ಕನ್ನಡ ಸುದ್ದಿ  /  Nation And-world  /  Who Says Probing Four Indian Cough Syrups After 66 Children Die In Gambia

Maiden Pharmaceuticals: ಭಾರತೀಯ ಮೂಲದ ಕಂಪನಿಯ ಕೆಮ್ಮಿನ ಸಿರಪ್‌ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು?: ತನಿಖೆಗೆ ಮುಂದಾದ WHO!

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ ಕಂಪನಿ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೆ ಈ ಸಿರಪ್‌ ಸೇವನೆಯೇ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಕೂಡಲೇ ತನಿಖೆಯನ್ನು ಕೈಗೆತ್ತಿಕೊಳ್ಳುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ ಕಂಪನಿ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೆ ಈ ಸಿರಪ್‌ ಸೇವನೆಯೇ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಕೂಡಲೇ ತನಿಖೆಯನ್ನು ಕೈಗೆತ್ತಿಕೊಳ್ಳುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಭಾರತೀಯ ಕಂಪನಿಯಾದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಮತ್ತು ಶೀತ ಸಿರಪ್‌ಗಳ ವೈದ್ಯಕೀಯ ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನವಿದೆ ಎಂದಿರುವ WḨ̧O ಇದರಲ್ಲಿ ಬಳಕೆ ಮಾಡಲಾದ ರಾಸಾಯನಿಕಗಳು ವಿಷಕಾರಿ ಮತ್ತು ಮಾರಣಾಂತಿಕವಾಗಿವೆ ಎಂದು ಎಚ್ಚರಿಕೆ ನೀಡಿದೆ.

ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಕೆಮ್ಮಿನ ಸಿರಪ್‌ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವಿಗೀಡಾಗಿರುವ ಶಂಕೆ ಇದೆ. ಈ ಕುರಿತು ತನಿಖೆ ನಡೆಸಿ ಒಂದು ವೇಳೆ ಕಂಪನಿಯ ಉತ್ಫಾದನೆಯಲ್ಲಿ ವಿಷಕಾರಿ ಅಂಶಗಳು ಇರುವುದು ಪತ್ತೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು WHO ಹೇಳಿದೆ.

ನಾಲ್ಕು ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯು, ಈ ಸಿರಪ್‌ಗಳಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಒಳಗೊಂಡಿರುವುದನ್ನು ಖಚಿತಪಡಿಸುತ್ತದೆ. ಈ ಸಿರಪ್‌ ಸೇವನೆಯಿಂದ ಮೂತ್ರಪಿಂಡದಲ್ಲಿ ತೀವ್ರವಾದ ಗಾಯ ಉಂಟಾಗುವ ಅಪಾಯವಿದೆ ಎಂದು WHO ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಜುಲೈ ಅಂತ್ಯದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇದರಿಂದ ಹೆಚ್ಚು ಪೀಡಿತರಾಗಿದ್ದಾರೆ. ಗ್ಯಾಂಬಿಯಾದಲ್ಲಿ 66 ಮಕ್ಕಳು ಈ ಸಿರಪ್‌ ಸೇವೆನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ ಅಸುನೀಗಿದ್ದಾರೆ ಎಂಬ ಶಂಕೆ ಇದೆ ಎಂದು WHO ತಿಳಿಸಿದೆ. ಈ ಔಷಧಿಗಳ ಸೇವನೆಯಿಂದಾಗಿ ಹೊಟ್ಟೆ ನೋವು, ವಾಂತಿ, ಅತಿಸಾರ, ತಲೆನೋವು, ಬದಲಾದ ಮಾನಸಿಕ ಸ್ಥಿತಿ ಮತ್ತು ಮೂತ್ರಪಿಂಡದ ಗಾಯ ಉಲ್ಬಣಿಸಬಹುದು. ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸ್‌, ಕಲುಷಿತ ಉತ್ಪನ್ನಗಳು ಇಲ್ಲಿಯವರೆಗೆ ಗ್ಯಾಂಬಿಯಾದಲ್ಲಿ ಮಾತ್ರ ಪತ್ತೆಯಾಗಿವೆ. ಆದರೆ ಮೇಡನ್ ಫಾರ್ಮಾಸ್ಯುಟಿಕಲ್ಸ್ ಈ ಸಿರಪ್‌ಗಳನ್ನು ಇತರ ದೇಶಗಳಿಗೂ ವಿತರಿಸಿರಬಹುದು. ಹೀಗಾಗಿ ಕೂಡಲೇ ಈ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಫೋರ್ ಮೆಡಿಸಿನ್ಸ್ ಎನ್ನುವುದು ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ ಕಂಪನಿಯಿಂದ ತಯಾರಿಸಲ್ಪಟ್ಟ ಕೆಮ್ಮಿನ ಸಿರಪ್ ಆಗಿದೆ. ಭಾರತದಲ್ಲಿನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳ ಸಹಯೋಗದೊಂದಿಗೆ WHO ಈ ಔಷಧಿಗಳ ಕುರಿತಂತೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ.

WHO ವೈದ್ಯಕೀಯ ಉತ್ಪನ್ನ ಎಚ್ಚರಿಕೆ ಕಳೆದ ಸೆಪ್ಟೆಂಬರ್‌ನಲ್ಲಿ ತಯಾರಿಸಿದ ವರದಿಯಲ್ಲಿ, ನಾಲ್ಕು ಕೆಳದರ್ಜೆಯ ಉತ್ಪನ್ನಗಳನ್ನು ಗುರುತಿಸಿದೆ. ಈ ಎಲ್ಲಾ ಸಿರಪ್‌ಗಳನ್ನು ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸಿದೆ. ಇದೀಗ ಈ ಉತ್ಪನ್ನಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಕೂಡಲೇ ಈ ಸಿರಪ್‌ಗಳ ಬಳಕೆಯನ್ನು ನಿಲ್ಲಿಸುವಂತೆ, ಇವುಗಳನ್ನು ಆಮದು ಮಾಡಿಕೊಂಡ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಆದೇಶ ನೀಡಿದೆ.

ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ ಕಂಪನಿ ತಯಾರಿಸಿದ ನಾಲ್ಕು ಕೆಮ್ಮಿನ ಸಿರಪ್‌ಗಳ ಪರೀಕ್ಷೆ ನಡೆದಿದ್ದು, ಕಂಪನಿ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೊಷಿಸಿದೆ. ಈ ಕುರಿತು ತನಿಖೆ ನಡೆಸುವುದಾಗಿ ಕೇಂದ್ರ ಸರ್ಕಾರ ಕೂಡ ಘೋಷಣೆ ಮಾಡಿದೆ.