Jimmy Carter Dies: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ; ಕಡಲೆಕಾಯಿ ಕೃಷಿಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತನ ಪರಿಚಯ
Jimmy Carter Dies At 100 Age: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. ಇವರು ದೀರ್ಘಕಾಲ ಬದುಕಿದ ಅಮೆರಿಕದ ಮಾಜಿ ಅಧ್ಯಕ್ಷ. ಅಧ್ಯಕ್ಷ ಸ್ಥಾನದಿಂದ ತೆರವಾದ ಬಳಿಕ ಇವರು ಮಾಡಿರುವ ಸಮಾಜಮುಖಿ ಕಾರ್ಯಗಳಿಗಾಗಿ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
Jimmy Carter Dies: ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲ ಬದುಕಿದ ಅಮೆರಿಕದ ಮಾಜಿ ಅಧ್ಯಕ್ಷ. ಶ್ವೇತಭವನ ತೊರೆದ ಬಳಿಕ ಮಾನವತಾವಾದಿಯೆಂಬ ಖ್ಯಾತಿಯನ್ನು ಗಳಿಸಿದ್ದರು. ಅವರು ಕಡಲೆಕಾಯಿ ಕೃಷಿಕರೂ ಹೌದು. ಕಾರ್ಟರ್ ನೀಡಿರುವ ಅಂತಾರಾಷ್ಟ್ರೀಯ ಸಮಾಜಮುಖಿ ಸೇವೆಗೆ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
ಯಾವ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು?
1977 ರಿಂದ 1981ರವರೆಗೆ ಇವರು ಅಮೆರಿಕದ 39ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿ ಕೆಟ್ಟ ಆರ್ಥಿಕತೆ ಮತ್ತು ಇರಾನ್ ಒತ್ತೆಯಾಳು ಬಿಕ್ಕಟ್ಟಿನ ವಿರುದ್ಧ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಶಾಂತಿ ಸ್ಥಾಪಿಸಲು ಮಧ್ಯಸ್ಥಿಕೆ ವಹಿಸಿದ್ದರು. ವಿದೇಶಿ ತೈಲಕ್ಕೆ ಅಗ್ಗದ ಪರ್ಯಾಯವಾಗಿ ನವೀಕರಿಸಬಹುದಾದ ಶಕ್ತಿಗೆ ಉತ್ತೇಜನ ನೀಡಿದರು. ಆದರೆ, 1988ರ ಮರುಚುನಾವಣೆಯಲ್ಲಿ ಇವರು ಗೆಲುವು ಪಡೆಯಲಿಲ್ಲ.
ಜಿಮ್ಮಿ ಕಾರ್ಟರ್ ಅಧ್ಯಕ್ಷರಾಗಿದ್ದ ಸಮಯಕ್ಕಿಂತಲೂ ಮಾಜಿ ಅಧ್ಯಕ್ಷರಾಗಿದ್ದಾಗ ನಡೆಸಿದ ಕೆಲಸಗಳು ಜಗತ್ತಿನ ಗಮನ ಸೆಳೆದಿವೆ. ಶ್ವೇತಭವನವನ್ನು ತೊರೆದ ಬಳಿಕ ಅವರು ಮಾಡಿರುವ ಅಂತರರಾಷ್ಟ್ರೀಯ ಮಾನವೀಯ ಕೆಲಸ ಎಲ್ಲರ ಗಮನ ಸೆಳೆಯಿತು. ಇದಕ್ಕಾಗಿ ಇವರಿಗೆ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ಅತ್ಯಂತ ಸರಳ ಜೀವನ ನಿರ್ವಹಿಸುತ್ತಿದ್ದರು.
ಭಾರತದ ಹಳ್ಳಿಗೆ ಜಿಮ್ಮಿ ಕಾರ್ಟರ್ ಹೆಸರು
ದಿವಂಗತ ಜಿಮ್ಮಿ ಕಾರ್ಟರ್ ಹೆಸರನ್ನು ಭಾರತದ ಹಳ್ಳಿಯೊಂದಕ್ಕೆ ಇಡಲಾಗಿದೆ. ಭಾರತಕ್ಕೆ ಭೇಟಿ ನೀಡಿದ್ದ ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಹೆಸರಿಡಲಾಗಿತ್ತು.
ಕಡಲೆ ಕೃಷಿಕ ಅಮೆರಿಕ ಅಧ್ಯಕ್ಷನಾದ ಕಥೆ
ನರ್ಸ್ ಲಿಲಿಯನ್ ಮತ್ತು ಜೇಮ್ಸ್ ಅರ್ಲ್ ಎಂಬ ರೈತನ ಮಗನಾದ ಜಿಮ್ಮಿ ಕಾರ್ಟರ್ ಅಕ್ಟೋಬರ್ 1, 1924ರಲ್ಲಿ ಪ್ಲೇನ್ಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಇವರು ಜನಿಸಿದರು. ಆ ಕಾಲದಲ್ಲಿ ಹೆರಿಗೆ ಸಾಮಾನ್ಯವಾಗಿ ಮನೆಯಲ್ಲಿಯೇ ಆಗುತ್ತಿತ್ತು. ಆದರೆ, ಇವರು ಆಸ್ಪತ್ರೆಯಲ್ಲಿ ಜನಿಸಿದರು. ಈ ರೀತಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಅಮೆರಿಕದ ಅಧ್ಯಕ್ಷ ಇವರಾಗಿದ್ದಾರೆ.
