Explained; ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explained; ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು

Explained; ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು

ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಂಡಿದೆ. ಜನವರಿ ಮಧ್ಯಭಾಗದಲ್ಲಿ ಶುರುವಾಗಿರುವ ಈ ಪ್ರತಿಭಟನೆಗಳು ತೀವ್ರಗೊಳ್ಳಲು 3 ಕಾರಣಗಳು. ಇನ್ನುಳಿದಂತೆ ಪ್ರತಿ ರಾಷ್ಟ್ರದಲ್ಲೂ ರೈತರು ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು. ಫ್ರಾನ್ಸ್‌ನಲ್ಲಿ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತ ಮಗಳು ತನ್ನ ಪುಟಾಣಿ ಟ್ರ್ಯಾಕ್ಟರ್ ಜತೆಗೆ ಕಾಣಿಸಿದ್ದು ಹೀಗೆ. ಇನ್ನೊಂದೆಡೆ ಟ್ರ್ಯಾಕ್ಟರ್‌ಗಳನ್ನೇರಿ ರಸ್ತೆಗಿಳಿದು ಪ್ರತಿಭಟಿಸಿದ ರೈತರು.
ಫ್ರಾನ್ಸ್, ಬೆಲ್ಜಿಯಂ ಸೇರಿ ಯುರೋಪ್ ರಾಷ್ಟ್ರಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಳ್ಳಲು 3 ಕಾರಣಗಳು. ಫ್ರಾನ್ಸ್‌ನಲ್ಲಿ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತ ಮಗಳು ತನ್ನ ಪುಟಾಣಿ ಟ್ರ್ಯಾಕ್ಟರ್ ಜತೆಗೆ ಕಾಣಿಸಿದ್ದು ಹೀಗೆ. ಇನ್ನೊಂದೆಡೆ ಟ್ರ್ಯಾಕ್ಟರ್‌ಗಳನ್ನೇರಿ ರಸ್ತೆಗಿಳಿದು ಪ್ರತಿಭಟಿಸಿದ ರೈತರು. (AFP)

ಫ್ರಾನ್ಸ್, ಬೆಲ್ಜಿಯಂ, ಇಟಲಿ ಸೇರಿ ಯುರೋಪ್‌ನ ವಿವಿಧ ದೇಶಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಕಳೆದ ಮೂರ್ನಾಲ್ಕು ದಿನಗಳ ಕಾಲ ರಸ್ತೆ ತಡೆಗಳನ್ನು ಮಾಡಿದ್ದರಿಂದ ಜನಜೀವನವನ್ನು ಬಾಧಿಸಿದೆ. ಈ ನಡುವೆ, ಯುರೋಪ್ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿದ ಕಾರಣ, ಎರಡು ಪ್ರಮುಖ ರೈತ ಒಕ್ಕೂಟಗಳು ಪ್ರತಿಭಟನೆ ಹಿಂಪಡೆಯಲು ತೀರ್ಮಾನಿಸಿವೆ.

ಯುರೋಪ್ ಒಕ್ಕೂಟದ 27 ದೇಶಗಳ ರೈತರು ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದು, ಬರ್ಲಿನ್‌ನಿಂದ ಪ್ಯಾರಿಸ್, ಬ್ರಸೆಲ್ಸ್, ರೋಮ್‌ಗೆ ಹೋಗುವ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ಮುಂದುವರಿಸಿದ್ದಾರೆ. ಸಾವಿರಾರು ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಸಂಚಾರ ಅಸ್ತವ್ಯಸ್ತಗೊಳಿಸಿದ್ದಾರೆ.

ಈ ಪ್ರತಿಭಟನೆಯ ಕಾವು ಜನಜೀವನದ ಮೇಲಷ್ಟೆ ಅಲ್ಲ, ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಉಕ್ರೇನ್‌ಗೆ ನೆರವು ಒದಗಿಸುವ ವಿಚಾರವಾಗಿ ಬ್ರಸೆಲ್ಸ್‌ನಲ್ಲಿ ಯುರೋಪ್ ಒಕ್ಕೂಟದ ಮಹತ್ವದ ಸಭೆಗೆ ಮುಂಚಿತವಾಗಿ ರೈತರು ಅಲ್ಲಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ತೆರಿಗೆ, ನಿರ್ಬಂಧಗಳನ್ನು ತೆರವುಗೊಳಿಸುವಂತೆ ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ.

