ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಯಾರು? ಕಾಲೇಜಿನಿಂದಲೇ ಸಕ್ರಿಯ ರಾಜಕೀಯಕ್ಕೆ ಧುಮುಕಿ ಸೃಷ್ಟಿಸಿದ್ದು ಇತಿಹಾಸ!
Anura Kumara Dissanayake: ಶ್ರೀಲಂಕಾದ ನೂತನ ಅಧ್ಯಕ್ಷನಾಗಿ ಆಯ್ಕೆಯಾದ ಅನುರಾ ಕುಮಾರ ಡಿಸಾನಾಯಕೆ ಅವರು ಯಾರು? ಅಧ್ಯಕ್ಷೀಯ ಚುನಾವಣೆಯಲ್ಲಿ ಪಡೆದ ಮತಗಳೆಷ್ಟು? ಅವರ ವಿವರ ಇಲ್ಲಿದೆ ನೋಡಿ.
2022ರ ಆರ್ಥಿಕ ಬಿಕ್ಕಟ್ಟಿನ ನಂತರದ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಅನುರಾ ಕುಮಾರ ಡಿಸಾನಾಯಕೆ ಶ್ರೀಲಂಕಾದ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಪಕ್ಷದ ಅನುರಾ ಸುಮಾರು ಶೇ 42 ರಷ್ಟು ಮತಗಳನ್ನು ಅಂದರೆ 56.34 ಲಕ್ಷ ವೋಟ್ ಪಡೆದರೆ, ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ ಶೇ 23ರಷ್ಟು ಮತ ಅಂದರೆ 43.63 ಲಕ್ಷ ಮತಗಳೊಂದಿಗೆ 2ನೇ ಸ್ಥಾನ ಪಡೆದರು. ಆದರೆ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೇವಲ ಶೇ 16ರಷ್ಟು ಮತಗಳನ್ನು (22.99 ಲಕ್ಷ ಮತ) ಪಡೆದು 3ನೇ ಸ್ಥಾನದಲ್ಲಿದ್ದಾರೆ. ಅನುರಾ ಕುಮಾರ ಡಿಸಾನಾಯಕೆ ಅವರ ಹಿನ್ನೆಲೆ ಇಲ್ಲಿದೆ ನೋಡಿ.
ಡಿಸಾನಾಯಕೆ ಅವರು ಶ್ರೀಲಂಕಾದ ರಾಜಧಾನಿ ಕೊಲಂಬೊದಿಂದ 170 ಕಿ.ಮೀ ದೂರದಲ್ಲಿರುವ ಅನುರಾಧಪುರ ಜಿಲ್ಲೆಯ ತಂಬುಟೆಗಾಮ ಗ್ರಾಮದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಿನಗೂಲಿ ಮತ್ತು ಅವರ ತಾಯಿ ಗೃಹಿಣಿಯಾಗಿದ್ದರೂ, ಅವರು ತಮ್ಮ ಮಗನಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು. ಅನುರಾ ಕೆಲಾನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದರು. ಕಾಲೇಜಿನಿಂದಲೇ ಅವರು ರಾಜಕೀಯಕ್ಕೆ ಧುಮುಕಿ ಇತಿಹಾಸ ಸೃಷ್ಟಿಸಿದರು.
ಕ್ಯಾಂಪಸ್ನಲ್ಲಿ ಓದುತ್ತಿರುವಾಗಲೇ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಡಿಸಾನಾಯಕೆ ಅವರು, 1987-89ರ ನಡುವೆ ಆಗಿನ ಅಧ್ಯಕ್ಷರಾದ ಜಯವರ್ಧನೆ ಮತ್ತು ಆರ್ ಪ್ರೇಮದಾಸ ಅವರ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಆಡಳಿತದ ವಿರುದ್ಧ ಹೋರಾಟ ನಡೆಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಈ ಮಾರ್ಕ್ಸ್‌ವಾದಿ ನಾಯಕ 1995ರಲ್ಲಿ ಸಮಾಜವಾದಿ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಘಟಕರ ಸ್ಥಾನಕ್ಕೇರಿದರು. ನಂತರ ಜೆವಿಪಿಯ ಕೇಂದ್ರ ಕಾರ್ಯಕಾರಿ ಸಮಿತಿಗೆ ನೇಮಕಗೊಂಡ ಅವರು, 1998ರಲ್ಲಿ ಜೆವಿಪಿಯ ರಾಜಕೀಯ ಬ್ಯೂರೋದ ಸದಸ್ಯರಾದರು.
