ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ

ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ

Mukesh Chandrakar Case: ಮಾವೋವಾದಿಗಳಿಂದ ಯೋಧನನ್ನು ರಕ್ಷಿಸುವಲ್ಲಿ ನೆರವಾಗಿದ್ದ ಯುವ ಪತ್ರಕರ್ತ ಭ್ರಷ್ಟ ವ್ಯವಸ್ಥೆಯ ದ್ವೇಷಕ್ಕೆ ಬಲಿಯಾಗಿರುವ ಕಳವಳಕಾರಿ ಘಟನೆ ಛತ್ತೀಸ್‌ಗಢದ ಬಿಜಾಪುರದಿಂದ ವರದಿಯಾಗಿದೆ. ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ ಯಾರು, ಏನಿದು ಪ್ರಕರಣ, ಇಲ್ಲಿದೆ ವಿವರ.

ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ (ಕಡತ ಚಿತ್ರ)
ಛತ್ತೀಸ್‌ಗಢದಲ್ಲಿ ರಸ್ತೆ ಕಾಮಗಾರಿ ಅಕ್ರಮ ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಗೆ ಬಲಿಯಾದ ಪತ್ರಕರ್ತ ಮುಕೇಶ್‌ ಚಂದ್ರಾಕರ್‌ (ಕಡತ ಚಿತ್ರ) (HT News)

Mukesh Chandrakar Case: ಛತ್ತೀಸ್‌ಗಢದ ಬಿಜಾಪುರದಲ್ಲಿ ರಸ್ತೆ ಕಾಮಗಾರಿ ಗೋಲ್‌ಮಾಲ್‌ ಕುರಿತ ವರದಿ ಪ್ರಕಟಿಸಿ, ಪ್ರಾಣ ಬೆದರಿಕೆ ಎದುರಿಸಿದ್ದ ಪತ್ರಕರ್ತ 28 ವರ್ಷದ ಮುಕೇಶ್ ಚಂದ್ರಾಕರ್‌ ವ್ಯವಸ್ಥೆಯ ದ್ವೇಷಕ್ಕೆ ಬಲಿಯಾಗಿದ್ದಾರೆ. ಜನವರಿ 1 ರಂದು ಕಣ್ಮರೆಯಾಗಿದ್ದ ಮುಕೇಶ್ ಅವರ ಮೃತದೇಹ ಶುಕ್ರವಾರ (ಜನವರಿ 3) ಗುತ್ತಿಗೆದಾರರೊಬ್ಬರ ಸೈಟ್‌ನಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಇದು ಕೊಲೆ ಪ್ರಕರಣವಾಗಿದ್ದು, ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದಲ್ಲದೇ ಇನ್ನಷ್ಟು ಶಂಕಿತರ ವಿಚಾರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕಳವಳಕಾರಿ ಪ್ರಕರಣ ದೇಶದ ಗಮನಸೆಳೆದಿದ್ದು, ಹೊಣೆಗಾರಿಕೆಯುಳ್ಳ ಪತ್ರಕರ್ತರು ನಿತ್ಯಬದುಕಿನಲ್ಲಿ ಎದುರಿಸುವ ಸವಾಲುಗಳ ಕಡೆಗೆ ಬೆಳಕುಚೆಲ್ಲಿದೆ.