ಯುರೋಪ್‌ನ ಯಾವ ದೇಶದಲ್ಲಿ ಯಾಕೆ ಪ್ರತಿಭಟನೆ - ಇಲ್ಲಿದೆ ಕಾರಣಗಳ ವಿವರ

ಯುರೋಪ್‌ನ ಫ್ರಾನ್ಸ್, ಬೆಲ್ಜಿಯಂ, ಪೋಲಂಡ್, ಸ್ಪೇನ್‌, ರೊಮಾನಿಯಾ, ಗ್ರೀಸ್‌ ಮುಂತಾದ ದೇಶಗಳಲ್ಲಿ ರೈತ ಪ್ರತಿಭಟನೆ ತೀವ್ರಗೊಂಡಿದೆ. ಈ ಎಲ್ಲ ದೇಶಗಳಲ್ಲಿ ಸಾಮಾನ್ಯ ಕಾರಣ 3 ಆಗಿದ್ದರೂ, ದೇಶವಾರು ಗಮನಿಸಿದರೆ ಸ್ಥಳೀಯ ಕಾರಣಗಳೂ ಗಮನಸೆಳೆಯುತ್ತವೆ.

ಫ್ರಾನ್ಸ್‌ನಲ್ಲಿ ರೈತ ಪ್ರತಿಭಟನೆಗೆ 5 ಕಾರಣ

1) ಸರ್ಕಾರದ ಕಚೇರಿಗಳಲ್ಲಿ, ಇಲಾಖೆಗಳಲ್ಲಿ ಕೆಂಪು ಪಟ್ಟಿ (ರೆಡ್ ಟೇಪಿಸಂ) ಕಾರಣ ವಿಳಂಬವಾಗುತ್ತಿರುವ ಕಾರ್ಯಗಳು

2) ಹೆಚ್ಚುತ್ತಿರುವ ಡೀಸೆಲ್ ಬೆಲೆ, ವಿನಾಯಿತಿ ಕಡಿತದ ತೀರ್ಮಾನ

3) ಆದಾಯವನ್ನು ಹೆಚ್ಚಿಸಲು ಹೆಚ್ಚಿನ ಬೆಂಬಲ ಬೇಕು. ಆಹಾರ ಹಣದುಬ್ಬರವನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಅನೇಕ ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಇಂಧನ, ರಸಗೊಬ್ಬರ ಮತ್ತು ಸಾರಿಗೆ ಸಂಬಂಧಿತ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ

4) ನೀರಾವರಿ ಲಭ್ಯತೆಯ ಕೊರತೆ

5) ಪಶು ಸಂಗೋಪನೆ ಕುರಿತ ಟೀಕೆ ಮತ್ತು ಕೀಟನಾಶಕಗಳ ಅತಿಯಾದ ಬಳಕೆ

ರೊಮಾನಿಯಾದಲ್ಲಿ ರೈತ ಪ್ರತಿಭಟನೆಗೆ 5 ಕಾರಣ

1) ಡೀಸೆಲ್‌ನ ದುಬಾರಿ ಬೆಲೆಯ ವಿರುದ್ಧ ಜನವರಿಯ ಮಧ್ಯ ಭಾಗದಲ್ಲೇ ನಡೆದ ರೈತ ಪ್ರತಿಭಟನೆಗಳು

2) ವಿಮೆಯ ಪ್ರೀಮಿಯಂ ದುಬಾರಿ

3) ಯುರೋಪ್ ಒಕ್ಕೂಟದ ಪರಿಸರ ನಿಯಮ, ನಿಬಂಧನೆಗಳು

4) ಉಕ್ರೇನ್‌ನಿಂದ ಅಗ್ಗದ ಕೃಷಿ ಉತ್ಪನ್ನಗಳ ಆಮದು

5) ಡೀಸೆಲ್ ದರ, ವಿಮೆ ಪ್ರೀಮಿಯಂ, ಸಬ್ಸಿಡಿ ನೀಡಿಕೆಯಲ್ಲಿ ಸರ್ಕಾರ ಕಾಳಜಿ ತೋರಿಸದೇ ಇರುವುದು

ಬೆಲ್ಜಿಯಂನಲ್ಲಿ ರೈತ ಪ್ರತಿಭಟನೆಗೆ 3 ಕಾರಣ

1) ಯುರೋಪ್ ಒಕ್ಕೂಟದ ನಿಯಮ ಪ್ರಕಾರ, ಕೃಷಿ ಜಮೀನಿನಲ್ಲಿ ಶೇಕಡ 4 ಪಾಲನ್ನು ಪಾಳುಭೂಮಿಯಾಗಿ ಬಿಡಬೇಕು. ಇದು ರೈತರ ಆಕ್ರೋಶಕ್ಕೆ ಒಂದು ಕಾರಣ.