ಅನುರಾ ಕುಮಾರ 2000ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಂಸತ್ತಿನ ಸದಸ್ಯರಾದರು. ಚುನಾವಣಾ ಪ್ರಚಾರದ ಸಮಯದಲ್ಲಿ ಬೌದ್ಧ ಧರ್ಮಕ್ಕೆ ಅಗ್ರಗಣ್ಯ ಸ್ಥಾನ ನೀಡುವ ಮತ್ತು ಸಂವಿಧಾನದ 9ನೇ ವಿಧಿಯಂತೆ ‘ದೈವಿಕ ರಕ್ಷಣೆ’ಗೆ ಮತ್ತು ಅದರ ತಿದ್ಧುಪಡಿಗೆ ಅವಕಾಶ ನೀಡದಂತೆ ನೋಡಿಕೊಳ್ಳುವುದಾಗಿ ಬೌದ್ಧ ಸನ್ಯಾಸಿಗಳಿಗೆ ಭರವಸೆ ನೀಡಿದ್ದರು. ಜೆವಿಪಿ ನೇತೃತ್ವದ ಸಮ್ಮಿಶ್ರ ಎನ್ಪಿಪಿ ಕೂಡ 9ನೇ ವಿಧಿಯನ್ನು ರಕ್ಷಿಸಲು ಬದ್ಧವಾಗಿದೆ. ಅಲ್ಲದೆ, ಈ ನಿರ್ಧಾರವನ್ನು ವಿರೋಧಿಸುವವರು ಎನ್ನುವ ತಮಿಳಿಗರಿಗೆ ಎಚ್ಚರಿಕೆ ನೀಡಿದ್ದರು.
ಅನುರಾ ಭಾರತ ವಿರೋಧಿಯೇ?
ದಿಸಾನಾಯಕೆ ಅವರ ಜೆವಿಪಿ ಭಾರತದಿಂದ ತಮಿಳು ಮೂಲದ ಎಸ್ಟೇಟ್ ಕಾರ್ಮಿಕರನ್ನು ‘ಭಾರತೀಯ ವಿಸ್ತರಣಾವಾದದ ಸಾಧನ’ ಎಂದು ಖಂಡಿಸಿತ್ತು. ಎರಡೂ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ಹೂಡಿಕೆ ಉತ್ತೇಜಿಸುವ ವ್ಯಾಪಾರದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (ಸಿಇಪಿಎ) ಪಕ್ಷ ವಿರೋಧಿಸಿದೆ. ಕಚತೀವು ದ್ವೀಪವನ್ನು ಭಾರತಕ್ಕೆ ಹಿಂದಿರುಗಿಸುವುದಿಲ್ಲ ಎಂದು ನಿಯೋಜಿತ ಅಧ್ಯಕ್ಷರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ದಿಸಾನಾಯಕೆ ಅವರ ಜೆವಿಪಿ ತಮಿಳರಿಗೆ ಅಧಿಕಾರ ಹಂಚಿಕೆಯನ್ನು ವಿರೋಧಿಸಿದೆ. 1987ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸಹಿ ಹಾಕಿದ ಭಾರತ-ಶ್ರೀಲಂಕಾ ಒಪ್ಪಂದವನ್ನು ಅವರ ಪಕ್ಷ ವಿರೋಧಿಸಿತ್ತು. ದೇಶದ ತಮಿಳು ಪ್ರಾಬಲ್ಯದ ಈಶಾನ್ಯದಲ್ಲಿ ಭೂ ಕಂದಾಯ ಮತ್ತು ಪೊಲೀಸರ ಮೇಲೆ ಹೆಚ್ಚಿನ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಾಂತೀಯ ಮಂಡಳಿಗಳನ್ನು ರಚಿಸಿದ ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಪಕ್ಷ ವಿರೋಧಿಸಿತ್ತು. ಕೃಷಿ, ಭೂಮಿ ಮತ್ತು ನೀರಾವರಿ ಸಚಿವರಾಗಿದ್ದ ಅವರು ಈಶಾನ್ಯಕ್ಕೆ ದೊಡ್ಡ ಪ್ರಮಾಣದ ಸಹಾಯ ಮಾಡಿರಲಿಲ್ಲ.
ಶ್ರೀಲಂಕಾ ತನ್ನ 3 ಬಿಲಿಯನ್ ಡಾಲರ್ ಮೌಲ್ಯದ ಬೇಲ್ ಔಟ್ ಪ್ಯಾಕೇಜ್ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 350 ಮಿಲಿಯನ್ ಡಾಲರ್ ಮೌಲ್ಯದ ಮುಂದಿನ ಬಿಡುಗಡೆಗಾಗಿ ಕಾಯುತ್ತಿದೆ. ಒಪ್ಪಂದದ ನಿಯಮಗಳನ್ನು "ಮರು ಮಾತುಕತೆ" ಮಾಡಲು ತಮ್ಮ ಪಕ್ಷವು ಪ್ರಯತ್ನಿಸುತ್ತದೆ ಎಂದು ದಿಸಾನಾಯಕೆ ಪದೇ ಪದೇ ಹೇಳಿದ್ದಾರೆ. ಇದರ ವಿರುದ್ಧ ಪ್ರಸ್ತುತ ಸರ್ಕಾರ ಎಚ್ಚರಿಕೆ ನೀಡಿದೆ.