Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Cm: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು? ಬಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಸುಳಿವು ಸಿಕ್ತಾ ಇದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಗಾದಿ ಏರುವುದಕ್ಕೆ ಇನ್ನು ಅಡ್ಡಿ ಇಲ್ಲ. ಹಾಗಾದರೆ ಏಕನಾಥ್‌ ಮತ್ತು ಅಜಿತ್ ಪವಾರ್ ಡಿಸಿಎಂ ಆಗ್ತಾರಾ, ಒಪ್ಪಂದ ಏನಾಯಿತು, ಹೇಗಿರುತ್ತೆ ಕ್ಯಾಬಿನೆಟ್ ಕುತೂಹಲಕಾರಿ ಒಳನೋಟ ಇಲ್ಲಿದೆ.

ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ)
ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ) (Deepak Salvi)

Maharashtra CM: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದು ಮೂರು ದಿನಗಳಾದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಇನ್ನೂ ನಿರ್ಧರಿಸುವುದು ಸಾಧ್ಯವಾಗಿಲ್ಲ. ಮಹಾಯುತಿಯ ಮೂರು ಪಕ್ಷಗಳ ಅಂದರೆ ಬಿಜೆಪಿ (132 ಸ್ಥಾನ), ಶಿವಸೇನಾ ( 57), ಎನ್‌ಸಿಪಿ (41) ನಾಯಕರು ಕುಳಿತು ಮಾತುಕತೆ ನಡೆಸಿ ಒಮ್ಮತಕ್ಕೆ ಬಂದರಾ? ಮಹಾರಾಷ್ಟ್ರ ಸಿಎಂ ಯಾರು? ಎಂಬ ಕುತೂಹಲ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಏಕನಾಥ ಶಿಂಧೆ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿ, ಇಲ್ಲಿ ಅವರ ಪುತ್ರನನ್ನು ಉಪ ಮುಖ್ಯಮಂತ್ರಿ ಮಾಡ್ತಾರೆ ಎಂಬ ವದಂತಿ ಹರಡಿತ್ತು. ಆದರೆ, ಇತ್ತೀಚಿನ ಅಪ್ಡೇಟ್ಸ್ ಪ್ರಕಾರ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದು, ಮೊದಲಿನಂತೆ ಅಜಿತ್ ಪವಾರ್ ಕೂಡ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸೋಮವಾರ ಬಿಜೆಪಿ ಹೈಕಮಾಂಡ್ ಫಡ್ನವೀಸ್ ಹೆಸರನ್ನು ಅನುಮೋದಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಇದಕ್ಕೆ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕೂಡ ಒಪ್ಪಿಗೆ ಸೂಚಿಸಿವೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಫಡ್ನವೀಸ್ ಅವರ ಹೆಸರನ್ನು ಉನ್ನತ ನಾಯಕತ್ವ ಅನುಮೋದಿಸಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ಎನ್‌ಸಿಪಿ ಮತ್ತು ಶಿವಸೇನೆಗೆ ಕಳುಹಿಸಲಾಗಿದೆ, ಅದಕ್ಕೆ ಅವರು ಒಪ್ಪಿದ್ದಾರೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟ ಬಿಜೆಪಿಗೆ, ಸಚಿವ ಸಂಪುಟದ ಲೆಕ್ಕಾಚಾರ ಏನು

ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಏಕನಾಥ್ ಶಿಂಧೆ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಇದೆ. ಏಕನಾಥ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಲಿದ್ದು, ಸಚಿವ ಸಂಪುಟದಲ್ಲಿ 12 ಸಚಿವ ಸ್ಥಾನಗಳನ್ನು ಶಿವಸೇನಾ ನಾಯಕರಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದಲ್ಲದೆ ಎನ್‌ಸಿಪಿಗೆ 10 ಸಚಿವ ಸ್ಥಾನಗಳನ್ನು ನೀಡಬಹುದು. ಮಹಾರಾಷ್ಟ್ರದಲ್ಲಿ ಮಂತ್ರಿಗಳ ಪರಿಷತ್ತಿನ ಗರಿಷ್ಠ ಸಂಖ್ಯೆಯ ಸದಸ್ಯರ ಸಂಖ್ಯೆ 43 ಆಗಿದ್ದು, ಇದರಲ್ಲಿ ಮುಖ್ಯಮಂತ್ರಿಯೂ ಸೇರಿದ್ದಾರೆ. ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ 132 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 21 ಸಚಿವ ಸ್ಥಾನಗಳನ್ನು ತಾನೇ ಇಟ್ಟುಕೊಳ್ಳಬಹುದು. ಸಮ್ಮಿಶ್ರ ಧರ್ಮವನ್ನು ಅನುಸರಿಸಲು ಮತ್ತು ಮಿತ್ರಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯುವ ಸಂದೇಶವನ್ನು ನೀಡುವುದಕ್ಕಾಗಿ ಎನ್‌ಸಿಪಿ ಮತ್ತು ಶಿವಸೇನೆಗಳನ್ನೂ ಜೊತೆಗೇ ಕರೆದೊಯ್ಯಲು ಬಿಜೆಪಿ ಬಯಸಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಮಹಾರಾಷ್ಟ್ರ ಸಚಿವ ಸಂಪುಟ; ಯಾರಿಗೆ ಯಾವ ಖಾತೆ, ಸಚಿವ ಸ್ಥಾನ ಹಂಚಿಕೆ ಹೇಗೆ

ಮಹಾರಾಷ್ಟ್ರದ ಮಹಾಯುತಿಯ ಮೈತ್ರಿ ಪಾಲುದಾರರಿಗೆ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳನ್ನು ನೀಡಬಹುದು. ಆದರೆ, ಗೃಹ ಮತ್ತು ಹಣಕಾಸು ಸಚಿವಾಲಯಗಳು ತನ್ನಲ್ಲೇ ಇರಬೇಕು ಎಂದು ಬಿಜೆಪಿ ಇನ್ನೂ ಒತ್ತಾಯಿಸುತ್ತಿದೆ. ಈಗಲೂ ಬಿಜೆಪಿ, ಎನ್‌ಸಿಪಿ ಮತ್ತು ಶಿವಸೇನೆ ನಡುವೆ ಇಲಾಖೆ ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದೆ. ಅಮಿತ್ ಶಾ ಮಂಗಳವಾರ (ನವೆಂಬರ್ 26) ಸಂಜೆಯೇ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಸಭೆಯನ್ನು ಕರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ದೆಹಲಿಯಲ್ಲಿ ನಡೆಯುವ ಈ ಸಭೆಯ ನಂತರ ಘೋಷಣೆಯಾಗುವ ಸಾಧ್ಯತೆ ಇದೆ. ನಿಮ್ಮ ಕಾಳಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ನಾಯಕತ್ವವು ಮಿತ್ರಪಕ್ಷಗಳಿಗೆ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಪಕ್ಷ ತನ್ನ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.