ಹುಡುಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಮದುವೆ ಬೇಡ ಎಂದ ಹುಡುಗಿ ಕುಟುಂಬ; ಏನಿದು CIBIL ಸ್ಕೋರ್?
ಹುಡುಗನ ಬುದ್ಧಿ ಸರಿಯಿಲ್ಲ, ಹೆಚ್ಚು ಓದಿಲ್ಲ, ಮನೆತನ ಚೆನ್ನಾಗಿಲ್ಲ ಹೀಗೆ ಬೇರೆ ಬೇರೆ ಕಾರಣಗಳಿಂದ ಮದುವೆ ಮುರಿದು ಬೀಳುವ ಸಾಧ್ಯತೆಗಳಿವೆ. ಆದರೆ, ಮಹಾರಾಷ್ಟ್ರದಲ್ಲಿ ಹುಡುಗನೊಬ್ಬನ ಬ್ಯಾಂಕ್ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು, ಹುಡುಗಿ ಕಡೆಯವರು ಮದುವೆ ಬೇಡ ಎಂದಿದ್ದಾರೆ.

ಮದುವೆ ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಸಮಯ, ಸಂದರ್ಭ ಕೂಡಿ ಬಂದಾಗ ಕಂಕಣ ಭಾಗ್ಯ ಸಾಧ್ಯ. ಇದೇ ವೇಳೆ, ಸಪ್ತಪದಿ ತುಳಿಯಬೇಕೆಂದರೆ ಮನಸ್ಸು ಮನಸುಗಳ ನಡುವೆ ಒಪ್ಪಿಗೆಯಾಗಬೇಕು. ಹುಡುಗ ಚೆನ್ನಾಗಿಲ್ಲ, ಬುದ್ಧಿ ಸರಿಯಿಲ್ಲ ಹೀಗೆ ಕೆಲವು ಕಾರಣಗಳಿಂದ ಮದುವೆ ರದ್ದಾಗುವುದನ್ನೂ ಕೇಳಿದ್ದೇವೆ. ಆದರೆ, ಇಲ್ಲೊಂದು ಕಡೆ ಹುಡುಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಹುಡುಗಿ ಕಡೆಯವರು ಮದುವೆ ನಿರಾಕರಿಸಿದ್ದಾರೆ. ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಈ ಘಟನೆ ನಡೆದಿದೆ.
ಮದುವೆಗೆ ಎರಡೂ ಕುಟುಂಬಗಳ ಒಪ್ಪಿಗೆ ಇರಬೇಕು. ಆ ಸಮಯದಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲೂ ಅರೇಂಜ್ ಮ್ಯಾರೇಜ್ ಎಂಬ ವಿಷಯ ಬಂದಾಗ ಅಳೆದು ತೂಗಿ ನಿರ್ಧಾರ ಮಾಡಲಾಗುತ್ತದೆ. ಈ ನಡುವೆ ಮಹಾರಾಷ್ಟ್ರದಲ್ಲಿ ನಡೆದ ಘಟನೆ, ಅಚ್ಚರಿ ಮೂಡಿಸುವಂತಿದೆ. ಹುಡುಗಿ ಕಡೆಯವರು ಅಸಮಾನ್ಯ ಕಾರಣವೊಂದನ್ನು ನೀಡಿ, ಹುಡುಗನನ್ನು ರಿಜೆಕ್ಟ್ ಮಾಡಿದ್ದಾರೆ. ಅದುವೇ ಬ್ಯಾಂಕ್ ಸಿಬಿಲ್ ಸ್ಕೋರ್.
ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಇಬ್ಬರು ಯುವಕ-ಯುವತಿಯರ ಮದುವೆ ನಿಶ್ಚಯವಾಗಿರುತ್ತದೆ. ಈ ನಡುವೆ ಮದುವೆಯನ್ನು ಅಂತಿಮಗೊಳಿಸುವ ಮೊದಲು, ಭಾವಿ ವಧುವಿನ ಚಿಕ್ಕಪ್ಪ ಯುವಕನ ಸಿಬಿಲ್ ಸ್ಕೋರ್ ಪರಿಶೀಲಿಸಲು ಒತ್ತಾಯಿಸುತ್ತಾರೆ. ಆ ಬಳಿಕ ಹುಡುಗನನ್ನು ರಿಜೆಕ್ಟ್ ಮಾಡಲಾಗುತ್ತದೆ.
