Wagner Group: ಆಪ್ತ ರಷ್ಯಾದ ವಿರುದ್ಧವೇ ವ್ಯಾಗ್ನರ್ ಗುಂಪು ತಿರುಗಿಬೀಳಲು ಕಾರಣವೇನು; ಈ ಗ್ರೂಪ್​ನ ಕೆಲಸವೇನು; ಇಲ್ಲಿದೆ ಸಮಗ್ರ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Wagner Group: ಆಪ್ತ ರಷ್ಯಾದ ವಿರುದ್ಧವೇ ವ್ಯಾಗ್ನರ್ ಗುಂಪು ತಿರುಗಿಬೀಳಲು ಕಾರಣವೇನು; ಈ ಗ್ರೂಪ್​ನ ಕೆಲಸವೇನು; ಇಲ್ಲಿದೆ ಸಮಗ್ರ ವಿವರ

Wagner Group: ಆಪ್ತ ರಷ್ಯಾದ ವಿರುದ್ಧವೇ ವ್ಯಾಗ್ನರ್ ಗುಂಪು ತಿರುಗಿಬೀಳಲು ಕಾರಣವೇನು; ಈ ಗ್ರೂಪ್​ನ ಕೆಲಸವೇನು; ಇಲ್ಲಿದೆ ಸಮಗ್ರ ವಿವರ

ರಷ್ಯಾ ಸೇನಾ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ವ್ಯಾಗ್ನರ್ ಗುಂಪು ಕೆಲಸವೇನು? ಅಧ್ಯಕ್ಷ ವ್ಲಾಡಿಮಿರ್​​​​ ಪುಟಿನ್​ಗೆ ಆಪ್ತವಾಗಿದ್ದ ಈ ಗುಂಪು ಈಗ ಅವರ ವಿರುದ್ಧವೇ ತಿರುಗಿಬೀಳಲು ಕಾರಣವೇನೆಂಬುದರ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ವ್ಯಾಗ್ನರ್ ಗುಂಪು
ವ್ಯಾಗ್ನರ್ ಗುಂಪು

ಕಳೆದೊಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ರಷ್ಯಾ-ಉಕ್ರೇನ್‌ (Russia-Ukraine War) ನಡುವೆ ಯುದ್ಧ ನಡೆಯುತ್ತಲೇ ಇದೆ. ಆಗಾಗ್ಗೆ ಉದ್ವಿಗ್ನತೆ ಸೃಷ್ಟಿಯಾಗುತಿದ್ದು, ಈ ಉಭಯ ದೇಶಗಳ ಹೋರಾಟಕ್ಕೆ ಇನ್ನೂ ಪೂರ್ಣ ವಿರಾಮ ಬಿದ್ದಿಲ್ಲ. ಇತ್ತೀಚೆಗಷ್ಟೆ ಅಣುಬಾಂಬ್​ ಸ್ಪೋಟಿಸುವುದಾಗಿ ಹೇಳಿದ್ದ ರಷ್ಯಾ ವಿರುದ್ಧ ವ್ಯಾಗ್ನರ್ ಗ್ರೂಪ್ (Wagner Group) ತಿರುಗಿ ಬಿದ್ದಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹಾಗಾದರೆ, ವ್ಯಾಗ್ನರ್ ಗುಂಪು ಎಂದರೇನು? ರಷ್ಯಾ ವಿರುದ್ಧ ತಿರುಗಿಬೀಳಲು ಕಾರಣ ಇಲ್ಲಿದೆ.

ಪ್ರಮುಖ ನಗರಗಳ ಮೇಲೆ ದಾಳಿ

ರಷ್ಯಾದ ಮಿಲಿಟರಿ ಪಡೆಯನ್ನು ಧ್ವಂಸ ಮಾಡುವುದಾಗಿ ವ್ಯಾಗ್ನರ್ ಗುಂಪಿನ ಮುಖ್ಯಸ್ಥರು ಪ್ರತಿಜ್ಞೆ ಮಾಡಿದ್ದಾರೆ. ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ (Yevgeny Prigozhin) ಈ ಬಗ್ಗೆ ಮಾತನಾಡಿದ್ದು, ರಷ್ಯಾದ ವಿರುದ್ಧ ನಮ್ಮ ಹೋರಾಟ ಕೊನೆಯವರೆಗೂ ಮುಂದುವರೆಯಲಿದೆ. ನಮಗೆ ಅಡ್ಡ ಬರುವ ಎಲ್ಲರನ್ನೂ ಧ್ವಂಸ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಷ್ಯಾದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿದ್ದು, ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಪೂರ್ವ ಉಕ್ರೇನ್‌ನ ಬಖ್ಮುತ್ ನಗರವನ್ನು ವಶಪಡಿಸಿಕೊಂಡಿತ್ತು. ಇದೀಗ 25,000ಕ್ಕೂ ಹೆಚ್ಚು ಸೇನಾ ಬಲದ ವ್ಯಾಗ್ನರ್​​ ಗುಂಪು ಈ ನಗರಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಈಗಾಗಲೇ ದಕ್ಷಿಣ ರಷ್ಯಾದ ನಗರ ರೋಸ್ಟೊವ್‌ಗೆ ಪ್ರವೇಶಿಸಿರುವ ಶಂಕೆ ಇದ್ದು, ಇದರಿಂದ ಎಚ್ಚೆತ್ತ ರಷ್ಯಾ ಅಧಿಕಾರಿಗಳು ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ವ್ಯಾಗ್ನರ್​​ ಗುಂಪು ಸವಾಲಿಗೆ, ರಷ್ಯಾ ಮಿಲಿಟರಿ ಪಡೆ ಕಾಯುತ್ತಿದೆ.

