Sunita Williams: ಸುನೀತಾ ವಿಲಿಯಮ್ಸ್‌ ಭಾರತದ ನಂಟು ಹೇಗೆ, ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹಿರಿಮೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sunita Williams: ಸುನೀತಾ ವಿಲಿಯಮ್ಸ್‌ ಭಾರತದ ನಂಟು ಹೇಗೆ, ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹಿರಿಮೆ

Sunita Williams: ಸುನೀತಾ ವಿಲಿಯಮ್ಸ್‌ ಭಾರತದ ನಂಟು ಹೇಗೆ, ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹಿರಿಮೆ

Sunita Williams: ಸುನೀತಾ ವಿಲಿಯಮ್ಸ್‌ ಮೂಲದ ಭಾರತದ ಗುಜರಾತ್‌. ಅವರ ತಂದೆ ದೀಪಕ್‌ ಪಾಂಡ್ಯ ಅವರು ವರ್ಷಗಳ ಹಿಂದೆಯೇ ಅಮೆರಿಕ ಸೇರಿ ಅಲ್ಲಿನವರನ್ನು ಮದುವೆಯಾಗಿ ಅದೇ ದೇಶದ ನಿವಾಸಿಯೂ ಆದರು. ಅವರ ಪುತ್ರಿಯೇ ಸುನೀತಾ ವಿಲಿಯಮ್ಸ್‌ ಎಂಬ ಅರವತ್ತು ವರ್ಷದ ಹೆಮ್ಮೆಯ ಗಗನಯಾತ್ರಿ.

ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್‌ ಸಾಧನೆ ಹೆಮ್ಮೆಪಡುವಂತದ್ದು
ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್‌ ಸಾಧನೆ ಹೆಮ್ಮೆಪಡುವಂತದ್ದು

Sunita Williams:ಸುನೀತಾ ವಿಲಿಯಮ್ಸ್‌ ಎಂಬ ಹೆಸರು ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅದೂ ಸತತ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶವೆಂಬ ಕಾಣದ ಜಗತ್ತಿನಲ್ಲಿ ಸಿಲುಕಿ ಹಾಕಿಕೊಂಡು ಸುರಕ್ಷಿತವಾಗಿ ಮರಳಿದ ಸುನೀತಾ ಸಾಹಸದ ಬಗ್ಗೆಯೂ ಚರ್ಚೆಗಳು ನಡೆದಿವೆ. ಸುನೀತಾ ಎನ್ನುವ ಹೆಸರು ಕೇಳಿದೊಡನೆ ಥಟ್ಟನೆ ನೆನಪಾಗೋದು ಭಾರತೀಯರೆ ಇರಬೇಕು ಎನ್ನುವುದು. ಇದರೊಟ್ಟಿಗೆ ಇರುವ ವಿಲಿಯಮ್ಸ್‌ ಎಂಬ ಹೆಸರು ಹೇಗೆ ಬಂತು, ಯಾರೀ ಸುನೀತಾ ಎನ್ನುವ ಆಸಕ್ತಿ ಸಹಜವಾಗಿಯೇ ಬಾಹ್ಯಾಕಾಶದ ಬೆಳವಣಿಗೆಗಳನ್ನು ಗಮನಿಸುತ್ತಿರುವವರಿಗೆ ಇದ್ದೇ ಇರುತ್ತದೆ. ಸ ಸುನೀತಾ ಅವರು ಭಾರತದ ಮೂಲದವರೇ. ಅವರ ಮೊದಲ ಹೆಸರು ಸುನೀತಾ ಪಾಂಡ್ಯ. ಅವರ ತಂದೆ ಭಾರತದ ಗುಜರಾತ್‌ ಮೂಲದವರು. ಬಹುತೇಕ ಶತಮಾನದ ಹಿಂದೆಯೇ ಅವರು ಭಾರತದಿಂದ ಅಮೆರಿಕಕ್ಕೆ ಹೋದವರು. ಅಮೆರಿಕದವರನ್ನೇ ಮದುವೆಯಾಗಿ ಅಲ್ಲಿನ ನಿವಾಸಿಯೇ ಆಗಿಬಿಟ್ಟರು. ಅಮೆರಿಕದಲ್ಲಿಯೇ ಜನಿಸಿ ಅಲ್ಲಿಯೇ ಇದು ದೊಡ್ಡ ಹೆಸರು ಮಾಡಿದ ಸುನೀತಾ ಭಾರತ ಮೂಲದವರೆಂಬ ಹೆಮ್ಮೆ.