ಮದುವೆ ಅಂತಿಮಗೊಳಿಸಲು ಎರಡೂ ಕುಟುಂಬಗಳ ಸದಸ್ಯರು ಸೇರುತ್ತಾರೆ. ವಧುವಿನ ಚಿಕ್ಕಪ್ಪ ಹುಡುಗನ ಸಿಬಿಲ್ ಸ್ಕೋರ್ ಪರಿಶೀಲಿಸಲು ನಿರ್ಧರಿಸಿದಾಗ, ಅದುವರೆಗೂ ಒಪ್ಪಿಗೆ ಸೂಚಿಸಿದ್ದ ಹುಡುಗಿ ಕಡೆಯವರು ದಿಢೀರ್ ನಿರ್ಧಾರ ಬದಲಿಸುತ್ತಾರೆ.
ಹುಡುಗನ ಸಿಬಿಲ್ ಸ್ಕೋರ್ ಎಷ್ಟಿತ್ತು?
ಹುಡುಗನ ಸಿಬಿಲ್ ಸ್ಕೋರ್ ಗೊತ್ತಾಗಿ, ಹುಡುಗಿ ಚಿಕ್ಕಪ್ಪನಿಗೆ ಇಷ್ಟವಾಗಿಲ್ಲ. ವರದಿಗಳ ಪ್ರಕಾರ, ಹುಡುಗನ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಹಲವು ಸಾಲಗಳಿದ್ದವು. ಇದನ್ನು ನೋಡಿ ವಧುವಿನ ಕಡೆಯವರು ಆಘಾತಕ್ಕೊಳಗಾಗಿದ್ದಾರೆ. ಇದರಿಂದ ಸಿಬಿಲ್ ಸ್ಕೋರ್ ಕಡಿಮೆ ಇರುವುದು ಗೊತ್ತಾಗಿದೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದರೆ, ಕ್ರೆಡಿಟ್ ಹಿಸ್ಟರಿ ಕಳಪೆ ಇದೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದು ಅನಿಯಮಿತ ಪಾವತಿಗಳು, ಲೋಡ್ ಡೀಫಾಲ್ಟ್ ಮತ್ತು ಆರ್ಥಿಕ ಅಸ್ಥಿರತೆಯನ್ನು ಸೂಚಿಸುತ್ತದೆ.
ಕ್ರೆಡಿಟ್ ಸ್ಕೋರ್ ಕಡಿಮೆ ಇರುವುದರಿಂದ, ಹುಡುಗ ಸಿಕ್ಕಾಪಟ್ಟೆ ಸಾಲ ಮಾಡಿದ್ದಾನೆ ಹಾಗೂ ಅದನ್ನು ಸರಿಯಾಗಿ ಪಾವತಿಸಿಲ್ಲ ಎಂದು ಹುಡುಗಿ ಕಡೆಯವರು ಅಂದಾಜಿಸುತ್ತಾರೆ. ಹೀಗಾಗಿ ವಧುವಿನ ಚಿಕ್ಕಪ್ಪ ಮದುವೆಗೆ ವಿರುದ್ಧವಾಗಿ ನಿಲ್ಲುತ್ತಾರೆ. ಅದಾಗಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವ್ಯಕ್ತಿ, ಮುಂದೆ ಮದುವೆಯಾಗುವ ಹುಡುಗಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ. ತಮ್ಮ ಕಡೆಯ ಹುಡುಗಿಗೆ ಆತ ಉತ್ತಮ ಜೋಡಿ ಅಲ್ಲ ಎಂದು ವಾದಿಸುತ್ತಾರೆ. ಇದನ್ನೇ ಮಹಿಳೆಯ ಕುಟುಂಬದ ಇತರ ಸದಸ್ಯರು ಕೂಡಾ ಒಪ್ಪಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.
ಸಿಬಿಲ್ ಸ್ಕೋರ್ ಎಂದರೇನು?
ಸಿಬಿಲ್ ಸ್ಕೋರ್ ಎಂಬುದು ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸುವ ಮೂರು ಅಂಕಿಗಳ ಸಂಖ್ಯೆಯಾಗಿದೆ. ಇದು 300ರಿಂದ 900ರವರೆಗೆ ಇರುತ್ತದೆ. ಹೆಚ್ಚಿನ ಸಂಖ್ಯೆ ಇದ್ದರೆ, ಅದು ಉತ್ತಮ ಆರ್ಥಿಕ ಜೀವನವನ್ನು ಸೂಚಿಸುತ್ತದೆ. ಕಡಿಮೆ ಅಂಕವಿದ್ದರೆ ಅದಕ್ಕೆ ವಿರುದ್ಧ ಎಂದರ್ಥ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ಸಾಧ್ಯತೆ ಸೇರಿದಂತೆ ವ್ಯಕ್ತಿಯ ಸಾಲದ ಅರ್ಹತೆಯನ್ನು ಎಷ್ಟು ಎಂಬುದನ್ನು ನಿರ್ಧರಿಸಲು ಸಿಬಿಲ್ ಸ್ಕೋರ್ ಅನ್ನು ಮಾನದಂಡವಾಗಿ ನೋಡಲಾಗುತ್ತದೆ.
