ಪೂರ್ತಿ ಪಾಕಿಸ್ತಾನ ನಮ್ಮ ಕೈಯಳತೆ ದೂರದಲ್ಲೇ ಇದೆ ನೆನಪಿರಲಿ; ಶಿಶುಪಾಲ ಸಿದ್ಧಾಂತ ಅನುಸರಿಸಿದ ಭಾರತ ಎಂದ ಲೆಫ್ಟಿನೆಂಟ್ ಜನರಲ್ ಕುನ್ಹಾ
ಭಾರತ ಪಾಕ್ ಬಿಕ್ಕಟ್ಟು: ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಸ್ಥಳಾಂತರ ವರದಿ ಬಗ್ಗೆ ಪ್ರತಿಕ್ರಿಯಿದ ಭಾರತೀಯ ವಾಯುಪಡೆ ಡಿಜಿ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ ಕುನ್ಹಾ, ಪೂರ್ತಿ ಪಾಕಿಸ್ತಾನ ನಮ್ಮ ಕೈಯಳತೆ ದೂರದಲ್ಲೇ ಇದೆ ಎಂಬುದು ನೆನಪಿರಲಿ. ಭಾರತವು ಆಪರೇಷನ್ ಸಿಂದೂರ್ ವಿಚಾರದಲ್ಲಿ ಶಿಶುಪಾಲ ಸಿದ್ಧಾಂತ ಅನುಸರಿಸಿದೆ ಎಂದು ಹೇಳಿದರು.

ಭಾರತ ಪಾಕ್ ಬಿಕ್ಕಟ್ಟು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ, ಭಾರತವು ಮೇ 7 ರ ನಸುಕಿನ ವೇಳೆ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಉಭಯ ದೇಶಗಳ ನಡುವಿನ 4 ದಿನಗಳ ತೀವ್ರ ಸಮರದ ಬಳಿಕ, ಪಾಕಿಸ್ತಾನದ ಕದನ ವಿರಾಮ ಮನವಿ ಅಂಗೀಕರಿಸಿ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಸ್ಥಗಿತಗೊಳಿಸಿದೆ. ಈ ಕಾರ್ಯಾಚರಣೆಯು ಭಾರತೀಯ ವಾಯು ಪಡೆಯ ಶಕ್ತಿಯನ್ನು ಜಗಜ್ಜಾಹೀರುಗೊಳಿಸಿತು. ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳು ನೆಲಕಚ್ಚಿದವು. ಈಗ ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿ, ವಾಯುಪಡೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ ಕುನ್ಹಾ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳತ್ತ ಗಮನಸೆಳೆದಿದ್ದಾರೆ.
ಪೂರ್ತಿ ಪಾಕಿಸ್ತಾನ ಕೈಯಳತೆ ದೂರದಲ್ಲೇ ಇದೆ ನೆನಪಿರಲಿ; ಲೆಫ್ಟಿನೆಂಟ್ ಜನರಲ್ ಡಿ ಕುನ್ಹಾ
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯನ್ನು ರಾವಲ್ಪಿಂಡಿಯಿಂದ ಖೈಬರ್ ಪಖ್ತುನ್‌ಕ್ವಾ ಪ್ರಾಂತ್ಯಕ್ಕೆ ಸ್ಥಳಾಂತರಿಸುವ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವಾಯುಪಡೆ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ ಕುನ್ಹಾ, ಪೂರ್ತಿ ಪಾಕಿಸ್ತಾನ ನಮ್ಮ ಕೈಯಳತೆ ದೂರದಲ್ಲೇ ಇದೆ ಎಂಬುದು ನೆನಪಿರಲಿ ಎಂದ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ ಕೆಲವು ಮಿಲಿಟರಿ ನೆಲೆಗಳು ಮಾತ್ರವಲ್ಲದೆ ಇಡೀ ಪಾಕಿಸ್ತಾನವು ನಮ್ಮ ವ್ಯಾಪ್ತಿಯಲ್ಲೇ ಇವೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಎದುರಿಸಲು ನಮ್ಮ ಬಳಿ ಶಸ್ತ್ರಾಸ್ತ್ರಗಳಿವೆ. ಇಡೀ ಪಾಕಿಸ್ತಾನ ನಮ್ಮ ಕೈಗೆಟುಕುವಷ್ಟು ದೂರದಲ್ಲಿದೆ. ಅವರು ತಮ್ಮ ಸೇನಾ ಪ್ರಧಾನ ಕಚೇರಿಯನ್ನು ರಾವಲ್ಪಿಂಡಿಯ ಬದಲು ಖೈಬರ್ ಪಖ್ತುನ್ಖ್ವಾದಂತಹ ಸ್ಥಳಗಳಿಗೆ ಸ್ಥಳಾಂತರಿಸಬಹುದು... ಆದರೆ ಇದು ಕೂಡ ನಮ್ಮ ಕೈ ಅಳತೆಗಿಂತ ದೂರದಲ್ಲಿಲ್ಲ. ಅವರು ಈಗ ಆಳವಾದ ಗುಂಡಿಯನ್ನು ಹುಡುಕಬೇಕಾಗಿದೆ ಎಂದು ಹೇಳಿದರು.