ಸುನೀತಾ ವಿಲಿಯಮ್ಸ್ ಮೂಲತಃ ಅಮೇರಿಕನ್ ಗಗನಯಾತ್ರಿ. ಅವರು ಬಾಹ್ಯಾಕಾಶಕ್ಕೆ ಹೋದ ಭಾರತೀಯ ಹಿನ್ನೆಲೆಯ ಎರಡನೇ ಅಮೆರಿಕ ಗಗನಯಾತ್ರಿ. ಕಲ್ಪನಾ ಚಾವ್ಲಾ ಮೊದಲಿಗರು. 2003ರಲ್ಲಿ ಬಾಹ್ಯಾಕಾಶದಿಂದ ಭೂಮಿಗೆ ಹಿಂತಿರುಗುತ್ತಿದ್ದಾಗ ಕೊಲಂಬಿಯಾ ಬಾಹ್ಯಾಕಾಶ ನೌಕೆ ಮುರಿದು ಬಿದ್ದು ಅವರು ನಿಧನರಾದರು. ವಿಲಿಯಮ್ಸ್ 2006 ಮತ್ತು 2012 ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತನ್ನ ಎರಡು ಬಾರಿಯ ಯಶಸ್ವಿ ಭೇಟಿಯ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಸುನೀತಾ ಭಾರತದ ನಂಟು ಹೇಗೆ

ಸುನೀತಾ ವಿಲಿಯಮ್ಸ್‌ ಅಥವಾ ಸುನೀತಾ ಪಾಂಡ್ಯ ಜನಿಸಿದ್ದು 1965 ರ ಸೆಪ್ಟೆಂಬರ್ 19 ರಂದು. ಅವರಿಗೆ ಈಗ 60 ವರ್ಷ. ಅಮೆರಿಕದ ಓಹಿಯೋದ ಯೂಕ್ಲಿಡ್‌ ಅವರ ಜನ್ಮಸ್ಥಳ. ಅವರ ತಂದೆ ದೀಪಕ್‌ ಪಾಂಡ್ಯ ಅವರು ಗುಜರಾತ್‌ ಮೂಲದವರು. ಅವರ ತಾಯಿ ಬೊನ್ನಿ ಪಾಂಡ್ಯ ಸ್ಲೊವೇನಿಯಾದವರು. ಸುನೀತಾಗೆ ಇಬ್ಬರು ಸಹೋದರರು. ದಿನಾ ಅನ್ನದ್‌, ಜೇ ಥಾಮಸ್.‌ ಸುನೀತಾ ಮ್ಯಾಸಚೂಸೆಟ್ಸ್‌ನ ನೀಧಾಮ್‌ನಲ್ಲಿ ಬೆಳೆದದ್ದು. ಅವರು 1983 ರಲ್ಲಿ ನೀಧಾಮ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು.

ಸುನೀತಾ ಕನಸು ಇದ್ದುದು ಅಮೆರಿಕದಲ್ಲಿ ಪೈಲಟ್‌ ಆಗುವುದು. ಅದರಂತೆ ಮೇರಿಲ್ಯಾಂಡ್‌ನ ಅನಾಪೊಲಿಸ್‌ನಲ್ಲಿರುವ ಯುಎಸ್ ನೇವಲ್ ಅಕಾಡೆಮಿಗೆ ಸೇರಿದರು. ಸುನೀತಾ 1987 ರಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಅವರು ನೇವಲ್ ಅಕಾಡೆಮಿಯಲ್ಲಿ ಭೇಟಿಯಾದ ಮೈಕೆಲ್ ವಿಲಿಯಮ್ಸ್ ಅವರನ್ನು ವಿವಾಹವಾಗಿ ಬದಲಾದದ್ದು ಸುನೀತಾ ವಿಲಿಯಮ್ಸ್‌ ಆಗಿ.

