ತಹವ್ವುರ್ ರಾಣಾ ಯಾರು, ಆತ ಭಾರತದ ಮೇಲೆ ಹೇಗೆ ಉಗ್ರ ದಾಳಿ ನಡೆಸಿದ, ಇಂಡಿಯಾ ಗೇಟ್‌ ಕೂಡ ಆತನ ಟಾರ್ಗೆಟ್‌ನಲ್ಲಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಹವ್ವುರ್ ರಾಣಾ ಯಾರು, ಆತ ಭಾರತದ ಮೇಲೆ ಹೇಗೆ ಉಗ್ರ ದಾಳಿ ನಡೆಸಿದ, ಇಂಡಿಯಾ ಗೇಟ್‌ ಕೂಡ ಆತನ ಟಾರ್ಗೆಟ್‌ನಲ್ಲಿತ್ತು

ತಹವ್ವುರ್ ರಾಣಾ ಯಾರು, ಆತ ಭಾರತದ ಮೇಲೆ ಹೇಗೆ ಉಗ್ರ ದಾಳಿ ನಡೆಸಿದ, ಇಂಡಿಯಾ ಗೇಟ್‌ ಕೂಡ ಆತನ ಟಾರ್ಗೆಟ್‌ನಲ್ಲಿತ್ತು

Tahawwur Hussain Rana: ಮುಂಬಯಿ ದಾಳಿ ಸಂಚುಕೋರ ತಹವ್ವುರ್ ರಾಣಾನನ್ನು ಭಾರತಕ್ಕೆ ಇಂದು ಕರೆತರುವ ಸಾಧ್ಯತೆ ಇದೆ. ತಹವ್ವುರ್ ರಾಣಾ ಯಾರು, ಆತ ಭಾರತದ ಮೇಲೆ ಹೇಗೆ ಉಗ್ರ ದಾಳಿ ನಡೆಸಿದ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ 26/11 ಮುಂಬಯಿ ದಾಳಿಯ ಸಂಚುಕೋರತಹವುರ್ ಹುಸೇನ್ ರಾಣಾ
ಭಾರತದಲ್ಲಿ 26/11 ಮುಂಬಯಿ ದಾಳಿಯ ಸಂಚುಕೋರತಹವುರ್ ಹುಸೇನ್ ರಾಣಾ

Tahawwur Hussain Rana: ಭಾರತದಲ್ಲಿ 26/11ರ ಮುಂಬಯಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹವ್ವುರ್ ಹುಸೇನ್‌ ರಾಣಾನನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಈ ನಡುವೆ, ಆತ ರೂಪಿಸಿದ್ದ ಸಂಚಿನ ಪ್ರಕಾರ ಭಾರತದಲ್ಲಿ ನಡೆದ ಉಗ್ರ ದಾಳಿಗಳ ವಿಚಾರಗಳು ಒಂದೊಂದಾಗಿ ಚರ್ಚೆಗೆ ಬರತೊಡಗಿವೆ. ಮುಂಬಯಿ ದಾಳಿಗೂ ಮುನ್ನ ತಹವ್ವುರ್ ರಾಣಾ ಭಾರತಕ್ಕೆ ಭೇಟಿ ನೀಡಿದ್ದ. ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಕೂಡ ರಾಣಾ ನಿಕಟ ಸಂಪರ್ಕದಲ್ಲಿದ್ದ ಎಂದು ವರದಿಯಾಗಿದೆ. ಇದಲ್ಲದೆ, ಇಂಡಿಯಾ ಗೇಟ್ ಸೇರಿದಂತೆ ಇತರ ಅನೇಕ ಪ್ರಮುಖ ಸ್ಥಳಗಳು ಅವನ ಸಂಚಿನ ಟಾರ್ಗೆಟ್ ಆಗಿದ್ದವು ಎಂಬ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿವೆ.

ಉಗ್ರರು ಮತ್ತು ಭಾರತದಲ್ಲಿ ಅವರ ಟಾರ್ಗೆಟ್‌ಗಳು

ತಹವ್ವುರ್ ರಾಣಾ ಮತ್ತು ಹೆಡ್ಲಿ ಸೇರಿದಂತೆ ಕೆಲವು ಭಯೋತ್ಪಾದಕರು ಇನ್ನೂ ಅನೇಕ ಸ್ಥಳಗಳನ್ನು ಗುರಿಯಾಗಿಸಲು ಯೋಜಿಸಿದ್ದರು. ಇವುಗಳಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜ್, ದೆಹಲಿಯ ಇಂಡಿಯಾ ಗೇಟ್ ಮತ್ತು ಹಲವಾರು ಯಹೂದಿ ಕೇಂದ್ರಗಳು ಸೇರಿವೆ. ರಾಣಾ ಮತ್ತು ಹೆಡ್ಲಿ ಜೊತೆಗೆ, ಹಫೀಜ್ ಸಯೀದ್, ಝಾಕಿಯುರ್ ರೆಹಮಾನ್ ಲಖ್ವಿ, ಇಲ್ಯಾಸ್ ಕಾಶ್ಮೀರಿ, ಸಾಜಿದ್ ಮಿರ್ ಮತ್ತು ಮೇಜರ್ ಇಕ್ಬಾಲ್ ಈ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಚಾರ್ಜ್‌ ಶೀಟ್‌ನಲ್ಲಿ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ತಹವ್ವುರ್ ರಾಣಾ ಮತ್ತು ಡೇವಿಡ್‌ ಹೆಡ್ಲಿ

