Who is Babiya crocodile?: ಬಬಿಯಾ ಮೊಸಳೆಯ ಹಿನ್ನೆಲೆ; ಎಲ್ಲಿಂದ ಬಂತು ಈ ದೇವರ ಮೊಸಳೆ?
Who is Babiya crocodile?: ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದ ಶ್ರೀ ಅನಂತಪದ್ಮನಾಭ ಕ್ಷೇತ್ರದ ದೇವರ ಮೊಸಳೆ ನಿನ್ನೆ ತಡರಾತ್ರಿ ಅನಂತ ಸಾನ್ನಿಧ್ಯ ಸೇರಿದೆ. 75 ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದ ಈ ಮೊಸಳೆ ಬಬಿಯಾ ಎಲ್ಲಿಂದ ಬಂತು? ಹಿನ್ನೆಲೆ ಏನು? ವಿವರ ಇಲ್ಲಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ಬಬಿಯಾ ನಿನ್ನೆ ತಡರಾತ್ರಿ ಅಸುನೀಗಿದೆ.
ಶ್ರೀ ಅನಂತಪದ್ಮನಾಭ ಮತ್ತು ಮೊಸಳೆಗೆ ಏನು ಸಂಬಂಧ ಎಂಬುದು ಗೊತ್ತಿಲ್ಲ. ಆದರೆ ಸುದೀರ್ಘ ವರ್ಷಗಳಿಂದ ಮೊಸಳೆ ಈ ಕ್ಷೇತ್ರದ ಪರಿಸರದಲ್ಲೇ ಇದೆ. ಇದು ಒಂಟಿ ಮೊಸಳೆ. ಈ ಮೊಸಳೆ ಹೇಗೆ ಬಂತೋ ಗೊತ್ತಿಲ್ಲ.
ಈ ಬಗ್ಗೆ ವಿಚಾರಿಸಿದರೆ ದೇವಸ್ಥಾನದವರು ಮತ್ತು ಸ್ಥಳೀಯರು ಹೇಳುವುವುದಿಷ್ಟು- ಸರಿ ಸುಮಾರು ಏಳೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಈ ಬಬಿಯಾ ಇಲ್ಲಿತ್ತು. ದೇವರ ನೈವೇದ್ಯ ಸೇವನೆಗೆ ಮಧ್ಯಾಹ್ನದ ಹೊತ್ತು ಈ ಮೊಸಳೆ ಕಾಯುತ್ತಿರುತ್ತದೆ. ಇದು ದೇವರ ಮೊಸಳೆ. ವೆಜಿಟೇರಿಯನ್ ಕ್ರೊಕೊಡೈಲ್ ಎಂದೇ ಪ್ರಸಿದ್ಧವಾಗಿದೆ. ದೇವರ ಮೊಸಳೆ ಹೊಂದಿದ್ದ ಏಕೈಕ ದೇಗುಲ ಇದು.
ಈ ಮೊಸಳೆಯ ಹೆಸರೇನು? ಯಾವಾಗ ಬಂತು?
ಈ ಮೊಸಳೆಯ ಹೆಸರು ಬಬಿಯಾ. ವಯಸ್ಸು ಅಂದಾಜು 80ರ ಆಸುಪಾಸು. ಈ ಹೆಸರು ಹೇಗೆ ಬಂತು? ಎಂದು ಕೇಳಿದರೆ ಒಂದಷ್ಟು ಹಿನ್ನೆಲೆ ಮಾಹಿತಿ ಸಿಗುತ್ತದೆ. ಇದಕ್ಕೂ ಮೊದಲು ಇದ್ದ ಮೊಸಳೆಗೂ ಬಬಿಯಾ ಎಂದೇ ಹೆಸರಿತ್ತು. ಅದೇ ಹೆಸರಿನಲ್ಲಿ ಇದು ಕೂಡ ಗುರುತಿಸಿಕೊಂಡಿದೆ. ಬಬಿಯಾ ಎಂದು ಎಲ್ಲರೂ ಕೂಗಿದರೆ ಇದು ಸ್ಪಂದಿಸುವುದಿಲ್ಲ. ದೇವಸ್ಥಾನದ ಅರ್ಚಕರು ಕೂಗಿದರಷ್ಟೆ ಅದು ನೀರನಿಂದ ಹೊರಗೆ ಇಣುಕುತ್ತಿತ್ತು. ಅರ್ಚಕರು ಕೂಡ ಅಷ್ಟೆ, ನೈವೇದ್ಯ ನೀಡುವ ಸಮಯದಲ್ಲಷ್ಟೆ ಬಬಿಯಾ ಹೆಸರು ಕೂಗುತ್ತಿದ್ದರು.
