Super Scoopers: 350 ಕಿಮೀ ವೇಗ, ನದಿಗೆ ತಾಗಿಕೊಂಡು ಹಾರಿದರೆ ಟ್ಯಾಂಕ್ ಭರ್ತಿ; ಕಾಡ್ಗಿಚ್ಚು ಶಮನದಲ್ಲಿ ಸೂಪರ್ ಸ್ಕೂಪರ್ ಎಂಬ ಹೀರೋ
Super Scoopers: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಶಮನಕ್ಕೆ ಸೂಪರ್ ಸ್ಕೂಪರ್ಸ್ ಎಂಬ ವಿಮಾನಗಳ ಕಾರ್ಯ ಎಲ್ಲರ ಗಮನ ಸೆಳೆದಿದೆ. ನೆಲದ ಮೇಲೆ ಲ್ಯಾಂಡ್ ಆಗದೆ ನದಿ/ಸಮುದ್ರದ ಮೇಲೆ ಕೆಲವೇ ಸೆಕೆಂಡ್‌ಗಳ ಕಾಲ ಉಜ್ಜಿಕೊಂಡು ಸಾಗಿ ನೀರು ತುಂಬಿಸಿಕೊಂಡು ಬರುವ ಇವುಗಳ ಕಾರ್ಯವೈಖರಿ ಅದ್ಭುತ ಎನ್ನಬಹುದು.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ಕೆನ್ನಾಲಿಗೆಯು ಜೀವಗಳನ್ನು ಬಲಿತೆಗೆದುಕೊಂಡು, ಸುಂದರವಾದ ಮನೆಗಳನ್ನು, ಕಟ್ಟಡಗಳನ್ನು ಕರಕಲಾಗಿಸುತ್ತ ಸಾಗುತ್ತಿರುವ ಸಂದರ್ಭದಲ್ಲಿ ಸೂಪರ್ ಸ್ಕೂಪರ್ಸ್ ಎಂಬ ಕೆನಡಾದ ಸೂಪರ್ ವಿಮಾನಗಳು ರಕ್ಷಣೆಗೆ ಬಂದಿವೆ. ಕಾಡ್ಗಿಚ್ಚನ್ನು ನಂದಿಸಲು ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಈ ಸಿಎಲ್ 455 ವಿಮಾನವು ಅನೇಕ ಸುಧಾರಿತ ತಂತ್ರಜ್ಞಾನ, ವಿಶೇಷಗಳನ್ನು ಹೊಂದಿದೆ. ಈ ವಿಮಾನವು ಎಲ್ಲೂ ಲ್ಯಾಂಡ್ ಆಗದೆ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಗತ್ಯವಿದ್ದರೆ ಫೋಮ್ ಜತೆ ನೀರನ್ನು ಬೆರೆಸಿ ಸಿಂಪಡಿಸಬಲ್ಲದು. ಹದಿನಾರು ಸಾವಿರ ಗ್ಯಾಲನ್ ನೀರನ್ನು (ಸುಮಾರು 60 ಸಾವಿರ ಲೀಟರ್) 350 ಕಿ.ಮೀ. ವೇಗದಲ್ಲಿ ತಂದು ಉರಿಯುವ ಬೆಂಕಿಯ ಜ್ವಾಲೆಗಳ ಮೇಲೆ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಇವು ನೀರನ್ನು ತಂದು ಬೆಂಕಿ ಮೇಲೆ ಸಿಂಪಡಿಸಿ ಮತ್ತೆ ನೀರು ಇರುವಲ್ಲಿಗೆ ಬಂದು ಲ್ಯಾಂಡ್ ಆಗದೆ ನೀರು ತುಂಬಿಸಿಕೊಂಡು ಮತ್ತೆ ತ್ವರಿತವಾಗಿ ಬೆಂಕಿ ನಂದಿಸಿ ಬರಲಿದೆ. ಈ ರೀತಿ ಹಲವು ಬಾರಿ ಪುನಾರವರ್ತನೆ ಮಾಡುತ್ತ ಬೆಂಕಿ ನಂದಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ. ಏರ್ ಟ್ಯಾಂಕರ್‌ಗಳನ್ನು ಹೊಂದಿದ ಹೆಲಿಕಾಪ್ಟರ್‌ಗಳಿಗಿಂತ ಸೂಪರ್ ಸ್ಕೂಪರ್‌ಗಳು ಹೆಚ್ಚು ಪರಿಣಾಮಕಾರಿಯಾಗಿವೆ.
