ಕನ್ನಡ ಸುದ್ದಿ  /  Nation And-world  /  Wont Tolerate Any Insult To Veer Savarkar: Uddhav Warns Rahul

Veer Savarkar: ವೀರ ಸಾವರ್ಕರ್‌ಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ, ರಾಹುಲ್‌ ಗಾಂಧಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ

ವೀರ ಸಾವರ್ಕರ್‌ ಮತ್ತು ಹಿಂದುತ್ವ ಸಿದ್ಧಾಂತವಾದಿಗಳಿಗೆ ಯಾವುದೇ ಅವಮಾನವಾಗುವುದನ್ನು ನಮ್ಮ ಪಕ್ಷವು ಸಹಿಸುವುದಿಲ್ಲ ಎಂದು ಶಿವಸೇನೆಯ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣದ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆಯ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣದ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ(HT PHOTO)
ಶಿವಸೇನೆಯ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣದ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ(HT PHOTO)

ಮುಂಬಯಿ: ರಾಹುಲ್‌ ಗಾಂಧಿಯವರು ವೀರ ಸಾವರ್ಕರ್‌ ಕುರಿತು ಆಡಿದ ಮಾತುಗಳ ಕುರಿತು ಶಿವಸೇನೆಯ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣದ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ವೀರ ಸಾವರ್ಕರ್‌ ಮತ್ತು ಹಿಂದುತ್ವ ಸಿದ್ಧಾಂತವಾದಿಗಳಿಗೆ ಯಾವುದೇ ಅವಮಾನವಾಗುವುದನ್ನು ನಮ್ಮ ಪಕ್ಷವು ಸಹಿಸುವುದಿಲ್ಲ" ಎಂದು ಭಾನುವಾರ ಮಾಲೆಂಗಾವ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್‌ ಗಾಂಧಿಗೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಠಾಕ್ರೆ ನೇತೃತ್ವದ ಶಿವಸೇನೆಯು "ಕಾಂಗ್ರೆಜ್‌ ಜತೆಗೆ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟದಲ್ಲಿ ಒಂದಾಗಿದ್ದರೂ, ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನವಾಗುವುದನ್ನು ಸಹಿಸುವುದಿಲ್ಲ. ಈ ರೀತಿ ಅವಮಾನ ಮಾಡುವುದು ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ. ಸಂಸತ್‌ನಿಂದ ಅನರ್ಹತೆಗೊಂಡ ಬಳಿಕ ರಾಹುಲ್‌ ಗಾಂಧಿಯವರು "ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ನಾನು ಗಾಂಧಿ" ಎಂದು ಹೇಳುತ್ತ ಬಂದಿದ್ದಾರೆ.

"ರಾಹುಲ್‌ ಗಾಂಧಿಯವರು ನಿನ್ನೆ ಚೆನ್ನಾಗಿ ಮಾತನಾಡಿದ್ದಾರೆ. ಬಿಜೆಪಿಗೆ ಅಚ್ಚರಿಯಾಗುವಂತೆ ಮಾತನಾಡಿದ್ದಾರೆ" ಎಂದು ರಾಹುಲ್‌ ಗಾಂಧಿಯನ್ನು ಠಾಕ್ರೆ ಹೊಗಳಿದ್ದಾರೆ. ಆದರೆ, ಈ ಸಮಯದಲ್ಲಿ ಸಾವರ್ಕರ್‌ನಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಬಾರದು. ಈ ರೀತಿ ಮಾಡಿದರೆ ಪ್ರತಿಪಕ್ಷಗಳ ಐಕ್ಯತೆಯಲ್ಲಿ ಬಿರುಕು ಮೂಡಬಹುದು" ಎಂದಿದ್ದಾರೆ.

ಸರ್ವಾಧಿಕಾರದಿಂದ 2024 ರ ನಂತರ ದೇಶದಲ್ಲಿ ಆಂತರಿಕ ಸಂಘರ್ಷ ಉಂಟಾಗಬಹುದು. ಬಿಜೆಪಿ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಒಗ್ಗಟ್ಟಾಗಿರುವುದು ಅತ್ಯಂತ ಅಗತ್ಯ ಎಂದು ಠಾಕ್ರೆ ಹೇಳಿದ್ದಾರೆ. "ಭಾರತದಲ್ಲಿ ಸರ್ವಾಧಿಕಾರ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಪ್ರತಿಪಕ್ಷಗಳು ಪರಸ್ಪರ ಕಚ್ಚಾಡುವುದನ್ನು, ಕೆಟ್ಟದಾಗಿ ಮಾತನಾಡುವುದನ್ನು ತಡೆಯಬೇಕು" ಎಂದು ಠಾಕ್ರೆ ವಿನಂತಿಸಿದ್ದಾರೆ.