ಬಬಿಯಾಗೆ ಬ್ರಿಟಿಷ್ ಆಳ್ವಿಕೆಯಲ್ಲೇನಾಯಿತು?
ಸ್ಥಳೀಯರು ಮತ್ತು ದೇವಸ್ತಾನದವರು ಹೇಳುವ ಪ್ರಕಾರ, ಈ ಮೊಸಳೆ ಪ್ರತ್ಯಕ್ಷವಾಗಿದ್ದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. ಸ್ವಾತಂತ್ರ್ಯ ಸಿಗುವುದಕ್ಕೆ ಎರಡು ವರ್ಷ ಮೊದಲಿನ ಘಟನೆ ಅದು.
ಈ ಬಬಿಯಾ ಮೊಸಳೆಗೂ ಹಿಂದೆ ಒಂದು ಬಬಿಯಾ ಮೊಸಳೆ ಇತ್ತು. ಅದು ಎಲ್ಲರ ಕೂಗಿಗೂ ಪ್ರತಿಸ್ಪಂದಿಸುತ್ತಿತ್ತು. ಬಬಿಯಾ ಎಂದು ಕೂಗಿದರೆ ಸಾಕು ಸರೋವರದಿಂದ ಮೇಲೆದ್ದು ನೋಡುತ್ತಿತ್ತು. ಇದು ಬ್ರಿಟಿಷ್ ಸೈನಿಕನ ಗಮನಸೆಳೆದಿತ್ತು.
ಆ ಬ್ರಿಟಿಷ್ ಸೈನಿಕನೊಬ್ಬ 1945ರಲ್ಲಿ ಈ ದೇವಸ್ಥಾನದ ಆವರಣ ಪ್ರವೇಶಿಸಿದ್ದ. ಬಬಿಯಾ ಎಂದು ಕೂಗಿದ್ದ. ಆಗ ಮೊಸಳೆ ಸರೋವರದಿಂದ ತಲೆ ಮೇಲೆತ್ತಿತ್ತು. ಕೂಡಲೇ ಆ ಸೈನಿಕ ಗುಂಡು ಹಾರಿಸಿ ಆ ಮೊಸಳೆಯನ್ನು ಹತ್ಯೆ ಮಾಡಿದ್ದ. ಆದರೆ, ಆ ಸೈನಿಕ ದೇವಸ್ಥಾನದ ಆವರಣ ದಾಟಿ ಮುಂದೆ ಹೋಗಲಿಲ್ಲ. ಕುಸಿದುಬಿದ್ದು ಪ್ರಾಣ ಬಿಟ್ಟಿದ್ದ.
ವಿಶೇಷ ಎಂದರೆ ಮಾರನೇ ದಿನವೇ ಈ ಸರೋವರದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಹಾಗೆ ಬಬಿಯಾ ಸ್ಥಾನವನ್ನು ತುಂಬಿದ ಮೊಸಳೆಯೇ ಈ ಬಬಿಯಾ. ಈ ಮೊಸಳೆ ಎಲ್ಲಿಂದ ಬಂತು ಎಂಬುದು ನಿಗೂಢ ಎನ್ನುತ್ತಾರೆ ಸ್ಥಳೀಯ ಹಿರಿಯರು ಮತ್ತು ದೇವಸ್ಥಾನದವರು.
ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ, ನೆರೆದ ಭಕ್ತಸಮೂಹ
ಅನಂತಪುರ ದೇವಸ್ಥಾನದ ಹೊರಭಾಗದಲ್ಲಿ ದೇವರ ಮೊಸಳೆಯ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಭಕ್ತ ಸಮೂಹ ಮತ್ತು ಸ್ಥಳೀಯರು ದೇವರ ಮೊಸಳೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸ್ಥಳೀಯರಾದ ಅನೂಪ್ ಈ ಕುರಿತು ಟ್ವೀಟ್ ಮಾಡಿದ್ದು ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಅದು ಹೀಗಿದೆ.
ವಿಭಾಗ