“ನಮ್ಮ ಸಾರ್ವಭೌಮತ್ವ ಮತ್ತು ನಮ್ಮ ಜನರನ್ನು ರಕ್ಷಿಸುವುದು ನಮ್ಮ ಕೆಲಸ. ಆದ್ದರಿಂದ ಈ ಕಾರ್ಯಾಚರಣೆಯ ಮೂಲಕ ನಮ್ಮ ತಾಯ್ನಾಡನ್ನು ರಕ್ಷಿಸಲು ನಾವು ಯಶಸ್ವಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ ಪಾಕಿಸ್ತಾನದ ನೆಲದಿಂದಲೇ ಈ ಡ್ರೋನ್ ದಾಳಿಗಳು ನಡೆಯುತ್ತಿದ್ದವು. ನಮ್ಮ ನೆಲೆಗಳಲ್ಲಿ ಅನೇಕ ಸೈನಿಕರು, ಅಧಿಕಾರಿಗಳು ಮತ್ತು ಅವರ ಕುಟುಂಬಗಳು ವಾಸಿಸುತ್ತಿದ್ದವು. ಈ ಡ್ರೋನ್ ದಾಳಿಯ ಬಗ್ಗೆ ಅವರು ಅಷ್ಟೇ ಚಿಂತಿತರಾಗಿದ್ದರು. ಆದಾಗ್ಯೂ, ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗದಂತೆ ನಮ್ಮ ಸೇನೆ ನೋಡಿಕೊಂಡಿದೆ. ಕೊನೆಯಲ್ಲಿ, ನಾವು ಕಾರ್ಯಾಚರಣೆಯಲ್ಲಿ ಯಶಸ್ವಿಯಾದೆವು. ಇದು ಸೇನೆಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ್ದಲ್ಲದೆ, ನಮ್ಮ ಜನರನ್ನು ಹೆಮ್ಮೆಪಡುವಂತೆ ಮಾಡಿತು” ಎಂದು ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ ಕುನ್ಹಾ ಹೇಳಿದರು.
ಶಿಶುಪಾಲ ಸಿದ್ಧಾಂತ ಅನುಸರಿಸಿದ ಭಾರತ
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಅನುಸರಿಸುವ ಮೂಲಕ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನದೊಂದಿಗೆ ಭಾರತವು ಶಿಶುಪಾಲ ಸಿದ್ಧಾಂತವನ್ನು ಅನುಸರಿಸಿತು ಎಂದು ಲೆಫ್ಟಿನೆಂಟ್ ಜನರಲ್ ಕುನ್ಹಾ ಹೇಳಿದರು. ಇದರಲ್ಲಿ, ನಮ್ಮ ಸೈನ್ಯವು ಎದುರಾಳಿಗಳು ಪ್ರಚೋದನೆಯ ರೇಖೆಯನ್ನು ದಾಟಿದ ನಂತರ ನಿರ್ಣಾಯಕ ಕ್ರಮ ಕೈಗೊಂಡಿತು. ಆಪರೇಷನ್ ಸಿಂದೂರ್ ಮೂಲಕ ಭಾರತವು ತನ್ನ ಆಧುನಿಕ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸಿತು. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್ಗಳು, ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ನಮ್ಮ ರಕ್ಷಣಾ ವ್ಯವಸ್ಥೆಯು ಗಾಳಿಯಲ್ಲಿ ಹೊಡೆದುರುಳಿಸಿದ ರೀತಿ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ವಿವರಿಸಿದರು.