ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು; ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು, ಏನಿದು ಪ್ರಕರಣ, 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು; ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು, ಏನಿದು ಪ್ರಕರಣ, 5 ಮುಖ್ಯ ಅಂಶಗಳು

ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು; ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು, ಏನಿದು ಪ್ರಕರಣ, 5 ಮುಖ್ಯ ಅಂಶಗಳು

Abhishek Singhvi: ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು ಪತ್ತೆಯಾಗಿದೆ. ಗುರುವಾರ ನಡೆದ ಈ ಪ್ರಕರಣ ಶುಕ್ರವಾರ ದೇಶದ ಗಮನಸೆಳೆದಿದ್ದು, ರಾಜಕೀಯವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ನೋಟುಗಳ ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಏನಿದು ಪ್ರಕರಣ, 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆಸನದಲ್ಲಿ 500 ರೂ ನೋಟುಗಳ ಕಟ್ಟು ಪತ್ತೆಯಾಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆಸನದಲ್ಲಿ 500 ರೂ ನೋಟುಗಳ ಕಟ್ಟು ಪತ್ತೆಯಾಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

Abhishek Singhvi: ಸಂಸತ್ ಅಧಿವೇಶನ ನಡೆಯುತ್ತಿದ್ದು, ರಾಜ್ಯಸಭೆಯಲ್ಲಿ ಗುರುವಾರದ ಕಲಾಪ ಮುಂದೂಡಿದ ಬಳಿಕ ಆಸನ ಸಂಖ್ಯೆ 222ರಲ್ಲಿ 500 ರೂಪಾಯಿ ನೋಟುಗಳ ಕಟ್ಟು ಸಿಕ್ಕಿದೆ ಎಂಬ ವಿಚಾರ ಈಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಭದ್ರತಾ ಸಿಬ್ಬಂದಿ ರಾಜಸಭಾ ಕಲಾಪ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾಗ ನೋಟುಗಳ ಕಟ್ಟು ಸಿಕ್ಕಿದ್ದು, ತನಿಖೆಗೆ ಆದೇಶ ನೀಡಿದ್ದಾಗಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿಯೂ ಆಗಿರುವ ಜಗದೀಪ್ ಧನಖಡ್ ಶುಕ್ರವಾರ ತಿಳಿಸಿದರು. ರಾಜ್ಯಸಭೆಯಲ್ಲಿ ಆಸನ ಸಂಖ್ಯೆ 222 ಅನ್ನು ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದು, ರಾಜ್ಯಸಭೆ ಸಭಾಧ್ಯಕ್ಷ ಜಗದೀಪ್ ಧನಖಡ್ ಅವರ ಹೇಳಿಕೆ ವ್ಯಾಪಕವಾಗಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ಧನ್‌ಖಡ್ ಅವರು ಈ ವಿಷಯ ತನಿಖೆಯ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ಕರೆನ್ಸಿ ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿದರು.

ರಾಜ್ಯಸಭೆ ಆಸನ ಸಂಖ್ಯೆ 222ರಲ್ಲಿ 500 ರೂ ನೋಟುಗಳ ಕಟ್ಟು; 5 ಮುಖ್ಯ ಅಂಶಗಳು

1) ರಾಜ್ಯಸಭೆ ಸಭಾಧ್ಯಕ್ಷ ಜಗದೀಪ್ ಧನಖಡ್‌ ಅವರು ಅವರು ಹಣದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಆಸನ ಸಂಖ್ಯೆ 222ರಲ್ಲಿ 500 ರೂಪಾಯಿಯ 100 ನೋಟುಗಳ ಕಟ್ಟು ಇತ್ತು ಎಂದು ಹೇಳಲಾಗುತ್ತಿದೆ. ಜಗದೀಪ್ ಧನ್‌ಖಡ್ ಅವರು ಹೇಳಿದ್ದೇನು - ಇಲ್ಲಿದೆ ವಿಡಿಯೋ-

2) ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜಗದೀಪ್ ಧನ್‌ಖಡ್‌ ಅವರ ಕಾರ್ಯವಿಧಾನವನ್ನು ಟೀಕಿಸಿದರು. ತನಿಖೆ ಪೂರ್ಣಗೊಳ್ಳುವ ಮೊದಲು ಸದಸ್ಯರ ಹೆಸರನ್ನು ಹೇಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 20ರ ವರೆಗೆ ನಡೆಯಲಿದೆ.

