California Wildfire: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ನಂದಿಸಲು ವಿಮಾನದಿಂದ ಉದುರಿಸುತ್ತಿರುವ ಪಿಂಕ್‌ ಕಲರ್‌ ಪುಡಿ ಯಾವುದು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  California Wildfire: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ನಂದಿಸಲು ವಿಮಾನದಿಂದ ಉದುರಿಸುತ್ತಿರುವ ಪಿಂಕ್‌ ಕಲರ್‌ ಪುಡಿ ಯಾವುದು?

California Wildfire: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ನಂದಿಸಲು ವಿಮಾನದಿಂದ ಉದುರಿಸುತ್ತಿರುವ ಪಿಂಕ್‌ ಕಲರ್‌ ಪುಡಿ ಯಾವುದು?

California Wildfire Pink Powder: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಕಾಡು ಮಾತ್ರವಲ್ಲದೆ ನಾಡಿಗೂ ಹಬ್ಬಿದೆ. ಲಾಸ್‌ ಏಂಜಲೀಸ್‌ಗೆ ತೀವ್ರ ಹಾನಿ ಉಂಟು ಮಾಡಿರುವ ಬೆಂಕಿಯನ್ನು ನಂದಿಸಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿ ಇದೀಗ ಬೆಂಕಿ ನಂದಿಸಲು ಗುಲಾಬಿ ಬಣ್ಣದ ಪುಡಿ ಬಳಸಲಾಗುತ್ತಿದೆ. ಆ ಪೌಡರ್‌ ಏನೆಂದು ತಿಳಿಯೋಣ.

California Wildfire: ಕಾಡ್ಗಿಚ್ಚು ನಂದಿಸಲು  ಬಳಸುತ್ತಿರುವ ಪಿಂಕ್‌ ಬಣ್ಣದ ಪುಡಿ ಏನು?
California Wildfire: ಕಾಡ್ಗಿಚ್ಚು ನಂದಿಸಲು ಬಳಸುತ್ತಿರುವ ಪಿಂಕ್‌ ಬಣ್ಣದ ಪುಡಿ ಏನು?

California Wildfire Pink Powder: ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಆವರಿಸಿ ತೀವ್ರ ಹಾನಿ ಉಂಟು ಮಾಡುತ್ತಿದೆ. ನಗರದ ಸಾಕಷ್ಟು ಪ್ರದೇಶಗಳನ್ನು ಬೆಂಕಿಯು ಬೂದಿಯಾಗಿಸಿದೆ. ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು ನಂದಿಸಲು ಗುಲಾಬಿ ಬಣ್ಣದ ಅಗ್ನಿ ನಿರೋಧಕವಾದ ಫೋಸ್ ಚೆಕ್‌ (Phos-Chek) ಪೌಡರ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ನೀರು, ಲವಣಗಳು ಮತ್ತು ತುಕ್ಕು ನಿರೋಧಕಗಳ ಮಿಶ್ರಣವಾದ ಫೋಸ್ ಚೆಕ್ ಬೆಂಕಿಯನ್ನು ತಂಪಾಗಿಸುತ್ತದೆ. ಜ್ವಾಲೆಗಳನ್ನು ಕಡಿಮೆ ಮಾಡುತ್ತದೆ. ಬೆಂಕಿ ನಂದಿಸಲು ಬಳಸುವ ಇದರಿಂದ ಪರಿಸರದ ಮೇಲೆ ತೊಂದರೆಯೂ ಇದೆ.

ಏನಿದು ಪಿಂಕ್‌ ಪೌಡರ್‌?

ಬೆಂಕಿ ನಂದಿಸಲು ಬಳಸುತ್ತಿರುವ ಗುಲಾಬಿ ಬಣ್ಣದ ಪೌಡರ್‌ ಹೆಸರು ಫೋಸ್ ಚೆಕ್‌. ಇದನ್ನು ಪೆರಿಮೀಟರ್ ಎಂಬ ಕಂಪನಿಯು ಮಾರಾಟ ಮಾಡುತ್ತದೆ. 1963ರಿಂದ ಅಮೆರಿಕದಲ್ಲಿ ಬೆಂಕಿಯನ್ನು ನಂದಿಸಲು ಬಳಸಲಾಗುತ್ತಿದೆ. ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ರಕ್ಷಣಾ ಇಲಾಖೆಯು ಇದನ್ನು ಸಾಕಷ್ಟು ಸಮಯದಿಂದ ಬಳಸುತ್ತಿದೆ. ಅಸೋಸಿಯೇಟೆಡ್ ಪ್ರೆಸ್ 2022ರ ವರದಿಯ ಪ್ರಕಾರ, ಇದು ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಬೆಂಕಿ ನಿವಾರಕವಾಗಿದೆ. ಪೈಲಟ್‌ಗಳು ಮತ್ತು ಅಗ್ನಿಶಾಮಕ ದಳದವರಿಗೆ ಕಾಣಿಸುವ ಸಲುವಾಗಿ ಫೋಸ್ ಚೆಕ್‌ಗೆ ಬಣ್ಣ ಸೇರಿಸಲಾಗಿದೆ. ಈ ಪುಡಿ ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು. ಇದು ಬೇಗನೇ ಒಣಗುತ್ತದೆ. ಸಂಪೂರ್ಣವಾಗಿ ತೆಗೆದುಹಾಕುವುದು ಕಷ್ಟ.

