ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು, ಡಿಎಂಕೆ ನಾಯಕನ ಪುತ್ರ ಉದಯ ಕುಮಾರ್ ಧರ್ಮಲಿಂಗಂ ಬಗ್ಗೆ ತಿಳಿದಿರಬೇಕಾದ 5 ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು, ಡಿಎಂಕೆ ನಾಯಕನ ಪುತ್ರ ಉದಯ ಕುಮಾರ್ ಧರ್ಮಲಿಂಗಂ ಬಗ್ಗೆ ತಿಳಿದಿರಬೇಕಾದ 5 ಅಂಶಗಳಿವು

ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು, ಡಿಎಂಕೆ ನಾಯಕನ ಪುತ್ರ ಉದಯ ಕುಮಾರ್ ಧರ್ಮಲಿಂಗಂ ಬಗ್ಗೆ ತಿಳಿದಿರಬೇಕಾದ 5 ಅಂಶಗಳಿವು

Rupee Symbol Designer: ಭಾರತದ ಅಧಿಕೃತ ಕರೆನ್ಸಿಯ ರೂಪಾಯಿ ₹ ಚಿಹ್ನೆ ವಿನ್ಯಾಸ ಮಾಡಿದವರು ಯಾರು ಎಂಬುದು ಸದ್ಯದ ಕುತೂಹಲ. ತಮಿಳುನಾಡಿನವರಾದ ಉದಯ ಕುಮಾರ್ ಧರ್ಮಲಿಂಗಂ ಅವರು ಡಿಎಂಕೆ ನಾಯಕನ ಪುತ್ರನಾ ಎಂಬಿತ್ಯಾದಿ ಸಂದೇಹಗಳು. ಇಲ್ಲಿವೆ ಅವರನ್ನು ಪರಿಚಯಿಸಬಲ್ಲ 5 ಅಂಶಗಳು.

ಉದಯ ಕುಮಾರ್ ಧರ್ಮಲಿಂಗಂ ಭಾರತದ ಅಧಿಕೃತ ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು.
ಉದಯ ಕುಮಾರ್ ಧರ್ಮಲಿಂಗಂ ಭಾರತದ ಅಧಿಕೃತ ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು. (Facebook)

Rupee Symbol Designer: ತಮಿಳುನಾಡು ಬಜೆಟ್‌ ಪುಸ್ತಕದ ಮೇಲಿನ ಲಾಂಛನದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಭಾಷೆಯ ರು ಅಕ್ಷರಕ್ಕೆ ಬದಲಾಯಿಸಿದ್ದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ತಮ್ಮ ಟ್ವೀಟ್‌ನಲ್ಲಿ ಅಧಿಕೃತ ರೂಪಾಯಿ ಸಂಕೇತ ವಿನ್ಯಾಸ ಮಾಡಿದ್ದು ತಮಿಳುನಾಡಿನ ಡಿಎಂಕೆ ನಾಯಕ, ಮಾಜಿ ಶಾಸಕರ ಪುತ್ರ ಎಂದು ಬರೆದುಕೊಂಡಿರುವುದು ಈ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾದರೆ ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು? ಉದಯ ಕುಮಾರ್ ಧರ್ಮಲಿಂಗಂ ಡಿಎಂಕೆ ನಾಯಕನ ಪುತ್ರನಾ ಎಂಬ ವಿಚಾರಗಳು ಈಗ ಚರ್ಚೆಗೆ ಗ್ರಾಸವಾಗಿದೆ.

ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದ್ದು ತಮಿಳುನಾಡು ಮೂಲದ ಉದಯ ಕುಮಾರ್‌ ಧರ್ಮಲಿಂಗಂ. ಭಾರತದ ಅಧಿಕೃತ ಕರೆನ್ಸಿ ರೂಪಾಯಿಯ ಚಿಹ್ನೆಯಾಗಿ ಅದು 2010ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂಗೀಕರಿಸಲ್ಪಟ್ಟು ಚಲಾವಣೆಗೆ ಬಂದಿದೆ.

ಉದಯ ಕುಮಾರ್ ಧರ್ಮಲಿಂಗಂ ಯಾರು; ಅವರ ಬಗ್ಗೆ ತಿಳಿದರಬೇಕಾದ 5 ಅಂಶಗಳು

1) ಭಾರತದ ರೂಪಾಯಿ ಚಿಹ್ನೆಯ ಅಧಿಕೃತ ವಿನ್ಯಾಸಕಾರ: ತಮಿಳುನಾಡಿನ ಕಳ್ಳಕುರುಚ್ಚಿ ಮೂಲದವರು ಉದಯ ಕುಮಾರ್ ಧರ್ಮಲಿಂಗಂ. ತಂದೆ ಎನ್ ಧರ್ಮಲಿಂಗಂ. ಡಿಎಂಕೆ ನಾಯಕ. ತಮಿಳುನಾಡಿನ ರಿಷಿವಾಂಡಿಯಂ ಕ್ಷೇತ್ರದ ಮಾಜಿ ಶಾಸಕ. ಉದಯ ಕುಮಾರ್ ಧರ್ಮಲಿಂಗಂ ಅವರು ಸದ್ಯ ಗುವಾಹಟಿ ಐಐಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

