ಕನ್ನಡ ಸುದ್ದಿ  /  Nation And-world  /  Woman Kills Baby To Spite Husband In Uttar Pradesh

Woman kills baby: ಗಂಡನ ಮೇಲಿನ ಕೋಪಕ್ಕೆ ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿ

ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಹೆತ್ತ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಔರಂಗಪುರ ಭಿಕ್ಕು ಗ್ರಾಮದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಿಜ್ನೋರ್ (ಉತ್ತರ ಪ್ರದೇಶ): ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಹೆತ್ತ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಔರಂಗಪುರ ಭಿಕ್ಕು ಗ್ರಾಮದಲ್ಲಿ ನಡೆದಿದೆ.

ಅಂಕಿತ್ ಸಿಂಗ್ ಮತ್ತು ಶಿವಾನಿ ರಾಣಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಗಳು ಹುಟ್ಟಿದ ನಂತರ ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಮೊನ್ನೆ ಕೂಡ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಪತಿಯೊಂದಿಗೆ ತೀವ್ರ ವಾಗ್ವಾದದ ನಂತರ ಅಂಕಿತ್ ಮೇಲಿನ ಕೋಪಕ್ಕೆ ಶಿವಾನಿ ಮಗುವನ್ನು ಸಾಯಿಸಿದ್ದಾಳೆ.

ಮಗುವಿನ ತಂದೆ ಅಂಕಿತ್ ಸಿಂಗ್ ಅವರು ಶನಿವಾರ ತಮ್ಮ ಮಗಳು ನಿಗೂಢವಾಗಿ ಸಾವನ್ನಪ್ಪಿದೆ ಎಂದು ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಗೆಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಬಳಿಕ ಮಗುವಿನ ತಾಯಿ ಶಿವಾನಿ ರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಮಗುವನ್ನು ಕತ್ತು ಹಿಸುಕಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ದಿನೇಶ್ ಸಿಂಗ್ ತಿಳಿಸಿದ್ದಾರೆ. ಆರೋಪಿ ತಾಯಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆಯಷ್ಟೇ ನೆರೆಹೊರೆಯವರ ನಡುವಿನ ಜಗಳ ಮೂವರು ಸಹೋದರರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಸಿಕ್ರೋರಾ ಗ್ರಾಮದಲ್ಲಿ ನಡೆದಿದೆ. ಮೃತ ಸಹೋದರರನ್ನು ಸಮಂದರ್, ಈಶ್ವರ್ ಹಾಗೂ ಗಜೇಂದ್ರ ಎಂದು ಗುರುತಿಸಲಾಗಿದೆ. ಮೃತಪಟ್ಟಿರುವ ಸಮಂದರ್ ಇತ್ತೀಚೆಗೆ ತಮ್ಮ ನೆರೆ ಮನೆಯ ಲಖನ್ ಎಂಬಾತನೊಂದಿಗೆ ಜಗಳವಾಡಿದ್ದನು. ಇದೇ ವಿಚಾರವಾಗಿ ಲಖನ್ ಇತರ ಕೆಲವರೊಂದಿಗೆ ಸಮಂದರ್ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಏಕಾಏಕಿಯಾಗಿ ಗುಂಡು ಹಾರಿಸಿದ್ದಾನೆ.

ಘಟನೆಯಲ್ಲಿ ಮೂವರು ಅಣ್ಣ-ತಮ್ಮಂದಿರು ಸಾವನ್ನಪ್ಪಿದ್ದರೆ ಗಜೇಂದ್ರ ಅವರ ಪತ್ನಿ, ಮಗ ಮತ್ತು ಸೊಸೆ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭರತ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಮೀನಾ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಭೀಕರ ಘಟನೆಯೊಂರದಲ್ಲಿ 25 ವರ್ಷದ ಯುವಕನೊಬ್ಬ ತನ್ನ ಅಜ್ಜಿ, ಪೋಷಕರು ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ. ಆರೋಪಿ ಕೇಶವ್​ ತನ್ನ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಆರೋಪಿ ಕೇಶವ್ ಮಾದಕ ವ್ಯಸನಿಯಾಗಿದ್ದು, ಕೆಲಸ ಕಳೆದುಕೊಂಡಿದ್ದನು ಎಂದು ಹೇಳಲಾಗಿದೆ. ಆತನನ್ನು ಸರಿಪಡಿಸುವ ವಿಚಾರಕ್ಕೆ ಪದೇ ಪದೇ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಹಣಕಾಸಿನ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ರಾಜಶೇಖರ್ ಎಂಬ ವ್ಯಕ್ತಿ ಮೃತದೇಹವನ್ನು ಕಾರಿನಲ್ಲಿ ಪೊಲೀಸ್​ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದನು. ಕಾರ್ ಮೆಕ್ಯಾನಿಕ್ ಆಗಿರುವ ಆರೋಪಿ ರಾಜಶೇಖರ್ ಜಯಂತಿ ನಗರದ ನಿವಾಸಿಯಾಗಿದ್ದು, ಮೃತನನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮನಹುಂಡಿ ನಿವಾಸಿ ಮಹೇಶಪ್ಪ (45) ಎಂದು ಗುರುತಿಸಲಾಗಿದೆ.

IPL_Entry_Point