Shivaji Maharaj: ಬ್ರಿಟನ್‌ನಿಂದ ಛತ್ರಪತಿ ಶಿವಾಜಿಯ ಖಡ್ಗ ಮರಳಿ ತರುತ್ತೇವೆ: ಮಹಾರಾಷ್ಟ್ರ ಸಚಿವ
ಶಿವಾಜಿ ಮಹಾರಾಜರು ಬಳಸುತ್ತಿದ್ದ ಜಗದಂಬಾ ಖಡ್ಗವನ್ನು ಯುನೈಟೆಡ್ ಕಿಂಗ್‌ಡಮ್‌ನಿಂದ ಮರಳಿ ತರಲು ಪ್ರಯತ್ನಿಸುವುದಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಮುಂಬೈ (ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ಜಗದಂಬಾ ಖಡ್ಗವನ್ನು ಯುನೈಟೆಡ್ ಕಿಂಗ್‌ಡಮ್‌ನಿಂದ ಮರಳಿ ತರಲು ಪ್ರಯತ್ನಿಸುವುದಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಸುಧೀರ್ ಮುಂಗಂತಿವಾರ್ ಅವರು ಮೇ ಎರಡನೇ ವಾರದಲ್ಲಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕವನ್ನು ಶೀಘ್ರದಲ್ಲೇ ಆಚರಿಸಲಾಗುವುದು. ಜಗದಂಬ ಖಡ್ಗ ಮತ್ತು ಟೈಗರ್ ಕಠಾರಿಯನ್ನು (ಹುಲಿ ಉಗುರುಗಳಂತೆ ಕಾಣುವ ಕಠಾರಿ) ಭಾರತಕ್ಕೆ ಮರಳಿ ತರಲು ಬ್ರಿಟಿಷ್ ಕೌನ್ಸಿಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದರು.
"ಮೇ ಎರಡನೇ ವಾರದಲ್ಲಿ ಬ್ರಿಟನ್‌ಗೆ ಹೋಗುತ್ತಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಯಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ಆಚರಿಸುವುದು ನಮ್ಮ ಉದ್ದೇಶವಾಗಿದೆ. ನಾನು ಛತ್ರಪತಿ ಶಿವಾಜಿ ಮಹಾರಾಜರ 'ವಾಘನಖ್' (ಉಗುರು ರೀತಿಯ ಕಠಾರಿ) ಮತ್ತು 'ಜಗದಂಬ ಖಡ್ಗವನ್ನು ಮಹಾರಾಷ್ಟ್ರಕ್ಕೆ ಮರಳಿ ತರಲು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.
"ವೆಸ್ಟರ್ನ್ ಇಂಡಿಯಾ ಡೆಪ್ಯುಟಿ ಹೈ ಕಮಿಷನರ್ ಅಲೆನ್ ಗೆಮ್ಮಲ್ ಮತ್ತು ರಾಜಕೀಯ ಮತ್ತು ದ್ವಿಪಕ್ಷೀಯ ವ್ಯವಹಾರಗಳ ಉಪ ಮುಖ್ಯಸ್ಥ ಇಮೋಜೊಇನ್ ಸ್ಟೋನ್ ಅವರೊಂದಿಗಿನ ಭೇಟಿ ಚೆನ್ನಾಗಿತ್ತು. ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕದ ವೇಳೆಗೆ ಜಗದಂಬ ಕತ್ತಿ ಮತ್ತು ಕಠಾರಿಯನ್ನು ಮರಳಿ ತರುವುದರ ಕುರಿತು ಚರ್ಚೆ ನಡೆಸಲಾಗಿದೆ. "ಈ ಸೂಕ್ಷ್ಮ ವಿಚಾರದಲ್ಲಿ ಸಹಕಾರ ನೀಡಿ, ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು" ಎಂದು ಸುಧೀರ್ ಮುಂಗಂತಿವಾರ್ ಟ್ವೀಟ್ ಮಾಡಿದ್ದಾರೆ.
ಶನಿವಾರ ನವಿ ಮುಂಬೈನ ಖಾರ್ಘರ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಗೌರವ 'ಮಹಾರಾಷ್ಟ್ರ ಭೂಷಣ' ನೀಡಿ ಗೌರವಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆಗಮಿಸಿದ್ದರು. ಪಕ್ಷದ ಹಿರಿಯ ನಾಯಕರೊಂದಿಗೆ ಪ್ರಮುಖ ಸಭೆ ನಡೆಸಲು ಅಮಿತ್ ಶಾ ಶನಿವಾರ ಸಂಜೆ ಮುಂಬೈಗೆ ಬಂದಿದ್ದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾಂಕುಲೆ, ಬಿಜೆಪಿ ಮುಂಬೈ ಅಧ್ಯಕ್ಷ ಆಶಿಶ್ ಶೇಲಾರ್, ಪ್ರವಾಸೋದ್ಯಮ ಸಚಿವ ಮಂಗಲಪ್ರಭಾತ್ ಲೋಧಾ ಸೇರಿದಂತೆ ಪಕ್ಷದ ಇತರ ಸಂಸದರು ಮತ್ತು ಶಾಸಕರು ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ಸ್ವಾಗತಿಸಿದರು.