ಇರಾನ್ - ಇಸ್ರೇಲ್ ಸಮರ; ಮಧ್ಯಪ್ರಾಚ್ಯದಲ್ಲಿ ಸಂಘರ್ಷಮಯ ವಾತಾವರಣದ 10 ವಿದ್ಯಮಾನಗಳ ಕಡೆಗೊಂದು ನೋಟ
ಇರಾನ್ - ಇಸ್ರೇಲ್ ಸಮರ ಸನ್ನಿವೇಶವು ಮಧ್ಯಪ್ರಾಚ್ಯದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಿಸಿದೆ. ಇರಾನ್ ಶನಿವಾರ (ಏಪ್ರಿಲ್ 13) ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದ ನಂತರ ಅಪಾಯಕಾರಿ ಹಂತ ತಲುಪಿದ್ದು, ಈ ಸಂದರ್ಭದ 10 ವಿದ್ಯಮಾನಗಳ ಕಡೆಗೊಂದು ನೋಟ ಇಲ್ಲಿದೆ.

ನವದೆಹಲಿ/ ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ವಾತಾವರಣವು ಮಧ್ಯಪ್ರಾಚ್ಯದ ಸಂಘರ್ಷವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಇರಾನ್ ಶನಿವಾರ (ಏಪ್ರಿಲ್ 13) ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದ ನಂತರ ಮಧ್ಯಪ್ರಾಚ್ಯದ ಸಂಘರ್ಷವು ಅಪಾಯಕಾರಿ ಸ್ತರವನ್ನು ತಲುಪಿದೆ. ಸಿರಿಯಾದಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೇಲೆ ಇಸ್ರೇಲಿ ದಾಳಿ ನಡೆಸಿದೆ ಎಂಬ ಶಂಕೆಯ ಬಳಿಕ ಅದರ ಮೇಲೆ ಇರಾನ್ ಪ್ರತೀಕಾರದ ದಾಳಿ ಮಾಡಿದೆ.
ಈ ದಾಳಿಯ ಬಳಿಕ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಇರಾನ್ ನಿರ್ದಾಕ್ಷಿಣ್ಯ ಪ್ರತೀಕಾರದ ಎಚ್ಚರಿಕೆಯನ್ನು ನೀಡಿತು. ಈ ನಡುವೆ, “ಸಮಯ ಬಂದಾಗ” ಸೇಡು ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿ ಎಚ್ಚರಿಕೆ ನೀಡಿದೆ. ಈ ನಡುವೆ, ಇರಾನ್ ವಿರುದ್ಧದ ಇಸ್ರೇಲ್ ಸಮರದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆದಾಗ್ಯೂ, ಇರಾನ್‌ನ ಈ ಕ್ರಮವು ಜಾಗತಿಕ ನಾಯಕರಿಂದ, ವಿಶೇಷವಾಗಿ ಅಮೆರಿಕದಿಂದ ಟೀಕೆಗಳ ಸುರಿಮಳೆಯನ್ನು ಎದುರಿಸಿದೆ.
ಇರಾನ್ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು. ಹಿಂಸಾಚಾರದ ಮಾರ್ಗವನ್ನು ತೆಗೆದುಕೊಳ್ಳದಂತೆ ತಡೆಯಲು ಇಸ್ಲಾಮಿಕ್ ದೇಶವನ್ನು ವಿಶ್ವ ನಾಯಕರು ಒತ್ತಾಯಿಸಿದ್ದಾರೆ.
ಇರಾನ್ - ಇಸ್ರೇಲ್ ಸಮರ ಇದುವರೆಗಿನ 10 ವಿದ್ಯಮಾನಗಳು
1) ಇರಾನ್ ಉಡಾಯಿಸಿದ ಶೇಕಡ 99 ಡ್ರೋನ್ ಮತ್ತು ಮಿಸೈಲ್‌ಗಳನ್ನು ತಡೆದು ಹೊಡೆದುರಳಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
2) ಇರಾನ್ ಡ್ರೋನ್, ಕ್ಷಿಪಣಿ ದಾಳಿ ನಡೆಸುವುದಕ್ಕೆ ಬಹಳ ದಿನಗಳ ಮೊದಲೇ ಎಚ್ಚರಿಕೆ ಸಂದೇಶ ರವಾನಿಸಿತ್ತು ಎಂದು ಟರ್ಕಿ, ಜೋರ್ಡಾನ್, ಇರಾಕ್‌ನ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಆದರೆ ಅಮೆರಿಕ ಇದನ್ನು ನಿರಾಕರಿಸಿದ್ದು, ತೆಹ್ರಾನ್ ಈ ದಾಳಿಯ ಕುರಿತು ಮೊದಲೇ ಎಚ್ಚರಿಕೆ ನೀಡಿಲ್ಲ ಎಂದು ಪ್ರತಿಪಾದಿಸಿದೆ.
