ಹಗಲು ಹೊತ್ತಿನಲ್ಲಿ ಟಿವಿಯಲ್ಲಿ ಬರ್ಗರ್ ಇತ್ಯಾದಿ ಜಂಕ್ ಫುಡ್‌ಗಳ ಜಾಹೀರಾತು ಪ್ರಸಾರಕ್ಕೆ ನಿಷೇಧ; ಯುಕೆಯಲ್ಲಿ ಈ ನಿರ್ಧಾರ ಯಾಕೆ?
UK bans daytime TV ads: ಮಕ್ಕಳ ಸ್ಥೂಲಕಾಯತೆ ವಿರುದ್ಧದ ಹೋರಾಟದ ಭಾಗವಾಗಿ ಇಂಗ್ಲೆಂಡ್ ಸರಕಾರವು ಗ್ರಾನೊಲಾ, ಮುಫಿನ್ಸ್, ಬರ್ಗರ್ ಮುಂತಾದ ಸಕ್ಕರೆಯುಕ್ತ ಆಹಾರಗಳ ಜಾಹೀರಾತುಗಳನ್ನು ಹಗಲು ಹೊತ್ತಿನಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಬೆಂಗಳೂರು: ಮಕ್ಕಳ ಸ್ಥೂಲಕಾಯ ವಿರುದ್ಧದ ಹೋರಾಟದ ಭಾಗವಾಗಿ ಇಂಗ್ಲೆಂಡ್ ಸರಕಾರವು ಗ್ರಾನೊಲಾ, ಮುಫಿನ್ಸ್, ಬರ್ಗರ್ ಮುಂತಾದ ಸಕ್ಕರೆಯುಕ್ತ ಆಹಾರಗಳ ಜಾಹೀರಾತುಗಳನ್ನು ಹಗಲು ಹೊತ್ತಿನಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ. ಕಡಿಮೆ ಆರೋಗ್ಯಕರ ಆಹಾರಗಳು ಮತ್ತು ಪಾನೀಯಗಳ ಜಾಹೀರಾತುಗಳನ್ನು ಕೇವಲ ರಾತ್ರಿ 9 ಗಂಟೆಯ ನಂತರ ಮಾತ್ರ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಈ ಕಾನೂನು ಮುಂದಿನ ವರ್ಷ ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿದೆ.
ಬ್ರಿಟನ್‌ನ ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚುತ್ತಿದೆ. ಈಗ ಸರಾಸರಿ ಹತ್ತರಲ್ಲಿ 4 ಮಕ್ಕಳು ಸ್ಥೂಲಕಾಯತೆ ಹೊಂದಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಸೇವಾ ವಿಭಾಗವು ಮಾಹಿತಿ ನೀಡಿದೆ. ಹತ್ತರಲ್ಲಿ 5 ಮಕ್ಕಳು ಸಕ್ಕರೆಯುಕ್ತ ತಿನಿಸುಗಳನ್ನು ಅತಿಯಾಗಿ ಸೇವಿಸುವುದರಿಂದ ದಂತಕ್ಷಯದಿಂದ ಬಳಲುತ್ತಿದ್ದಾರೆ.
ಆಹಾರ ತಿನಿಸುಗಳಲ್ಲಿ ಇರುವ ಸಕ್ಕರೆ, ಕೊಬ್ಬು ಮತ್ತು ಉಪ್ಪಿನಾಂಶಗಳ ಆಧಾರದಲ್ಲಿ ಸ್ಕೋರ್ ನೀಡಲಾಗುತ್ತದೆ. ಕ್ರೋಸೆಂಟ್‌ಗಳು, ಪ್ಯಾನ್‌ಕೇಕ್‌ಗಳು, ವಾಫ್ಲೆಸ್ ಮುಂತಾದ ಸಕ್ಕರೆಯುಕ್ತ ಪ್ಯಾಕ್ ಮಾಡಲಾದ ಬ್ರೇಕ್‌ಫಾಸ್ಟ್ ಫುಡ್‌ಗಳನ್ನೂ ಸರಕಾರವು ಜಾಹೀರಾತು ನಿಷೇಧದ ಪಟ್ಟಿಗೆ ಸೇರಿಸಿದೆ.
