೆ ವ್ಯಾನ್ಸ್ ನವದೆಹಲಿಗೆ ಭೇಟಿ ಮಾಡಿ ಮೋದಿ ಅವರ ಸಂಪರ್ಕ ಸಾಧಿಸಿರುವ ಕಾರಣ ಅವರನ್ನೇ ಟ್ರಂಪ್ ಆಡಳಿತ ಸಂಪರ್ಕಕ್ಕೆ ಬಳಸಿಕೊಂಡಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನವು ಮೇ 10 ರಂದು ಭಾರತದ 26 ಸೇನಾ ಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಲು ಪ್ರಯತ್ನಿಸಿತ್ತು. ಭಾರತ ಪ್ರತಿದಾಳಿ ನಡೆಸಿದ್ದು ಪಾಕಿಸ್ತಾನದ 8 ವಾಯುನೆಲೆಗಳನ್ನು ನಾಶ ಮಾಡಿದೆ. ಇಲ್ಲಿ ಲಾಂಗ್ ರೇಂಜ್ ಅಸ್ತ್ರಗಳು ಇದ್ದವು. ಇದಾಗಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಕದನ ವಿರಾಮ ಮನವಿಗೆ ಭಾರತ ಸ್ಪಂದಿಸಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದ ಪ್ರತಿನಿಧಿಗಳು ಅಮೆರಿಕ ಆಡಳಿತವನ್ನು ಸಂಪರ್ಕಿಸಿದ್ದು, ಆಗ ರುಬಿಯೋ ಅವರು ಜೈಶಂಕರ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ, ಭಾರತದ ಜತೆಗೆ ದ್ವಿಪಕ್ಷೀಯ ಸಂಬಂಧದಲ್ಲಿ ಸಂಪರ್ಕ ಸಾಧಿಸುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಯಾವುದೇ ತೃತೀಯ ರಾಷ್ಟ್ರಗಳ ಮಧ್ಯಸ್ಥಿಕೆ ಇಲ್ಲದೇ ನೇರ ಮಾತುಕತೆ ಬರುವಂತೆ ಒತ್ತಾಯಿಸಿದೆ ಎಂದು ವರದಿ ವಿವರಿಸಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.