ವ್ಯಾಗ್ನರ್ ಗುಂಪು ಎಂದರೇನು?

ವ್ಯಾಗ್ನರ್​ ಗುಂಪನ್ನು ಅಧಿಕೃತವಾಗಿ ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯುತ್ತಾರೆ. ಇದು ರಷ್ಯಾದ ಖಾಸಗಿ ಅರೆಕಾಲಿಕ ಸಂಸ್ಥೆ. ಮೂಲತಃ ಖಾಸಗಿ ಮಿಲಿಟರಿ ಕಂಪನಿ ಮತ್ತು ಕೂಲಿ ಕಾರ್ಮಿಕರ ಜಾಲ. ಇದು ಕಾನೂನು ಬಾಹಿರ ಸೇನೆ ಕೂಡ ಹೌದು. ಆದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೆಚ್ಚು ಆಪ್ತವಾಗಿತ್ತು. ಪುಟಿನ್​ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಪುಟಿನ್​ಗೆ ಹೆಚ್ಚು ಆಪ್ತವಾಗಿದ್ದ ಖಾಸಗಿ ಸೇನೆಯೂ ಇದಾಗಿದ್ದು, ಪ್ರಸ್ತುತ ಪುಟಿನ್ ಸರ್ಕಾರದ ವಿರುದ್ಧವೇ ಬಂಡಾಯ ಎದ್ದಿದೆ.

ಆಪ್ತರೇ ರಷ್ಯಾ ವಿರುದ್ಧ ತಿರುಗಿಬೀಳಲು ಕಾರಣವೇನು?

ಈ ವರ್ಷದ ಜನವರಿಯಿಂದ ರಷ್ಯಾ ಹಾಗೂ ಖಾಸಗಿ ಗುಂಪು ವ್ಯಾಗ್ನರ್ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು-ಗಣಿಗಾರಿಕೆ ಪಟ್ಟಣ ಸೊಲೆಡಾರ್ ವಶಪಡಿಸಿಕೊಳ್ಳಲು ಕಾರಣವಾಗಿದ್ದು ನಾವೇ ಎಂದು ಪ್ರಿಗೋಜಿನ್ ಸಂಪೂರ್ಣ ಕ್ರೆಡಿಟ್ ಪಡೆದಿದ್ದರು. ಆದರೆ, ಇದನ್ನು ಸಹಿಸದ ರಷ್ಯಾದ ರಕ್ಷಣಾ ಸಚಿವಾಲಯ ನಮ್ಮ ವೈಭವನ್ನು ಕದಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಅಸೋಸಿಯೇಟೆಡ್ ಪ್ರೆಸ್ ವರದಿಗಳ ಪ್ರಕಾರ, ಸಾಕಷ್ಟು ಮದ್ದುಗುಂಡುಗಳನ್ನು ನಮ್ಮ ಗುಂಪಿಗೆ ಪೂರೈಸಲು ರಷ್ಯಾದ ಮಿಲಿಟರಿ ವಿಫಲವಾಗಿತ್ತು ಎಂದು ಪದೇ ಪದೇ ವ್ಯಾಗ್ನರ್ ಪಡೆ​ ದೂರಿತ್ತು. ರಷ್ಯಾ ಸೇನೆಗೆ ಸಂಬಂಧಿಸಿದ ಪಡೆಗಳನ್ನು ತಮ್ಮ ಗುಂಪಿನಿಂದ ಹೊರ ಕಳುಹಿಸುವುದಾಗಿಯೂ ಬೆದರಿಕೆ ಹಾಕಿತ್ತು. ಉಕ್ರೇನ್‌ನಲ್ಲಿ ವ್ಯಾಗ್ನರ್ ಗುಂಪು ವಿಡಿಯೋ ರೆಕಾರ್ಡ್ ಮಾಡಿತ್ತು. ಅದರಲ್ಲಿ ರಷ್ಯಾದ ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥ ಜನರಲ್ ವ್ಯಾಲೆರಿ ಗೆರಾಸಿಮೊವ್ ಅವರನ್ನು ಮದ್ದುಗುಂಡುಗಳನ್ನು ಒದಗಿಸಲು ವಿಫಲರಾಗಿದ್ದರು ಎಂಬ ಆರೋಪಗಳನ್ನು ಸುರಿಸಿದ್ದರು.