2) 2010ರಲ್ಲಿ ರೂಪಾಯಿ ಚಿಹ್ನೆ ಅಂಗೀಕಾರ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಭಾರತದ ಅಧಿಕೃತ ಕರೆನ್ಸಿಗೆ ಚಿಹ್ನೆ ಬೇಕು ಎಂಬ ಕಾರಣಕ್ಕೆ ಸ್ಪರ್ಧೆಯನ್ನು ಆಯೋಜಿಸಿತ್ತು. ಅದರಲ್ಲಿ ಉದಯ ಕುಮಾರ್ ಧರ್ಮಲಿಂಗಂ ಭಾಗವಹಿಸಿದ್ದರು. ಅವರು ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆ ಬಹುಮಾನ ಪಡೆದಿತ್ತು. ಅದೇ ಚಿಹ್ನೆಯನ್ನು ಅಧಿಕೃತವೆಂದು ಮಾನ್ಯ ಮಾಡಿ ಚಲಾವಣೆಗೆ ತಂದಿದೆ.

3) ರೂಪಾಯಿ ಚಿಹ್ನೆ ಭಾರತದ ಗುರುತು: ಜಾಗತಿಕ ಹಣಕಾಸು ವಹಿವಾಟಿನಲ್ಲಿ ಭಾರತದ ಆರ್ಥಿಕ ಶಕ್ತಿಯಾಗಿ ಮತ್ತು ಅಸ್ಮಿತೆಯಾಗಿ ರೂಪಾಯಿ ಚಿಹ್ನೆ ಬಳಕೆಯಲ್ಲಿದೆ. 3300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ರೂಪಾಯಿ ಚಿಹ್ನೆ ವಿನ್ಯಾಸಗೊಳಿಸುವ ಸ್ಪರ್ಧೆಯಲ್ಲಿ ಉದಯ ಕುಮಾರ್ ಅವರ ವಿನ್ಯಾಸವನ್ನು ಹಣಕಾಸು ಸಚಿವಾಲಯ ಆಯ್ಕೆ ಮಾಡಿತ್ತು.

4) ರೂಪಾಯಿ ಚಿಹ್ನೆಗೆ ಕೊಟ್ಟ ವಿವರಣೆ: ಉದಯ ಕುಮಾರ್ ಅವರು ತಾವು ಮಾಡಿದ ರೂಪಾಯಿ ಚಿಹ್ನೆ ವಿನ್ಯಾಸಕ್ಕೆ ವಿವರಣೆಯನ್ನೂ ಕೊಟ್ಟಿದ್ದರು. ದೇವನಾಗರಿ ಅಕ್ಷರ ರ ಹಾಗೂ ರೋಮನ್ ಅಕ್ಷರ ಆರ್‌ ಎರಡರ ಸಮ್ಮಿಳನ. ಸಮ ಚಿಹ್ನೆಯನ್ನೂ ಅದಕ್ಕೆ ಸೇರಿದ್ದು, ಅದು ಭಾರತದ ರಾಷ್ಟ್ರಧ್ವಜವನ್ನು ಪ್ರತಿನಿಧಿಸುತ್ತದೆ. ಹೀಗೆ ಈ ಚಿಹ್ನೆ ಭಾರತದ ಅಧಿಕೃತ ಕರೆನ್ಸಿ ರೂಪಾಯಿ ಚಿಹ್ನೆಯಾಗಿದೆ ಎಂದು ಹೇಳಿದ್ದರು. ಈ ಚಿಹ್ನೆಯನ್ನು 2010ರ ಜುಲೈ 15 ರಂದು ಅಧಿಕೃತವಾಗಿ ಬಳಸಲು ಆರಂಭಿಸಲಾಗಿದೆ.

5) ಐಐಟಿ ಬಾಂಬೆ ಹಳೆ ವಿದ್ಯಾರ್ಥಿ ಉದಯ ಕುಮಾರ್‌: ಭಾರತದ ಅಧಿಕೃತ ರೂಪಾಯಿ ಚಿಹ್ನೆ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿ. ಡಿಸೈನ್ ವಿಷಯದಲ್ಲಿ ಸ್ನಾತಕೋತ್ತರ ಪದವೀಧರ. ಚೆನ್ನೈನ ಲಾ ಚಾಟೆಲೈನ್‌ ಜ್ಯೂನಿಯರ್ ಕಾಲೇಜಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. 2001ರಲ್ಲಿ ಅಣ್ಣಾ ವಿವಿಯ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ಆಂಡ್ ಪ್ಲಾನಿಂಗ್‌ನಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಚ್ ವ್ಯಾಸಂಗ ಮಾಡಿದ್ದರು. ಐಐಟಿ ಬಾಂಬೆಯ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್‌ನಿಂದ 2003ರಲ್ಲಿ ಸ್ನಾತಕೋತ್ತರ ಪದವಿ (ಎಂಡಿಇಎಸ್) ವಿಷುವಲ್ ಕಮ್ಯೂನಿಷಕೇಷನ್ಸ್‌ ವಿಷಯದಲ್ಲಿ ಪಡೆದರು. 2010ರಲ್ಲಿ ಪಿಎಚ್‌ಡಿ ಪಡೆದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.