3) ಈ ವಿದ್ಯಮಾನಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಮನು ಸಿಂಘ್ವಿ, " ನಾನು ನಿನ್ನೆ (ಗುರುವಾರ) ಮಧ್ಯಾಹ್ನ 12.57ಕ್ಕೆ ಸದನದೊಳಗೆ ತಲುಪಿದೆ. ಸದನ ಕಲಾಪಕ್ಕೆ ಅಪರಾಹ್ನ 1 ಗಂಟೆಯಿಂದ ಊಟದ ವಿರಾಮ. ಈ ಅವಧಿಯಲ್ಲಿ ಅಪರಾಹ್ನ 1 ಗಂಟೆಯಿಂದ 1.30ರ ತನಕ ನಾನು ಅಯೋಧ್ಯೆ ಪ್ರಸಾದ್‌ನಲ್ಲಿ ಕುಳಿತು ಊಟ ಮಾಡಿ ಬಳಿಕ ಸಂಸತ್‌ಗೆ ಹೋದೆ. ನಾನು ರಾಜ್ಯಸಭೆ ಸದನದಲ್ಲಿ ಕೇವಲ 3 ನಿಮಿಷ ಮಾತ್ರ ಇದ್ದೆ. ಉಳಿದ 30 ನಿಮಿಷ ಕ್ಯಾಂಟೀನ್‌ನಲ್ಲಿದ್ದೆ. ಈ ವಿಲಕ್ಷಣ ವಿದ್ಯಮಾನ ನಿಜಕ್ಕೂ ಅಚ್ಚರಿದಾಯಕ. ಇದು ಕೂಡ ರಾಜಕೀಯ ಚರ್ಚೆಯ ವಿಷಯವಾಗುತ್ತಿರುವುದು ವಿಶೇಷವೇ. ನೋಟುಗಳೇನು, ಗಾಂಜಾ ಗಿಡವನ್ನೇ ತಂದು ನೆಡಬಹುದು. ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

4) 'ಕಾಂಗ್ರೆಸ್ ನಾಯಕರ ಬಳಿ ತುಂಬಾ ಹಣವಿದೆ. ಸೀಟಿನ ಮೇಲೆ ಬಿಟ್ಟು ಹೋದ ಹಣವನ್ನು ಹಿಂಪಡೆಯಲು ಅವರು ಯಾರೂ ಬಂದಿಲ್ಲ. ಹಾಗಾಗಿ ಅದು ಯಾರ ಹಣ ಎಂಬುದು ಜನರಿಗೆ ಗೊತ್ತಿದೆ. ಈ ಹಣದ ಮೂಲದ ಬಗ್ಗೆ ಅನುಮಾನವಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಯಬೇಕು ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಆಗ್ರಹಿಸಿದ್ದಾರೆ.

5) ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಝಾ ಶುಕ್ರವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದ್ದು, ಅಭಿಷೇಕ್ ಮನು ಸಿಂಘ್ವಿ ಆಸನದ ಮೇಲಿನ ನೋಟುಗಳ ವಿಚಾರಕ್ಕೆ ತೋರಿಸಿದ 10ನೇ ಒಂದಂಶದ ಉತ್ಸಾಹವನ್ನು ಅದಾನಿ ವಿರುದ್ಧದ ಕೇಸ್ ಬಗ್ಗೆ ಬಿಜೆಪಿ ಸರ್ಕಾರ ತೋರಿಸಿಲ್ಲ ಎಂದು ಟೀಕಿಸಿದರು.

ಅಭಿಷೇಕ್ ಮನು ಸಿಂಘ್ವಿ ಯಾರು?