ಈ ವಿಷಯದ ಕುರಿತು ಮಹಾರಾಷ್ಟ್ರ ಕಾಂಗ್ರೆಸ್‌ನ ಮುಖ್ಯ ವಕ್ತಾರ ಅತುಲ್‌ ಲೋಧೆ ಹಿಂದೂಸ್ತಾನ್‌ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಾವರ್ಕರ್‌ ಕುರಿತು ನಮ್ಮ ನಿಲುವು ಸ್ಪಷ್ಟವಾಗಿದೆ. ಜೈಲಿನಿಂದ ಹೊರಬರುವ ಉದ್ದೇಶಕ್ಕಾಗಿ ಸಾವರ್ಕರ್‌ ಕ್ಷಮೆ ಯಾಚಿಸಿರುವುದು ಸತ್ಯ. ಜೈಲಿನಿಂದ ಹಿಂತುರುಗಿ ಬಂದ ಬಳಿಕ ಅವರು ದೇಶದಲ್ಲಿ ಹಿಂದೂ-ಮುಸ್ಲಿಂ ದ್ವೇಷವನ್ನು ಉತ್ತೇಜಿಸಿದ್ದಾರೆ. ಇದು ಭಾರತದ ವಿಭಜನೆಗೆ ಕಾರಣವಾಯಿತು. ರಾಜಕೀಯ ಸಿದ್ಧಾಂತವನ್ನು ಬದಿಗಿಟ್ಟು ಪ್ರಜಾಪ್ರಭುತ್ವವನ್ನು ಉಳಿಸುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಠಾಕ್ರೆ ಮತ್ತು ಕಾಂಗ್ರೆಸ್ ಒಟ್ಟಾಗಿ ಬಂದಿವೆ. ಪ್ರಜಾಪ್ರಭುತ್ವವನ್ನು ಉಳಿಸುವುದು ಅತ್ಯಗತ್ಯ. ರಾಜಕೀಯ ವ್ಯಕ್ತಿಗಳ ಬಗ್ಗೆ ಪಕ್ಷಗಳ ನಿಲುವುಗಳನ್ನು ಜತೆಯಾಗಿಸಬಾರದು" ಎಂದು ಅತುಲ್‌ ಲೋಧೆ ಹಿಂದೂಸ್ತಾನ್‌ ಟೈಮ್ಸ್‌ಗೆ ಹೇಳಿದ್ದಾರೆ.

ಸಮಾವೇಶದಲ್ಲಿ ಬಿಜೆಪಿಯನ್ನು ಭ್ರಷ್ಟ ಜನತಾ ಪಕ್ಷ ಎಂದು ಠಾಕ್ರೆ ಕರೆದಿದ್ದಾರೆ. "ಠಾಕ್ರೆಗಳು ಮತ್ತು ಶಿವಸೇನೆ ನಡುವಿನ ಸಂಬಂಧವನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಶಿವಸೇನೆ ಪಕ್ಷದ ಚಿಹ್ನೆ ಶಿಂಧೆ ಅವರ ಬಳಿ ಹೆಚ್ಚು ಕಾಲ ಉಳಿಯುವುದಿಲ್ಲ" ಎಂದು ಸೇನಾ (ಯುಬಿಟಿ) ಮುಖ್ಯಸ್ಥರು ಹೇಳಿದ್ದಾರೆ. ಇದೇ ಸಮಯದಲ್ಲಿ "ಸಿಎಂ ಮತ್ತು 40 ಬಂಡಾಯ ಶಾಸಕರನ್ನು ಖಂಡೋಜಿ ಖೋಪ್ಡೆ (ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿ ದೇಶದ್ರೋಹಿ) ವಂಶಸ್ಥರು" ಎಂದು ಉದ್ಧವ್ ಠಾಕ್ರೆ ಕರೆದಿದ್ದಾರೆ.

ಆಡಳಿತಾರೂಢ ಶಿಂಧೆ-ಫಡ್ನವೀಸ್ ಮೈತ್ರಿಕೂಟಕ್ಕೆ ಧೈರ್ಯವಿದ್ದರೆ ಚುನಾವಣೆಯನ್ನು ಘೋಷಿಸುವಂತೆ ಸವಾಲನ್ನೂ ಹಾಕಿದ್ದಾರೆ." "ನೀವು ಮೋದಿ ಹೆಸರಿನಲ್ಲಿ ಮತ ಕೇಳುತ್ತೀರಿ, ನಾನು ಬಾಳಾಸಾಹೇಬ್ ಠಾಕ್ರೆ ಹೆಸರಿನಲ್ಲಿ ಮತ ಕೇಳುತ್ತೇನೆ" ಎಂದು ಸಮಾವೇಶದಲ್ಲಿ ಠಾಕ್ರೆ ಹೇಳಿದರು.

IPL_Entry_Point