World Population Today: ಢಂ! ಇಂದು ಮಹಾ ಜನಸಂಖ್ಯಾ ಸ್ಪೋಟ, 8 ಶತಕೋಟಿ ಜನಸಂಖ್ಯೆಯಲ್ಲಿ ಭಾರತದ ಕೊಡುಗೆಯೆಷ್ಟು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  World Population Today: ಢಂ! ಇಂದು ಮಹಾ ಜನಸಂಖ್ಯಾ ಸ್ಪೋಟ, 8 ಶತಕೋಟಿ ಜನಸಂಖ್ಯೆಯಲ್ಲಿ ಭಾರತದ ಕೊಡುಗೆಯೆಷ್ಟು?

World Population Today: ಢಂ! ಇಂದು ಮಹಾ ಜನಸಂಖ್ಯಾ ಸ್ಪೋಟ, 8 ಶತಕೋಟಿ ಜನಸಂಖ್ಯೆಯಲ್ಲಿ ಭಾರತದ ಕೊಡುಗೆಯೆಷ್ಟು?

World Population Today: ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಮುಂದಿನ ವರ್ಷ ಭಾರತವು ಚೀನಾವನ್ನು ಮೀರಿಸುವ ಹಾದಿಯಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಈ ಜಗತ್ತಿನ ಅರ್ಧದಷ್ಟು ಜನರು ಚೀನಾ, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ನೈಜೀರಿಯಾ ಮತ್ತು ಬ್ರೆಜಿಲ್‌ನಲ್ಲಿ ವಾಸಿಸುತ್ತಿದ್ದಾರೆ.

ಜನಸಂಖ್ಯಾ ಸ್ಪೋಟ
ಜನಸಂಖ್ಯಾ ಸ್ಪೋಟ (REUTERS)

ಭೂಮಿಯೆಂಬ ಪುಟ್ಟ ಗ್ರಹದಲ್ಲಿ ಈಗ ಭರ್ತಿ ಎಂಟು ಶತಕೋಟಿ ಜನರು ವಾಸಿಸುತ್ತಿದ್ದಾರೆ. ಹೌದು, ನವೆಂಬರ್‌ 15 ಅಂದರೆ ಇಂದು ಜಗತ್ತಿನ ಜನಸಂಖ್ಯೆ 8 ಬಿಲಿಯನ್‌ಗೆ ತಲುಪಿದೆ. ಇದರಲ್ಲಿ ಭಾರತದ ಕೊಡುಗೆ ಅತ್ಯಧಿಕವಾಗಿದೆ. ಅಂದಹಾಗೆ, ಮುಂದಿನ ಒಂದು ಶತಕೋಟಿ ಜನಸಂಖ್ಯೆಯು ಭಾರತ, ಕಾಂಗೋ, ಈಜಿಪ್ಟ್‌, ಇಥಿಯೋಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್‌ ಮತ್ತು ತಾಂಜಾನಿಯಾವೆಂಬ ಎಂಟು ದೇಶಗಳಿಂದ ಸೃಷ್ಟಿಯಾಗಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆ ಮುನ್ನೋಟ 2023ರ ವರದಿ ತಿಳಿಸಿದೆ.

ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಭಾರತ

ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಮುಂದಿನ ವರ್ಷ ಭಾರತವು ಚೀನಾವನ್ನು ಮೀರಿಸುವ ಹಾದಿಯಲ್ಲಿದೆ ಎಂದು ವಿಶ್ವಸಂಸ್ಥೆಯ ಮುನ್ನೋಟ ವರದಿಯನ್ನು ವಿಶ್ಲೇಷಿಸಲಾಗಿದೆ. ಈ ಜಗತ್ತಿನ ಅರ್ಧದಷ್ಟು ಜನರು ಚೀನಾ, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ನೈಜೀರಿಯಾ ಮತ್ತು ಬ್ರೆಜಿಲ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ.

"ಎಂಟು ಬಿಲಿಯನ್‌ಗೆ ಜಗತ್ತಿನ ಜನಸಂಖ್ಯೆ ತಲುಪಿರುವುದು ಮಾನವೀಯತೆಯ ಐತಿಹಾಸಿಕ ಮೈಲಿಗಲ್ಲುʼʼ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸಿದೆ. "ಸಾರ್ವಜನಿಕ ಆರೋಗ್ಯ, ಪೋಷಣೆ, ವೈಯಕ್ತಿಕ ನೈರ್ಮಲ್ಯ ಮತ್ತು ಔಷಧಗಳ ಸುಧಾರಣೆಯಿಂದ ಮನುಷ್ಯರ ಜೀವಿತಾವಧಿ ಹೆಚ್ಚಳವಾಗಿದ್ದು, ಇಂತಹ ಮೈಲಿಗಲ್ಲಿಗೆ ಕಾರಣವಾಗಿದೆʼʼ ಎಂದು ವಿಶ್ವಸಂಸ್ಥೆ ತಿಳಿಸಿದೆ.

