ಆಪರೇಷನ್ ಸಿಂದೂರ್: ಭಾರತದಲ್ಲಿ ಭಯೋತ್ಪಾದನೆ, ಪಾಕ್‌ನ ಉಗ್ರ ನಂಟು ಬಿಚ್ಚಿಟ್ಟರು ಶಶಿ ತರೂರ್, ಸಂಸದೀಯ ನಿಯೋಗದ ಅಮೆರಿಕ ಪ್ರವಾಸ, 5 ಮುಖ್ಯ ಅಂಶ
ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಶುರುಮಾಡಿದ ಆಪರೇಷನ್ ಸಿಂದೂರ್, ಭಾರತದಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಜಗತ್ತಿನ ಸಮರ ಎಂದು ಸಂಸದ ಶಶಿ ತರೂರ್ ಹೇಳಿದರು. ಭಾರತದಲ್ಲಿ ಭಯೋತ್ಪಾದನೆ, ಪಾಕ್‌ನ ಉಗ್ರ ನಂಟು ಯಾವ ರೀತಿಯದ್ದು ಎಂಬುದನ್ನು ಶಶಿ ತರೂರ್ ಬಿಚ್ಚಿಟ್ಟರು. ಇಲ್ಲಿದೆ ಅವರ ಮಾತಿನ 5 ಮುಖ್ಯ ಅಂಶಗಳು.

ಆಪರೇಷನ್ ಸಿಂದೂರ್ ಬಗ್ಗೆ ಮಾಹಿತಿ ನೀಡುವುದಕ್ಕೆ, ಭಯೋತ್ಪಾದನೆ ವಿರುದ್ಧದ ಸಮರ ಭಾರತದ್ದಷ್ಟೇ ಅಲ್ಲ, ಜಗತ್ತಿನ ಸಮರವೂ ಹೌದು ಎಂಬುದನ್ನು ಮನವರಿಕೆ ಮಾಡಿಕೊಡಲು ಭಾರತ ಸರ್ಕಾರ ಸಂಸದರ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸಿದೆ. ಈ ಪೈಕಿ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ಅಮೆರಿಕ ಕಾಲಮಾನ ಶನಿವಾರ (ಇಂದು) ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಚಾಲ್ತಿಗೆ ಬಂದ ಹೊಸ ನಿಯಮದ ಬಗ್ಗೆ ಮಾತನಾಡಿದ ಶಶಿ ತರೂರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಗಡಿಯಾಚೆಯಿಂದ ಬಂದು ನಿರ್ಭೀತಿಯಿಂದ ಭಾರತದ ನಾಗರಿಕರನ್ನು ಹತ್ಯೆ ಮಾಡುತ್ತಾರೆ ಎಂದಾದರೆ, “ಅದಕ್ಕೆ ತಕ್ಕ ಬೆಲೆ”ಯನ್ನೂ ಅವರು ಪಾವತಿಸಬೇಕಾಗುತ್ತದೆ ಎಂದು ಸಂಸದೀಯ ನಿಯೋಗದ ನಾಯಕ ಶಶಿ ತರೂರ್ ಪ್ರತಿಪಾದಿಸಿದರು.
ಆಪರೇಷನ್ ಸಿಂದೂರ್- ಭಾರತದಲ್ಲಿ ಭಯೋತ್ಪಾದನೆ ಮತ್ತು ಪಾಕಿಸ್ತಾನದ ಉಗ್ರ ನಂಟು ಬಿಚ್ಚಿಟ್ಟರು ಶಶಿ ತರೂರ್
ಅಮೆರಿಕಕ್ಕೆ ತೆರಳಿದ ಸಂಸದೀಯ ನಿಯೋಗದ ನಾಯಕ ಶಶಿ ತರೂರ್ ಅವರು ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿಯ ವಿವರ ನೀಡುತ್ತ, ದಾಳಿ ನಡೆಸಿದ ಉಗ್ರರು 25 ಭಾರತೀಯರು ಹಾಗೂ ಒಬ್ಬ ನೇಪಾಳಿಯನ್ನು ಹತ್ಯೆ ಮಾಡಿದ್ದಾರೆ. ನೇಪಾಳಿ ಎಂಬುದು ದೇಶದ ಪ್ರಜೆಯನ್ನು ಗುರುತಿಸುವುದಕ್ಕಾಗಿ ಹೇಳಿದ ಮಾತು. ಉಗ್ರರು ಈ ನಾಗರಿಕರ ಧರ್ಮ ಕೇಳಿ ಹಿಂದೂಗಳು ಎಂದು ತಿಳಿದ ಬಳಿಕ ಹತ್ಯೆ ಮಾಡಿದ್ದಾರೆ. ಉಗ್ರರ ಉದ್ದೇಶ ತುಂಬ ಸ್ಪಷ್ಟವಾಗಿತ್ತು. ಹತ್ಯೆ ನಡೆಸಿದ ಬಳಿಕ, ಸರ್ಕಾರಕ್ಕೆ ತಿಳಿಸಿ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಹೀಗೆ, ಗಡಿಯಾಚೆಯಿಂದ ಬಂದು ನಿರ್ಭೀತಿಯಿಂದ ಭಾರತದ ನಾಗರಿಕರನ್ನು ಹತ್ಯೆ ಮಾಡುತ್ತಾರೆ ಎಂದಾದರೆ, “ಅದಕ್ಕೆ ತಕ್ಕ ಬೆಲೆ”ಯನ್ನೂ ಅವರು ಪಾವತಿಸಬೇಕಾಗುತ್ತದೆ ಎಂದು ಸಂಸದೀಯ ನಿಯೋಗದ ನಾಯಕ ಶಶಿ ತರೂರ್ ಪ್ರತಿಪಾದಿಸಿದರು. ಹೀಗಾಗಿ ಆಪರೇಷನ್ ಸಿಂದೂರ್ ಮೂಲಕ ಭಯೋತ್ಪಾದನೆ ವಿರುದ್ಧ ಸಮರ ಸಾರಬೇಕಾಗಿ ಬಂತು. ಆಪರೇಷನ್ ಸಿಂದೂರ್ ಎಂಬುದು ಭಾರತದ್ದಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಜಗತ್ತಿನ ಸಮರ ಎಂಬುದನ್ನು ಪ್ರತಿಪಾದಿಸಿದರು.
ಭಯೋತ್ಪಾದನೆ ವಿರುದ್ಧ ಸಮರ; ಅಮೆರಿಕದಲ್ಲಿ ಶಶಿ ತರೂರ್ ಮಾತಿನ 05 ಮುಖ್ಯ ಅಂಶಗಳು
1) ನಾನು ಇಲ್ಲಿಗೆ ಸರ್ಕಾರದ ಆಡಳಿತ ಪಕ್ಷದ ಭಾಗವಾಗಿ ಇಲ್ಲಿಗೆ ಬಂದಿಲ್ಲ. ನಾನು ವಿಪಕ್ಷದ ಸಂಸದ. ನಮ್ಮ ನಿಯೋಗದಲ್ಲಿ ವಿಪಕ್ಷದ ಸದಸ್ಯರೂ ಇದ್ದೇವೆ. ಇದು ಭಯೋತ್ಪಾದನೆ ಎಂಬ ಗಂಭೀರ ಸಮಸ್ಯೆ ವಿಚಾರದಲ್ಲಿ ನಮ್ಮ ದೇಶ ಭಾರತದ ಪರವಾಗಿ, ಭಯೋತ್ಪಾದನೆ ವಿರುದ್ಧ ಸಮರ ತೀವ್ರಗೊಳಿಸುವ ಉದ್ದೇಶದಿಂದ ನಾವೆಲ್ಲರೂ ಬಂದಿದ್ದೇವೆ. 9/11 ದಾಳಿ ಸಂತ್ರಸ್ತರನ್ನು ನೆನಪಿಸಿಕೊಂಡರೆ ಭಯೋತ್ಪಾದನೆ ಎಂಬುದು ಜಾಗತಿಕ ಸಮಸ್ಯೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದು.
2) ಉಗ್ರ ಚಟುವಟಿಕೆಗಳು ಬಹಳ ಸ್ಪಷ್ಟವಾಗಿವೆ. ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ಉದ್ದೇಶದಿಂದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಭಾರತ ಶುರುಮಾಡಿದೆ. ಇದು ಭಾರತದ್ದಷ್ಟೇ ಅಲ್ಲ, ಇಡೀ ಜಗತ್ತು ಭಯೋತ್ಪಾದನೆ ವಿರುದ್ಧ ಸಾರಿರುವ ಸಮರ. ಭಾರತ ಬಹಳ ಜಾಗರೂಕತೆಯಿಂದ ಉಗ್ರರಿಗೆ ಹೊಡೆತ ನೀಡಿದೆ. ಹಗಲು ಹೊತ್ತಿನಲ್ಲಿ ಅಲ್ಲ, ರಾತ್ರಿ ಹೊತ್ತಲ್ಲಿ ಈ ದಾಳಿ ನಡೆಸಿದ್ದು, ನಾಗರಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಹಳ ನಿಖರವಾಗಿ ಉಗ್ರ ನೆಲೆಗಳು, ಕೇಂದ್ರ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಈ ವಿಚಾರವಾಗಿ ಪಹಲ್ಗಾಮ್ ದಾಳಿಯ ಬಳಿಕ ಒಪೆಡ್ ಲೇಖನಗಳನ್ನು ಬರೆದಿದ್ದೇನೆ.
