Rahul Gandhi: ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ಹೋರಾಡದೇ ಇರಲು ನಾನು 'ಸಂಘೀ' ಅಲ್ಲ: ರಾಹುಲ್‌ ಗಾಂಧಿ ಘರ್ಜನೆ!-will keep question pm modi even he disqualify me for life says rahul gandhi ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ಹೋರಾಡದೇ ಇರಲು ನಾನು 'ಸಂಘೀ' ಅಲ್ಲ: ರಾಹುಲ್‌ ಗಾಂಧಿ ಘರ್ಜನೆ!

Rahul Gandhi: ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ಹೋರಾಡದೇ ಇರಲು ನಾನು 'ಸಂಘೀ' ಅಲ್ಲ: ರಾಹುಲ್‌ ಗಾಂಧಿ ಘರ್ಜನೆ!

ಉದ್ಯಮಿ ಗೌತಮ್ ಅದಾನಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ಸಂಬಂಧದ ಕುರಿತು ಪ್ರಶ್ನಿಸಿದ ಕಾರಣಕ್ಕೆ, ನನ್ನ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ರಾಹುಲ್‌ ಮಾತನಾಡಿದರು.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (AP)

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ಸಂಬಂಧದ ಕುರಿತು ಪ್ರಶ್ನಿಸಿದ ಕಾರಣಕ್ಕೆ, ನನ್ನ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಮಾ.೨೫-ಶನಿವಾರ) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ನಾನು ಕ್ಷಮೆ ಕೇಳುವಂತ ಯಾವ ತಪ್ಪೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ಹಾಗೆಯೇ ಅನ್ಯಾಯದ ವಿರುದ್ಧ ಹೋರಾಟ ಮಾಡದೇ ಇರಲು ನಾನು ಸಂಘ ಪರಿವಾರದ ಸದಸ್ಯ ಕೂಡ ಅಲ್ಲ ಎಂದು ರಾಹುಲ್‌ ಗಾಂಧಿ ಮಾರ್ಮಿಕವಾಗಿ ಹೇಳಿದ್ದಾರೆ.

ವಿ.ಡಿ. ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಸಲ್ಲಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದರು. ಅದೇ ರೀತಿ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ ದೇಶದ ಜನತೆಗೆ ದ್ರೋಹ ಬಗೆಯಿತು. ಆದರೆ ನಾನು ಈ ಇಬ್ಬರಂತೆ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅನ್ಯಾಯದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಕ್ಷದ ಸದಸ್ಯ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.

ಸರ್ಕಾರ ನನ್ನ ಲೋಕಸಭೆ ಸದಸ್ಯತ್ವವನ್ನು ಕಿತ್ತುಕೊಂಡಿರಬಹುದು. ಆದರೆ ಅನ್ಯಾಯದ ವಿರುದ್ಧ ಹೋರಾಡುವ ನನ್ನ ಛಲವನ್ನು ಕಿತ್ತುಕೊಳ್ಳಲು ಅದಕ್ಕೆ ಸಾಧ್ಯವಿಲ್ಲ. ಪ್ರಧಾನಿ ಮೋದಿ ತಮ್ಮ ಉದ್ಯಮ ಸ್ನೇಹಿತರಿಗೆ ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಅನುಮತಿ ನೀಡಿರುವುದನ್ನು ನಾನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ರಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ಗೌತಮ್‌ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧ ದೇಶದ ಸಂಪತ್ತಿನ ಲೂಟಿಗೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ ಕಾರಣಕ್ಕಾಗಿ ನನ್ನ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಆದರೆ ಇದರಿಂದ ನನ್ನ ಹೋರಾಟದ ನಿರ್ಧಾರ ಮತ್ತಷ್ಟು ಗಟ್ಟಿಗೊಂಡಿದ್ದು, ನಾನು ಪ್ರಧಾನಿ ಮೋದಿ ಅವರನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ರಾಹುಲ್‌ ಗಾಂಧಿ ಹೇಳಿದರು.

ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬುದಕ್ಕೆ ನಿತ್ಯವೂ ಸಾಕ್ಷಿಗಳು ಸಿಗುತ್ತಿವೆ. ತಮ್ಮನ್ನು ಪ್ರಶ್ನಿಸುವ ವಿಪಕ್ಷ ನಾಯಕರನ್ನು ಜೈಲಿಗೆ ತಳ್ಳಲು ಬಯಸಿರುವ ಪ್ರಧಾನಿ ಮೋದಿ, ಸರ್ವಾಧಿಕಾರಿಯಂತೆ ವಿಜೃಂಭಿಸುವ ಕನಸು ಕಾಣುತ್ತಿದ್ದಾರೆ. ಆದರೆ ಭಾರತದ ಜನತೆ ಪ್ರಧಾನಿ ಮೋದಿ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿತವಾಗಿಯೂ ತಿರಸ್ಕರಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಭರವಸೆ ವ್ಯಕ್ತಪಡಿಸಿದರು.

ನನಗೆ ಸತ್ಯದ ಹೊರತಾಗಿ ಬೇರೆ ಯಾವುದರಲ್ಲಿಯೂ ಆಸಕ್ತಿ ಇಲ್ಲ. ನಾನು ಸತ್ಯ ಮಾತ್ರ ಮಾತನಾಡುತ್ತೇನೆ. ಸರ್ಕಾರ ನನ್ನ ಲೋಕಸಭೆ ಸದಸ್ಯತ್ವ ರದ್ದುಗೊಳಿಸದರೂ, ನನ್ನನ್ನು ಬಂಧಿಸಿದರೂ ನಾನು ಈ ಹೋರಾಟವನ್ನು ಮುಂದುವರೆಸುತ್ತೇನೆ. ಈ ದೇಶ ನನಗೆ ಎಲ್ಲವನ್ನೂ ನೀಡಿದೆ. ನಾನು ಈ ದೇಶಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ ಎಂದು ರಾಹುಲ್‌ ಗಾಂಧಿ ನುಡಿದರು.

ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ನಾನು ಮಾಡಿದ ಭಾಷಣ ದೇಶ ವಿರೋಧಿ ಎಂಬುದು ಅಪ್ಪಟ ಸುಳ್ಳು. ನಾನು ದೇಶದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯನ್ನು ಪ್ರಶ್ನಿಸಿದ್ದೇನೆ. ಇದನ್ನು ಮುಂದೆಯೂ ಪ್ರಶ್ನಿಸುತ್ತೇನೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ನಾನು ವಯನಾಡಿನ ಜನತೆಗೆ ಈ ವೇಳೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಅವರು ನನಗೆ ತೋರಿದ ಪ್ರೀತಿ, ಗೌರವವನ್ನು ನಾನು ಸದಾ ಸ್ಮರಿಸುತ್ತೇನೆ. ನಾನು ಈಗ ಅವರ ಪ್ರತಿನಿಧಿಯಲ್ಲವಾದರೂ, ಅವರೊಂದಿಗೆ ನಾನು ಸದಾ ಸಂಪರ್ಕದಲ್ಲಿರುತ್ತೇನೆ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಭಾವುಕರಾಗಿ ನುಡಿದರು.

mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.