ಕನ್ನಡ ಸುದ್ದಿ  /  Nation And-world  /  World Environment Day Easy Ways To Beat Plastic Pollution Human Health Reduce Single Use Plastics Kannada News Rst

World Environment Day: ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ಇಲ್ಲಿದೆ ಕೆಲವು ಸುಲಭ ವಿಧಾನ; ಈ ಮಾರ್ಗಗಳನ್ನು ಅನುಸರಿಸಿ ಪರಿಸರ ಉಳಿಸಿ

Ways to Beat Plastic Pollution: ಪ್ರತಿವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಪರಿಸರ ದಿನದ ಥೀಮ್‌ ʼಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರಗಳುʼ. ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ನೆರವಾಗುವ ವಿಧಾನಗಳು ಯಾವುವು, ಅವುಗಳನ್ನು ನಾವು ಹೇಗೆ ಪಾಲಿಸಬಹುದು ಎಂಬ ಕುರಿತು ಇಲ್ಲಿದೆ ಸಲಹೆ.

ವಿಶ್ವ ಪರಿಸರ ದಿನ; ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ
ವಿಶ್ವ ಪರಿಸರ ದಿನ; ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ

ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು ಪರಿಸರ ದಿನದ ಆಚರಣೆಗೆ ಕರೆ ಕೊಟ್ಟಿತ್ತು. ಪರಿಸರ ರಕ್ಷಣೆಯ ಮಹತ್ವ ಹಾಗೂ ಪರಿಸರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶ.

ಪ್ರತಿವರ್ಷವೂ ಒಂದೊಂದು ಥೀಮ್‌ನಲ್ಲಿ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ʼಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರಗಳುʼ ಎಂಬುದು ಥೀಮ್‌ ಆಗಿದೆ. ನಮ್ಮ ಪರಿಸರದ ಮೇಲೆ ಪ್ಲಾಸ್ಟಿಕ್‌ ಮಾಲಿನ್ಯದ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ಉತ್ತೇಜಿಸುವುದು ಈ ಥೀಮ್‌ನ ಗುರಿಯಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯವು ಪರಿಸರ ವ್ಯವಸ್ಥೆ, ಜಲ ಹಾಗೂ ಜಲಚರಜೀವಿಗಳು, ವನ್ಯಜೀವಿಗಳು, ಮಾನವನ ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅಲ್ಲದೆ ಇದು ಇಂದು ಜಾಗತಿಕ ಸಮಸ್ಯೆಯಾಗಿದೆ.

ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಪ್ಲಾಸ್ಟಿಕ್‌ ಮಾಲಿನ್ಯದ ವಿರುದ್ಧ ಜಾಗೃತಿ, ಹೋರಾಟ, ಅಭಿಯಾನಗಳನ್ನು ನಡೆಸುತ್ತಿವೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇದಕ್ಕೂ ಒತ್ತು ನೀಡಿವೆ. ಆದರೂ ಪ್ಲಾಸ್ಟಿಕ್‌ ಬಳಕೆಯ ಪ್ರಮಾಣ ಕಡಿಮೆಯಾಗಿಲ್ಲ. ಇಂದು ಪ್ಲಾಸ್ಟಿಕ್‌ ನಮ್ಮ ಜೀವನಸಂಗಾತಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ತಿನ್ನುವ ಪ್ಲೇಟ್‌ನಿಂದ ಕುಡಿಯುವ ನೀರಿನವರೆಗೆ ಎಲ್ಲವೂ ಪ್ಲಾಸ್ಟಿಕ್‌ ಆಗಿದ್ದು, ಇವುಗಳಿಂದ ದೂರ ಉಳಿಯವುದು ಕಷ್ಟಸಾಧ್ಯವಾಗಿದೆ. ಆದರೂ ನಮ್ಮ ಜಗತ್ತಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ. ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಿ ಪರಿಸರ ಉಳಿಸಲು ನಾವು ನೀಡಬಹುದಾದ ಕೊಡುಗೆ ಏನು? ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ನಾವು ಅನುಸರಿಸುಬಹುದಾದ ಮಾರ್ಗಗಳೇನು ನೋಡಿ.

ಏಕ ಬಳಕೆಯ ಪ್ಲಾಸ್ಟಿಕ್‌ ಬಳಸುವುದನ್ನು ಕಡಿಮೆ ಮಾಡಿ

ಪ್ಲಾಸ್ಟಿಕ್‌ ಚೀಲಗಳು, ನೀರಿನ ಬಾಟಲಿಗಳು, ಕಾಫಿ ಕಪ್‌, ಸ್ಟ್ರಾ ಮುಂತಾದ ಏಕ ಬಳಕೆಯ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಕಡಿಮೆ ಮಾಡಿ. ಅದರ ಬದಲು ಮಣ್ಣು, ಗಾಜು, ಸ್ಟೀಲ್‌, ಬಟ್ಟೆ ಕವರ್‌ ಬಳಸಿ. ಶಾಂಪಿಂಗ್‌ ಹೋಗುವಾಗ ಮರೆಯದೇ ಬಟ್ಟೆಯ ಬ್ಯಾಗ್‌ ತೆಗೆದುಕೊಂಡು ಹೋಗಲು ಮರೆಯದಿರಿ.

