ತಮಿಳುನಾಡಿನಲ್ಲಿ ಜನನಕ್ಕಿಂತ ಮರಣವೇ ಹೆಚ್ಚು; ಆಲ್ಕೋಹಾಲ್‌, ಚಕ್ರಬಡ್ಡಿ ಸಾಲದಿಂದ ಮರಣ ಮೃದಂಗ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಮಿಳುನಾಡಿನಲ್ಲಿ ಜನನಕ್ಕಿಂತ ಮರಣವೇ ಹೆಚ್ಚು; ಆಲ್ಕೋಹಾಲ್‌, ಚಕ್ರಬಡ್ಡಿ ಸಾಲದಿಂದ ಮರಣ ಮೃದಂಗ

ತಮಿಳುನಾಡಿನಲ್ಲಿ ಜನನಕ್ಕಿಂತ ಮರಣವೇ ಹೆಚ್ಚು; ಆಲ್ಕೋಹಾಲ್‌, ಚಕ್ರಬಡ್ಡಿ ಸಾಲದಿಂದ ಮರಣ ಮೃದಂಗ

ತಮಿಳುನಾಡಿನಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಹೆಚ್ಚುತ್ತಿರುವ ನಗರೀಕರಣದೊಂದಿಗೆ ಅತಿಯಾದ ಆಲ್ಕೋಹಾಲ್‌ ಸೇವನೆ, ಚಕ್ರಬಡ್ಡಿ ಸಾಲಗಳೂ ಕಾರಣವಾಗಿದೆ ಎಂದು ಝುಹೂ ಸಿಇಒ ಶ್ರೀಧರ್‌ ವೆಂಬು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟ 67 ಜನರು (ಸಾಂದರ್ಭಿಕ ಸಂಗ್ರಹ ಚಿತ್ರ)
ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟ 67 ಜನರು (ಸಾಂದರ್ಭಿಕ ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ತಮಿಳುನಾಡಿನ ದಿನಪತ್ರಿಕೆ ಡೈಲಿ ತಂತಿಯ ಮುಖಪುಟದ ಸುದ್ದಿಯೊಂದನ್ನು ಝುಹೂ (ಇಮೇಲ್‌ ಮತ್ತು ಕ್ಲೌಡ್‌ ಸಾಫ್ಟ್‌ವೇರ್‌ ಕಂಪನಿ) ಸಿಇಒ ಶ್ರೀಧರ್‌ ವೆಂಬು ಹಂಚಿಕೊಂಡಿದ್ದು, ತಮಿಳುನಾಡಿನಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗಿರಬಹುದಾದ ಅಂಶಗಳ ಕುರಿತು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಮರಣ ಪ್ರಮಾಣ ಹೆಚ್ಚಾಗಲು ನಗರೀಕರಣದೊಂದಿಗೆ ಅತಿಯಾದ ಆಲ್ಕೋಹಾಲ್‌ ಸೇವನೆ, ಚಕ್ರಬಡ್ಡಿ ಸಾಲಗಳೂ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಧರ್‌ ವೆಂಬು ಅಭಿಪ್ರಾಯವೇನು?

"ತಮಿಳುನಾಡಿನ ಪ್ರಮುಖ ದಿನಪತ್ರಿಕೆ ಡೈಲಿ ತಂತಿಯ ನಿನ್ನೆಯ ಪ್ರಮುಖ ಸುದ್ದಿಯಿದು. ತಮಿಳುನಾಡಿನಲ್ಲಿ ಹೇಗೆ ಕ್ಷಿಪ್ರವಾಗಿ ಜನನ ಪ್ರಮಾಣ ಇಳಿಕೆ ಕಾಣುತ್ತಿದೆ ಎಂದು ಈ ವರದಿ ತಿಳಿಸಿದೆ. ಕಳೆದ ಆರು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಜನನ ಪ್ರಮಾಣವು ಶೇಕಡ 11ರಷ್ಟು ಕುಸಿತವಾಗಿದೆ. ಇದು ಇನ್ನಷ್ಟು ವೇಗವಾಗಿ ಇಳಿಕೆ ಕಾಣುತ್ತಿದೆ ಎಂಬ ವರದಿ ಇದೆ. ಇದಕ್ಕೆ ಏನು ಕಾರಣವೆಂದು ಯೋಚಿಸಬೇಕಿದೆ" ಎಂದು ಶ್ರೀಧರ್‌ ವೆಂಬು ಹೇಳಿದ್ದಾರೆ.

"ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಈಗ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಿದೆ. ಇಡೀ ತಮಿಳುನಾಡು ಈಗ ಪೂರ್ವ ಏಷ್ಯಾದ ಮಟ್ಟಕ್ಕೆ ಕುಸಿಯುತ್ತಿದೆ. ಇದಕ್ಕೆ ಕಾರಣ ಏನಿರಬಹುದು? ಇತರೆ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ನಗರೀಕರಣ ಹೆಚ್ಚಾಗಿದೆ. ಇದು ಒಂದು ಕಾರಣ. ಆದರೆ, ಗ್ರಾಮೀಣ ಭಾಗದಲ್ಲಿಯೂ ಜನನ ಪ್ರಮಾಣ ಕುಸಿಯುತ್ತಿದೆ. ಇದಕ್ಕೆ ಏನು ಕಾರಣ"

"ಗ್ರಾಮೀಣ ಭಾಗಗಳ ಜನರು ಈಗ ಆಲ್ಕೋಹಾಲ್‌ ದಾಸರಾಗಿದ್ದಾರೆ. ಇದರೊಂದಿಗೆ ಚಕ್ರಬಡ್ಡಿ ಸಾಲಗಳನ್ನು ಜನರನ್ನು ಮುಳುಗಿಸುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರು, ವಿಶೇಷವಾಗಿ ಯುವಕರು ಈ ಸಮಾಜದಿಂದ ಹೊರಕ್ಕೆ ಹೋಗುತ್ತಿದ್ದಾರೆ. ಕುಟುಂಬದ ಸಂಕಷ್ಟವನ್ನು ಹೆಂಗಸರ ಮೇಲೆ ಹಾಕಿ ಗಂಡಸರು ಸಾಯುತ್ತಿದ್ದಾರೆ. ಕಡಿಮೆ ಜನನ ಪ್ರಮಾಣಕ್ಕೆ ಇದು ಒಂದು ಕಾರಣ ಎಂದು ನಾನು ನಂಬುತ್ತೇನೆ" ಎಂದು ಶ್ರೀಧರ್‌ ಹೇಳಿದ್ದಾರೆ. "ನಾವು ಆಲ್ಕೋಹಾಲ್‌ ಮತ್ತು ಸಾಲದ ತೊಂದರೆಗಳ ಕುರಿತು ಗಮನ ಹರಿಸಬೇಕು. ಈ ಮೂಲಕ ಸಮಾಜದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಬೇಕು. ಇದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಸಮಸ್ಯೆಯಾಗಿದೆ" ಎಂದು ಎಕ್ಸ್‌ನಲ್ಲಿ ಶ್ರೀಧರ್‌ ವೆಂಬು ಪೋಸ್ಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ತುರ್ತಾಗಿ ಗಮನಹರಿಸಬೇಕಾದ ಸಂಗತಿ. ತಡವಾದ ಬಳಿಕ ಚಿಂತಿಸಿ ಪ್ರಯೋಜನವಿಲ್ಲ" "ಮೂರು ಮಕ್ಕಳನ್ನು ಹೆತ್ತವರಿಗೆ ಸರಕಾರದಿಂದ ಇನ್ಸೆಂಟೀವ್‌ ದೊರಕಲಿ" "ಈಗ ಜನರಿಗೆ ಮಕ್ಕಳನ್ನು ಸಾಕಲು ಆಗುತ್ತಿಲ್ಲ. ಜೀವನ ವೆಚ್ಚ ಅತಿಯಾಗಿದೆ. ಗಳಿಕೆ ಕಡಿಮೆಯಾಗಿದೆ. ಜನನ ಪ್ರಮಾಣ ಕಡಿಮೆಯಾಗಲು ಇದು ಕೂಡ ಪ್ರಮುಖ ಕಾರಣವಾಗಿದೆ" ಎಂದು ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

