ಪೆರುವಿನ ಈ ಮಹಾ ಅಜ್ಜನಿಗೆ ಗಿನ್ನಿಸ್‌ ದಾಖಲೆ ಸೇರುವಾಸೆ, ಇವರ ವಯಸ್ಸು 124!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೆರುವಿನ ಈ ಮಹಾ ಅಜ್ಜನಿಗೆ ಗಿನ್ನಿಸ್‌ ದಾಖಲೆ ಸೇರುವಾಸೆ, ಇವರ ವಯಸ್ಸು 124!

ಪೆರುವಿನ ಈ ಮಹಾ ಅಜ್ಜನಿಗೆ ಗಿನ್ನಿಸ್‌ ದಾಖಲೆ ಸೇರುವಾಸೆ, ಇವರ ವಯಸ್ಸು 124!

ಪೆರು ದೇಶದ ಮಾರ್ಕೆಲಿನೋ ಅಬದ್‌ ಅವರು ಕಳೆದ ವಾರ ತಮ್ಮ 124 ಹುಟ್ಟು ಹಬ್ಬ ಆಚರಿಸಿಕೊಂಡರು. ಸದ್ಯದ ಮಾಹಿತಿ ಪ್ರಕಾರ ಇವರೇ ವಿಶ್ವದ ಹಿರಿಯ ಮನುಷ್ಯ.

ಪೆರುವಿನ ಹಿರಿಯಜ್ಜ ಅಬದ್‌ 124 ನೇ ಹುಟ್ಟುಹಬ್ಬದ ಕ್ಷಣ.
ಪೆರುವಿನ ಹಿರಿಯಜ್ಜ ಅಬದ್‌ 124 ನೇ ಹುಟ್ಟುಹಬ್ಬದ ಕ್ಷಣ. (Reuters )

ಲಿಮಾ( ಪೆರು): ಇವರು ವಿಶ್ವದ ಹಿರಿಯಜ್ಜ.ಇವರ ವಯಸ್ಸು ಬರೋಬ್ಬರಿ 124. ಇವರು ಇರುವುದು ಪೆರು ದೇಶದಲ್ಲಿ. ಈಗಲೂ ಊಟ ಮಾಡುತ್ತಾರೆ. ಸಹಜವಾಗಿಯೇ ಬದುಕುತ್ತಿದ್ದಾರೆ. ವಾರದ ಹಿಂದೆಯಷ್ಟೇ ಕುಟುಂಬದವರೊಂದಿಗೆ ಸೇರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪೆರು ಸರ್ಕಾರವು ವಿಶ್ವದ ಅತ್ಯಂತ ಹಿರಿಯರು ತಮ್ಮ ದೇಶದಲ್ಲಿ ಇದ್ದಾರೆ ಎನ್ನುವುದು ತಿಳಿದ ಮೇಲೆ ಇನ್ನೂ ಮುತುವರ್ಜಿ ವಹಿಸುತ್ತಿದೆ. ಅಲ್ಲದೇ ವಿಶ್ವದ ಹಿರಿಯ ವ್ಯಕ್ತಿ ನಮ್ಮ ದೇಶದಲ್ಲಿಯೇ ಇರುವುದನ್ನು ಘೋಷಣೆ ಕೂಡ ಮಾಡಿಕೊಂಡಿದೆ. ಇದರೊಟ್ಟಿಗೆ ಅತಿ ಹಿರಿಯ ಎನ್ನುವ ಬಗ್ಗೆ ಗಿನ್ನಿಸ್‌ ರೆಕಾರ್ಡ್‌ಗೆ ಸೇರಲು ಸಿದ್ದತೆ ಕೂಡ ಮಾಡಲಾಗುತ್ತಿದೆ.

ಇವರ ಹೆಸರು ಮಾರ್ಕೆಲಿನೋ ಅಬದ್‌. ಕೇಂದ್ರ ಪೆರುವಿನ ಹ್ಯುನೋಕೋ ಪ್ರದೇಶದಲ್ಲಿ ಅವರ ವಾಸ. ಅದು ಪೆರುವನ ಆಂಡೀನ್‌ ಪರ್ವತಗಳ ಪ್ರದೇಶ. ಈ ಪ್ರದೇಶಲ್ಲಿ ಜನ ಹೆಚ್ಚು ಕಾಲದವರೆಗೂ ಬದುಕು ದಾಖಲೆ ಕೂಡ ಹೊಂದಿದ್ದಾರೆ. ಏಕೆಂದರೆ ಪರ್ವತ ಶ್ರೇಣಿಯ ಹವಾಗುಣ, ಜನರ ಬದುಕುವ ಕ್ರಮವೇ ಹಾಗಿದೆ ಎನ್ನುವುದು ಅಲ್ಲಿನವರ ಅಭಿಪ್ರಾಯ.