ಹೆಲಿಕಾಪ್ಟರ್‌ಗಳ ಬಕೆಟ್‌ಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ನೀರು ತುಂಬುತ್ತದೆ. ಏರ್ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳಲು ನೆಲಕ್ಕೆ ಇಳಿಯಬೇಕು. ಆದರೆ, ಸ್ಕೂಪರ್‌ಗಳು ಹತ್ತಿರದ ಯಾವುದಾದರೂ ನೀರಿನ ಮೂಲಗಳ (ನದಿ, ಸಮುದ್ರ ಇತ್ಯಾದಿ) ಬಳಿ ಹೋಗಿ ನೆಲದ ಮೇಲೆ ಇಳಿಸದೆಯೇ ನೀರು ತುಂಬಿಸಿಕೊಳ್ಳಬಹುದು. ಅಂದರೆ, ಇವು ನದಿಗಳ ಮೇಲೆ ತಮ್ಮ ಹೊಟ್ಟೆಯನ್ನು ತಾಗಿಸುತ್ತ 180 ಕಿಮೀ ವೇಗದಲ್ಲಿ ಸಾಗುತ್ತವೆ. ಆ ಸಮಯದಲ್ಲಿ ನೀರು ಇದರ ಟ್ಯಾಂಕ್‌ನೊಳಗೆ ಹೋಗುತ್ತದೆ.
ಸೂಪರ್ ಸ್ಕೂಪರ್ ಹೇಗೆ ಕೆಲಸ ಮಾಡುತ್ತದೆ?
ಸೂಪರ್ ಸ್ಕೂಪರ್ 93 ಅಡಿ ಅಗಲದ ರೆಕ್ಕೆಗಳನ್ನು ಹೊಂದಿದೆ. ಇದು 65 ಅಡಿ ಉದ್ದವನ್ನು ಹೊಂದಿದೆ. ಫೋಮ್ ಜತೆ ನೀರನ್ನು ಬೆರೆಸಿಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ. ಪೈಲಟ್ ವಿಮಾನವನ್ನು ನೀರಿನ ಮೇಲ್ಮೈ ಮೇಲೆ ಸ್ಕೀಮ್ ಮಾಡುತ್ತಾರೆ. ನೀರನ್ನು ಪ್ರೋಬ್ ಮೂಲಕ ಟ್ಯಾಂಕ್‌ಗೆ ಸ್ಕೂಪ್ ಮಾಡಲಾಗುತ್ತದೆ. ಈ ರೀತಿ ನೆಲದ ಮೇಲೆ ಇಳಿಸದೆಯೇ ನೀರಿನ ಮೇಲ್ಮೆಯನ್ನು ಉಜ್ಜಿಕೊಂಡು ಟ್ಯಾಂಕ್‌ನಲ್ಲಿ ನೀರು ತುಂಬಲು ಕೇವಲ 12 ಸೆಕೆಂಡು ಸಾಕಾಗುತ್ತದೆ. ಪೈಪ್ ಮೂಲಕವೂ ನೀರು ತುಂಬಬಹುದು. ಒಮ್ಮೆ ನೀರು ತುಂಬಿದ ಬಳಿಕ ವಿಮಾನವು ಗಂಟೆಗೆ 350 ಕಿಮೀ ವೇಗದಲ್ಲಿ ವಿಪತ್ತು ಪೀಡಿತ ಪ್ರದೇಶಕ್ಕೆ ಹಾರುತ್ತದೆ. ಪೈಲಟ್ ಒಂದೇ ಬಾರಿಗೆ ನೀರನ್ನು ಬೆಂಕಿ ಮೇಲೆ ಹರಿಸಬಹುದು ಅಥವಾ ನಾಲ್ಕು ಬಾಗಿಲುಗಳ ಮೂಲಕ ವಿಶಾಲ ಪ್ರದೇಶದ ಮೇಲೆ ಸ್ಪ್ರೆ ಮಾಡಬಹುದು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಲಾಸ್ ಏಂಜಲೀಸ್‌ನ ಕೌಂಟಿ ಅಗ್ನಿಶಾಮಕ ಇಲಾಖೆಯು ಎರಡು ಸೂಪರ್ ಸ್ಕೂಪರ್‌ಗಳನ್ನು ಗುತ್ತಿಗೆಗೆ ಪಡೆದಿದೆ. ಇವುಗಳಲ್ಲಿ ಒಂದು ವಿಮಾನವು ಅಕ್ರಮವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಾನಿಗೀಡಾಗಿದೆ. ಪೈಲಟ್‌ಗಳಿಗೆ ಡ್ರೋನ್ ಡಿಕ್ಕಿ ಹೊಡೆದಿರುವುದು ತಿಳಿದಿಲ್ಲ. ಈ ವಿಮಾನ ಸುರಕ್ಷಿತವಾಗಿ ಇಳಿದಿದೆ. ಈ ವಿಮಾನದ ರಿಪೇರಿ ಬಳಿಕ ಮತ್ತೆ ಕಾರ್ಯಾರಂಭ ಮಾಡಬಹುದು. ಲಾಸ್ ಏಜಂಲೀಸ್‌ಗೆ ಇನ್ನೂ ಎರಡು ಸೂಪರ್ ಸ್ಕೂಪರ್‌ಗಳನ್ನು ಒದಗಿಸುವುದಾಗಿ ಕೆನಡಾದ ಎಸ್‌ಒಪಿಎಫ್‌ಇಯು ತಿಳಿಸಿದೆ.
