ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಯಾರು, ಅವರ ಪರಿಚಯ ಒದಗಿಸುವ 10 ಮುಖ್ಯ ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಯಾರು, ಅವರ ಪರಿಚಯ ಒದಗಿಸುವ 10 ಮುಖ್ಯ ಅಂಶಗಳಿವು

ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಯಾರು, ಅವರ ಪರಿಚಯ ಒದಗಿಸುವ 10 ಮುಖ್ಯ ಅಂಶಗಳಿವು

ಪೋಪ್‌ ಫ್ರಾನ್ಸಿಸ್ ಯಾರು?: ನ್ಯುಮೋನಿಯಾ ಕಾರಣ ಗಂಭೀರ ಉಸಿರಾಟದ ಸಮಸ್ಯೆ ಎದುರಿಸಿದ್ದ ಪೋಪ್ ಫ್ರಾನ್ಸಿಸ್ ಸೋಮವಾರ ಬೆಳಿಗ್ಗೆ ವಿಧಿವಶರಾದರು. ಪೋಪ್ ಫ್ರಾನ್ಸಿಸ್ ಯಾರು, ಅವರ ಪರಿಚಯ ಒದಗಿಸುವ 10 ಮುಖ್ಯ ಅಂಶಗಳಿವು.

ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಪರಿಚಯ
ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಪರಿಚಯ

ಪೋಪ್‌ ಫ್ರಾನ್ಸಿಸ್ ಯಾರು?: ಗಂಭೀರ ಉಸಿರಾಟದ ಸಮಸ್ಯೆ ಎದುರಿಸಿದ ಪೋಪ್ ಫ್ರಾನ್ಸಿಸ್ ಅವರು ಇಂದು (ಏಪ್ರಿಲ್ 21) ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ರೋಮ್‌ನ ಬಿಷಪ್‌ ಪೋಪ್ ಫ್ರಾನ್ಸಿಸ್ ಅವರು ಮೊದಲ ಲ್ಯಾಟಿನ್ ಅಮೆರಿಕನ್ ಧರ್ಮಗುರು ಎಂಬ ಕೀರ್ತಿಗೂ ಭಾಜನರಾಗಿದ್ದರು. ಅವರು ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಈಸ್ಟರ್ ಆಚರಣೆಗಳಲ್ಲಿ ಪೂರ್ತಿಯಾಗಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಆದಾಗ್ಯೂ, ಭಾನುವಾರ ಅವರು ಈಸ್ಟರ್ ಶುಭ ಹಾರೈಸಲು ಬೆಸಿಲಿಕಾದ ಬಾಲ್ಕನಿಗೆ ಬಂದು ಹ್ಯಾಪಿ ಈಸ್ಟರ್ ಎಂದು ಮೆಲುದನಿಯಲ್ಲಿ ಶುಭ ಹಾರೈಸಿದ್ದರು. ಅವರ ಲಿಖಿತ ಭಾಷಣವನ್ನು ಅವರ ಸಹೋದ್ಯೋಗಿ ಕಾರ್ಡಿನಲ್ ಕೆವಿನ್ ಫ್ಯಾರೆಲ್ ಓದಿ ಹೇಳಿದ್ದರು.

ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಯಾರು

ಅರ್ಜೆಂಟೀನಾದ ಬ್ಯೂನೆಸ್ ಏರಿಸ್‌ನಲ್ಲಿ 1936ರ ಡಿಸೆಂಬರ್ 17ರಂದು ಮರಿಯೋ ಜೋಸ್ ಬೆರ್ಗೋಗ್ಲಿಯೋ ಮತ್ತು ರೆಜಿನಾ ಮರಿಯಾ ಸಿವೋರಿ ದಂಪತಿಯ ಐದು ಮಕ್ಕಳ ಪೈಕಿ ಹಿರಿಯವನಾಗಿ ಜನಿಸಿದರು. ತಂದೆ ಮರಿಯೋ ಜೋಸೆಫ್‌ ಇಟೆಲಿಯಿಂದ ವಲಸೆ ಬಂದ ಲೆಕ್ಕಿಗರಾಗಿದ್ದರು. ರೆಜಿನಾ ಗೃಹಿಣಿ. ಬೆನಿಟೋ ಮುಸ್ಸಲೋನಿ ಆಡಳಿತದಿಂದ ತಪ್ಪಿಸಿಕೊಳ್ಳಲು ಈ ದಂಪತಿ ಅರ್ಜೆಂಟೀನಾಕ್ಕೆ ವಲಸೆ ಬಂದಿದ್ದರು.