ಫೋಸ್ ಚೆಕ್‌ನಲ್ಲಿ ಏನೆಲ್ಲ ಇದೆ ಎಂದು ಬಹುತೇಕರಿಗೆ ತಿಳಿದಿಲ್ಲ. ಇದು ಶೇಕಡಾ 80 ರಷ್ಟು ನೀರು, ಶೇಕಡಾ 14 ರಷ್ಟು ರಸಗೊಬ್ಬರ ಮಾದರಿಯ ಲವಣಗಳು ಮತ್ತು ಶೇಕಡಾ 6 ರಷ್ಟು ತುಕ್ಕು ನಿರೋಧಕಗಳು ಮತ್ತು ಬಣ್ಣಗಳನ್ನು ಹೊಂದಿರುತ್ತದೆ. ಅಮೋನಿಯಂ ಪಾಲಿಫಾಸ್ಫೇಟ್‌ನಂತಹ ಲವಣಗಳನ್ನು ಹೊಂದಿರುತ್ತದೆ. ಬೆಂಕಿ ಹರಡುವುದನ್ನು ತಡೆಯಲು ಇದನ್ನು ಸಾಮಾನ್ಯವಾಗಿ ಕಾಡ್ಗಿಚ್ಚು ಹರಡುತ್ತಿರುವ ಪ್ರದೇಶದ ಸುತ್ತಲೂ ಸಿಂಪಡಿಸಲಾಗುತ್ತದೆ. ಇದು ನೀರಿಗಿಂತ ಹೆಚ್ಚು ಕಾಲ ತೇವವಾಗಿರುತ್ತದೆ.

ಪರಿಸರಕ್ಕೆ ಹಾನಿ

ಅಗ್ನಿ ನಿರೋಧಕ ರಾಸಾಯನಿಕಗಳು ಪರಿಸರಕ್ಕೆ ಅಪಾಯಕಾರಿ ಎಂದು ಸಂಶೋಧನೆಗಳು ಕಂಡುಕೊಂಡಿವೆ. ಈ ರಾಸಾಯನಿಕಗಳು ವನ್ಯಜೀವಿಗಳಿಗೆ ಹಾನಿ ಮಾಡಬಹುದು. ನದಿಗಳನ್ನು, ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತವೆ. ಮಾನವನ ಆರೋಗ್ಯಕ್ಕೆ ಹಾನಿಕಾರಕ. ಈ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅಳಿವಿನಂಚಿನಲ್ಲಿರುವ ಪ್ರಭೇದಗಳ ಆವಾಸಸ್ಥಾನಗಳು ಇರುವ ಪ್ರದೇಶಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಿದೆ. ಸಾರ್ವಜನಿಕ ಸುರಕ್ಷತೆ ಅಥವಾ ಮಾನವ ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಇಂತಹ ನಿಷೇಧಕ್ಕೆ ವಿನಾಯಿತಿ ನೀಡಲಾಗಿದೆ.

ಮಾರಕ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕಗಳನ್ನು ಬಳಸುವುದು ಅತ್ಯಂತ ಅಗತ್ಯ. ಆದರೆ, ಹವಾಮಾನ ಬದಲಾವಣೆಗೆ ಸಂಬಂಧಿಸಿ ಆಗಾಗ್ಗೆ ಕಾಡ್ಗಿಚ್ಚುಗಳು ಸಂಭವಿಸುತ್ತವೆ. ಇವುಗಳನ್ನು ನಿವಾರಿಸಲು ಬಳಸುತ್ತಿರುವ ವಸ್ತುಗಳಿಂದ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಸೇರ್ಪಡೆಯಾಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.