ಪತ್ರಕರ್ತ ಮುಕೇಶ್ ಚಂದ್ರಾಕರ್‌ ಹತ್ಯೆ, ಏನಿದು ಪ್ರಕರಣ

ಹೊಸ ವರ್ಷದ ಮೊದಲ ದಿನವಾದ ಜನವರಿ 1 ರಂದು ಸಂಜೆ 7 ಗಂಟೆ ಸುಮಾರಿಗೆ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರು ತಮ್ಮ ಮನೆಯಿಂದ ನಾಪತ್ತೆಯಾದರು. ಮಾರನೇ ದಿನ ಅಂದರೆ ಜನವರಿ 2 ರಂದು ಬೆಳಗ್ಗೆ ಅವರ ಅಣ್ಣ ಯುಕೇಶ್‌ ಚಂದ್ರಾಕರ್ ಅವರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದರು. ಜನವರಿ 3 ರಂದು ಸಂಜೆ ಮುಕೇಶ್ ಅವರ ಸಂಬಂಧಿಕ ಸುರೇಶ್ ಚಂದ್ರಾಕರ್‌ ಅವರ ಬ್ಯಾಡ್ಮಿಂಟನ್ ಕೋರ್ಟ್ ಹತ್ತಿರ ಇದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಕೇಶ್ ಚಂದ್ರಾಕರ್ ಮೃತದೇಹ ಪತ್ತೆಯಾಗಿದೆ.

ಮೃತದೇಹದ ಮೇಲೆ ಶಸ್ತ್ರಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಗುರುತುಗಳಿದ್ದವು. ಮುಕೇಶ್ ಚಂದ್ರಾಕರ್‌ನ ಹತ್ಯೆ ಮಾಡಿ ನಂತರ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ದುಷ್ಕರ್ಮಿಗಳು, ಯಾರಿಗೂ ಅನುಮಾನ ಬಾರದಿರಲಿ ಎಂದು ಆ ಟ್ಯಾಂಕ್‌ನ ಮೇಲೆ 4 ಇಂಚು ಸಿಮೆಂಟ್ ಸ್ಲ್ಯಾಬ್‌ ಇಟ್ಟು ಬಂದ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಕೇಶ್ ಚಂದ್ರಾಕರ್ ಯಾರು; 6 ಮುಖ್ಯ ಅಂಶಗಳು

ಭ್ರಷ್ಟ ವ್ಯವಸ್ಥೆಯ ದ್ವೇಷಕ್ಕೆ ಬಲಿಯಾದ ಛತ್ತೀಸ್‌ಗಢ ಬಿಜಾಪುರದ ಪತ್ರಕರ್ತ ಮುಕೇಶ್ ಚಂದ್ರಾಕರ್ ಯಾರು ಎಂಬ ಕುತೂಹಲ ಸಹಜ. 28 ವರ್ಷದ ಯುವ ಪತ್ರಕರ್ತ ಮುಕೇಶ್ ಬಾಲ್ಯದಲ್ಲೇ ಪಾಲಕರನ್ನು ಕಳೆದುಕೊಂಡಿದ್ದ. ಅಣ್ಣ ಯುಕೇಶ್ ಚಂದ್ರಾಕರ್ ಜತೆಗೆ ವಾಸವಿದ್ದ. ಯುಕೇಶ್ ಕೂಡ ಪತ್ರಕರ್ತ. ಮುಕೇಶ್ ಚಂದ್ರಾಕರ್ ಪರಿಚಯ ಹುಡುಕಿದಾಗ ಗಮನಸೆಳೆದ 6 ಮುಖ್ಯ ಅಂಶಗಳಿವು.

1) ಬಿಜಾಪುರದಲ್ಲಿ 2021ರಲ್ಲಿ ನಡೆದ ಎನ್‌ಕೌಂಟರ್‌ ನಂತರ ಮಾವೋವಾದಿಗಳು ಅಪಹರಿಸಿದ್ದ ಸಿಆರ್‌ಪಿಎಫ್‌ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್‌ ಬಿಡುಗಡೆಯಲ್ಲಿ ಮುಕೇಸ್ ಚಂದ್ರಾಕರ್‌ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕಾಗಿ, ರಾಜ್ಯ ಪೊಲೀಸರು ಅವರನ್ನು ಗೌರವಿಸಿದ್ದರು. ಬಸ್ತರ್‌ ಪ್ರದೇಶದಲ್ಲಿ ನಕ್ಸಲ್ ದಾಳಿ, ಎನ್‌ಕೌಂಟರ್‌ ಮುಂತಾದ ವಿಷಯಗಳು ಸೇರಿ ಜನೋಪಯೋಗಿ ವಿಷಯಗಳ ವರದಿಗಳನ್ನು ಮಾಡುತ್ತಿದ್ದರು.