3) ಭಾರತ ಯಾವುದೇ ಅತಿಕ್ರಮಣ, ಆಕ್ರಮಣಕಾರಿ ನಡೆಯನ್ನು ಶುರುಮಾಡಲ್ಲ. ಉಗ್ರ ದಾಳಿಗೆ ತಕ್ಕ ಉತ್ತರವನ್ನಷ್ಟೇ ಭಾರತ ನೀಡಿದೆ. "ನೀವು ಶುರುಮಾಡಿದ್ರಿ, ನಾವು ಉತ್ತರಿಸಿದೆವು. ನೀವು ನಿಲ್ಲಿಸಿದಿರಿ. ನಾವು ನಿಲ್ಲಿಸಿದೆವು. ಅವರೂ ನಿಲ್ಲಿಸಿದರೂ. 88 ಗಂಟೆಗಳ ಸಮರ ನಡೆಯಿತು. ಅಂತಹ ಘಟನೆಗಳು ನಡೆಯಬಾರದಿತ್ತು. ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಂತ, ದಾಳಿಗೆ ತಕ್ಕ ಉತ್ತರ ಕೊಡದೇ ಇರಲಾಗದು ಎಂದು ಶಶಿ ತರೂರ್ ಸ್ಪಷ್ಪಪಡಿಸಿದರು.
4) ನಮ್ಮ ಅರ್ಥ ವ್ಯವಸ್ಥೆಯನ್ನು ಬೆಳೆಸುವ ಕಡೆಗೆ ಗಮನಹರಿಸುತ್ತಿದ್ದೇವೆ. ಭಾರತ ಯಾವುದೇ ದೇಶದೊಂದಿಗೆ ಯುದ್ಧ ಮಾಡಲು ಬಯಸುತ್ತಿಲ್ಲ. ಭಾರತ ಯಥಾಸ್ಥಿತಿ ಕಾಪಾಡಿಕೊಂಡು ಮುನ್ನಡೆಯಲು ಚಿಂತನೆ ನಡೆಸುತ್ತಿದ್ದರೆ ಪಾಕಿಸ್ತಾನ ಅಧಿಕಾರ ವಿಸ್ತರಣೆ ಕಡೆಗೆ ಮುಖಮಾಡಿದೆ. ಭಾರತದ ಅಧೀನ ಇರುವ ಭೂಭಾಗವನ್ನು ಯಾವುದೇ ಬೆಲೆ ತೆತ್ತಾದರೂ ಪಡೆಯಬೇಕು ಎಂಬ ಹಟದಲ್ಲಿದೆ ಪಾಕಿಸ್ತಾನ. ಸಾಂಪ್ರದಾಯಿಕವಾಗಿ ಪಡೆಯಲು ಸಾಧ್ಯವಾಗದೇ ಇದ್ದಾಗ, ಭಯೋತ್ಪಾದನೆ ಮೂಲಕ ಅದನ್ನು ಪಡೆಯಲು ಪ್ರಯತ್ನಿಸಿದ್ದಾರೆ.
5) ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ಅಂತ್ಯಗೊಳಿಸಬೇಕಾದ ಸಮಯ ಇದು. ಇದೇ ಕಾರಣಕ್ಕೆ ಭಾರತವು ಆಪರೇಷನ್ ಸಿಂದೂರ್ ಶುರುಮಾಡಿದೆ. ಭಾರತ ಈ ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ನೆಲೆಯಲ್ಲಿ, ನಿರ್ಬಂಧಗಳ ಮೂಲಕ ತನ್ನ ಪ್ರಯತ್ನ ಮುಂದುವರಿಸಿದೆ. ಜಗತ್ತಿನ ಹಲವು ರಾಷ್ಟ್ರಗಳು ಕೂಡ ಈ ವಿಚಾರದಲ್ಲಿ ಒಂದೇ ನಿಲುವು ಹೊಂದಿದ್ದು, ಇದು ಭಯೋತ್ಪಾದನೆಗೆ ಇತಿಶ್ರೀ ಹೇಳಬೇಕಾದ ಸಮಯ ಎಂದು ಶಶಿ ತರೂರ್ ಪ್ರತಿಪಾದಿಸಿದರು.
ಶಶಿ ತರೂರ್ ಅವರ ವಿಡಿಯೋ ಇಲ್ಲಿದೆ