3) ಚಿನಿವಾರ ಪೇಟೆಯಲ್ಲಿ ಚಿನ್ನದ ದರಗಳು ಸೋಮವಾರ ಏರಿಕೆಯಾಗಿದ್ದು, ತೈಲ ದರಗಳು ಕುಸಿದಿವೆ. ಚಿನ್ನದ ದರ ಶೇಕಡ 1.2 ಏರಿಕೆಯಾಗಿ ದಾಖಲೆಯ ಮಟ್ಟಕ್ಕೆ ಏರಿತು. ಫೆಬ್ರವರಿ ತಿಂಗಳ ಮಧ್ಯಭಾಗದಿಂದೀಚೆಗೆ ಚಿನ್ನ ಬಹುತೇಕ ಶೇಕಡ 20 ಏರಿಕೆ ದಾಖಲಿಸಿದೆ. ಇದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ ಫ್ಯೂಚರ್ಸ್‌ನಲ್ಲಿ ಜೂನ್ ತಿಂಗಳ ಪೂರೈಕೆಯ ಬ್ರೆಂಟ್ ಕಚ್ಚಾ ತೈಲದರ ಪ್ರತಿ ಬ್ಯಾರೆಲ್‌ಗೆ 24 ಸೆಂಟ್ಸ್ ಕುಸಿದು 90.21 ಡಾಲರ್ ತಲುಪಿದೆ. ಮೇ ತಿಂಗಳ ಪೂರೈಕೆಯ ಬ್ರೆಂಟ್ ಕಚ್ಚಾ ತೈಲದರ ಪ್ರತಿ ಬ್ಯಾರೆಲ್‌ಗೆ 38 ಸೆಂಟ್ಸ್ ಕುಸಿದು 85.28 ಡಾಲರ್ ತಲುಪಿದೆ.
4) ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ವಾತಾವರಣ ತಿಳಿಗೊಳಿಸುವ ಪ್ರಯತ್ನವಾಗಿ ಅಮೆರಿಕ ಈ ಸಮರದಲ್ಲಿ ತಾನಿಲ್ಲ ಎಂದು ಘೋಷಿಸಿದೆ. ಇರಾನ್ ವಿರುದ್ಧ ಕ್ರಮಕ್ಕೆ ಜೊತೆಗೆ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
5) ಇಸ್ರೇಲಿ ಮಿಲಿಟರಿ ನಿರ್ಬಂಧ ರದ್ದು: ಇರಾನಿನ ಕ್ಷಿಪಣಿ ದಾಳಿಯ ಕಾರಣದಿಂದಾಗಿ ವಿಧಿಸಲಾದ ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳ ಸರಣಿಯನ್ನು ಇಸ್ರೇಲಿ ಮಿಲಿಟರಿ ತೆಗೆದುಹಾಕಿತು. ಅವರು ಮಕ್ಕಳನ್ನು ಶಾಲೆಗೆ ಮರಳಲು ಅವಕಾಶ ಮಾಡಿಕೊಟ್ಟರು.
ವಿಶ್ವಸಂಸ್ಥೆಯಲ್ಲಿ ತುರ್ತು ಸಭೆ ಮತ್ತು ಇತರೆ ವಿದ್ಯಮಾನಗಳು
6) ಇಸ್ರೇಲ್ ಮೇಲಿನ ಇರಾನ್ ದಾಳಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತುಸಭೆಯನ್ನು ನಡೆಸಿತು. ಯಾವುದೇ ಕ್ರಮವಿಲ್ಲದೆ ಈ ಸಭೆ ಮುಕ್ತಾಯವಾಯಿತು.