"ಅತ್ಯುತ್ತಮ ಅವಲೋಕನ. ಆಲ್ಕೋಹಾಲ್‌, ಸಾಲದ ಸಮಸ್ಯೆಯು ಕೇವಲ ಆರ್ಥಿಕ ವಿಷಯವಲ್ಲ. ಗ್ರಾಮೀಣ ಭಾಗದಲ್ಲಿ ನಂಬಿಕೆ, ಸ್ಥಿರತೆ, ಭರವಸೆಯ ಮರುನಿರ್ಮಾಣ ಮಾಡಬೇಕಿದೆ" "ಇದು ಈಗಿನ ತಂತ್ರಜ್ಞಾನ ಜಗತ್ತಿನ ಫಲಶ್ರುತಿ. ಈ ಹಿಂದಿನ ಸಾಂಪ್ರದಾಯಿಕ ಕುಟುಂಬಗಳು ಎಷ್ಟು ಚೆನ್ನಾಗಿ ಬದುಕಿದ್ದವು" "ಕೇವಲ ಆಲ್ಕೋಹಾಲ್‌ ಸೇವನೆ ಕಾರಣವಲ್ಲ. ನಗರದ ಜನರ ಬದುಕೂ ಚೆನ್ನಾಗಿಲ್ಲ. ಜೀವನ ಮತ್ತು ಕೆಲಸದ ನಡುವೆ ಸಮತೋಲನವಿಲ್ಲ. ಶಾಲೆ, ಆಹಾರ, ವೈದ್ಯಕೀಯ, ವಸತಿ ಖರ್ಚುಗಳು ಹೆಚ್ಚಿವೆ. ಇದೇ ಕಾರಣಕ್ಕೆ ನಗರದ ಜನರು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿದ್ದಾರೆ" "ಎಲ್ಲಾ ಕಡೆಯು ಮದ್ಯಪಾನ ದೊಡ್ಡ ಸಮಸ್ಯೆಯಾಗಿದೆ. ಜನರು ದುಡಿಯುತ್ತಾರೆ. ದುಡಿದ ಹಣದಲ್ಲಿ ಕುಡಿಯುತ್ತಾರೆ. ಇದರೊಂದಿಗೆ ಈಗಿನ ಯುವ ಜನತೆ ಸೋಷಿಯಲ್‌ ಮೀಡಿಯಾದ ವ್ಯಸನದಕ್ಕೆ ತುತ್ತಾಗಿದ್ದಾರೆ" ಎಂದು ಜನರು ಪ್ರತಿಕ್ರಿಯೆ ನೀಡಿದ್ದಾರೆ.

"ಇದಕ್ಕೆ ಇನ್ನೂ ಹಲವು ಕಾರಣಗಳು ಇವೆ. ಈಗ 2 ಮತ್ತು 1 ಮಗು ನೀತಿಯನ್ನು ಹೆಚ್ಚು ಪ್ರಚಾರ ಮಾಡಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲ ಮಗು ಜನಿಸಿದ ತಕ್ಷಣ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ದಂಪತಿಯನ್ನು ಒತ್ತಾಯಿಸಲಾಗುತ್ತಿದೆ. ಆಲ್ಕೋಹಾಲ್‌ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಶಿಕ್ಷಣ ವೆಚ್ಚ ತುಂಬಾ ದುಬಾರಿಯಾಗಿದೆ. ಇದರೊಂದಿಗೆ ಹೆಣ್ಣು ಮಕ್ಕಳ ಮದುವೆ ವಿಳಂಬವಾಗಲು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳು ಇವೆ" ಎಂದು ಶ್ರೀಧರ್‌ ಸಿಂಬು ಟ್ವೀಟ್‌ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.