ಪ್ರತಿಷ್ಠಿತ ನ್ಯಾಯಶಾಸ್ತ್ರಜ್ಞ, ಸಂಸದೀಯ, ಮಾಧ್ಯಮ ವ್ಯಕ್ತಿ, ಅಂಕಣಕಾರ, ಲೇಖಕ ಮತ್ತು ವ್ಯಾಖ್ಯಾನಕಾರರಾಗಿ ಅಭಿಷೇಕ್ ಸಿಂಘ್ವಿ ಗುರುತಿಸಿಕೊಂಡಿದ್ದಾರೆ. ಅವರು ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುವ ಸದಸ್ಯರಾಗಿದ್ದು, ಈ ಹಿಂದೆ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದ್ದರು. ಅಭಿಷೇಕ್ ಮನು ಸಿಂಘ್ವಿ ಅವರು 2012ರ ಏಪ್ರಿಲ್ 23 ರಂದು ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯೀ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ವೈಯಕ್ತಿಕ ದುರ್ನಡತೆಯ ಆರೋಪ ಕೇಳಿ ಬಂದ ಬಳಿಕ ಅವರು ಕಾಂಗ್ರೆಸ್ ಪಕ್ಷದ ವಕ್ತಾರನ ಹೊಣೆಗಾರಿಕೆಯಿಂದಲೂ ಮುಕ್ತರಾಗಿದ್ದರು.

ರಾಜಸ್ಥಾನದ ಜೋಧಪುರದಲ್ಲಿ ಕಮಲಾ ಮತ್ತು ಲಕ್ಷ್ಮೀ ಮಾಲ್‌ ಸಿಂಘ್ವಿ ದಂಪತಿಯ ಪುತ್ರರಾಗಿ ಅಭಿಷೇಕ್ ಮನು ಸಿಂಘ್ವಿ 1959ರ ಫೆ 24 ರಂದು ಜನಿಸಿದರು. ಲಕ್ಷ್ಮೀ ಮಾಲ್ ಸಿಂಘ್ವಿ ಅವರು ಪ್ರಸಿದ್ದ ನ್ಯಾಯವಾದಿಗಳಾಗಿದ್ದರು. ಅಷ್ಟೇ ಅಲ್ಲ, ಯುನೈಟೆಡ್ ಕಿಂಗ್ಡಂನಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಲಕ್ಷ್ಮೀ ಮಾಲ್ ಸಿಂಘ್ವಿ ಅವರು ಆರಂಭದಲ್ಲಿ ಭಾರತೀಯ ಜನತಾ ಪಾರ್ಟಿ ಸದಸ್ಯರಾಗಿದ್ದವರು ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.

ಅಭಿಷೇಕ್ ಮನು ಸಿಂಘ್ವಿ ಅವರು ಘಜಲ್‌ ಮತ್ತು ಸೂಫಿ ಗಾಯಕಿ ಅನಿತಾ ಸಿಂಘ್ವಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರರು (ಅನುಭವ್ ಮತ್ತು ಆವಿಷ್ಕಾರ್‌). ಅಭಿಷೇಕ್‌ ಸಿಂಘ್ವಿ ಅವರು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಅಂಕಣಕಾರರು ಕೂಡ. ನಗರ, ಸವಲತ್ತು ಮತ್ತು ಪ್ರಭಾವಿ ವಲಯಗಳಲ್ಲಿ ಅವರ ಅನುಭವವನ್ನು ಇದು ಪ್ರತಿಪಾದಿಸುತ್ತದೆ. ಅಭಿಷೇಕ್ ಸಿಂಘ್ವಿ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ 34ನೇ ವರ್ಷ ವಯಸ್ಸಿನಲ್ಲಿ ಸುಪ್ರೀಂ ಕೋರ್ಟ್‌ನ ಸೀನಿಯರ್ ಅಡ್ವೋಕೇಟ್ ಆಗಿ ನಿಯೋಜಿತರಾದವರು. ಅದೇ ರೀತಿ, ಅತ್ಯಂತ ಕಿರಿಯ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಆಫ್ ಇಂಡಿಯಾ ಆಗಿದ್ದರು. ಆಗ ಅವರ ವಯಸ್ಸು 37 ವರ್ಷವಾಗಿತ್ತು. ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಷನ್‌ನ ಚುನಾಯಿತ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.