ಮ್ಯಾಕ್ಸಿಮಮ್ ಕಾಲೇಜ್ ಆಫ್ ಸಂತ ಜೋಸೆಫ್‌, ಫಿಲಾಸಾಫಿಕಲ್‌ ಆಂಡ್ ಥಿಯಾಲಾಜಿಕಲ್ ಫ್ಯಾಕಲ್ಟಿ ಆಫ್ ಸೇನ್‌ ಮಿಗೆಲ್‌, ಮಿಲ್‌ಟೌನ್ ಇನ್‌ಸ್ಟಿಟ್ಯೂಟ್ ಆಫ್ ಥಿಯಾಲಜಿ ಆಂಡ್ ಫಿಲಾಸಫಿ, ಸ್ಯಾಂಕ್ಟ್‌ ಜಾರ್ಜಿಯನ್ ಗ್ರಾಜುವೇಟ್ ಸ್ಕೂಲ್ ಆಫ್ ಫಿಲಾಸಫಿ ಆಂಡ್ ಥಿಯಾಲಜಿಯಲ್ಲಿ ಶಿಕ್ಷಣ ಪಡೆದರು. 21ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಚೇತರಿಸಿದ ಬಳಿಕ 1958ರಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತೀರ್ಮಾನಿಸಿದರು. 1969ರಲ್ಲಿ ಕ್ಯಾಥೋಲಿಕ್ ಪುರೋಹಿತನಾಗಿ ವೃತ್ತಿ ಆರಂಭಿಸಿದರು. 1973 ರಿಂದ 1979ರ ತನಕ ಅರ್ಜೆಂಟೀನಾದ ಜೆಸುಟ್ ಪ್ರಾವಿನ್ಶಲ್ ಸುಪೀರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1998ರಲ್ಲಿ ಬ್ಯೂನೆಸ್ ಏರಿಸ್‌ನ ಆರ್ಚ್‌ಬಿಷಪ್ ಆದರು. 2001ರಲ್ಲಿ ಎರಡನೇ ಪೋಪ್‌ ಜಾನ್‌ ಪೌಲ್ ಅವರು ಫ್ರಾನ್ಸಿಸ್ ಅವರನ್ನು ಕಾರ್ಡಿನಲ್ ಆಗಿ ನಿಯೋಜಿಸಿದರು. 2001ರ ಡಿಸೆಂಬರ್‌ನಲ್ಲಿ ಅರ್ಜೆಂಟೀನಾ ಚರ್ಚ್‌ಗಳನ್ನು ಮುನ್ನಡೆಸಿದ್ದರು. 2013ರ ವೇಳೆ ಅವರು ಪೋಪ್ ಆಗಿ ನಿಯೋಜಿತರಾದರು.

ಪೋಪ್ ಫ್ರಾನ್ಸಿಸ್ ಅವರ ಪರಿಚಯ ಒದಗಿಸುವ 10 ಮುಖ್ಯ ಅಂಶಗಳಿವು

1) ಪೋಪ್ ಫ್ರಾನ್ಸಿಸ್ ಅವರ ನಿಜವಾದ ಹೆಸರೇನು, ಹುಟ್ಟಿದ್ದೆಲ್ಲಿ, ಯಾವಾಗ: ಪೋಪ್‌ ಫ್ರಾನ್ಸಿಸ್ ಅವರ ನಿಜವಾದ ಹೆಸರು ಜೋರ್ಜ್‌ ಮರಿಯೋ ಬರ್ಗೋಗ್ಲಿಯೋ. ಅವರು 1936ರ ಡಿಸೆಂಬರ್ 17 ರಂದು ಅರ್ಜೆಂಟೀನಾದ ಬ್ಯೂನೆಸ್ ಏರಿಸ್‌ನಲ್ಲಿ ಜನಿಸಿದರು.

2) ಜೋರ್ಜ್‌ ಮರಿಯೋ ಬರ್ಗೋಗ್ಲಿಯೋ ಧಾರ್ಮಿಕ ಶಿಕ್ಷಣ: 21ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಚೇತರಿಸಿದ ಬಳಿಕ ಜೋರ್ಜ್‌ ಮರಿಯೋ ಬರ್ಗೋಗ್ಲಿಯೋ 1958ರಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತೀರ್ಮಾನಿಸಿದರು. ಫ್ರಾನ್ಸಿಸ್ ಆದರು. 1969ರಲ್ಲಿ ಕ್ಯಾಥೋಲಿಕ್ ಪುರೋಹಿತರಾದರು. 1973 ರಿಂದ 1979ರ ತನಕ ಅರ್ಜೆಂಟೀನಾದ ಜೆಸುಟ್ ಪ್ರಾವಿನ್ಶಲ್ ಸುಪೀರಿಯರ್ ಆಗಿದ್ದರು. 1998ರಲ್ಲಿ ಬ್ಯೂನೆಸ್ ಏರಿಸ್‌ನ ಆರ್ಚ್‌ಬಿಷಪ್, 2001ರಲ್ಲಿ ಕಾರ್ಡಿನಲ್ ಆದರು.