1987 ರಲ್ಲಿ ವಿಲಿಯಮ್ಸ್ ನೌಕಾ ವಾಯುಯಾನ ತರಬೇತಿ ಕಮಾಂಡ್‌ನಲ್ಲಿ ಪೈಲಟ್ ತರಬೇತಿಯನ್ನು ಶುರು ಮಾಡಿದರು. ಜುಲೈ 1989 ರಲ್ಲಿ ಯುದ್ಧ ಹೆಲಿಕಾಪ್ಟರ್ ತರಬೇತಿಗೂ ಸುನೀತಾ ಮುಂದಾದರು . ಪರ್ಷಿಯನ್ ಕೊಲ್ಲಿ ಯುದ್ಧದ ತಯಾರಿಯ ಸಮಯದಲ್ಲಿ ಮತ್ತು 1992 ರಲ್ಲಿ ಫ್ಲೋರಿಡಾದ ಮಿಯಾಮಿಯಲ್ಲಿ ಆಂಡ್ರ್ಯೂ ಚಂಡಮಾರುತದ ಸಮಯದಲ್ಲಿ ಪರಿಹಾರ ಕಾರ್ಯಾಚರಣೆಗಳಲ್ಲಿ ಅವರು ಹೆಲಿಕಾಪ್ಟರ್‌ ಪೈಲಟ್‌ ಆಗಿ ಕೆಲಸ ಮಾಡಿದ್ದು ವಿಶೇಷ.

1993 ರಲ್ಲಿ ಅವರು ನೌಕಾ ಪರೀಕ್ಷಾ ಪೈಲಟ್ ಮತ್ತು ನಂತರ ಪರೀಕ್ಷಾ ಪೈಲಟ್ ಬೋಧಕ ವೃತ್ತಿಯನ್ನೂ ಆರಂಭಿಸಿದರು. ವಿಲಿಯಮ್ಸ್ ವಿಭಿನ್ನ ವಿಮಾನಗಳನ್ನು ಹಾರಿಸಿದ ಅನುಭವವನ್ನೂ ಹೊಂದಿದ್ದು ಕೂಡ ಬೋಧಕ ವೃತ್ತಿಗೆ ಬಲ ತಂದಿತು. 3000 ಕ್ಕೂ ಹೆಚ್ಚು ಹಾರಾಟದ ಗಂಟೆಗಳು ಸುನೀತಾ ವೃತ್ತಿಪರತೆಯನ್ನು ತೋರಿತು.

ಮೊದಲ ಯಾನಕ್ಕೂ ಮುನ್ನ

ಆದರೆ ಸುನೀತಾ ಓದಿನ ಆಸಕ್ತಿ ಮಾತ್ರ ಕಡಿಮೆಯಾಗಿರಲಿಲ್ಲ. 1995 ರಲ್ಲಿ ವಿಲಿಯಮ್ಸ್ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಅದೇ ಅವರ ಬದುಕಿನ ಮೈಲಿಗಲ್ಲು ಎನ್ನುವಂತೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ನಿಂದ ಗಗನಯಾತ್ರಿಯಾಗಲು ಆಯ್ಕೆಯಾದರು. ತಮ್ಮ ಬಹುಕಾಲದ ಕನಸು ಈಡೇರಿದ ಖುಷಿ ಅವರದ್ದಾಗಿತ್ತು. ಅವರು 1998 ರಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತರಬೇತಿಗಾಗಿ ರಷ್ಯಾದ ಮಾಸ್ಕೋಗೆ ಪ್ರಯಾಣ ಬೆಳೆಸಿದರು. ಆರೇಳು ವರ್ಷಗಳ ತರಬೇತಿ, ಕಲಿಕೆ ಅವರಲ್ಲಿ ಒಬ್ಬ ಗಗನಯಾತ್ರಿಯನ್ನಾಗಿ ರೂಪಿಸಿತ್ತು.