ರೆಡಿ ಟು ಈಟ್ ಸೆರಿಯಲ್ಸ್, ಗ್ರಾನೊಲಾ, ಮುಸ್ಲಿ, ಪೊರಿಡ್ಜ್ ಓಟ್ಸ್, ಇನ್ನಿತರೆ ಓಟ್ಸ್ ಆಧರಿತ ಸೆರಿಯಲ್ಸ್‌ಗಳ ಜಾಹೀರಾತನ್ನು ಹಗಲು ಹೊತ್ತಿನಲ್ಲಿ ಪ್ರಸಾರ ಮಾಡುವಂತೆ ಇಲ್ಲ. ಕಡಲೆ ಅಥವಾ ಲೆಂಟಿಲ್ ಆಧಾರಿತ ಕ್ರಿಸ್ಪ್ಸ್, ಕಡಲಕಳೆ ಆಧಾರಿತ ತಿಂಡಿಗಳು ಮತ್ತು ಬಾಂಬೆ ಮಿಕ್ಸ್ ಮುಂತಾದ ತಿನಿಸುಗಳ ಜಾಹೀರಾತಿಗೂ ನಿರ್ಬಂಧ ಹೇರಲಾಗಿದೆ. ಆದರೆ, ಈ ನಿಷೇಧವು ಆರೋಗ್ಯಕರವಾದ ನ್ಯಾಚುರಲ್ ಪೊರಿಡ್ಜ್ ಓಟ್ಸ್, ಸಕ್ಕರೆ ಹಾಕದ ಮೊಸರು ಮುಂತಾದ ಪ್ಯಾಕೆಟ್‌ಗಳಿಗೆ ಅನ್ವಯವಾಗುವುದಿಲ್ಲ.
ಈ ರೀತಿ ಜಾಹೀರಾತು ನಿಷೇಧ ಮಾಡುವುದರಿಂದ ವರ್ಷಕ್ಕೆ ಸುಮಾರು 20 ಸಾವಿರ ಮಕ್ಕಳಲ್ಲಿ ಸ್ಥೂಲಕಾಯ ತೊಂದರೆ ತಡೆಯಲು ಸಹಾಯ ಮಾಡಲಿದೆ ಎಂದು ಸರಕಾರ ಅಂದಾಜಿಸಿದೆ. "ಸ್ಥೂಲಕಾಯವು ನಮ್ಮ ಮಕ್ಕಳ ಜೀವನದ ಉತ್ತಮ ಆರಂಭಕ್ಕೆ ತಡೆಯಾಗಿದೆ. ಇದರಿಂದ ಜೀವಿತಾವಧಿಯಲ್ಲಿ ಅವರನ್ನು ಕಾಡುವ ಹಲವು ಆರೋಗ್ಯ ಸಮಸ್ಯೆಗಳು ಕಡಿಮೆಯಾಗಲಿವೆ" ಎಂದು ನ್ಯಾಷನಲ್ ಹೆಲ್ತ್ ಸರ್ವೀಸ್‌ನ ಆರೋಗ್ಯ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಹೇಳಿದ್ದಾರೆ.
ಸ್ಥೂಲಕಾಯ ಎನ್ನುವುದು ಕೇವಲ ಇಂಗ್ಲೆಂಡ್‌ನ ಸಮಸ್ಯೆಯಲ್ಲ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ಈ ಸಮಸ್ಯೆ ಇದೆ. ಇದನ್ನು ತಪ್ಪಿಸಲು ಪ್ರತಿನಿತ್ಯ ಸಮತೋಲಿತ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ನಡಿಗೆ, ಈಜು ಅಥವಾ ಯೋಗ, ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸಾಧ್ಯವಾದಷ್ಟು ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ. ಚೆನ್ನಾಗಿ ನಿದ್ದೆ ಮಾಡಿ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ, ತೂಕ ಮತ್ತು ಇತರೆ ಸಮಸ್ಯೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ಆಗಾಗ ತಜ್ಞ ವೈದ್ಯರೊಂದಿಗೆ ಸಂಪರ್ಕದಲ್ಲಿರಿ.