7) ಗಾಜಾದಲ್ಲಿ "ಕಾರ್ಯಾಚರಣೆ ಚಟುವಟಿಕೆಗಳಿಗಾಗಿ" ಎರಡು ಮೀಸಲು ದಳಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆರು ತಿಂಗಳ ಯುದ್ಧದ ನಂತರ ಗಾಜಾದಿಂದ ತನ್ನ ಉಳಿದ ನೆಲದ ಪಡೆಗಳನ್ನು ಇಸ್ರೇಲ್ ಕಳೆದ ವಾರ ಹಿಂತೆಗೆದುಕೊಂಡಿತು.
8) ಇಸ್ರೇಲ್ ವಿರುದ್ಧ ದಾಳಿಯನ್ನು ಜಿ7 ರಾಷ್ಟ್ರಗಳು ಖಂಡಿಸಿವೆ. ಭಾನುವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ, ಬ್ರಿಟನ್, ಫ್ರಾನ್ಸ್, "ಇಸ್ರೇಲ್ ವಿರುದ್ಧ ಇರಾನ್‌ನ ನೇರ ಮತ್ತು ಅಭೂತಪೂರ್ವ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಈ ಸನ್ನಿವೇಶವನ್ನು ತಪ್ಪಿಸಬೇಕಾದ ಅಗತ್ಯ ಇದೆ" ಎಂದು ಘೋಷಿಸಿದೆ. ಇದೇ ವೇಳೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನು ಖಂಡಿಸಿದ್ದಾರೆ. ಪೋಪ್ ಫ್ರಾನ್ಸಿಸ್, ಮಧ್ಯಪ್ರಾಚ್ಯ ಈಗಾಗಲೇ ಸಂಕಷ್ಟದಲ್ಲಿದೆ. ಈಗ ಹೊಸ ಯುದ್ದ ಶುರುಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಮಾತುಕತೆ ಮೂಲಕ ವಿವಾದ ಬಗೆಹರಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡೂ ದೇಶಗಳ ನಾಯಕರಲ್ಲಿ ಮನವಿ ಮಾಡಿದ್ದಾರೆ.
9) ಲೆಬನಾನ್ ಬಂಡುಕೋರ ಗುಂಪು ಹೆಜಬೊಲ್ಲಾ, ಇಸ್ರೇಲ್ ಮೇಲೆ ಇರಾನ್ ದಾಳಿಯನ್ನು ಸ್ವಾಗತಿಸಿದೆ. ಇಸ್ರೇಲ್ ತನ್ನ ಅಪರಾಧಗಳ ಮುಂದುವರಿಕೆ ಮತ್ತು ಎಲ್ಲಾ ರಾಜತಾಂತ್ರಿಕ ನಿಯಮಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಲ್ಲಿ ಏಪ್ರಿಲ್ 2 ರಂದು ಸಿರಿಯಾದ ಇರಾನಿನ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿ 12 ಜನರ ಸಾವಿಗೆ ಕಾರಣವಾಗಿದೆ ಎಂದು ಹೆಜಬೊಲ್ಲಾ ಹೇಳಿದೆ.
10) ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರಗಾಮಿಗಳ ವಿರುದ್ಧ ಇಸ್ರೇಲ್‌ನ ಆರು ತಿಂಗಳ ಯುದ್ಧ ನಡೆಸಿದ ಆ ಸಂದರ್ಭದ ಉದ್ದಕ್ಕೂ ಎರಡೂ ದೇಶಗಳ ನಡುವೆ ಸಂಘರ್ಷಮಯ ವಾತಾವರಣ ಇದೆ. 2023ರ ಅಕ್ಟೋಬರ್ 7ರಂದು, ಹಮಾಸ್ ಇಸ್ರೇಲ್ ಮೇಲೆ ಗಡಿ ದಾಟಿ ಬಂದು ವಿನಾಶಕಾರಿ ದಾಳಿ ಡೆಸಿತು. ಇದರಲ್ಲಿ 1,200 ಜನ ಸಾವನ್ನಪ್ಪಿದರು. ಸುಮಾರು 250 ಜನರನ್ನು ಅಪಹರಿಸಲಾಯಿತು. ಇಸ್ರೇಲ್ ರಕ್ಷಣಾ ಪಡೆ ಪ್ರತಿದಾಳಿ ನಡೆಸಿತು. ಗಾಜಾದಲ್ಲಿ 33,000 ಜನರನ್ನು ಕೊಂದಿತು ಎಂದು ವರದಿಗಳು ಹೇಳಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