2006 ರ ಡಿಸೆಂಬರ್ 9ರಂದು, ವಿಲಿಯಮ್ಸ್ ಡಿಸ್ಕವರಿ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಬಾರಿಗೆ ಹಾರಿದರು. ಅಲ್ಲಿದ್ದಾಗ, ಅವರು ನಾಲ್ಕು ಬಾಹ್ಯಾಕಾಶ ನಡಿಗೆಗಳಲ್ಲಿ ಭಾಗಿಯಾದರು. ಒಟ್ಟು 29 ಗಂಟೆಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶ ನೌಕೆಯ ಹೊರಗೆ ನಡೆದದ್ದು ಅವರ ಹೆಜ್ಜೆ ಗುರುತು ಮೂಡಿಸಿತು. ಆಗ ಅವರು 195 ದಿನಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ದಾಖಲೆಯನ್ನೂ ಬರೆದರು. ಟ್ರೆಡ್‌ಮಿಲ್ ಬಳಸಿ, ಕಕ್ಷೆಯಲ್ಲಿದ್ದಾಗ ಬೋಸ್ಟನ್ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ವಿಲಿಯಮ್ಸ್ ಎಂಬ ಹಿರಿಮೆಯೂ ಅವರದ್ದು. ಅವರು 2007ರ ಜೂನ್ 22 ರಂದು ಭೂಮಿಗೆ ಮರಳಿದರು.

ಎರಡನೇ ಯಾತ್ರೆ

2012 ರ ಜುಲೈ 15ರಂದು ಸುನೀತಾ ವಿಲಿಯಮ್ಸ್ ಮತ್ತೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದರು. ಅವರು ಈ ಅವಧಿಯಲ್ಲಿ 21 ಗಂಟೆಗಳಿಗಿಂತ ಹೆಚ್ಚು ಕಾಲ ಮೂರು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದರು. ಸುಮಾರು 127 ದಿನಗಳ ಬಾಹ್ಯಾಕಾಶ ವಾಸದ ನಂತರ, ವಿಲಿಯಮ್ಸ್ ಅದೇ ವರ್ಷದ ನವೆಂಬರ್ 11 ರಂದು ಭೂಮಿಗೆ ಮರಳಿದರು.

ಅವರ ಎರಡು ಪ್ರವಾಸಗಳು ಒಟ್ಟಾಗಿ 321 ದಿನಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದ ದಾಖಲೆ ಹೊಂದಿದೆ. ಇದು ಅಮೆರಿಕದ ಗಗನಯಾತ್ರಿ ಪೆಗ್ಗಿ ವಿಟ್ಸನ್ ನಂತರ ಎರಡನೆಯವರಾಗಿ ಹಾಗೂ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಸಮಯ ಕಳೆದ ಮೊದಲ ಮಹಿಳೆ ಎಂಬ ಹಿರಿಮೆಯೂ ಸುನೀತಾ ಪಾತ್ರರಾಗಿದ್ದಾರೆ.

ಮೂರನೇ ಸುದೀರ್ಘ ಅನುಭವ

ಜೂನ್ 2024 ರಲ್ಲಿ, ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಸ್ಟಾರ್‌ಲೈನರ್ ಎಂಬ ಹೊಸ ಬಾಹ್ಯಾಕಾಶ ನೌಕೆಯೊಂದಿಗೆ ಹಾರಿದರು. ಈ ಕಾರ್ಯಾಚರಣೆಯು ಸುಮಾರು ಒಂದು ವಾರದವರೆಗೆ ಇರಬೇಕಿತ್ತು, ಆದರೆ ಸ್ಟಾರ್‌ಲೈನರ್‌ನಲ್ಲಿದ್ದ ಸಮಸ್ಯೆಗಳು ಅವರನ್ನು ಸತತ ಒಂಬತ್ತು ತಿಂಗಳು ಅಲ್ಲಿಯೇ ಉಳಿಯುವಂತೆ ಮಾಡಿತು. ಅಮೆರಿಕದ ಸತತ ಪ್ರಯತ್ನದ ಫಲವಾಗಿ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್‌ ಮೂರನೇ ಸುದೀರ್ಘ ಪ್ರವಾಸವನ್ನು ಬಾಹ್ಯಾಕಾಶದಲ್ಲಿ ಮುಗಿಸಿ ಭೂಮಿಗೆ ಮರಳಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.