2) ಪ್ರಮುಖ ಸುದ್ದಿ ಚಾನೆಲ್‌ಗೆ ಬಿಡಿಸುದ್ದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಮುಕೇಶ್ ಚಂದ್ರಾಕರ್ 10 ವರ್ಷಕ್ಕೂ ಹೆಚ್ಚು ಕಾಲದ ವೃತ್ತಿ ಅನುಭವ ಹೊಂದಿದ್ದಾರೆ. ಸ್ಥಳೀಯವಾಗಿ ಬಸ್ತರ್‌ ಜಂಕ್ಷನ್ ಎಂಬ ಯೂಟ್ಯೂಬ್ ಚಾನೆಲ್ ಅನ್ನೂ ಅವರು ನಿರ್ವಹಿಸುತ್ತಿದ್ದರು. ಅದಕ್ಕೆ 1,61,000ಕ್ಕೂ ಹೆಚ್ಚು ಚಂದಾದಾರರು ಇದ್ದಾರೆ.

3) "ಪತ್ರಕರ್ತನಾಗಿ ನನ್ನ ಸಹೋದ್ಯೋಗಿ ಸತ್ಯ ಬಯಲಿಗೆಳೆದು ಅದಕ್ಕೆ ಅಂತಿಮ ಬೆಲೆಯನ್ನೂ ತೆತ್ತಿದ್ದಾರೆ. ಹೊಣೆಗಾರಿಕೆಯುಳ್ಳವರಾಗಿ ನಡೆಯುವಾಗ ಪತ್ರಕರ್ತರು ತಮ್ಮ ನಿತ್ಯ ಬದುಕಿನಲ್ಲಿ ಎದುರಿಸುವ ಅಪಾಯಗಳಿವು. ಅದನ್ನು ಈ ಘಟನೆ ನೆನಪುಮಾಡಿಕೊಟ್ಟಿದೆ. ನಾವು ಮುಕೇಶ್ ಕುಟುಂಬದ ಜತೆಗಿದ್ದೇವೆ. ಮುಕೇಶ್‌ ಚಂದ್ರಾಕರ್ ಮರಣಕ್ಕೆ ನ್ಯಾಯ ಸಲ್ಲಬೇಕು. ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅವರ ತ್ಯಾಗ ವ್ಯರ್ಥವಾಗದು. ಪಾರದರ್ಶಕ ತನಿಖೆ ಮತ್ತು ನಿಷ್ಠುರ ನ್ಯಾಯಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯ ರೆಸಿಡೆಂಟ್ ಎಡಿಟರ್‌ ಅನುರಾಗ್ ದ್ವಾರಿ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ಧಾರೆ.

4) ಮುಕೇಶ್ ಚಂದ್ರಾಕರ್ ಅವರ ಯೂಟ್ಯೂಬ್‌ ಚಾನೆಲ್‌ ಬಸ್ತರ್ ಜಂಕ್ಷನ್‌ನಲ್ಲಿ 486 ವಿಡಿಯೋಗಳಿದ್ದು, 1.61 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಅದರಲ್ಲಿರುವ ಹೆಚ್ಚಿನ ವಿಡಿಯೋಗಳು ಸರ್ಕಾರ ಮತ್ತು ಮಾವೋವಾದಿ ಸಂಘರ್ಷಕ್ಕೆ ಸಂಬಂಧಿಸಿದ್ದು. ಬುಡಕಟ್ಟು ಸಮುದಾಯದ ಉನ್ನತಿಗೆ ಅಗತ್ಯವಾದ ಮಾಹಿತಿಗಳನ್ನು ಒಳಗೊಂಡಿರುವಂಥದ್ದಾಗಿದೆ.