2) ಆಮದು ಪ್ರಮಾಣದ ಮೇಲೆ ಮಿತಿ ಇಲ್ಲ. ಅಗ್ಗದ ಉತ್ಪನ್ನಗಳು ದೇಶಕ್ಕೆ ಬರುತ್ತಿರುವ ಕಾರಣ ದೇಶದ ಕೃಷಿ ಉತ್ಪನ್ನಗಳ ಮೇಲೆ ಮಾರುಕಟ್ಟೆಯಲ್ಲಿ ಕೆಟ್ಟ ಪರಿಣಾಮ.

3) ದೊಡ್ಡ, ಬೃಹತ್ ಕೃಷಿಗೆ ಸಬ್ಸಿಡಿ ನೆರವು, ಉಳಿದವರಿಗೆ ಇಲ್ಲ

ಪೋಲಂಡ್‌ನಲ್ಲಿ ರೈತ ಪ್ರತಿಭಟನೆಗೆ 2 ಕಾರಣ

1) ರಷ್ಯಾ ಆಕ್ರಮಣದ ಬಳಿಕ ಉಕ್ರೇನ್‌ನಿಂದ ಅಗ್ಗದ ಕೃಷಿ ಉತ್ಪನ್ನಗಳ ಆಮದು

2) ಯುರೋಪ್ ಒಕ್ಕೂಟದ ನಿಯಮ, ನಿರ್ಬಂಧಗಳು

ಸ್ಪೇನ್‌ನಲ್ಲಿ ರೈತ ಪ್ರತಿಭಟನೆಗೆ 2 ಕಾರಣ

1) ಬ್ರಸೆಲ್ಸ್‌ನಲ್ಲಿ ರಚಿಸಲಪಟ್ಟ "ಅಧಿಕಾರಶಾಹಿ" ಧೋರಣೆಯ ನೀತಿ ನಿಯಮಗಳು, ಬೆಳೆಗಳ ಲಾಭಾಂಶವನ್ನು ಇಲ್ಲವಾಗಿಸುತ್ತಿದೆ.

2) ಮುಕ್ತ ವ್ಯಾಪಾರ ಒಪ್ಪಂದಗಳ ಪರಿಣಾಮ ಅಗ್ಗದ ಕೃಷಿ ಉತ್ಪನ್ನಗಳ ಆಮದಿಗೆ ವೇದಿಕೆ ಒದಗಿಸುತ್ತಿದೆ.

ಪೋರ್ಚುಗಲ್‌ನಲ್ಲಿ ರೈತ ಪ್ರತಿಭಟನೆಗೆ 3 ಕಾರಣ

1) ಅಗತ್ಯಕ್ಕೆ ತಕ್ಕಷ್ಟು ನೆರವು ಸರ್ಕಾರದಿಂದ ಸಿಗುತ್ತಿಲ್ಲ, ಸಬ್ಸಿಡಿಯಲ್ಲೂ ಕಡಿತ.

2) ಸರ್ಕಾರದ ಮಟ್ಟದಲ್ಲಿ ಹೆಚ್ಚಾಗಿರುವ ಕೆಂಪು ಪಟ್ಟಿ (ರೆಡ್ ಟೇಪಿಸಂ) ಕಾರಣ ವಿಳಂಬವಾಗುತ್ತಿರುವ ಕಾರ್ಯಗಳು

3) ದೀರ್ಘಕಾಲದ ಬರಗಾಲಕ್ಕೆ ಪರಿಹಾರವಾಗಿ 200 ಮಿಲಿಯನ್ ಯುರೋ ಸೇರಿ 500 ಮಿಲಿಯನ್ ಯುರೋಗಳ ತುರ್ತು ಸಹಾಯ ಪ್ಯಾಕೇಜ್ ಅನ್ನು ಉಸ್ತುವಾರಿ ಸರ್ಕಾರ ಘೋಷಿಸಿದೆ. ಆದರೆ ಪ್ರಯೋಜನವಾಗಿಲ್ಲ.

ಗ್ರೀಸ್‌ನಲ್ಲಿ ರೈತ ಪ್ರತಿಭಟನೆಗೆ 3 ಕಾರಣ

1) 2023 ರ ಪ್ರವಾಹದ ಕಾರಣ ಸಂಭವಿಸಿದ ಬೆಳೆ ಹಾನಿ ಮತ್ತು ಜಾನುವಾರುಗಳಿಗೆ ಹೆಚ್ಚಿನ ಸಹಾಯಧನ ಮತ್ತು ತ್ವರಿತ ಪರಿಹಾರಕ್ಕಾಗಿ ಬೇಡಿಕೆಗಳು