ಜಿಮ್ಮಿ ಕಾರ್ಟರ್ ಕಡಲೆಕಾಯಿ ಕೃಷಿಕರಾಗಿದ್ದರು. ಬಳಿಕ ಇವರು ಅಮೆರಿಕ ನೇವಲ್ ಅಕಾಡೆಮಿಯಲ್ಲಿ ಕರಿಯರ್ ಆರಂಭಿಸಿದರು. ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳಲ್ಲಿ ಸೇವೆ ಸಲ್ಲಿಸಿದರು.
1952ರಲ್ಲಿ ಕೆನಡಾದ ಒಂಟಾರಿಯೊದಲ್ಲಿ ಪರಮಾಣು ರಿಯಾಕ್ಟರ್ ಸ್ಫೋಟಗೊಂಡಾಗ, ಯುಎಸ್ ನೌಕಾಪಡೆಯು ಒಂದು ತಂಡವನ್ನು ನಿಯೋಜಿಸಿತು. ಅದರಲ್ಲಿ ಜಿಮ್ಮಿ ಕಾರ್ಟರ್ ಇದ್ದರು. ಮೊದಲ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ 28 ವರ್ಷದ ಕಾರ್ಟರ್ ಕೆನಡಾಕ್ಕೆ ಸ್ಪೋಟಗೊಂಡ ಪರಮಾಣು ರಿಯಾಕ್ಟರ್ ಪರಿಣಾಮ ತಗ್ಗಿಸಲು ಸಹಾಯ ಮಾಡಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.
ರಕ್ಷಣಾತ್ಮಕ ಉಡುಗೆ ಧರಿಸಿ ಲೆಫ್ಟಿನೆಂಟ್ ಕಾರ್ಟರ್ ಅವರು ಇನ್ನಿಬ್ಬರು ತಜ್ಞರ ಜತೆ ಒಳ ಪ್ರವೇಶಿಸಿದರು. ಜನರ ದೇಹಕ್ಕೆ ಒಂದು ವರ್ಷದಲ್ಲಿ ಎಷ್ಟು ವಿಕಿರಣ ಸೇರುತ್ತದೆಯೋ ಅಷ್ಟು ವಿಕಿರಣ ಇವರ ದೇಹಕ್ಕೆ 89 ಸೆಕೆಂಡ್‌ನಲ್ಲಿ ಸೇರಿತ್ತು. ಆರು ತಿಂಗಳ ಕಾಲ ಇವರ ಮೂತ್ರದಲ್ಲಿ ವಿಕಿರಣದ ಪರಿಣಾಮ ಕಾಣಿಸಿತ್ತು.
1977ರಲ್ಲಿ ಇವರು ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಿದರು. ತನ್ನ ಅವಧಿಯಲ್ಲಿ ಜಿಮ್ಮಿ ಕಾರ್ಟರ್ ಫೆಡರಲ್ ನ್ಯಾಯಾಂಗಕ್ಕೆ 57 ಅಲ್ಪಸಂಖ್ಯಾತ ನ್ಯಾಯಾಧೀಶರು ಮತ್ತು 41 ಮಹಿಳಾ ನ್ಯಾಯಾಧೀಶರನ್ನು ನೇಮಿಸಿದರು. ಅಧ್ಯಕ್ಷೀಯ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಲು ಮೊದಲ ಕಪ್ಪು ಮಹಿಳೆಯನ್ನು(ಪೆಟ್ರೀಷಿಯಾ ರಾಬರ್ಟ್ಸ್ ಹ್ಯಾರಿಸ್) ನೇಮಿಸಿದ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.
ಬ್ರಿಟನ್ ರಾಣಿಯ ತಾಯಿಗೆ ಮುತ್ತಿಕ್ಕಿದ್ರ?
ಜಿಮ್ಮಿ ಕಾರ್ಟರ್ 1977ರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಂಕಿಂಗ್‌ಹ್ಯಾಮ್ ಅರಮನೆಗೆ ಭೇಟಿ ನೀಡಿದರು. ಇವರು ಈ ಸಮಯದಲ್ಲಿ ರಾಣಿಯ ತಾಯಿಯ ತುಟಿಗೆ ಮುತ್ತಿಕ್ಕಿದ್ದಾರೆ ಎಂದು ಎರಡು ವರ್ಷದ ಬಳಿಕ ವದಂತಿ ಹರಡಿತ್ತು. ರಾಣಿಯ ತಾಯಿಯ ಖಾಸಗಿತನದ ಹರಣ ಎಂದು ಬ್ರಿಟಿಷ್ ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು. ಆದರೆ, ತನ್ನ ಆತ್ಮಚರಿತ್ರೆಯಲ್ಲಿ ಕಾರ್ಟರ್ ಈ ಘಟನೆ ನಡೆದಿಲ್ಲ ಎಂದು ಬರೆದಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.