5) ಮುಕೇಶ್ ಚಂದ್ರಾಕರ್ ಅವರು ತನ್ನ ಜಾಲವನ್ನು ಇಡೀ ದೇಶಮಟ್ಟಕ್ಕೆ ವಿಸ್ತರಿಸಿದ್ದು, ವರದಿಗಾರರಿಗೆ ವರದಿಗಾರಿಕೆಗೆ ಸಂಬಂಧಿಸಿ ನೆರವಾಗುತ್ತಿದ್ದರು. ಛತ್ತೀಸ್‌ಗಢದ ರಾಜಧಾನಿಯಲ್ಲೇ ಇರಲಿ, ತಾನಿರುವ ಊರು ಬಿಜಾಪುರದಲ್ಲೇ ಆದರೂ ವರದಿಗಾರಿಕೆ ವಿಚಾರ ಬಂದಾಗ ವೃತ್ತಿನಿಷ್ಠೆಯನ್ನು ಮೆರೆಯುತ್ತಿದ್ದರು.

6) ಬಿಜಾಪುರ, ಬಸ್ತರ್ ಸುತ್ತಮುತ್ತ ಪತ್ರಕರ್ತರು ತಮ್ಮ ಬದುಕಿನಲ್ಲಿ ಎದುರಿಸುತ್ತಿರುವ ಅಪಾಯವನ್ನು ಈ ಘಟನೆನೆ ಅನಾವರಣಗೊಳಿಸಿದೆ. ಆದಾಗ್ಯೂ, ಪತ್ರಕರ್ತರು ಈ ಪ್ರಕರಣವನ್ನು ಖಂಡಿಸಿದ್ದು, ಅನ್ಯಾಯ, ಭಷ್ಟ್ರಾಚಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಯುಕೇಶ್ ಚಂದ್ರಾಕರ್ ಕೊಟ್ಟ ದೂರಿನಲ್ಲಿ ಏನಿದೆ

ಯುಕೇಶ್‌ ಚಂದ್ರಾಕರ್‌ ಕೂಡ ಪತ್ರಕರ್ತರಾಗಿದ್ದು ಅವರು ಸಲ್ಲಿಸಿದ ದೂರಿನ ಪ್ರಕಾರ, ಮುಕೇಶ್ ಚಂದ್ರಾಕರ್‌ ಮೊಬೈಲ್ ಟ್ರಾಕ್ ಮಾಡಿದ ಛತ್ತೀಸಗಢ ಪೊಲೀಸರು, ಚಟ್ಟಣಪಾರಾ ಬಸ್ತಿಯಲ್ಲಿ ಶವ ಪತ್ತೆ ಹಚ್ಚಿದರು. ಸುರೇಶ್ ಚಂದ್ರಾಕರ್ ಅವರ ಸೈಟ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಸುರೇಶ್ ಚಂದ್ರಾಕರ್‌ ಅವರು ಗುತ್ತಿಗೆದಾರರಾಗಿದ್ದು, ಅವರ ಹೆಸರನ್ನೂ ಯುಕೇಶ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಮುಕೇಶ್ ಚಂದ್ರಾಕರ್‌ ಕೆಲವು ದಿನಗಳ ಹಿಂದೆ ಗಂಗಾಳೂರಿನಿಂದ ನೆಲಸನಾರ್‌ ಗ್ರಾಮದ ರಸ್ತೆ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿರುವುದಾಗಿ ವರದಿ ಮಾಡಿದ್ದರು. ಇದಾದ ಬಳಿಕ ಅವರಿಗೆ ಕೆಲವರಿಂದ ಬೆದರಿಕೆ ಕರೆಗಳು ಹೋಗಿದ್ದವು. ಬೆದರಿಕೆ ಕರೆ ಮಾಡಿದವರ ಪೈಕಿ ಸುರೇಸ್ ಚಂದ್ರಾಕರ್ ಕೂಡ ಇದ್ದರು. ಅವರು ಈ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪಾಲುದಾರರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನೂ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.