2) ಡೀಸೆಲ್ ತೆರಿಗೆ ಮತ್ತು ಹೆಚ್ಚುತ್ತಿರುವ ವಿದ್ಯುತ್ ಬಿಲ್

3) ಪಾಳು ಭೂಮಿ ನಿಯಮ ಮತ್ತು ಯುರೋಪ್ ಒಕ್ಕಟೂದ ಸಬ್ಸಿಡಿ ವಿಚಾರ

ಯುರೋಪ್‌ ರಾಷ್ಟ್ರಗಳ ರೈತ ಪ್ರತಿಭಟನೆಗೆ 3 ಕಾರಣ

ಅಗ್ಗದ ಆಮದುಗಳು ಮತ್ತು ಅಧಿಕಾರಶಾಹಿ ವ್ಯವಸ್ಥೆ ಸೇರಿ ಇತರ ಕುಂದುಕೊರತೆಗಳ ನಡುವೆ ತೆರಿಗೆಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ರೈತರು ಯುರೋಪ್ ಒಕ್ಕೂಟದ ಮೇಲೆ ಒತ್ತಡಹೇರಿದ್ದಾರೆ.

ಯುರೋಪ್ ಒಕ್ಕೂಟದ ವಿವಿಧ ದೇಶಗಳಲ್ಲಿ ರೈತ ಪ್ರತಿಭಟನೆ ಶುರುವಾಗಲು ಕಾರಣಗಳು ಹಲವು. ಬಹುತೇಕ ದೇಶಗಳಲ್ಲಿ ರೈತರು ವೇತನ ಏರಿಕೆಗೆ ಆಗ್ರಹಿಸಿದ್ದಾರೆ. ತೆರಿಗೆ ಹೊರೆ ಇಳಿಸಬೇಕು. ಸರ್ಕಾರದ ವಿಳಂಬ ನೀತಿ ಸರಿಪಡಿಸಬೇಕು, ಬಿಗಿ ಪರಿಸರ ನಿಯಮ ಸಡಿಲಗೊಳಿಸಬೇಕು, ಅಗ್ಗದ ಆಹಾರ ವಸ್ತು ಆಮದು ನಿಷೇಧಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ರೈತರು ಆಗ್ರಹಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಹೇಳಿದೆ.

1) ಆಮದು ಸಮಸ್ಯೆಯಾಗಿರುವುದೇಕೆ

ರಷ್ಯಾ ಆಕ್ರಮಣದ ಬಳಿಕ ಯುದ್ಧಪೀಡಿತ ಉಕ್ರೇನ್‌ನಿಂದ ಯುರೋಪ್ ಒಕ್ಕೂಟಕ್ಕೆ ಹೆಚ್ಚಿನ ಪ್ರಮಾಣದ ಆಮದು ನಡೆಯುತ್ತಿದೆ. ಯುರೋಪ್ ಒಕ್ಕೂಟ ಕೂಡ ವಿವಿಧ ಕೋಟಾ, ಸುಂಕಗಳನ್ನು ಮನ್ನಾ ಮಾಡಿದೆ. ಇದರಿಂದಾಗಿ ಉಕ್ರೇನ್‌ನಿಂದ ಅಗ್ಗದ ಕೃಷಿ ಉತ್ಪನ್ನಗಳು ಒಕ್ಕೂಟ ರಾಷ್ಟ್ರಗಳಿಗೆ ಆಗಮಿಸುತ್ತಿದ್ದು, ರೈತರಿಗೆ ಸಮಸ್ಯೆಯಾಗಿದೆ.

ಇನ್ನೊಂದೆಡೆ, ಯುರೋಪ್ ಒಕ್ಕೂಟ ಮತ್ತು ದಕ್ಷಿಣ ಅಮೆರಿಕದ ಬ್ಲಾಕ್‌ ಮರ್ಕೊಸೂರ್ ನಡುವಿನ ವ್ಯಾಪಾರ ಒಪ್ಪಂದ ಕಾಯಂಗೊಳಿಸಲು ಮಾತುಕತೆ ಆಗಿದೆ. ಇದು ಜಾರಿಗೊಂಡರೆ ಸಕ್ಕರೆ, ಧಾನ್ಯ, ಮಾಂಸ ಮಾರಾಟದಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡಲಿದೆ ಎಂಬುದು ರೈತರನ್ನು ಕಳವಳಕ್ಕೀಡುಮಾಡಿದೆ.