"ಜಗತ್ತಿನ ಜನಸಂಖ್ಯೆಯು 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಬೃಹತ್‌ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಆದರೆ, ಈಗ ಜಾಗತಿಕ ಜನಸಂಖ್ಯೆ ಬೆಳವಣಿಗೆಯು ಇಳಿಮುಖವಾಗುತ್ತ ಬಂದಿದೆ. ಜಾಗತಿಕ ಜೀವಿತಾವಧಿ ಸರಾಸರಿಯು 2019ರಲ್ಲಿ 72.8 ವರ್ಷವಾಗಿದೆ. 1990ರ ಮನುಷ್ಯರ ಸರಾಸರಿ ಜೀವಿತಾವಧಿಗೆ ಹೋಲಿಸಿದರೆ ಇದು 9 ವರ್ಷಗಳಷ್ಟು ಹೆಚ್ಚಳವಾಗಿದೆ. 2050ರ ವೇಳೆಗೆ ಮನುಷ್ಯರ ಸರಾಸರಿ ಜೀವಿತಾವಧಿಯು 77.2 ವರ್ಷಕ್ಕೆ ತಲುಪಲಿದೆʼʼಎಂದು ವರದಿ ತಿಳಿಸಿದೆ.

ಜಗತ್ತಿನ ಜನಸಂಖ್ಯೆಯು ಒಂಬತ್ತು ಶತಕೋಟಿ ತಲುಪಲು ಇನ್ನೂ ಹದಿನೈದು ವರ್ಷಗಳು ಬೇಕಾಗಬಹುದು. ಆದರೆ, ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆ ದರವು 10 ಶತಕೋಟಿ ತಲುಪಲು 2080ರವರೆಗೆ ಸಮಯ ಬೇಕಾಗಬಹುದು. ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆ ದರವು ನಿಧಾನವಾಗಿ ಕುಸಿತವಾಗುತ್ತಿದೆ ಎನ್ನುವುದರ ಸಂಕೇತ ಇದಾಗಿದೆʼʼ ಎಂದು ವಿಶ್ವಸಂಸ್ಥೆಯು ವಿಶ್ಲೇಷಿಸಿದೆ.

ಈಗಾಗಲೇ ಹಲವು ದೇಶಗಳಲ್ಲಿ ಜನಸಂಖ್ಯಾ ಕುಸಿತ ಪರ್ವ ಆರಂಭವಾಗಿದೆ. ಇಟಲಿಯ ಆಸ್ಪತ್ರೆಗಳಲ್ಲಿ ಬಾಣಂತಿಯರ ವಾರ್ಡ್‌ಗಳು ಕಡಿಮೆಯಾಗಿವೆ. ಚೀನಾದ ಈಶಾನ್ಯ ಭಾಗದಲ್ಲಿ ಜನರಿಲ್ಲದೆ ದೆವ್ವದ ನಗರಗಳಾಗುತ್ತಿವೆ. ದಕ್ಷಿಣ ಕೊರಿಯಾದ ವಿವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಬಹುತೇಕ ದೇಶಗಳಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಕುಸಿತ ಕಡಿಮೆಯಾಗುತ್ತಿದೆ.

ಜಾಗತಿಕ ಜನಸಂಖ್ಯಾ ಸ್ಪೋಟದಲ್ಲಿ ಭಾರತದ ಕೊಡುಗೆಯೆಷ್ಟು?

ಇಂದು ಜಾಗತಿಕ ಜನಸಂಖ್ಯೆ 8 ಶತಕೋಟಿಗೆ ತಲುಪಿದೆ. ಆದರೆ, ಇಂದು ಭಾರತದ ಜನಸಂಖ್ಯೆ ಎಷ್ಟಕ್ಕೆ ತಲುಪಿದೆ ಎಂಬ ನಿಖರ ಉತ್ತರ ದೊರಕದು. ಆದರೆ, 2021ರಲ್ಲಿ ಭಾರತದ ಜನಸಂಖ್ಯೆಯು 1.39 ಶತಕೋಟಿಯಾಗಿತ್ತು. 8 ಶತಕೋಟಿಯಲ್ಲಿ ನಮ್ಮ ಪಾಲು ಎಷ್ಟು ಹೆಚ್ಚಿದೆ ಎನ್ನುವುದನ್ನೊಮ್ಮೆ ಗಮನಿಸಿ. 2030ರ ವೇಳೆಗೆ ಭಾರತದ ಜನಸಂಖ್ಯೆಯು 1.41 ಶತಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.