ರಷ್ಯಾ ಸೇನೆ, ವ್ಯಾಗ್ನರ್ ನಡುವಿನ ಸಮರದಲ್ಲಿ ವ್ಯಾಗ್ನರ್ ಗುಂಪನ್ನೇ ತಮ್ಮ ನೇರ ಸುಪರ್ದಿಗೆ ಪಡೆಯಲು ರಷ್ಯಾ ಸೇನೆ ಯತ್ನಿಸಿತ್ತು. ಕೆಲವು ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿತ್ತು. ಆದರೆ ಇದಕ್ಕೆ ತಿರುಗೇಟು ಕೊಟ್ಟ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೋಜಿನ್, ನಮ್ಮ ಗುಂಪು ಈ ಒಪ್ಪಂದ ಬಹಿಷ್ಕರಿಸುತ್ತದೆ. ರಷ್ಯಾದ ರಕ್ಷಣಾ ಸಚಿವರಿಗೆ ಮಿಲಿಟರಿ ಪಡೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ರಕ್ಷಣಾ ಸಚಿವಾಲಯವು ನಮ್ಮ ಗುಂಪಿಗೆ ಮದ್ದುಗುಂಡುಗಳನ್ನು ಪೂರೈಸುವುದನ್ನು ನಿಲ್ಲಿಸುತ್ತಿದೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು. ಇದರಿಂದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು, ಮಿಲಿಟರಿ ಮುಖ್ಯಸ್ಥ ಮತ್ತು ಪ್ರಿಗೋಜಿನ್ ನಡುವೆ ಸಾರ್ವಜನಿಕವಾಗಿ ಜಟಾಪಟಿ ನಡೆದಿತ್ತು. ಈ ಆತಂರಿಕ ಕಲಹ, ನ್ಯಾಟೋ ಸದಸ್ಯ ರಾಷ್ಟ್ರಗಳ ಬಲ ಹೆಚ್ಚಿಸಿತ್ತು.

2014ರಲ್ಲಿ ಬೆಳಕಿಗೆ ಬಂತು

ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುವಾಗ, ಈ ಗುಂಪನ್ನು ಮೊದಲು 2014ರಲ್ಲಿ ಗುರುತಿಸಲಾಗಿತ್ತು. 2014ರಲ್ಲಿ ಈ ಗುಂಪು ಹೆಚ್ಚಾಗಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ರಹಸ್ಯ ಸಂಸ್ಥೆಯಾಗಿತ್ತು. ಇದೊಂದು ದೊಡ್ಡ ಗುಂಪು ಸಹ ಆಗಿತ್ತು. ರಷ್ಯಾದ ಪ್ರಮುಖ ದಳಗಳು, ವಿಶೇಷ ಪಡೆಗಳ 5,000ಕ್ಕೂ ಹೆಚ್ಚಿನ ಹೋರಾಟಗಾರರನ್ನು ಈ ಗುಂಪು ಹೊಂದಿತ್ತು ಎಂದು ಸುದ್ದಿ ಸಂಸ್ಥೆಗಳು ವರದಿಯಲ್ಲಿ ಬಿತ್ತರಿಸಿವೆ.

ವ್ಯಾಗ್ನರ್ ಗ್ರೂಪ್ ಬೇರೆಲ್ಲಿ ಕಾರ್ಯನಿರ್ವಹಿಸುತ್ತಿದೆ?

2015ರಿಂದ ವ್ಯಾಗ್ನರ್ ಗ್ರೂಪ್ ಕೂಲಿ ಸೈನಿಕರು ಸಿರಿಯಾದಲ್ಲಿದ್ದಾರೆ. ಸರ್ಕಾರದ ಪರ ಪಡೆಗಳೊಂದಿಗೆ ಹೋರಾಡುತ್ತಿದ್ದಾರೆ. ತೈಲ ಕ್ಷೇತ್ರಗಳನ್ನು ಈ ಗುಂಪು ಕಾವಲು ಕಾಯುತ್ತಿದೆ. ಲಿಬಿಯಾದಲ್ಲಿ ವ್ಯಾಗ್ನರ್ ಗ್ರೂಪ್, ಜನರಲ್ ಖಲೀಫಾ ಹಫ್ತಾರ್‌ಗೆ ನಿಷ್ಠರಾಗಿರುವ ಪಡೆಗಳಿಗೆ ಬೆಂಬಲಿಸುತ್ತಿದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ವಜ್ರದ ಗಣಿಗಳಿಗೆ, ಸುಡಾನ್‌ನಲ್ಲಿ ಚಿನ್ನದ ಗಣಿಗಳಿಗೆ ವ್ಯಾಗ್ನರ್ ಗ್ರೂಪ್ ರಕ್ಷಣೆ ನೀಡುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.