ಇದಲ್ಲದೆ, ಯುರೋಪ್ ಒಕ್ಕೂಟ ತನ್ನ ಸದಸ್ಯ ರಾಷ್ಟ್ರಗಳ ರೈತರ ಮೇಲೆ ಹೇರಿರುವ ಪರಿಸರ ನಿಯಮ ಮಾನದಂಡ ಆಮದುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದರ ನಡುವೆ ಅಗ್ಗದ ಬೆಲೆಯಲ್ಲಿ ಸಿಗುವ ಆ ಉತ್ಪನ್ನಗಳು ಸ್ಥಳೀಯ ಉತ್ಪನ್ನಗಳ ಬೆಲೆಗಳ ಮೇಲೆ ಒತ್ತಡ ಹೇರುತ್ತಿವೆ ಎಂಬುದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.

ರೈತ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಉಕ್ರೇನ್‌ನಿಂದ ಕೃಷಿ ಉತ್ಪನ್ನ, ಆಹಾರ ವಸ್ತು ಆಮದುಗಳ ಮೇಲೆ ಅಂದರೆ, ಕೋಳಿ, ಮೊಟ್ಟೆ, ಸಕ್ಕರೆ ಮುಂತಾದ ಉತ್ಪನ್ನಗಳ ಆಮದುಗಳ ಮೇಲೆ ಮಿತಿ ಹೇರಲು ಯುರೋಪ್ ಒಕ್ಕೂಟ ತೀರ್ಮಾನಿಸಿದೆ.

2) ಕಾಡುತ್ತಿದೆ ಪಾಳು ಭೂಮಿ ಸಮಸ್ಯೆ

ಹೊಸ ಸಬ್ಸಿಡಿ ನಿಯಮಗಳೊಂದಿಗೆ ರೈತರು ಸಮಸ್ಯೆಯನ್ನೂ ಎದುರಿಸಬೇಕಾಗಿದೆ. ಉದಾಹರಣೆಗೆ, ಹೊಸ ಸಬ್ಸಿಡಿ ನಿಯಮ ಪ್ರಕಾರ, 4 ಪ್ರತಿಶತ ಕೃಷಿಭೂಮಿಯನ್ನು ಪಾಳು ಬಿಡುವ ಅವಶ್ಯಕತೆಯಿದೆ. ಈ ರೀತಿಯಾದ ಅತಿ ಅಧಿಕಾರಶಾಹಿ ಹಸ್ತಕ್ಷೇಪಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ಸರ್ಕಾರವು ಯೋಜನೆಗಳ ಅನುಷ್ಠಾನವನ್ನು ಹೆಚ್ಚು ಸಂಕೀರ್ಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿ ರೈತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಯೋಗವು, 2024ರ ಮಟ್ಟಿಗೆ ಪಾಳು ಭೂಮಿ ಬಿಡುವ ಅಗತ್ಯದಿಂದ ವಿನಾಯಿತಿ ನೀಡಿದೆ. ಸಹಾಯ ಧನ ಅಥವಾ ಸಬ್ಸಿಡಿ ಪಡೆಯುವಾಗ ರೈತರು ಕೀಟನಾಶಕಗಳನ್ನು ಬಳಸದೇ ಬೆಳೆ ಬೆಳೆಯಬೇಕಾಗುತ್ತದೆ ಎಂಬುದನ್ನು ಪಾಲಿಸುವಂತೆ ರೈತರಿಗೆ ಸೂಚಿಸಲಾಗಿದೆ.

3) ಇಂಧನ ವೆಚ್ಚ ಹೆಚ್ಚಳ

ಯುರೋಪ್ ರಾಷ್ಟ್ರಗಳಲ್ಲಿ ಕೃಷಿಗೆ ಬಳಸುವ ಇಂಧನವಾಗಿ ಡೀಸೆಲ್ ಹೆಚ್ಚು ಬಳಕೆಯಲ್ಲಿದೆ. ವಿಶೇಷವಾಗಿ ಜರ್ಮನಿ ಮತ್ತು ಫ್ರಾನ್ಸ್ ಅತಿದೊಡ್ಡ ಕೃಷಿ ಉತ್ಪಾದಕ ದೇಶಗಳು. ಇಲ್ಲಿ ಕೃಷಿ ಬಳಕೆಯ ಡೀಸೆಲ್‌ ಮೇಲಿನ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಕೊನೆಗೊಳಿಸಲು ಸರ್ಕಾರ ತೀರ್ಮಾನಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತ ಪ್ರತಿಭಟನೆ ತೀವ್ರಗೊಂಡಿರುವ ಕಾರಣ ಜರ್ಮನಿ ಮತ್ತು ಫ್ರಾನ್ಸ್‌ ಸರ್ಕಾರ ಹಳೆಯ ನಿಯಮವನ್ನೇ ಮುಂದುವರಿಸಲು ತೀರ್ಮಾನಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.