ಪ್ಲಾಸ್ಟಿಕ್‌ ಸ್ಟ್ರಾ ಬಳಸಬೇಡಿ

ಎಳನೀರು, ಪಾನೀಯಗಳನ್ನು ಕುಡಿಯುವಾಗ ಪ್ಲಾಸ್ಟಿಕ್‌ ಸ್ಟ್ರಾಗಳನ್ನು ನೀಡಿದರೆ ನಿರಾಕರಿಸಿ. ಅದರ ಬದಲು ಮರು ಬಳಕೆಯ ಉತ್ಪನ್ನ ಅಥವಾ ಜೈವಿಕ ವಿಘಟನೆ ಹೊಂದುವ ಪರ್ಯಾಯಗಳನ್ನು ಬಳಸಿ. ಅನಿವಾರ್ಯ ಸಂದರ್ಭದಲ್ಲಿ ಸ್ಟ್ರಾ ಬಳಸಬೇಕಾದರೆ ಸ್ಟೀಲ್‌ ಅಥವಾ ಬಿದಿರಿನ ಸ್ಟ್ರಾ ಬಳಸಿ.

ಸಮರ್ಪಕ ವಿಧಾನದಲ್ಲಿ ತ್ಯಾಜ್ಯ ನಿರ್ವಹಣೆ

ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಮತ್ತು ಇತರ ತ್ಯಾಜ್ಯಗಳಿಂದ ಪ್ರತ್ಯೇಕಿಸುವ ಮೂಲಕ ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ. ನಿಮ್ಮ ಮನೆ ಹಾಗೂ ಕಚೇರಿ, ಕಾರ್ಯಕ್ರಮಗಳಲ್ಲಿ ಮರುಬಳಕೆಯ ವಸ್ತುಗಳಿಗೆ ಹೆಚ್ಚು ಆದ್ಯತೆ ಕೊಡಿ.

ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸಿ

ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸಮುದಾಯಗಳು ಆಯೋಜಿಸುವ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮ್ಮ ಮನೆ ಹಾಗೂ ಸುತ್ತಲಿನ ಪ್ರದೇಶಗಳ ಸ್ಪಚ್ಛತೆಗೆ ಆದ್ಯತೆ ನೀಡಿ. ನಿಮ್ಮ ಊರಿನಲ್ಲಿ ಒಂದು ಸಂಘಟನೆ ಮಾಡಿಕೊಂಡು ಸ್ವಚ್ಛತಾ ಸಪ್ತಾಹಗಳನ್ನು ಆಯೋಜಿಸಿ. ಪರಿಸರ, ಜಲಮೂಲಗಳಿಗೆ ಪ್ಲಾಸ್ಟಿಕ್‌ ತ್ಯಾಜ್ಯ ಸೇರುವುದಕ್ಕೆ ತಡೆ ಹಾಕಿ.

ಜನರಲ್ಲಿ ಅರಿವು ಮೂಡಿಸಿ

ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದವರಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್‌ ಮಾಲಿನ್ಯದ ಪರಿಣಾಮದ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲು ಮತ್ತು ಸಮರ್ಥನೀಯ ಪರ್ಯಾಯಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿ.

ಸುಸ್ಥಿರ ಪ್ಯಾಕೇಜಿಂಗ್‌ಗೆ ಆದ್ಯತೆ ನೀಡಿ

ಶಾಪಿಂಗ್‌ ಮಾಡುವಾಗ ಕನಿಷ್ಠ ಪ್ಯಾಕೇಜಿಂಗ್‌ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಪ್ಯಾಕೇಜಿಂಗ್‌ ಹೊಂದಿರುವ ಉತ್ಪನ್ನಗಳನ್ನು ನೋಡಿ ಆಯ್ಕೆ ಮಾಡಿ. ಸುಸ್ಥಿರ ಹಾಗೂ ಮರು ಬಳಕೆ ಮಾಡಬಹುದಾದ ಪ್ಯಾಕೇಜಿಂಗ್‌ ಇರುವ ವಸ್ತುಗಳ ಖರೀದಿಗೆ ಹೆಚ್ಚು ಆದ್ಯತೆ ನೀಡಿ.

ಪ್ಲಾಸ್ಟಿಕ್‌ ಮುಕ್ತ ಸಮಾಜದ ಸವಾಲು ಸ್ವೀಕರಿಸಿ

ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ ಮಾಡುವ ಸವಾಲಿಗೆ ನಿಮ್ಮ ಒಡ್ಡಿಕೊಳ್ಳಿ. ಪ್ಲಾಸ್ಟಿಕ್‌ ರಹಿತ ಜೀವನವನ್ನು ನೀವು ಮೊದಲು ರೂಡಿಸಿಕೊಳ್ಳಿ. ನಂತರ ಅದನ್ನು ಅನುಸರಿಸಲು ಹಾಗೂ ಪಾಲಿಸಲು ಇತರರಿಗೆ ಸಲಹೆ ನೀಡಿ.

ಮರು ಬಳಕೆಯ ಪ್ಲಾಸ್ಟಿಕ್‌ ಬಳಸಿ

ಪ್ಲಾಸ್ಟಿಕ್‌ ಬಳಸುವುದು ಅನಿವಾರ್ಯ ಎನ್ನಿಸಿದರೆ ಮರು ಬಳಕೆ ಸಾಧ್ಯವಾಗುವ ಪ್ಲಾಸ್ಟಿಕ್‌ಗಳನ್ನು ಬಳಸಿ. ಇದರಿಂದ ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಮರು ಬಳಕೆಯ ಕಂಟೇನರ್‌, ಡಬ್ಬಿಗಳನ್ನು ಬಳಸಿ.