ಪಾಕಿಸ್ತಾನ ಚುನಾವಣೆ 2024; ಇಮ್ರಾನ್ ಖಾನ್ ಅಭ್ಯರ್ಥಿ ವಿರುದ್ಧ ಹೀನಾಯವಾಗಿ ಸೋತ ಹಫೀಜ್ ಸಯೀದ್ ಪುತ್ರ ತಲ್ಹಾ
ಪಾಕಿಸ್ತಾನ ಚುನಾವಣೆ 2024: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷ ಪಿಟಿಐನ ಅಭ್ಯರ್ಥಿ ಲತೀಫ್ ಖೋಸಾ ವಿರುದ್ಧ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಹೀನಾಯವಾಗಿ ಸೋತುಹೋಗಿರುವುದಾಗಿ ವರದಿಗಳು ಹೇಳಿವೆ.
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ಪುತ್ರ ತಲ್ಹಾ ಸಯೀದ್ ಪಾಕಿಸ್ತಾನದ ಲಾಹೋರ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸೋಲು ಅನುಭವಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಲಾಹೋರ್ ಎನ್ಎ 122ರ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಲ್ಹಾ ಸಯೀದ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿತ ಲತೀಫ್ ಖೋಸಾ ವಿರುದ್ಧ ಸೋತರು. ಖೋಸಾ 117,109 ಮತಗಳನ್ನು ಗಳಿಸಿದರೆ, ಅವರ ವಿರುದ್ಧ ತಲ್ಹಾ ಸಯೀದ್ ಕೇವಲ 2024 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ನಾಯಕ ಖವಾಜಾ ಸಾದ್ ರಫೀಕ್ ಸ್ಪರ್ಧಿಸಿದ್ದು, 77,907 ಮತಗಳನ್ನು ಪಡೆದಿದ್ದಾರೆ.
ಹಫೀಜ್ ಸಯೀದ್ ಅವರ ಅಳಿಯ ಹಫೀಜ್ ನೆಕ್ ಗುಜ್ಜರ್ ಅವರು ಮರ್ಕಾಜಿ ಮುಸ್ಲಿಂ ಲೀಗ್ ಅನ್ನು ಪ್ರತಿನಿಧಿಸುವ ಪ್ರಾಂತೀಯ ಅಸೆಂಬ್ಲಿ ಕ್ಷೇತ್ರ ಪಿಪಿ -162 ರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ವರದಿಯಾಗಿದೆ.
ಹಫೀಜ್ ಸಯೀದ್‌ಗೆ ಸಂಬಂಧಿಸಿದ ನಿಷೇಧಿತ ಗುಂಪುಗಳೊಂದಿಗೆ ಪಾಕಿಸ್ತಾನ್ ಮರ್ಕಾಜಿ ಮುಸ್ಲಿಂ ಲೀಗ್ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ. ಈ ಪಾಕಿಸ್ತಾನ್ ಮರ್ಕಾಜಿ ಮುಸ್ಲಿಂ ಲೀಗ್ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಬಿಸಿ ಉರ್ದು ವರದಿಯನ್ನು ಉಲ್ಲೇಖಿಸಿದ ಪಿಟಿಐ ಸುದ್ದಿ ಸಂಸ್ಥೆ, ಪಾಕಿಸ್ತಾನದ ವಿವಿಧ ನಗರಗಳಲ್ಲಿ ಈ ಪಕ್ಷವು ನಾಮನಿರ್ದೇಶನ ಮಾಡಿದ ಅಭ್ಯರ್ಥಿಗಳಲ್ಲಿ ಹಫೀಜ್ ಸಯೀದ್‌ನ ಸಂಬಂಧಿಕರು ಅಥವಾ ಲಷ್ಕರ್-ಎ-ತೊಯ್ಬಾ, ಜಮಾತ್-ಉದ್-ದವಾ ಅಥವಾ ಮಿಲ್ಲಿ ಮುಸ್ಲಿಂ ಲೀಗ್ ಮಾದರಿಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಬಹುಕಾಲದಿಂದ ಸಂಬಂಧ ಹೊಂದಿರುವ ವ್ಯಕ್ತಿಗಳು ಸೇರಿದ್ದಾರೆ ಎಂದು ವರದಿ ವಿವರಿಸಿದೆ.
ಹಫೀಜ್ ಸಯೀದ್ ಯಾರು?
ಪ್ರಸ್ತುತ ಲಾಹೋರ್ ಜೈಲಿನಲ್ಲಿರುವ ಹಫೀಜ್ ಸಯೀದ್‌ಗೆ ಭಯೋತ್ಪಾದನೆಗೆ ಹಣಕಾಸು ನೆರವು ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯಗಳು ಒಟ್ಟು 31 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿವೆ.
ಭಾರತದ ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ಮೂಲಕ 166 ಜನರ ಸಾವಿಗೆ ಕಾರಣವಾಗಿದ್ದ ಹಫೀಜ್ ಸಯೀದ್‌ನನ್ನು 'ಜಾಗತಿಕ ಭಯೋತ್ಪಾದಕ' ಎಂದು 2008ರ ಡಿಸೆಂಬರ್ 10 ರಂದು ಯುಎನ್ ಘೋಷಿಸಿತು.
ಹಫೀಜ್ ಸಯೀದ್ ಪುತ್ರ ತಲ್ಹಾ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ವರದಿಯನ್ನು ಭಾರತ ಗಮನಿಸಿದ್ದು, ನೆರೆಯ ದೇಶದಲ್ಲಿ ತೀವ್ರಗಾಮಿ ಭಯೋತ್ಪಾದಕ ಗುಂಪುಗಳನ್ನು ಮುಖ್ಯವಾಹಿನಿಯ ರಾಜಕೀಯದಲ್ಲಿ ಮಿಳಿತವಾಗುತ್ತಿರುವುದು ಹೊಸ ವಿದ್ಯಮಾನವಲ್ಲ. ಬದಲಾಗಿ ಅದು ಆ ದೇಶದ ರಾಜಕೀಯ ನೀತಿಯ ದೀರ್ಘಕಾಲದ ಅಂಶವಾಗಿರುವುದನ್ನು ದೃಢಪಡಿಸಿದೆ ಎಂದು ಹೇಳಿದೆ.
(ಪಿಟಿಐ ಮಾಹಿತಿಯೊಂದಿಗೆ)