ಕನ್ನಡ ಸುದ್ದಿ  /  Nation And-world  /  Women Panel Summons Congress Leader Over Remarks On President Murmu

NCW summons Congress leader: ರಾಷ್ಟ್ರಪತಿ ಕುರಿತು ಖಂಡನೀಯ ಹೇಳಿಕೆ; ಕೈ ನಾಯಕನಿಗೆ ಮಹಿಳಾ ಆಯೋಗದಿಂದ ಸಮನ್ಸ್‌

ರಾಷ್ಟ್ರಪತಿ ಮುರ್ಮು ಅವರು ʼಚಮಚಗಿರಿʼ ಮಾಡುತ್ತಿದ್ದಾರೆ ಎಂದು ರಾಜ್‌ ಟ್ವೀಟ್‌ ಮೂಲಕ ಆರೋಪಿಸಿದ್ದರು. ಹೀಗಾಗಿ ಮಹಿಳಾ ಆಯೋಗವು ಗರಂ ಆಗಿದೆ.

ಕಾಂಗ್ರೆಸ್‌ ನಾಯಕ ಉದಿತ್‌ ರಾಜ್
ಕಾಂಗ್ರೆಸ್‌ ನಾಯಕ ಉದಿತ್‌ ರಾಜ್

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಅಸಂಬದ್ಧ ಹೇಳಿಕೆ ನೀಡಿರುವ ಪ್ರಕರಣ ಸಂಬಂಧ ಕಾಂಗ್ರೆಸ್ ಮಾಜಿ ಸಂಸದ ಉದಿತ್ ರಾಜ್ ಅವರಿಗೆ ಸಂಕಷ್ಟ ಎದುರಾಗಿದೆ. ಇದೇ ಅಕ್ಟೋಬರ್ 10 ರಂದು ರಾಷ್ಟ್ರೀಯ ಮಹಿಳಾ ಆಯೋಗ (NCW)ದ ಮುಂದೆ ಹಾಜರಾಗಬೇಕೆಂದು ಕೈ ನಾಯಕನಿಗೆ ಆಯೋಗವು ನೋಟಿಸ್‌ ನೀಡಿದೆ.

ರಾಷ್ಟ್ರಪತಿ ಮುರ್ಮು ಅವರು ʼಚಮಚಗಿರಿʼ ಮಾಡುತ್ತಿದ್ದಾರೆ ಎಂದು ರಾಜ್‌ ಟ್ವೀಟ್‌ ಮೂಲಕ ಆರೋಪಿಸಿದ್ದರು. ಹೀಗಾಗಿ ಮಹಿಳಾ ಆಯೋಗವು ಗರಂ ಆಗಿದೆ. "ಅವರ ಹೇಳಿಕೆ ಕೇವಲ ಮಹಿಳೆಯ ವಿರುದ್ಧ ಮಾತ್ರವಲ್ಲ. ಅದು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರ ವಿರುದ್ಧವಾಗಿದೆ. ಮಹಿಳೆ ಎಂಬ ಕಾರಣಕ್ಕೆ ಇಲ್ಲಿ ಅವರನ್ನು ಬೊಟ್ಟು ಮಾಡಲಾಗಿದೆಯೇ? ಈ ಹೇಳಿಕೆ ಖಂಡನೀಯ. ಹೀಗಾಗಿ ನೋಟಿಸ್ ಜಾರಿ ಮಾಡಿದ್ದೇವೆ. ರಾಜ್ ಬಳಸಿದ ಅವಹೇಳನಕಾರಿ ಭಾಷೆ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

ರಾಷ್ಟ್ರಪತಿಯನ್ನು ಗುರಿಯಾಗಿಸಿ ರಾಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, “ದ್ರೌಪದಿ ಮುರ್ಮು ಅವರಂತಹ ರಾಷ್ಟ್ರಪತಿ ಯಾವ ದೇಶಕ್ಕೂ ಸಿಗಬಾರದು. ಚಮಚಗಿರಿ ಮಾಡುವುದಕ್ಕೂ ಅದರ ಮಿತಿಗಳಿವೆ. 70 ಪ್ರತಿಶತ ಜನರು ಗುಜರಾತ್‌ನ ಉಪ್ಪನ್ನು ತಿನ್ನುತ್ತಾರೆ ಎಂದು ಅವರು ಹೇಳುತ್ತಾರೆ. ಅವರು ಉಪ್ಪು ತಿಂದು ಬದುಕಲು ಕಲಿತ ನಂತರ ಅವರು ಈ ಬಗ್ಗೆ ತಿಳಿದುಕೊಳ್ಳುತ್ತಾರೆ.” ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಲಾಗಿತ್ತು.

ಕಳೆದ ಸೋಮವಾರ ಗಾಂಧಿನಗರದಲ್ಲಿ ಗುಜರಾತ್ ಸರ್ಕಾರ ಆಯೋಜಿಸಿದ್ದ ನಾಗರಿಕ ಸತ್ಕಾರ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ದೇಶದ ಶೇ.76ರಷ್ಟು ಉಪ್ಪನ್ನು ಗುಜರಾತ್‌ ಉತ್ಪಾದಿಸುತ್ತಿದೆ ಎಂದು ಹೇಳಿದ್ದರು. "ಗುಜರಾತ್‌ನಲ್ಲಿ ಉತ್ಪಾದಿಸುವ ಉಪ್ಪನ್ನು ಇಡೀ ದೇಶ ಸೇವಿಸುತ್ತದೆ ಎಂದು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದರು. ಈ ಹೇಳಿಕೆ ವಿಚಾರವಾಗಿ ರಾಜ್ ಪ್ರತಿಕ್ರಿಯೆ ನೀಡಿದ್ದರು.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಕಾಂಗ್ರೆಸ್ ನಾಯಕನ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಯು ಅವರ ಪಕ್ಷದ ʼಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆʼ ಎಂದು ಹೇಳಿದ್ದಾರೆ. ರಾಷ್ಟ್ರಪತಿ ಕುರಿತು ಬಳಸಿರುವ ಪದಗಳು ಅಸಭ್ಯ ಮತ್ತು ಆತಂಕಕಾರಿ ಎಂದು ಪಾತ್ರಾ ಹೇಳಿದ್ದಾರೆ.

ದೇಶದ ರಾಷ್ಟ್ರಪತಿಯೊಬ್ಬರ ಬಗ್ಗೆ ಇಂತಹ ಪದಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ ಎಂದು ಅವರು ಆರೋಪಿಸಿದರು. “ಈ ಘಟನೆಗೆ ಮೊದಲು, ಬುಡಕಟ್ಟು ಮಹಿಳೆಯೊಬ್ಬರು ದೇಶದ ಅಧ್ಯಕ್ಷರಾದಾಗ ಅಧೀರ್ ರಂಜನ್ ಚೌಧರಿ ಕೆಟ್ಟ ಪದಗಳನ್ನು ಬಳಸಿದ್ದನ್ನು ನಾವು ಕೇಳಿದ್ದೇವೆ” ಎಂದು ಅವರು ಹೇಳಿದರು.

ಹೇಳಿಕೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮತ್ತು ಇತರ ವಲಯಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಛೀಮಾರಿ ಹಾಕಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರಾಜ್‌, ರಾಷ್ಟ್ರಪತಿ ಮುರ್ಮು ಕುರಿತ ಹೇಳಿಕೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅದು ನನ್ನ ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟಪಡಿಸಿದ್ದಾರೆ.

IPL_Entry_Point

ವಿಭಾಗ