ವರದಿಯ ಪ್ರಕಾರ, ತಹವುರ್‌ ರಾಣಾ ಮುಂಬಯಿಯ 26/11 ದಾಳಿಗೂ ಮುನ್ನ ಡೇವಿಡ್‌ ಹೆಡ್ಲಿಯೊಂದಿಗೆ 231 ಬಾರಿ ಮಾತನಾಡಿದ್ದಾನೆ. ದಾಳಿಯ ಮೊದಲು ಕೊನೆಯ ಬಾರಿ ಭಾರತಕ್ಕೆ ಭೇಟಿ ನೀಡಿದಾಗ, ಅತಿ ಹೆಚ್ಚು 66 ಮಾತುಕತೆಗಳು ನಡೆದಿರುವುದನ್ನು ತನಿಖಾ ಸಂಸ್ಥೆಗಳು ದೃಢೀಕರಿಸಿವೆ. ಹೆಡ್ಲಿಯನ್ನು ಭಾರತಕ್ಕೆ ಕರೆತರಲು ರಾಣಾ ಅವರ ಕಂಪನಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಅನ್ನು ಬಳಸಲಾಗಿದೆ ಎಂಬ ಅಂಶ ಭಾರತ ಮತ್ತು ಯುಎಸ್ ತನಿಖೆಯಿಂದ ತಿಳಿದುಬಂದಿದೆ.

ಅಮೆರಿಕದಲ್ಲಿ ನಡೆದ ಸಭೆಯಲ್ಲಿ ಹೆಡ್ಲಿ ಮತ್ತು ರಾಣಾ ನಡುವೆ ಭವಿಷ್ಯದ ಬಗ್ಗೆಯೂ ಮಾತುಕತೆ ನಡೆಸಿದ್ದರು. ರಾಣಾ ಭಾರತದಲ್ಲಿದ್ದಾಗ ಒಟ್ಟು 8 ಬೇಹುಗಾರಿಕೆ ಕಾರ್ಯಾಚರಣೆಗಳನ್ನು ನಡೆಸಿದ್ದ ಎಂದು ವರದಿಯಾಗಿದೆ.

ತಹವ್ವುರ್ ರಾಣಾ ಯಾರು

ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾದ ತಹವ್ವುರ್ ಹುಸೇನ್ ರಾಣಾ ಅವರನ್ನು ಶೀಘ್ರದಲ್ಲೇ ಯುನೈಟೆಡ್ ಸ್ಟೇಟ್ಸ್‌ನಿಂದ ಭಾರತಕ್ಕೆ ಕರೆತರಬಹುದು. 166 ಜನರ ಸಾವಿಗೆ ಕಾರಣವಾದ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾ ಪಾತ್ರವಹಿಸಿರುವುದಾಗಿ ಆರೋಪಿಸಲಾಗಿದೆ. ತಹವ್ವುರ್ ರಾಣಾ (64) ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಚಾವತ್ನಿ ನಗರದಲ್ಲಿ ಜನಿಸಿದ್ದು, ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಪಾಕಿಸ್ತಾನ ಸೈನ್ಯದ ವೈದ್ಯಕೀಯ ದಳಕ್ಕೆ ಸೇರ್ಪಡೆಗೊಂಡಿದ್ದ. 1990 ರ ದಶಕದ ಉತ್ತರಾರ್ಧದಲ್ಲಿ, ರಾಣಾ ಪಾಕ್ ಸೇನೆ ತೊರೆದು ಕೆನಡಾಕ್ಕೆ ವಲಸೆ ಹೋಗಿದ್ದ. ಅಲ್ಲಿ ಪೌರತ್ವವನ್ನು ಪಡೆದರು. ನಂತರ ಅವರು ಯುಎಸ್‌ಗೆ ತೆರಳಿ ಷಿಕಾಗೋದಲ್ಲಿ ತಮ್ಮ ವಲಸೆ ವ್ಯವಹಾರವನ್ನು 'ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್' ವಹಿವಾಟು ಶುರುಮಾಡಿದ್ದ.

ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದ ಬಳಿಕ ಮುಂದೇನು

ಈಗ, ರಾಣಾ ಅವರನ್ನು ವಿಚಾರಣೆ ನಡೆಸುವವರು ದಾಳಿ, ಐಎಸ್ಐ ಜಾಲ, ಎಲ್ಇಟಿಯ ಸಹಾಯಕರು ಮತ್ತು ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಅಮೆರಿಕದಿಂದ ಭಾರತಕ್ಕೆ ಕರೆತಂದ ನಂತರ ರಾಣಾ ಅವರನ್ನು ದೆಹಲಿಯ ತಿಹಾರ್ ಜೈಲಿನ ಹೆಚ್ಚಿನ ಭದ್ರತೆ ಇರುವ ಸೆಲ್‌ನಲ್ಲಿ ಇರಿಸುವ ಸಾಧ್ಯತೆಯಿದೆ. ರಾಣಾ ಅವರನ್ನು ಜೈಲಿನಲ್ಲಿಡಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಮತ್ತು ಜೈಲು ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕಾಗಿ ಕಾಯಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.