3) ಪೋಪ್ ಫ್ರಾನ್ಸಿಸ್‌ ಆದದ್ದು ಹೀಗೆ: 16ನೇ ಪೋಪ್ ಬೆನೆಡಿಕ್ಟ್‌ ಅವರು ವಯೋ ಸಹಜ ಕಾರಣ ಮುಂದಿಟ್ಟು ರಾಜೀನಾಮೆ ನೀಡಿ ವಿಶ್ರಾಂತಿ ಬಯಸಿದಾಗ 2013ರ ಮಾರ್ಚ್ 13 ರಂದು ಕಾರ್ಡಿನಲ್ ಆಗಿದ್ದ ಅವರು ಪೋಪ್ ಫ್ರಾನ್ಸಿಸ್ ಆದರು. 600 ವರ್ಷದಲ್ಲಿ ಮೊದಲ ಬಾರಿಗೆ 16ನೇ ಪೋಪ್ ಬೆನೆಡಿಕ್ಟ್‌ ರಾಜೀನಾಮೆ ನೀಡಿದ್ದು ಗಮನಸೆಳೆದಿತ್ತು.

4) ಹೊಸತನ ತಂದ ಪೋಪ್ ಫ್ರಾನ್ಸಿಸ್: 2000 ವರ್ಷಗಳಷ್ಟು ಹಳೆಯ ಸಂಸ್ಥೆಯಲ್ಲಿ ಹೊಸತನ ಹರಡಿದ್ದು ಪೋಪ್ ಫ್ರಾನ್ಸಿಸ್‌. ಅವರ ವಿನಮ್ರ ಭಾವ ಮತ್ತು ಬಡವರ ಕುರಿತಾದ ಕಾಳಜಿ ಎದುರು ಜಗತ್ತು ಮಂಡಿಯೂರಿತು. ಪೋಪ್ ಆಗಿ ನಿಯೋಜಿತರಾದ ಕೂಡಲೇ ಪೋಪ್ ಫ್ರಾನ್ಸಿಸ್ ಅವರು ಮಾಡಿದ ಮೊದಲ ಭಾಷಣ, ಹೊಸತನದ ಬೆಳಕು ಚೆಲ್ಲಿತ್ತು.

5) ಫ್ರಾನ್ಸಿಸ್‌ ಎಂಬುದು 13ನೇ ಶತಮಾನದ ಸಂತನ ಹೆಸರು: ಸರಳತೆ, ಶಾಂತಿ ಮತ್ತು ಪ್ರಕೃತಿ ಬಗ್ಗೆ ಕಾಳಜಿ ವಹಿಸಿದ್ದ ಹಾಗೂ ಸಮಾಜದ ಜತೆಗೆ ಸಂಪರ್ಕ ಹೊಂದಿದ್ದ 13ನೇ ಶತಮಾನದ ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್ ಅವರ ಹೆಸರನ್ನು ತಮಗೆ ನಾಮಕರಣ ಮಾಡಿಕೊಂಡಿದ್ದರು.

6) ವಸಾಹತುಶಾಹಿ ಕಾಲದ ಅಪರಾಧಕ್ಕೆ ಕ್ಷಮೆಯಾಚನೆ: ಫ್ರಾನ್ಸಿಸ್ ನಿರುದ್ಯೋಗಿ, ಅನಾರೋಗ್ಯ, ಅಂಗವಿಕಲರನ್ನು ಮತ್ತು ಮನೆಯಿಲ್ಲದವರನ್ನು ಚರ್ಚ್‌ ಜತೆಗೆ ಜೋಡಿಸಿಕೊಂಡರು. ವಸಾಹತುಶಾಹಿ ಕಾಲದಿಂದ ಚರ್ಚ್‌ನ ಅಪರಾಧಗಳಿಗಾಗಿ ಅವರು ಸ್ಥಳೀಯ ಜನರಿಗೆ ಔಪಚಾರಿಕವಾಗಿ ಕ್ಷಮೆಯಾಚಿಸಿದರು.