ಮಾರ್ಕೆಲಿನೋ ಅಬದ್‌ ಅವರು ಜನಿಸಿದ್ದು 1900 ರಲ್ಲಿ. ಪೆರು ಸರ್ಕಾರಿ ಅಧಿಕಾರಿಗಳೇ ಇವರ ಜನನಕ್ಕೆ ಸಂಬಂಧಿಸಿದಂತೆ ನಿಖರ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇಡೀ ವಿಶ್ವದಲ್ಲಿ ಇಷ್ಟು ವಯಸ್ಸಿನವರೆಗೂ ಬದುಕಿರುವವರು ಹಾಗೂ ಈಗಲೂ ಸಹಜ ಜೀವನ ನಡೆಸುತ್ತಿರುವವರು ಯಾರು ಇಲ್ಲ ಎನ್ನುವುದನ್ನು ಅಧಿಕೃತವಾಗಿಯೇ ತಿಳಿಸಲಾಗಿದೆ.

ಹ್ಯುನೋಕೋ ಪ್ರದೇಶದಲ್ಲಿನ ಸಸ್ಯ ಹಾಗೂ ಪ್ರಾಣಿ ಸಂಪತ್ತೇ ಅಲ್ಲಿನ ಹಿರಿಮೆ. ಅಲ್ಲಿನ ಹವಾಗುಣಕ್ಕೆ ಅನುಗುಣವಾಗಿಯೇ ಅಬದ್‌ ಅವರು ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡು ಬಂದರು. ಆರೋಗ್ಯಕರ ಜೀವನ, ಆಂತರಿಕ ಶಾಂತಿಯ ಕ್ರಮಗಳು ಅವರ ಆರೋಗ್ಯದಲ್ಲಿ ಕಂಡು ಬಂದವು. ಅವರ ಸ್ನೇಹಪರ ಮನೋಭಾವವೂ ಆಯುರ್‌ ಆರೋಗ್ಯವನ್ನು ನೀಡಿದೆ. ಇದೇ ಕಾರಣದಿಂದಲೇ ಅವರು 12 ದಶಕಗಳನ್ನು ಸಹಜವಾಗಿಯೇ ಕಳೆದಿದ್ದಾರೆ. ಈ ವರ್ಷ 124 ಕ್ಯಾಂಡಲ್‌ಗಳನ್ನು ಜನುಮ ದಿನದಂದು ಬೆಳಗಿಸಿದ್ದಾರೆ ಎನ್ನುವುದನ್ನು ಸರ್ಕಾರ ತಿಳಿಸಿದೆ.

ಈವರೆಗೂ ಗಿನ್ನಿಸ್‌ ಬುಕ್‌ ದಾಖಲೆಯಲ್ಲಿ ಇರುವುದು 111 ವರ್ಷದ ಓಲ್ಡ್‌ ಬ್ರಿಟನ್‌ ನ ವ್ಯಕ್ತಿಯ ಹೆಸರಿನಲ್ಲಿ. ಈ ಹಿಂದೆ 114 ವರ್ಷದವರ ಹೆಸರಿನಲ್ಲಿತ್ತು. ಅವರು ತೀರಿಕೊಂಡ ನಂತರ 111 ವರ್ಷದವರೇ ಸುದೀರ್ಘ ಬದುಕಿದವರು ಎಂದು ಗಿನ್ನಿಸ್‌ ದಾಖಲೆಯಾಗಿದೆ. ಈವರೆಗೂ 122 ವರ್ಷದವರು ಬದುಕಿದ್ದೇ ಸುದೀರ್ಘ ಎನ್ನುವ ಮಾಹಿತಿಯಿತ್ತು. ಇವರ ಹೆಸರು ಗಿನ್ನಿಸ್‌ ದಾಖಲೆಗೇನೂ ಸೇರಿರಲಿಲ್ಲ. ಆದರೆ ಈಗ ಅಬದ್‌ ಅವರ ಹೆಸರು ಸೇರಿದಂತೆ ಇವರ ಹೆಸರೇ ಮುಂಚೂಣಿಗೆ ಬರಲಿದೆ. ಅಬದ್‌ ಹೆಸರು ಸೇರಿಸಲು ಬೇಕಾದ ದಾಖಲೆಗಳ ತಯಾರಿ ಪ್ರಕ್ರಿಯೆಯೂ ನಡೆದಿದೆ.
ನಾನು ನನ್ನಂತೆ ಬದುಕಿದ್ದೇನೆ. ಯಾವುದೇ ಒತ್ತಡಗಳಿಗೆ ಎಂದೂ ಒಳಗಾಗಿಲ್ಲ. ಹೆಚ್ಚು ಹಣ್ಣು ಸೇವನೆ ಮಾಡಿದ್ದೇನೆ. ಕುರಿ ಮಾಂಸ ನನಗೆ ಇಷ್ಟ,ಅದನ್ನು ಸೇವಿಸುತ್ತೇನೆ. ಕೋಕಾ ಎಲೆಗಳನ್ನು ಸೇವಿಸುವುದು ನನ್ನ ಹವ್ಯಾಸ ಎಂದು ಅಬದ್‌ ಹೇಳುತ್ತಾರೆ.

ಈಗಲೂ ಪೆರುವಿನ ಹಿರಿಯರ ಮನೆಯಲ್ಲಿ ಅಬದ್‌ ಅವರ ವಾಸ. ಅಲ್ಲಿನ ಸಹಪಾಠಿಗಳೊಂದಿಗೆ ಖುಷಿಯಾಗಿಯೇ ಜೀವನ ನಡೆಸುತ್ತಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.