7) ಸಮಸ್ಯೆ ಮೈಮೇಲೆ ಎಳೆದುಕೊಂಡ ಪೋಪ್‌: ಕ್ಯಾಥೊಲಿಕ್ ಚರ್ಚ್ ಹಗರಣ ಮತ್ತು ಉದಾಸೀನತೆಯ ಆರೋಪಗಳು ಎದುರಾದಾಗ ಚರ್ಚ್‌ನ ಘನತೆಯನ್ನು ಎತ್ತಿ ಹಿಡಿಯಲು ಹಬ್ರಿಸ್ ಬಗ್ಗೆ ನಮ್ರತೆಯಿಂದ ಅನುಸರಿಸಬೇಕು ಎಂಬುದನ್ನು ಒತ್ತಿ ಹೇಳಿದರು. ಆದಾಗ್ಯೂ, ಬಂಡವಾಳಶಾಹಿ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಅವರ ಟೀಕೆಗಳು ಸಂಪ್ರದಾಯವಾದಿಗಳನ್ನು ಕೆರಳಿಸಿದ್ದಲ್ಲದೆ, ಅವರು ಸಮಸ್ಯೆಗಳನ್ನು ಎದುರಿಸುವಂತಾಯಿತು.

8) ಎಲ್‌ಜಿಬಿಟಿಕ್ಯೂ ಕುರಿತ ನಿಲುವು: ಪೋಪ್ ಫ್ರಾನ್ಸಿಸ್ ಅವರು ಪ್ರಗತಿಪರ ನಿಲುವು ಹೊಂದಿದ್ದರು. ಎಲ್‌ಜಿಬಿಟಿಕ್ಯೂ ಸಮುದಾಯದವರನ್ನು ಮಾನ್ಯ ಮಾಡಿದ ಅವರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಕ್ರೈಸ್ತ ಸಮುದಾಯದ ಎಲ್‌ಜಿಬಿಟಿಕ್ಯೂ ಜನರನ್ನು ಜಡ್ಜ್‌ ಮಾಡುವುದನ್ನು ನಾನು ಯಾರು? ಸಲಿಂಗ ಕಾಮಿಯಾಗಿರುವುದು ಅಪರಾಧವಲ್ಲ ಎಂದು 2023ರಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

9) ಕರುಣಾಮಯಿಗಳಾಗಿರಿ ಎಂದ ಪೋಪ್‌: ಮರಣದಂಡನೆ ಕುರಿತಾಗಿ ರೋಮ್‌ನ ನಿಲುವು ಸ್ಪಷ್ಟಪಡಿಸಿದ್ದ ಪೋಪ್ ಫ್ರಾನ್ಸಿಸ್ ಕರುಣಾಮಯಿಗಳಾಗಿರಬೇಕು. ಯಾವುದೇ ಸನ್ನಿವೇಶ ಎದುರಾದರೂ ಕರುಣಾಮಯಿಗಳಾಗಿರುವುದು ಅಗತ್ಯ. ಅಣ್ವಸ್ತ್ರಗಳನ್ನು ಹೊಂದಿದ್ದರೆ ಅದು ಅನೈತಿಕ ಎಂದು ಅವರು ಪ್ರತಿಪಾದಿಸಿದ್ದರು.

10) ಇತರೆ ಸಾಧನೆಗಳು: ಅವರು ದಶಕಗಳಿಂದ ಬಾಕಿ ಉಳಿದಿದ್ದ ಚೀನಾದಲ್ಲಿ ಬಿಷಪ್‌ಗಳ ನಾಮ ನಿರ್ದೇಶನ ಒಪ್ಪಂದ ಸಾಧ್ಯವಾಗಿಸಿದರು. ರಷ್ಯಾದ ನಾಯಕರನ್ನು ಭೇಟಿ ಮಾಡಿದರು. ಅರೇಬಿಯನ್ ಪೆನಿನ್ಸುಲಾ ಮತ್ತು ಇರಾಕ್‌ಗೂ ಭೇಟಿ ನೀಡಿದರು. ಹೊಸತನದ ಬೆಳಕನ್ನು ಇಲ್ಲೂ ಚೆಲ್ಲಿದ್ದರು.

ಪೋಪ್ ಫ್ರಾನ್ಸಿಸ್ ಅವರು ತಮ್ಮ 12 ವರ್ಷದ ಪೋಪ್ ಹೊಣೆಗಾರಿಕೆ ನಿಭಾಯಿಸಿದ ವೇಳೆ 38 ದಿನ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯುವಂತೆ ಆಗಿತ್ತು. ಅದು ಬಿಟ್ಟರೆ ಸುದೀರ್ಘ ಅವಧಿಗೆ ಆಸ್ಪತ್ರೆಗೆ ದಾಖಲಾದ ಉದಾಹರಣೆ ಇಲ್ಲ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.